ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಬಿಸಿತುಪ್ಪವಾದ ತೆಲಂಗಾಣ ವಿವಾದ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಪಟ್ಟು ಹಿಡಿದಿರುವ ಆ ಭಾಗದ ಕಾಂಗ್ರೆಸ್ ಮುಖಂಡರು ಸಮಸ್ಯೆಗೆ ಶೀಘ್ರ ಪರಿಹಾರ ಹುಡುಕುವಂತೆ ಒತ್ತಡ ಹೇರುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಂಸತ್ತಿನ ಬಜೆಟ್ ಅಧಿವೇಶನ ನಡೆಯುತ್ತಿರುವಾಗಲೇ ಟಿಆರ್‌ಎಸ್ ಮತ್ತು ಟಿಡಿಪಿ ಪಕ್ಷಗಳ ಸಂಸದರೊಂದಿಗೆ ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ತೆಲಂಗಾಣ ಸಮಸ್ಯೆಯನ್ನು ಪ್ರತಿಧ್ವನಿಸುತ್ತಿದ್ದಾರೆ. ಸೋಮವಾರ ನಡೆಯಲಿರುವ ಬಜೆಟ್ ಮಂಡನೆ ಮತ್ತು ಅದರ ಮೇಲಿನ ಚರ್ಚೆ ಮುಗಿಯುವ ಕೆಲದಿನಗಳವರೆಗೆ ಈ ವಷಯಕ್ಕೆ ತಾತ್ಕಾಲಿಕ ವಿರಾಮ ನೀಡುವಂತೆ ಪಕ್ಷದ ನಾಯಕರು ತೆಲಂಗಾಣ ಪ್ರಾಂತ್ಯದ ಸಂಸದರನ್ನು ಓಲೈಸಿದ್ದಾರೆ.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ ಸಿಂಗ್ ಶುಕ್ರವಾರ ನಡೆದ ಪಕ್ಷದ ಕೋರ್ ಸಮಿತಿ ಸಭೆ ಸೇರಿದಂತೆ ಹಲವು ತಿಂಗಳಿನಿಂದ ತೆಲಂಗಾಣ ಬಿಕ್ಕಟ್ಟಿನ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಸಂಸತ್‌ನ ಬಜೆಟ್ ಅಧಿವೇಶನ ಪ್ರಗತಿಯಲ್ಲಿರುವಾಗ ತೆಲಂಗಾಣ ವಿವಾದ ಇನ್ನಷ್ಟು ತೀವ್ರ ಸ್ವರೂಪ ಪಡೆಯುತ್ತಿರುವ ಸೂಚನೆ ದೊರೆತ ಆಂಧ್ರಪ್ರದೇಶದ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ರಾಜ್ಯದ ಹಿರಿಯ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಲ್ಲದೆ, ಸೋನಿಯಾ ಗಾಂಧಿ ಮತ್ತು ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಟಿಆರ್‌ಎಸ್ ಮತ್ತು ಟಿಡಿಪಿ ಸದಸ್ಯರ ಪ್ರತಿಭಟನೆಗೆ ಕೈಜೋಡಿಸಿರುವ ಕಾಂಗ್ರೆಸ್ ಶಾಸಕರು ಆಂಧ್ರದಲ್ಲಿ ಕೆಲವು ದಿನಗಳಿಂದ ವಿಧಾನಸಭೆ ಅಧಿವೇಶನಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅತ್ತ ತೆಲಂಗಾಣ ಪ್ರಾಂತ್ಯದ ಸರ್ಕಾರಿ ಉದ್ಯೋಗಿಗಳು ಅಸಹಕಾರ ಚಳವಳಿ ಆರಂಭಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ತೆಲಂಗಾಣ ಪ್ರಾಂತ್ಯದ ರಾಜ್ಯ ಸರ್ಕಾರದ 16 ಸಚಿವರು ಸಮಸ್ಯೆಗೆ ಸಂಬಂಧಿಸಿದಂತೆ ‘ವಿಶೇಷ ಮತ್ತು ತುರ್ತು’ ಕೇಳುಗರು ಬೇಕಾಗಿದ್ದಾರೆ ಎಂದು ಕೇಳಿಕೊಂಡಿದ್ದಾರೆ. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿನಃ ಬೇರೆ ಆಯ್ಕೆ ಇಲ್ಲ. ಹೊಸ ರಾಜ್ಯ ರಚನೆ ವಿಳಂಬವಾದರೆ ಅದರಿಂದ ಪಕ್ಷಕ್ಕೆ ಅಪಾಯ ಎಂದು ಸಹ ಸಚಿವರು ಪತ್ರದಲ್ಲಿ ಎಚ್ಚರಿಸಿದ್ದಾರೆ.

ಟಿಆರ್‌ಎಸ್ ಹೋರಾಟದ ಕಾವನ್ನು ಹೆಚ್ಚಿಸುತ್ತಿದ್ದು, ಇದಕ್ಕೆ ಅಲ್ಲಿನ ವಿವಿಧ ಪಕ್ಷಗಳ ಶಾಸಕರು ಸಹ ಜೊತೆಗೂಡುತ್ತಿದ್ದಾರೆ. ಅವರ ಪರಿಸ್ಥಿತಿ ಅತಂತ್ರವಾಗುತ್ತಿದ್ದು, ಇದೇ ರೀತಿ ಸನ್ನಿವೇಶ ಮುಂದುವರಿದಲ್ಲಿ ಪಕ್ಷ ತೆಲಂಗಾಣ ಪ್ರಾಂತ್ಯದಲ್ಲಿ ಸಂಪೂರ್ಣ ಬೆಂಬಲ ಕಳೆದುಕೊಳ್ಳಬಹುದು ಎಂದು ಪಕ್ಷದ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

2004ರಲ್ಲಿ ನಡೆದ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮತ್ತು ಪ್ರತ್ಯೇಕ ರಾಜ್ಯ ಬೇಡಿಕೆಯ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ 2009ರಲ್ಲಿ ಗೃಹಸಚಿವ ಪಿ.ಚಿದಂಬರಂ ನೀಡಿದ ಭರವಸೆಗಳನ್ನು ಸೋನಿಯಾ ಅವರಿಗೆ ಪತ್ರದಲ್ಲಿ ಪುನಃ ನೆನಪಿಸಲಾಗಿದೆ.  ತೆಲಂಗಾಣಕ್ಕೆ ಸಂಬಂಧಿಸಿದ ನಮ್ಮ ಬದ್ಧತೆಯನ್ನು ಗೌರವಿಸದೆ ಜನರನ್ನು ಎದುರಿಸುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ.

ಸಮಸ್ಯೆಗೆ ವಿಶ್ವಾಸಾರ್ಹ ಪರಿಹಾರ ಕಂಡುಕೊಳ್ಳುವ ಯತ್ನ ನಡೆಯುತ್ತಿದ್ದು, ಅಲ್ಲಿಯವರೆಗೆ ತಾಳ್ಮೆ ಕಾಯ್ದುಕೊಳ್ಳುವಂತೆ ಪಕ್ಷ ಅಲ್ಲಿನ ಮುಖಂಡರಿಗೆ ಮನವಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ. 

ಇದಕ್ಕೂ ಮುನ್ನ ತೆಲಂಗಾಣಕ್ಕೆ ಸೇರಿದ ರಾಜ್ಯ ಸಭೆ ಮತ್ತು ಲೋಕಸಭೆ ಸದಸ್ಯರು ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿದ್ದು, ಪ್ರತ್ಯೇಕ ರಾಜ್ಯ ರಚನೆ ಬೇಡಿಕೆಯ ತಮ್ಮ ನಿಲುವಿನಲ್ಲಿ ಯಾವುದೇ ರಾಜಿ ಇಲ್ಲ ಎಂದು ಪುನಃ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT