ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಪಟ್ಟಭದ್ರ ಹಿತಾಸಕ್ತಿ ರಕ್ಷೆ

ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಟೀಕೆ
Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಅಹಮದಾಬಾದ್‌:  ‘ಪಟ್ಟಭದ್ರ ಹಿತಾ ಸಕ್ತಿಗಳು ಕಾಂಗ್ರೆಸ್ ದುರಾಡಳಿತ ವನ್ನು ಮುಚ್ಚಿಹಾಕುತ್ತಿವೆ’ ಎಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಲೇವಡಿ ಮಾಡಿದ್ದಾರೆ.

ಪ್ರಧಾನಿ ಅಭ್ಯರ್ಥಿಯಾದ ಬಳಿಕ ಮೊದಲ ಬಾರಿ,  ಅಮೆರಿಕ ಸಾಗ ರೋತ್ತರ ಬಿಜೆಪಿ ಸ್ನೇಹಿತರ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಭಾನು ವಾರ ವೀಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ಸಾಧನೆಯಿಂದ ದೂರ ಸರಿಯುತ್ತಿರುವ ಯುಪಿಎ ಸರ್ಕಾರವನ್ನು  ಉರುಳಿಸುವಂತೆ  ಕರೆ ನೀಡಿದರು.

‘2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅದನ್ನು ರಕ್ಷಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳನ್ನು ನಾವು ಎದುರಿಸಬೇಕಾಗುತ್ತದೆ’ ಎಂದು ಗುಜರಾತ್‌ ಮುಖ್ಯಮಂತ್ರಿ ಹೇಳಿದರು.

‘ದೆಹಲಿ ಸರ್ಕಾರಕ್ಕೆ ಎಷ್ಟೊಂದು ದುರಹಂಕಾರವಿದೆ ನೋಡಿ. ಒಂಬತ್ತು ವರ್ಷಗಳಿಂದ ಅಧಿಕಾರದಲ್ಲಿ ಇದ್ದೂ ಸಾಧನೆ ವರದಿಯನ್ನು ನೀಡಲು  ತಯಾರಿಲ್ಲ’ ಎಂದೂ  ಟೀಕಿಸಿದರು.

‌‘ನನ್ನ ಈ ಮಾತು ಮುಗಿಯುತ್ತಿದ್ದಂತೆಯೇ ಅವರು  ಎದಿರೇಟು ನೀಡಲು ಶುರು ಮಾಡುತ್ತಾರೆ. ಆದರೆ  ಸ್ನೇಹಿತರೆ ಒಂದು ವಿಷಯ ನೆನಪಿಡಿ. ಈ ಮೋದಿ 2012ರಲ್ಲಿಯೇ ಜನರಿಗೆ ಉತ್ತರ ನೀಡಿದ್ದಾಗಿದೆ. ಜನರು ಮೂರನೇ ಅವಧಿಗೂ ಮೋದಿಯನ್ನು ಅಭೂತಪೂರ್ವ ರೀತಿಯಲ್ಲಿ ಗೆಲ್ಲಿಸಿದ್ದಾರೆ’ ಎಂದು ತಮ್ಮ ಬೆನ್ನು ತಟ್ಟಿಕೊಂಡರು.

‘ ವಾಜಪೇಯಿ ಆಡಳಿತದಲ್ಲಿ ಜಿಡಿಪಿ ದರ ಶೇ 8.4ರಷ್ಟು  ಇತ್ತು. ಯುಪಿಎ ಆಡಳಿತದಲ್ಲಿ ಅದು ಶೇ 4.8ಕ್ಕೆ ಬಂದಿದೆ. ಕಾಂಗ್ರೆಸ್‌್ ಗೆಳೆಯರೆ ಕನಿಷ್ಠ ಪಕ್ಷ ಈ ಸತ್ಯವನ್ನಾದರೂ ಒಪ್ಪಿಕೊಳ್ಳುವಿರಾ’ ಎಂದು ಪ್ರಶ್ನಿಸಿದರು.

‘2014 ಹಾಗೂ 1977ರ ಚುನಾವಣೆಗಳನ್ನು ಹೋಲಿಕೆ ಮಾಡಿದ ಅವರು,  ‘ದೇಶವನ್ನು ಅಧಃಪತನಕ್ಕೆ ತಳ್ಳಿದ ಈ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು. ಪ್ರಗತಿಪರ ಬಿಜೆಪಿ ಸರ್ಕಾರಕ್ಕಾಗಿ ನಾವು ಶ್ರಮಿಸಬೇಕು. 1977ರಂತೆಯೇ   2014ರ ಚುನಾವಣೆ ಕೂಡ ಸ್ಪಷ್ಟ ಜನಾದೇಶವಾಗಿರಬೇಕು’ ಎಂದರು ( ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಬಾರಿ 1977ರಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತ್ತು. ಜನತಾ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಿತ್ತು).

‘ಈ ಚುನಾವಣೆಯು ಯಾವುದೇ ಸ್ಥಾನಕ್ಕೆ ಸಂಬಂಧಿಸಿದ್ದಲ್ಲ. ಜನರ ಕಣ್ಣೀರನ್ನು ಒರೆಸಲು ಬರುತ್ತಿದೆ’ ಎಂದ ಅವರು,  ಬಿಜೆಪಿಯನ್ನು ಗೆಲ್ಲಿಸಲು ಅರ್ಥಪೂರ್ಣ ಪಾತ್ರ ವಹಿಸುವಂತೆ ಅಮೆರಿಕದಲ್ಲಿನ ಭಾರತೀಯ ಸಮುದಾಯಕ್ಕೆ ಮನವಿ ಮಾಡಿಕೊಂಡರು.

ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಮಾಡಿದ್ದ ಸಾಧನೆಯನ್ನು ಬಣ್ಣಿಸಿದ ಮೋದಿ, ‘ ಎನ್‌ಡಿಎ  ಸರ್ಕಾರವು ಭಾರತಕ್ಕೆ ಮಾತ್ರವಲ್ಲ; ಇಡೀ ವಿಶ್ವಕ್ಕೆ ಹೊಸ ದಿಕ್ಸೂಚಿ ಹಾಗೂ ಪ್ರೇರಣೆಯನ್ನು ನೀಡಿತ್ತು’ ಎಂದರು.

‘ಬಿಜೆಪಿ ಮಾತ್ರವೇ ದೇಶವನ್ನು ಸದ್ಯದ ಬಿಕ್ಕಟ್ಟಿನಿಂದ ಪಾರು ಮಾಡಬಲ್ಲುದು. ಬಿಜೆಪಿಯ ಯಾವುದೇ ಸದಸ್ಯನಿಗೆ ಎಂತಹುದೇ ಜವಾಬ್ದಾರಿ ಕೊಟ್ಟರೂ ಆತ ಅದನ್ನು ಸಮರ್ಥವಾಗಿ ನಿಭಾಯಿಸುತ್ತಾನೆ. ಹಾಗಾಗಿ ಬಿಜೆಪಿ ಬಗ್ಗೆ ಜನ ನಿರೀಕ್ಷೆ ಇಟ್ಟುಕೊಂಡಿದ್ದಾರೆ’ ಎಂದು ಹೊಗಳಿಕೊಂಡರು.

ಎಲ್‌.ಕೆ.ಅಡ್ವಾಣಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌್ ಸಿಂಗ್‌ ಚೌಹಾಣ್‌ ಮತ್ತಿತರರ ನಾಯಕತ್ವ ಹೊಗಳುವುದಕ್ಕೂ ಅವರು ಮರೆಯಲಿಲ್ಲ.

ಸಂತಾಪ: ಕೀನ್ಯಾ ಮಾಲ್ ದಾಳಿಯಲ್ಲಿ ಮೃತಪಟ್ಟ ಭಾರತೀಯರಿಗೆ ಸಂತಾಪ ಸೂಚಿಸಿದ ಅವರು, ‘ಜಗತ್ತಿನಲ್ಲಿ ಭಯೋತ್ಪಾದನೆಯನ್ನು ನಿರ್ನಾಮ ಮಾಡುವ ಸಮಯ ಬಂದಿದೆ. ಭಯೋತ್ಪಾದನೆ ವಿರುದ್ಧದ ಸಮರಕ್ಕೆ ಸಂಬಂಧಿಸಿ ಕೆಲ ರಾಷ್ಟ್ರಗಳು ಇಬ್ಬಗೆಯ ನೀತಿ ತಾಳಿವೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT