ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಕಾಂಗ್ರೆಸ್ಸಿಗರೇ ಮುಳ್ಳು

Last Updated 3 ಜೂನ್ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಪಕ್ಷದ ನಾಯಕರು ಭಿನ್ನಾಭಿಪ್ರಾಯ, ವೈಮನಸ್ಸು ಮರೆತು ಒಗ್ಗಟ್ಟಾಗಿ ಹೆಜ್ಜೆ ಹಾಕಿದಲ್ಲಿ ಮಾತ್ರ ಅಧಿಕಾರದ ಗದ್ದುಗೆ ಏರಲು ಸಾಧ್ಯ. ಆಂತರಿಕ ಕಚ್ಚಾಟ ಮುಂದುವರಿಸಿದಲ್ಲಿ ವಿರೋಧ ಪಕ್ಷವಾಗಿಯೇ ಕುಳಿತಿರಬೇಕಾಗುತ್ತದೆ...

- ರಾಜ್ಯದ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ನೀಡಿದ ಎಚ್ಚರಿಕೆಯ ಸಂದೇಶ ಇದು.

ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಭಾನುವಾರ ಪ್ರತ್ಯೇಕವಾಗಿ ಮೂರು ಸಭೆಗಳಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಇಲ್ಲಿನ ನಾಯಕರ ಕಾರ್ಯವೈಖರಿ ಬಗ್ಗೆ ನಯವಾದ ಮಾತುಗಳಲ್ಲಿಯೇ ಬುದ್ಧಿವಾದ ಹೇಳಿದರು. ಕಾರ್ಯಕರ್ತರು ಹಾಗೂ 2ನೇ ಹಂತದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವಂತೆ ಕರೆ ನೀಡಿದರು.

ಕಾಂಗ್ರೆಸ್‌ಗೆ, ಬಿಜೆಪಿಯಿಂದಾಗಲೀ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ (ಜೆಡಿಎಸ್) ಪಕ್ಷದಿಂದಾಗಲಿ ತೊಂದರೆ ಇಲ್ಲ. ಕಾಂಗ್ರೆಸ್‌ಗೆ ಕಾಂಗ್ರೆಸ್ಸಿಗರೇ ಮುಳ್ಳು ಎಂದು ಒತ್ತಿ ಹೇಳಿದ ಅವರು, ಪಕ್ಷದ ಎಲ್ಲ ನಾಯಕರೂ ಸಹ ಒಗ್ಗಟ್ಟಾದರೆ ಎದುರಾಳಿಗಳೇ ಇರುವುದಿಲ್ಲ. ಪಕ್ಷ ಬಲವರ್ಧನೆಗಾಗಿ ಯಾವ ತ್ಯಾಗಕ್ಕೂ ನಾಯಕರು ಸಿದ್ಧರಿರಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಸದ್ಯಕ್ಕೆ ಪಕ್ಷದ ಕಾರ್ಯಕರ್ತರ ಮಾತಿಗೆ ಬೆಲೆ ಇಲ್ಲದಂತಾಗಿದೆ. ಬೆವರು, ರಕ್ತ ಹರಿಸಿ ಪಕ್ಷ ಕಟ್ಟಿದ ಕಾರ್ಯಕರ್ತರಿಗೆ ಟಿಕೆಟ್ ಸಿಗುವಂತಾಗಬೇಕು. ನಾಯಕರಲ್ಲಿ ಹೊಣೆಗಾರಿಕೆ, ಶಿಸ್ತು ಬಾರದಿದ್ದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಮುಂಬರುವ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಿದರೆ ಗೆಲುವು ಖಚಿತ. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಪಕ್ಷದಲ್ಲಿ, ಕೆಲಸ ಮಾಡುವವರೇ ಒಬ್ಬರು ಲಾಭ ಪಡೆಯುವವರೇ ಇನ್ನೊಬ್ಬರು ಎಂಬ ಸ್ಥಿತಿ ಇದೆ. ಚುನಾವಣೆಗಳಲ್ಲಿ, ಯುವಕರಿಗೆ ಟಿಕೆಟ್ ಸಿಗಬೇಕು. ಇದೇ ವೇಳೆ, ಪಕ್ಷಕ್ಕಾಗಿ 30-40 ವರ್ಷಗಳಿಂದ ದುಡಿದ ಹಿರಿಯರನ್ನೂ ಪರಿಗಣಿಸಬೇಕು ಎಂದರು. ಪಂಜಾಬ್‌ನಲ್ಲಿ ಕಳೆದ ಚುನಾವಣೆಯ ಉದಾಹರಣೆ ನೀಡಿದ ಅವರು, ಗೆಲ್ಲಬೇಕಾಗಿದ್ದ ಹಲವು ಕ್ಷೇತ್ರಗಳಲ್ಲಿ ನಾವು ಸೋತೆವು. ಇದಕ್ಕೆ ಅಲ್ಲಿನ ನಾಯಕರ ಆಂತರಿಕ ಕಚ್ಚಾಟ ಕಾರಣವಾಯಿತು. ಇಂತಹ ಸಂಗತಿ ಮರುಕಳಿಸಿದಂತೆ ಎಚ್ಚರ ವಹಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT