ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಮುಖಂಡ ಕಾಲೇಜು ಮೇಷ್ಟ್ರು!

Last Updated 21 ಫೆಬ್ರುವರಿ 2012, 8:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಈತ ಕಾಂಗ್ರೆಸ್ ಮುಖಂಡ. ಒಂದು ವರ್ಷದ ಹಿಂದೆಯೇ ಕೆಪಿಸಿಸಿ ಸದಸ್ಯತ್ವವೂ ದೊರೆಯಿತು. ಆದರೆ, ಸಕ್ರಿಯ ರಾಜಕೀಯದಲ್ಲಿ ಇದ್ದುಕೊಂಡೇ ಪ್ರಾಧ್ಯಾಪಕ ವೃತ್ತಿಯಲ್ಲಿ ಮುಂದುವರಿದಿರುವುದು ಮಾತ್ರ ಅಚ್ಚರಿ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿರುವ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಬಿ. ತಿಪ್ಪೇಸ್ವಾಮಿ ಅವರ ಕೈಚಳಕವಿದು. ಹಿಂದೊಮ್ಮೆ ಈ ವಿಷಯ ಬಹಿರಂಗವಾದಾಗ ತಾವು ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದರು. ಆದರೆ, ಇದ್ಯಾವುದೂ ನಡೆದಿಲ್ಲ. ರಾಜಕಾರಣಿ ಮತ್ತು ಪ್ರಾಧ್ಯಾಪಕ ಹುದ್ದೆಗಳನ್ನು ಸಾಂಗವಾಗಿ ನಿರ್ವಹಿಸುತ್ತಿದ್ದಾರೆ.

ನಿರಂತರ ಗೈರು
ಲೋಕಸಭೆ ಚುನಾವಣೆ ನಂತರ ಡಾ.ಬಿ. ತಿಪ್ಪೇಸ್ವಾಮಿ ಅವರು 2009ರ ಸೆಪ್ಟೆಂಬರ್ 11ರಂದು ಕೆ.ಆರ್. ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಅಪರಾಧಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿ ಕೆಪಿಎಸ್‌ಸಿ ಮೂಲಕ ನೇಮಕವಾದರು. ಆದರೆ, ಇವರ ನಿರಂತರ ಗೈರು ಹಾಜರಿ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ವಿಚಾರಣಾ ಸಮಿತಿ ನಿಯೋಜಿಸಲಾಯಿತು.

`ಡಾ.ಬಿ. ತಿಪ್ಪೇಸ್ವಾಮಿ ಅವರು ಒಬ್ಬ ರಾಜಕಾರಣಿಯಾಗಿರುವುದು ಸಾಬೀತಾಗಿದ್ದು, ಕಾಲೇಜಿನ ಸೇವಾ ಅವಧಿಯಲ್ಲಿ ಹೆಚ್ಚು ರಜೆಗಳನ್ನು ಸೇವಾಪೂರ್ವ ಅವಧಿಯಲ್ಲಿಯೇ ಬಳಸಿಕೊಂಡಿದ್ದಾರೆ. ಇದಕ್ಕೆ ಅನಾರೋಗ್ಯದ ಕಾರಣವನ್ನು ನೀಡಿದ್ದಾರೆ.

ಇನ್ನೂ ಮುಂದೆ ಅನಧಿಕೃತ ಗೈರು ಹಾಜರಾಗುವುದಾಗಲಿ ಅಥವಾ ಕರ್ತವ್ಯ ಲೋಪವಾಗುವ ಯಾವುದೇ ಕಾರ್ಯ ಮಾಡುವುದಿಲ್ಲ ಎಂದು ತಿಪ್ಪೇಸ್ವಾಮಿ ಸಮಿತಿ ಮುಂದೆ ಹೇಳಿಕೆ ನೀಡಿದ್ದಾರೆ~ ಎಂದು ವಿಚಾರಣಾ ಸಮಿತಿ 2011ರ ಫೆ.24ರಂದು ಜಂಟಿ ನಿರ್ದೇಶಕರಿಗೆ ವರದಿ ಸಲ್ಲಿಸಿತು.

ಈ ವರದಿ ಆಧಾರದ ಮೇಲೆ 2011ರ ಜೂನ್ 3ರಂದು ಕಾಲೇಜು ಶಿಕ್ಷಣ ಇಲಾಖೆಯ ಮೈಸೂರಿನ ಪ್ರಾದೇಶಿಕ ಜಂಟಿ ನಿರ್ದೇಶಕರು ಆಯುಕ್ತರಿಗೆ ವರದಿ ಸಲ್ಲಿಸಿ, `ಡಾ.ಬಿ. ತಿಪ್ಪೇಸ್ವಾಮಿ ಅವರನ್ನು  ವಿದ್ಯಾರ್ಥಿಗಳ  ಹಿತದೃಷ್ಟಿಯಿಂದ ಕಡ್ಡಾಯವಾಗಿ ನಿವೃತ್ತಿ ಗೊಳಿಸುವುದು ಸೂಕ್ತ~ ಎಂದು ತಿಳಿಸಿದ್ದರು.

ಸಕ್ರಿಯ  ರಾಜಕೀಯದಲ್ಲಿದ್ದರೂ ರಜೆ  ಪಡೆಯಲು ಅನಾರೋಗ್ಯ ಕಾರಣದ ನೆಪ ಹೇಳಿದ್ದಾರೆ. ಆಗಸ್ಟ್ 2010ರ ಮೊದಲ ವಾರದಿಂದ ಅನಾರೋಗ್ಯದ ಕಾರಣ ಹೇಳಿ ವೈದ್ಯಕೀಯ ರಜೆ ಎಂದು ಪರಿಗಣಿಸಲು ತಿಳಿಸಿದರು. ನಂತರ 2010ರ ನವೆಂಬರ್ 27ರಂದು ಕರ್ತವ್ಯಕ್ಕೆ ಹಾಜರಾಗಿ ವೈದ್ಯಕೀಯ ಪ್ರಮಾಣಪತ್ರವನ್ನು ಕಾಲೇಜಿಗೆ ಸಲ್ಲಿಸಿದ್ದಾರೆ. ಈ ಘಟನೆಗಳ ಬಳಿಕ 2010ರ ನವೆಂಬರ್‌ನಲ್ಲಿ 4 ದಿನಗಳ ಹಾಗೂ ಡಿಸೆಂಬರ್ ತಿಂಗಳ ಮತ್ತು 2011ರ ಜನವರಿ ತಿಂಗಳ ಸಂಬಳವನ್ನು ಡಾ.ಬಿ. ತಿಪ್ಪೇಸ್ವಾಮಿ ಅವರಿಗೆ ನೀಡಲಾಗಿದೆ.

`ಕೆ.ಆರ್. ನಗರದ ಕಾಲೇಜಿಗೆ ನಿಯುಕ್ತರಾದ ನಂತರ ತಿಪ್ಪೇಸ್ವಾಮಿ ಅವರು ಇದ್ದಕ್ಕಿದ್ದಂತೆ ಗೈರು ಹಾಜರಾಗುವುದು ಮತ್ತು ದಿಢೀರನೆ ಪ್ರತ್ಯಕ್ಷವಾಗಿ ಕರ್ತವ್ಯದಲ್ಲಿ ತೊಡಗುವುದು ಸಹ ಮಾಮೂಲಿಯಾಗಿದೆ. 2010ರ ಜುಲೈ 26ರಿಂದ ತರಗತಿಗಳು ಕ್ರಮಬದ್ಧವಾಗಿ ನಡೆಯುತ್ತಿದ್ದರೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಜವಾಬ್ದಾರಿ ಸ್ಥಾನದಲ್ಲಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಬೇಕಾಗಿದ್ದ ತಿಪ್ಪೇಸ್ವಾಮಿ ಅವರ ವರ್ತನೆಯಿಂದ ವಿದ್ಯಾರ್ಥಿಗಳ ಪಾಠಪ್ರಚನಗಳಿಗೆ ತೊಂದರೆಯಾಗುತ್ತಿದೆ~ ಎಂದು ಕಾಲೇಜಿನ ಉಪನ್ಯಾಸಕ ವರ್ಗವೂ ಸಹ ವಿಚಾರಣೆ ವೇಳೆ ತಿಳಿಸಿತ್ತು.

ಒಂದೆಡೆ ರಾಜಕೀಯ, ಇನ್ನೊಂದೆಡೆ ವಿಚಾರಣೆಗಳು ಏಕಕಾಲಕ್ಕೆ ನಡೆಯುತ್ತಿದ್ದರೂ ಸಹಾಯಕ ಪ್ರಾಧ್ಯಾಪಕ ವೃತ್ತಿಯಲ್ಲಿಯೇ ಡಾ.ಬಿ. ತಿಪ್ಪೇಸ್ವಾಮಿ ಮುಂದುವರಿದರು. ಜಿಲ್ಲೆಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ನಡುವೆ 2010ರ ಸೆಪ್ಟೆಂಬರ್‌ನಲ್ಲಿಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯತ್ವವೂ ದೊರೆಯಿತು.

ಇತ್ತೀಚೆಗೆ ವೀರಸೌಧದಲ್ಲಿ ಡಿಸೆಂಬರ್ 28ರಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಸೇರಿದಂತೆ ಪಕ್ಷದ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ವೇದಿಕೆಯಲ್ಲಿ ತಿಪ್ಪೇಸ್ವಾಮಿ ಕಾಣಿಸಿಕೊಂಡರು.

ಒಟ್ಟಿನಲ್ಲಿ ಸರ್ಕಾರಿ ನೌಕರಿ ಮತ್ತು ರಾಜಕೀಯವನ್ನೂ ಡಾ.ಬಿ. ತಿಪ್ಪೇಸ್ವಾಮಿ ನಿಭಾಯಿಸಿಕೊಂಡು ಹೋಗುತ್ತಿರುವುದು ಆಶ್ಚರ್ಯ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT