ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಆತ್ಮಾವಲೋಕನ ಕಾಲ

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದೇಶದ ರಾಜಧಾನಿ ದೆಹಲಿ ಒಳಗೊಂಡಂತೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ತುಸು ಹೆಚ್ಚೂ ಕಡಿಮೆ ನಿರೀಕ್ಷಿತ ನೆಲೆಯಲ್ಲೇ ಇದೆ. ನಾಲ್ಕೂ ಕಡೆ ಕಾಂಗ್ರೆಸ್‌ ದೂಳಿಪಟ ಆಗಿದೆ. ರಾಜಧಾನಿಯಲ್ಲಿ ಸತತ 15 ವರ್ಷಗಳ ಕಾಂಗ್ರೆಸ್‌ ಆಳ್ವಿಕೆ ಕೊನೆಗೊಂಡಿದೆ. ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ ಸೋತಿದ್ದಾರೆ. ಅವರ ನೇತೃತ್ವದ ಕಾಂಗ್ರೆಸ್‌ ಎರಡಂಕಿಗೂ ಏರಲಾರದೆ ಮೂರನೇ ಸ್ಥಾನಕ್ಕೆ ಕುಸಿದಿದೆ.

ರಾಜಸ್ತಾನದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿ ಅಧಿಕಾರ ಕಸಿದು­ಕೊಂಡಿದೆ. ಕಾಂಗ್ರೆಸ್‌ ದುರಾಡಳಿತ ಮತ್ತು  ಹಗರಣಗಳಿಂದ ಜನ ರೋಸಿದ್ದಾರೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ. ರಾಜ್ಯ ಮತ್ತು ಕೇಂದ್ರದ ಆಡಳಿತ ವಿರೋಧಿ ಅಲೆಯ ‘ಇಮ್ಮಡಿ’ ಹೊಡೆತಕ್ಕೆ ಆ ಪಕ್ಷ ತತ್ತರಿಸಿದೆ. ಈ ಫಲಿತಾಂಶ, ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಗೆ ಆ ಪಕ್ಷವನ್ನು ದೂಡಿದೆ. ರಾಜ್ಯಗಳಲ್ಲಿ ಸಮರ್ಥ ನಾಯಕತ್ವ ಇಲ್ಲದೇ ಹೋದರೆ ಗೆಲುವು ಪಡೆಯುವುದು ಕಷ್ಟಸಾಧ್ಯ ಎಂಬ ಸ್ಪಷ್ಟ ಸಂದೇಶವನ್ನು ಈ ಫಲಿತಾಂಶ ರವಾನಿಸಿದೆ.

ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದ ಹಾದಿ ಮತ್ತಷ್ಟು ಮಸುಕಾಗುವುದರಲ್ಲಿ ಅನುಮಾನವಿಲ್ಲ. ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸಗಡದಲ್ಲಿ ಬಿಜೆಪಿ ಗೆಲುವಿಗೆ ಪೂರಕವಾಗಿ ಒದಗಿಬಂದ ಪ್ರಮುಖ ಅಂಶಗಳಲ್ಲಿ ಸ್ಥಳೀಯ ನಾಯಕತ್ವವೂ ಒಂದು.  ವಿಧಾನಸಭಾ ಚುನಾವಣೆಗಳು ಸ್ಥಳೀಯ ವಿಚಾರ, ಜಾತಿ ಸಮೀಕರಣ, ನಾಯಕತ್ವ ಮತ್ತಿತರ ಅಂಶಗಳ  ಆಧಾರದ ಮೇಲೆ ನಡೆಯುತ್ತವೆ ಎಂಬುದನ್ನು ಯಾವ ಪಕ್ಷವೂ ನಿರಾಕರಿಸಲಾಗದು.

ಆಮ್‌ ಆದ್ಮಿ ಪಕ್ಷ (ಎಎಪಿ) ದೆಹಲಿಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ನೀರಿಳಿಸಿದೆ. ಭ್ರಷ್ಟಾಚಾರ ವಿರೋಧಿ ಸಿದ್ಧಾಂತದೊಂದಿಗೆ ಅಸ್ತಿತ್ವಕ್ಕೆ ಬಂದಿರುವ, ಒಂದು ವರ್ಷ ಪ್ರಾಯದ ಈ ಪಕ್ಷದ ಸಾಧನೆ ವಿಸ್ಮಯಗೊಳಿಸು­ವಂತಹುದು. ಹಣ, ಜಾತಿ, ಕುಟುಂಬ ರಾಜಕಾರಣದಿಂದ ಬೇಸತ್ತ ಜನರಿಗೆ ಎಎಪಿ ಒಂದು ಭರವಸೆಯ ಕಿರಣ. ಯುವ ಜನತೆಯ ಆಕ್ರೋಶವನ್ನು ಮತಗಳಾಗಿ ಪರಿವರ್ತಿಸುವಲ್ಲಿ ಆ ಪಕ್ಷ ಯಶಸ್ವಿ ಆಗಿದೆ. ಬಿಜೆಪಿ ಮತಬುಟ್ಟಿಗೆ ಎಎಪಿ ಕೈಹಾಕಬಹುದು ಎಂದು ಕೆಲವರಾದರೂ ಭಾವಿಸಿದ್ದರು. ಆದರೆ ಫಲಿತಾಂಶ ಅದನ್ನು ಸುಳ್ಳಾಗಿಸಿದೆ. ದೆಹಲಿ ವಿಧಾನಸಭೆ ಅತಂತ್ರವಾಗಿದೆ.

ರಾಜಧಾನಿಯಲ್ಲಿ ಕಾಂಗ್ರೆಸ್‌ ಬುಡ ಅಲುಗಾಡಿಸಿದೆ. ಎಎಪಿ ಕುರಿತು ನಿರೀಕ್ಷೆಗಳು ಹೆಚ್ಚಿವೆ. ಅವು ಹುಸಿಯಾಗ ದಂತೆ ನೋಡಿ­ಕೊಳ್ಳುವ ಜವಾಬ್ದಾರಿ ಮುಖಂಡರ ಮೇಲಿದೆ. ಅಲ್ಲಿ ಯಶಸ್ವಿಯಾದ ಈ ಪ್ರಯೋಗ ಮುಂದಿನ ದಿನಗಳಲ್ಲಿ ದೇಶದ ಬೇರೆಡೆಗೂ ವಿಸ್ತರಿಸಬಹುದೇ ಎಂಬ ಕುತೂಹಲವನ್ನು ದೆಹಲಿ ಫಲಿತಾಂಶ ಮೂಡಿಸಿದೆ.

 ರಾಷ್ಟ್ರ, ಲೋಕ­ಸಭಾ ಚುನಾವಣೆ ಹೊಸಿ ಲಲ್ಲಿ ನಿಂತಿದೆ. ಈ ಫಲಿತಾಂಶವನ್ನು ಆ ಚುನಾ­ವಣೆಯ ದಿಕ್ಸೂಚಿ ಎಂದು ಭಾವಿಸಬಹುದೇ? ಪ್ರತಿ ಚುನಾವಣೆಯೂ ಒಂದು ಪಾಠ. ಈ ಚುನಾವಣಾ ಫಲಿತಾಂಶ ಬಿಜೆಪಿಗಂತೂ ಹುರುಪು ತುಂಬಿದೆ. ಮುಖಭಂಗಕ್ಕೊಳಗಾಗಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆಗೆ ಸಜ್ಜಾಗಲು ನಾಯಕತ್ವ ಬದಲಾವಣೆ, ಸ್ಥಳೀಯವಾಗಿ ಮರು ಹೊಂದಾಣಿಕೆಗಳಂತಹ ಕ್ರಮಗಳಿಗೆ ಮುಂದಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT