ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸೇರಿದ ಶಾಸಕರು

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪಾವಗಡ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಸೋಮ್ಲಾನಾಯಕ್ ಮತ್ತು ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಸೋಮವಾರ ಕಾಂಗ್ರೆಸ್ ಸೇರಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಪಕ್ಷದ ಕಚೇರಿಯಲ್ಲಿ ಮೂವರಿಗೂ ಪಕ್ಷದ ಶಾಲು ಹೊದಿಸಿ, ಧ್ವಜ ನೀಡುವ ಮೂಲಕ ಸ್ವಾಗತಿಸಿದರು. ಜೊತೆಯಲ್ಲೇ ಈ ಮುಖಂಡರ ಬೆಂಬಲಿಗರೂ ಕಾಂಗ್ರೆಸ್ ಪಕ್ಷ ಸೇರಿದರು.

ವೆಂಕಟರಮಣಪ್ಪ ಮೂರು ಬಾರಿ ಪಾವಗಡ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಒಂಬತ್ತು ಮತ್ತು ಹನ್ನೊಂದನೇ ವಿಧಾನಸಭೆಯಲ್ಲಿ ಅವರು ಕಾಂಗ್ರೆಸ್ ಶಾಸಕರಾಗಿದ್ದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ನಂತರ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರೂ ಆಗಿದ್ದರು. 

ಈ ಚುನಾವಣೆಯಲ್ಲಿ ವೆಂಕಟರಮಣಪ್ಪ ಸ್ಪರ್ಧಿಸುತ್ತಿಲ್ಲ. ಅವರ ಪುತ್ರ ಎಚ್.ವಿ.ವೆಂಕಟೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆತಿದೆ.
ಸೋಮ್ಲಾನಾಯಕ್ ಅವರು ಎಂಟು ಮತ್ತು ಹತ್ತನೇ ವಿಧಾನಸಭೆಗಳಲ್ಲಿ ಪಾವಗಡ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಎಂಟನೇ ವಿಧಾನಸಭೆಯಲ್ಲಿ ಜನತಾ ಪಕ್ಷದ ಶಾಸಕರಾಗಿದ್ದ ಅವರು, ಹತ್ತನೇ ವಿಧಾನಸಭೆಯಲ್ಲಿ ಜನತಾ ದಳದ ಶಾಸಕರಾಗಿದ್ದರು.

ಇನ್ನೂ ಬಿಜೆಪಿ ಶಾಸಕ: 2008ರಲ್ಲಿ ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

ಈ ಬಾರಿ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ. ಆದರೆ, ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಇನ್ನೂ ಪ್ರತಾಪಗೌಡ ಪಾಟೀಲರ ರಾಜೀನಾಮೆ ಅಂಗೀಕರಿಸಿಲ್ಲ. ಕಾಂಗ್ರೆಸ್ ಮಸ್ಕಿ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಮೊದಲ ಪಟ್ಟಿಯಲ್ಲಿ ಪ್ರಕಟಿಸಿಲ್ಲ.

ಮೂವರನ್ನೂ ಪಕ್ಷಕ್ಕೆ ಸ್ವಾಗತಿಸಿದ ಬಳಿಕ ಮಾತನಾಡಿದ ಪರಮೇಶ್ವರ್, `ಮೂವರು ಮುಖಂಡರೂ ಯಾವುದೇ ಷರತ್ತು ಅಥವಾ ಬೇಡಿಕೆಗಳಿಲ್ಲದೇ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT