ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿನಿಂದ ಪ್ರಗತಿ ಹಿನ್ನಡೆ

ಬಿಜೆಪಿ ಹಿರಿಯ ಮುಖಂಡ ಅಡ್ವಾಣಿ ತರಾಟೆ
Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇಂಡಿ/ಸವದತ್ತಿ: ಚೀನಾಕ್ಕೆ ಸರಿಸಾಟಿಯಾಗಿ ನಿಲ್ಲಬಲ್ಲ ದೇಶ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ ಎಂಬ ಮಾತು ಜಗತ್ತಿನಲ್ಲಿ ಪ್ರಚಲಿತದಲ್ಲಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಭ್ರಷ್ಟಾಚಾರ ಮತ್ತು `ಅಧಿಕಾರ ರಹಿತ' ಪ್ರಧಾನಿಯಿಂದಾಗಿ ದೇಶದ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಆರೋಪಿಸಿದರು.

`ಚಂದ್ರಶೇಖರ, ವಿ.ಪಿ.ಸಿಂಗ್, ಎಚ್.ಡಿ. ದೇವೇಗೌಡ ಮತ್ತು ಐ.ಕೆ. ಗುಜ್ರಾಲ್ ಸೇರಿದಂತೆ ನಾಲ್ವರು ಪ್ರಧಾನಿಗಳು ಅಲ್ಪಕಾಲ ಈ ದೇಶ ಆಳಿದರು. ತಮ್ಮ ಪಕ್ಷದ ಸಂಸದರ ಸಂಖ್ಯೆ ಕಡಿಮೆ ಇದ್ದರೂ ಪ್ರಬಲರಾಗಿದ್ದರು' ಎಂದು ವಿಜಾಪುರ ಜಿಲ್ಲೆಯ ಇಂಡಿಯಲ್ಲಿ ಬುಧವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಹೇಳಿದರು.

`ಹಿಂದೂಸ್ತಾನದಲ್ಲಿ ಬಹಳ ಶಕ್ತಿ ಇದೆ. ಈ ದೇಶದ ಅಭಿವೃದ್ಧಿಯ ನಕ್ಷೆ ಬದಲಿಸಲು ಮತ್ತು ಭ್ರಷ್ಟಾಚಾರ ಮುಕ್ತ ಉತ್ತಮ ಆಡಳಿತಕ್ಕಾಗಿ ಬಿಜೆಪಿಗೆ ಮತ ನೀಡಬೇಕು. ವಿಧಾನಸಭೆ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕು. ಭ್ರಷ್ಟಾಚಾರಿಗಳನ್ನು ದಂಡಿಸಬೇಕು' ಎಂದು ಕರೆ ನೀಡಿದರು.

`2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ರಕ್ಷಿಸಲಿಕ್ಕಾಗಿ ಜಂಟಿ ಸದನ ಸಮಿತಿಯು (ಜೆಪಿಸಿ) ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಸಚಿವರಾದ ಅರುಣ ಶೌರಿ, ಜಸ್ವಂತ ಸಿಂಗ್ ಅವರ ಮೇಲೆ ಆರೋಪ ಹೊರಿಸಿದೆ. ಈ ಮೂವರೂ ಶುದ್ಧಹಸ್ತರು. ಈ ವರದಿಯನ್ನು ತಿರಸ್ಕರಿಸಬೇಕು. ಸಂಸತ್ತಿನಲ್ಲಿಯೂ ನಾವು ಅದನ್ನು ವಿರೋಧಿಸುತ್ತೇವೆ' ಎಂದರು.

`ಹೆದ್ದಾರಿ ಅಭಿವೃದ್ಧಿ, ಅಣು ಬಾಂಬ್ ತಯಾರಿಕೆ, ಗ್ರಾಮೀಣ ಸಡಕ್ ರಸ್ತೆ ಯೋಜನೆ ಜಾರಿ, ಮೊಬೈಲ್ ಫೋನ್, ಕಂಪ್ಯೂಟರ್‌ಗಳ ವಿಕಾಸ ಎಲ್ಲವೂ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿಯೇ ಅದುವು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕೆಯ ನಂತರ ಸೂಪರ್ ಪವರ್ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು' ಎಂದು ಅವರು ಉಲ್ಲೇಖಿಸಿದರು.

ಅತ್ಯಂತ ಭ್ರಷ್ಟ: `ದೇಶದ 60 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟವಾಗಿದೆ. ಇದರ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಬಿಜೆಪಿ ನಾಯಕರು ಸಾಕಷ್ಟು ಚರ್ಚಿಸಿದ್ದಾರೆ. ಆದರೆ, ಇದನ್ನು ಮರೆಮಾಚಲು ಕಾಂಗ್ರೆಸ್ಸಿನವರು ನಮ್ಮ ನಾಯಕರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ' ಎಂದು ಅಡ್ವಾಣಿಯವರು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಟೀಕಿಸಿದರು.

ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು, `ಕಳೆದ 40 ವರ್ಷಗಳಿಂದ ಸಂಸತ್ತಿನಲ್ಲಿರುವ ನಾನು ಜವಾಹರಲಾಲ್ ನೆಹರೂ ಅವರಿಂದ ಮನಮೋಹನ ಸಿಂಗ್‌ವರೆಗಿನ ಪ್ರಧಾನಿಗಳನ್ನು ಅತಿ ಹತ್ತಿರದಿಂದ ನೋಡಿದ್ದೇನೆ. ಮೊರಾರ್ಜಿ ದೇಸಾಯಿ ಮತ್ತು ಅಟಲ್‌ಬಿಹಾರಿ ವಾಜಪೇಯಿ ಮಾತ್ರ ಯಾವುದೇ ಕಳಂಕ ಇಲ್ಲದೇ ಅಧಿಕಾರ ನಡೆಸಿದ್ದಾರೆ. ಈಗಿನ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದಲ್ಲಿ ಎಲ್ಲರಿಗಿಂತ ಮುಂದಿದೆ' ಎಂದು ಆರೋಪಿಸಿದರು.

`ರಾಜ್ಯದಲ್ಲಿ ಬಿಜೆಪಿಯ ಸಮಾವೇಶಗಳಲ್ಲಿ ಹಿಂದೂ- ಮುಸ್ಲಿಂ ಬಾಂಧವರು ಪಾಲ್ಗೊಳ್ಳುತ್ತಿದ್ದು, ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಇಲ್ಲಿಯವರೆಗೆ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಮಾಡಿಕೊಂಡಿತ್ತು. ಆದರೆ ಬಿಜೆಪಿ ಅವರಿಗೂ ಸಮಾನ ಹಕ್ಕು ನೀಡಿದೆ.

ಅವರ ತೊಂದರೆಗಳನ್ನು ಪರಿಹರಿಸುತ್ತಿದೆ. ಬರುವ ದಿನಗಳಲ್ಲಿ ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಕವಡೆ ಕಿಮ್ಮತ್ತು ಇಲ್ಲದಂತಾಗಲಿದೆ. ಬಿಜೆಪಿ ಮೇಲೆ ವಿಶ್ವಾಸವನ್ನಿಟ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ, ಪ್ರಾಮಾಣಿಕವಾಗಿ ಸೇವೆ ಮಾಡುವ ಮೂಲಕ ಪ್ರಗತಿಗೆ ಆದ್ಯತೆ ನೀಡಲಿದ್ದಾರೆ' ಎಂದು ನುಡಿದರು.

ಲಂಚ ಆರೋಪದ ವಿರುದ್ಧ ಚಕಾರ ಎತ್ತದ ಅಡ್ವಾಣಿ
ವಿಜಾಪುರ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಅಡ್ವಾಣಿ ಹಾಗೂ ಅವರ ಪುತ್ರರು ಹಣ ಪಡೆದಿದ್ದಾರೆ ಎಂದು ಕೆಜೆಪಿ ಮುಖಂಡ ಧನಂಜಯಕುಮಾರ್ ಮಾಡಿದ ಆರೋಪದ ಬಗ್ಗೆ ಅಡ್ವಾಣಿ ಯಾವುದೇ ಚಕಾರ ಎತ್ತಲಿಲ್ಲ.

ಜಿಲ್ಲೆಯ ಇಂಡಿಯಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, `ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗುವ ಮೂಲಕ ಕರ್ನಾಟಕದ ಕೀರ್ತಿಯನ್ನು ಹಾಳು ಮಾಡಿತು' ಎಂದು ಮಂಗಳವಾರವಷ್ಟೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಮಾಡಿದ್ದ ಆರೋಪದ ಕುರಿತೂ ನೇರವಾಗಿ ಪ್ರಸ್ತಾಪಿಸಲಿಲ್ಲ.

ಆದರೆ, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಭ್ರಷ್ಟಾಚಾರ ಮತ್ತು ಗಟ್ಟಿತನ ಪ್ರದರ್ಶಿಸದ ಪ್ರಧಾನಿಯಿಂದಾಗಿ ದೇಶದ ಅಭಿವದ್ಧಿಗೆ ಹಿನ್ನಡೆಯಾಗಿದೆ ಎಂದು ಪ್ರತ್ಯಾರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT