ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸರ್ಕಾರ ಸ್ಥಾಪನೆ ನನ್ನ ಗುರಿ

Last Updated 31 ಜುಲೈ 2012, 18:30 IST
ಅಕ್ಷರ ಗಾತ್ರ

ಬೆಂಗಳೂರು: `ವಿಧಾನಸೌಧದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಪ್ರತಿಷ್ಠಾಪಿಸುವುದು ನನ್ನ ಏಕೈಕ ಗುರಿ~ ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಘೋಷಿಸಿದರು.ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ ನಗರ ಜಿಲ್ಲಾ ಕಾಂಗ್ರೆಸ್‌ನ ಬೂತ್, ವಾರ್ಡ್ ಮತ್ತು ಪಂಚಾಯಿತಿ ಪ್ರತಿನಿಧಿಗಳ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

`ಇಂದಿರಾಗಾಂಧಿ ಅವರ ಪ್ರಭಾವದ ಸುಳಿಗೆ ಸಿಲುಕಿ ನಾನು 1971ರಲ್ಲಿ ಕಾಂಗ್ರೆಸ್ ಸೇರಿದೆ. ಅಲ್ಲಿಂದ ಇಲ್ಲಿಯವರೆಗೆ ಪಕ್ಷವು ನಾನು ಕೇಳಿದ್ದನ್ನೆಲ್ಲ ನನಗೆ ಕೊಟ್ಟಿದೆ. ನನ್ನ ಮೇಲೆ ಪಕ್ಷದ ದೊಡ್ಡ ಋಣ ಇದೆ. ಅದನ್ನು ತೀರಿಸಲು ನಾನು ಶ್ರಮಿಸುವೆ~ ಎಂದು ಅವರು ಹೇಳಿದರು.

`ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ರಾಜ್ಯಕ್ಕೆ ಹೆಸರು ಬರುವಂತೆ ಕೆಲಸ ಮಾಡಿದ್ದೇನೆ~ ಎಂದು ತಿಳಿಸಿದ ಅವರು, `ಬಿಜೆಪಿ ಸರ್ಕಾರದ 12 ಸಚಿವರು ಜೈಲಿನ ಒಳಗಿದ್ದರೆ, 12 ಸಚಿವರು ಜೈಲಿಗೆ ಹೋಗುವ ಹಾದಿಯಲ್ಲಿದ್ದಾರೆ. ಈ ಸರ್ಕಾರದಿಂದ ಕರ್ನಾಟಕಕ್ಕೆ ಅಪಕೀರ್ತಿ ಬಂದಿದೆ. ರಾಜ್ಯಕ್ಕೆ ಬಂದಿರುವ ಕೆಟ್ಟ ಹೆಸರು ಅಳಿಸಲು ನಾವು ನೀವೆಲ್ಲರೂ ಮನಸ್ಸು ಮಾಡಬೇಕು~ ಎಂದು ಅವರು ನುಡಿದರು.

`ಬೆಂಗಳೂರಿನಲ್ಲಿ ಪಡಿತರ ಚೀಟಿ ಸಮಸ್ಯೆ ದೊಡ್ಡದಾಗಿ ಬೆಳೆದಿದೆ. ಹೊಸ ಪಡಿತರ ಚೀಟಿಗಾಗಿ 31 ಲಕ್ಷ ಮಂದಿ ಅರ್ಜಿ ಹಾಕಿದ್ದಾರೆ. ಇದುವರೆಗೆ ವಿತರಿಸುವುದು 7 ಸಾವಿರ ಮಾತ್ರ. ಉಳಿದವರಿಗೆ ಪಡಿತರ ಚೀಟಿ ವಿತರಿಸುವುದು ಯಾವಾಗ? ಎಲ್ಲರಿಗೂ ಪಡಿತರ ಚೀಟಿ ಸಿಗಬೇಕಾದರೆ ಜಗದೀಶ್ ಶೆಟ್ಟರ ಮೊಮ್ಮಕ್ಕಳ ಕಾಲವೇ ಬರಬೇಕೇನೋ!~ ಎಂದು ಮಾರ್ಮಿಕವಾಗಿ ಹೇಳಿದ ಅವರು `ಇದೊಂದು ಗೊತ್ತು ಗುರಿ ಇಲ್ಲದ, ನೀತಿ ಧ್ಯೇಯ ಇಲ್ಲದ ಸರ್ಕಾರ~ ಎಂದು ಟೀಕಿಸಿದರು.

ಎಚ್ಚರಿಕೆ: ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, `ಚುನಾವಣೆಯಲ್ಲಿ ಯಶಸ್ಸು ಸಾಧಿಸಲು ಬೂತ್ ಸಮಿತಿಗಳು ಅತ್ಯಗತ್ಯ. ಬೂತ್ ಸಮಿತಿಗಳನ್ನು ರಚಿಸದ ಶಾಸಕರು ಮತ್ತು ಮುಖಂಡರ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುವೆ~ ಎಂದರು.

`ನೀವಿಬ್ಬರೂ (ದಿನೇಶ್ ಗುಂಡೂರಾವ್, ಎಸ್.ಟಿ.ಸೋಮಶೇಖರ್) ಹೋರಾಟ ಮಾಡಿ ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರಾಗಿದ್ದೀರಿ. 15 ದಿನಗಳ ಒಳಗೆ ಜಿಲ್ಲಾ ಘಟಕಗಳ ಕಾರ್ಯಕಾರಿ ಸಮಿತಿ ಹಾಗೂ ನಿಮ್ಮ ವ್ಯಾಪ್ತಿಯ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕೊಡಬೇಕು.

ಕೊಡದಿದ್ದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುವೆ~ ಎಂದರು.ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ನಜೀರ್ ಅಹಮದ್ ಮಾತನಾಡಿ, `ಮುಸ್ಲಿಮರ ಸಮಾವೇಶ ಮಾಡುವ ಮೂಲಕ ಜೆಡಿಎಸ್‌ನವರು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ.
 
ನಮ್ಮ ಹೈಕಮಾಡ್‌ನವರು  ಚುನಾವಣಾ ಮೈತ್ರಿ ಮಾಡಿಕೊಳ್ಳಲಿ ಎಂಬುದೇ ಜೆಡಿಎಸ್‌ನವರ ಉದ್ದೇಶ. ಆ ಪಕ್ಷಕ್ಕೆ ಅಲ್ಪಸಂಖ್ಯಾತರ ಸ್ವಲ್ಪವೂ ಕಾಳಜಿ ಇಲ್ಲ~ ಎಂದು ಟೀಕಿಸಿದರು. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಹನುಮಂತರಾವ್, ಕಾಂಗ್ರೆಸ್‌ನ ಮಹಾನಗರ ಮತ್ತು ನಗರ ಜಿಲ್ಲಾ ಘಟಕಗಳ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಮತ್ತು ಎಸ್.ಟಿ.ಸೋಮಶೇಖರ್, ಮಾಜಿ ಸಚಿವರಾದ ಎ.ಕೃಷ್ಣಪ್ಪ, ಎಚ್.ಎಂ.ರೇವಣ್ಣ, ರಾಮಲಿಂಗಾರೆಡ್ಡಿ, ಮಾಜಿ ಸಂಸದೆ ತೇಜಸ್ವಿನಿ ಉಪಸ್ಥಿತರಿದ್ದರು.

ಬಿಜೆಪಿ ಷಡ್ಯಂತ್ರ: ಎಚ್ಚರಿಕೆ
ಬಿಜೆಪಿ ಸರ್ಕಾರದ ಕಳಂಕಿತ ಸಚಿವರು, ಹಗರಣಗಳನ್ನು ನೋಡಿ ರಾಜ್ಯದ ಜನರು ರೋಸಿ ಹೋಗಿರುವುದರಿಂದ ಕಾಂಗ್ರೆಸ್ ಪಕ್ಷ ತಂತಾನೇ ಅಧಿಕಾರಕ್ಕೆ ಬಂದುಬಿಡುತ್ತದೆ ಎಂದು ಭಾವಿಸಬೇಡಿ. ಅಧಿಕಾರಕ್ಕಾಗಿ ಚುನಾವಣೆಗೆ ಮುನ್ನ ಕೋಮು ಗಲಭೆ ಸೃಷ್ಟಿಸುವುದು ಸೇರಿದಂತೆ ಯಾವುದೇ ಷಡ್ಯಂತ್ರ ಮಾಡಲು ಬಿಜೆಪಿ ಹಿಂಜರಿಯುವುದಿಲ್ಲ~ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರು ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.

`ಐದು ವರ್ಷಗಳ ಹಿಂದೆ ಗುಜರಾತ್ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದೆ. ಅಲ್ಲಿನ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಎಲ್ಲ ಉಪ ಚುನಾವಣೆಗಳು, ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಸಾರ್ವತ್ರಿಕ ಚುನಾವಣೆಗೆ ಮುನ್ನ ಕೋಮುಗಲಭೆ ನಡೆದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂತು. ಅದೇ ರೀತಿ ಇಲ್ಲಿಯೂ ಸಂಚು ನಡೆಯಬಹುದು. ಅದನ್ನು ಎದುರಿಸಲು ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು~ ಎಂದು ಕರೆ ನೀಡಿದರು.

ಭೀಷ್ಮ ಮತ್ತು ಕೃಷ್ಣ
`ನನ್ನನ್ನು ಭೀಷ್ಮ ಎಂದಾದರೂ ಕರೆಯಿರಿ, ಮಾಜಿ ಸಿಎಂ ಅಥವಾ ಕೇಂದ್ರ ಸಚಿವ ಎಂದಾದರೂ ಕರೆಯಿರಿ. ನಾನು ಮಾತ್ರ  ಕಾಂಗ್ರೆಸ್ ಪಕ್ಷದ ಸಾಧಾರಣ ಕಾರ್ಯಕರ್ತ ಮತ್ತು ವಿನಮ್ರ ಸೇವಕ~ ಎಂದು ಕೇಂದ್ರ ಸಚಿವ ಎಸ್.ಎಂ.ಕೃಷ್ಣ ನುಡಿದರು.

`ಕೃಷ್ಣ ಅವರು ಪಕ್ಷದ ಭೀಷ್ಮರಿದ್ದಂತೆ. ಅವರ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯಬೇಕು~ ಎಂಬ ಬಿ.ಎಲ್.ಶಂಕರ್ ಮಾತಿಗೆ ಕೃಷ್ಣ ಮೇಲಿನಂತೆ ಪ್ರತಿಕ್ರಿಯಿಸಿದರು.ಡಿ.ಕೆ.ಶಿವಕುಮಾರ್ ತಮ್ಮ ಭಾಷಣದಲ್ಲಿ, `ಶಂಕರ್ ಅವರು ಕೃಷ್ಣ ಅವರನ್ನು ಭೀಷ್ಮ ಎಂದಿದ್ದಾರೆ. ಯಶಸ್ಸು ಸಾಧಿಸಲು ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಭೀಮನ ಬಲ, ಅರ್ಜುನನ ಶೂರತ್ವ, ಕೃಷ್ಣನ ತಂತ್ರ ಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT