ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮುಖಭಂಗ: ಮೈತ್ರಿಕೂಟಕ್ಕೆ ಜಯ

ಯಾದಗಿರಿ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆ
Last Updated 12 ಸೆಪ್ಟೆಂಬರ್ 2013, 7:04 IST
ಅಕ್ಷರ ಗಾತ್ರ

ಯಾದಗಿರಿ: ಸ್ಥಳೀಯವಾಗಿ ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷವು ಬುಧವಾರ ನಡೆದ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ಹೊರಗಿಡಲು ರಚನೆಯಾದ ಕಾಂಗ್ರೆಸ್ಸೇತರ ಮೈತ್ರಿಕೂಟವೂ ಭರ್ಜರಿ ಜಯ ಗಳಿಸಿದೆ.

  ನಗರಸಭೆಯಲ್ಲಿ 11 ಸದಸ್ಯರನ್ನು ಹೊಂದಿದ ಕಾಂಗ್ರೆಸ್ ಪಕ್ಷ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೂ ಅಧಿಕಾರ ಹಿಡಿಯುವಲ್ಲಿ ವಿಫಲ­ವಾಗಿದ್ದು, ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸ್ಥಳೀಯ ಶಾಸಕರಾದ ಹಿರಿಯ ಕಾಂಗ್ರೆಸ್ಸಿಗ ಡಾ. ಎ.ಬಿ. ಮಾಲಕರಡ್ಡಿ ಅವರೇ ಚುನಾವಣೆಯಲ್ಲಿ ಭಾಗವಹಿಸಿದ್ದರೂ, ಅಧಿಕಾರ ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.

  ನಗರಸಭೆ ಒಟ್ಟು 31 ಸದಸ್ಯರಲ್ಲಿ ಕಾಂಗ್ರೆಸ್ 11, ಜೆಡಿಎಸ್ 8, ಬಿಎಸ್ಸಾರ್‌ ಕಾಂಗ್ರೆಸ್‌ 4, ಬಿಜೆಪಿ 1, ಪಕ್ಷೇತರ ಒಬ್ಬ ಸದಸ್ಯರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷ­ವನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್, ಕೆಜೆಪಿ, ಬಿಎಸ್ಸಾರ್‌ ಕಾಂಗ್ರೆಸ್‌ ಪಕ್ಷಗಳು ಹಾಗೂ ಪಕ್ಷೇತರ ಏಕೈಕ ಸದಸ್ಯೆ ಒಂದಾಗಿ ಮೈತ್ರಿ ಕೂಟ ರಚಿಸಿಕೊಂಡು ಅಧಿಕಾರ ಹಿಡಿಯಲು ಸಫಲರಾದರು. ಕಾಂಗ್ರೆಸ್ 11 ಸದಸ್ಯರು ಹೊಂದಿದ್ದು, ಅವರಿಗೆ ಬಿಜೆಪಿ ಏಕೈಕ ಸದಸ್ಯ ಮಾತ್ರ ಬೆಂಬಲಿಸಿದರು. ಜೆಡಿಎಸ್‌ನ ಕೆಲವು ಸದಸ್ಯರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವರು ಎಂಬ ವಿಶ್ವಾಸದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಶೀತಲ ಶಿಂಧೆ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬ­ಲಿಸದೇ ಜೆಡಿಎಸ್ ಅಭ್ಯರ್ಥಿಯ ಪರ ಇಬ್ಬರು ಜೆಡಿಎಸ್‌ನ ಮಹಿಳಾ ಸದಸ್ಯರು ಮತ ಚಲಾಯಿಸಿದರು. ಉಪಾ­ಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ನ 11 ಸದಸ್ಯರು ಹಾಗೂ ಶಾಸಕರು, ಜೆಡಿಎಸ್ ಅಭ್ಯರ್ಥಿ ಶೀತಲ ಶಿಂಧೆ ಪರ ಮತ ಚಲಾಯಿಸಿದರು.

 ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದಂತೆ ಹೊರಗಡೆ ಜೆಡಿಎಸ್, ಕೆಜೆಪಿ ಹಾಗೂ ಬಿಎಸ್ಸಾರ್‌ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದರು.

ಆದರೆ ಪಕ್ಷ ಅಧಿಕಾರ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಸೇರಿದ್ದ ಕಾರ್ಯಕರ್ತರು ತೀವ್ರ ನಿರಾಸೆ ಅನುಭವಿಸು­ವಂತಾಯಿತು. ಸ್ಥಳೀಯವಾಗಿ ಕಾಂಗ್ರೆಸ್‌ ಶಾಸಕರನ್ನು ಹೊಂದಿದ್ದರೂ, ಅಧಿಕಾರ ಹಿಡಿಯುವಲ್ಲಿ ವಿಫಲ­ವಾಗಿರುವುದು ಕಾಂಗ್ರೆಸ್‌ ಕಾರ್ಯ­ಕರ್ತರು ಹಿನ್ನಡೆ ಅನುಭವಿ­ಸುವಂತಾಯಿತು.

ಅಭಿನಂದನೆ: ಕಾಂಗ್ರೆಸ್ಸೇತರ ಮೈತ್ರಿಕೂಟ ಅಧಿಕಾರ ಹಿಡಿಯಲು ಅಗತ್ಯ ಸಹಕಾರ ನೀಡಿದ ಕೆಜೆಪಿ, ಬಿಎಸ್ಸಾರ್‌ ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ಜೆಡಿಎಸ್‌ ನಾಯಕ­ರಾದ ಎ.ಸಿ. ಕಾಡ್ಲೂರ, ಬಸವರಾಜ ಚಂಡ್ರಕಿ, ಎಸ್‌.ಪಿ. ನಾಡೇಕರ್‌ ಹಾಗೂ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ವಿಶ್ವನಾಥ ಸಿರವಾರ ಅಭಿನಂದಿ­ಸಿದ್ದಾರೆ. ಮೈತ್ರಿಕೂಟದ ಸದಸ್ಯರು ಅಧಿಕಾರ ಪಡೆದಿದ್ದು, ನಗರದ ಅಭಿವೃದ್ಧಿ ಹೊಸ ಶಕೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಮಾಹಿತಿ ನೀಡದ ಅಧಿಕಾರಿಗಳು
ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಮಾಧ್ಯಮದವನ್ನು ಹೊರಗಿಟ್ಟ ಅಧಿಕಾರಿಗಳು, ಚುನಾವಣೆಯ ನಂತರವೂ ಸಮರ್ಪಕ ಮಾಹಿತಿ ನೀಡದೇ ಪರದಾಡುವಂತೆ ಮಾಡಿದರು.

ಬೆಳಿಗ್ಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾತ್ರ ಮಾಧ್ಯಮದವರಿಗೆ ಅವಕಾಶ ನೀಡಿದ್ದ ಅಧಿಕಾರಿಗಳು, ಚುನಾವಣೆಯ ಸಮಯದಲ್ಲಿ ಮಾಧ್ಯಮದ ಪ್ರತಿನಿಧಿಗಳನ್ನು ಸಭಾಂಗಣದಿಂದ ಹೊರಗೆ ಕಳುಹಿಸಿದರು. ಚುನಾವಣೆಯ ನಂತರವಾದರೂ ಮಾಹಿತಿ ಸಿಗಬಹುದು ಎಂದು ಸುಮಾರು ಒಂದು ಗಂಟೆ ಕಾಯ್ದ ಮಾಧ್ಯಮ ಪ್ರತಿನಿಧಿಗಳು ನಿರಾಸೆ ಅನುಭವಿಸಬೇಕಾಯಿತು.

ಅಗತ್ಯ ಮಾಹಿತಿ ನೀಡಬೇಕಿದ್ದ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಾಯಕ ಆಯುಕ್ತ ಬಿ.ಪಿ. ವಿಜಯ, ಯಾವುದೇ ಮಾಹಿತಿ ನೀಡದೇ ಹೊರನಡೆದರು. ಇದರಿಂದಾಗಿ ದಿಕ್ಕು ತೋಚದಂತಾದ ಮಾಧ್ಯಮದ ಪ್ರತಿನಿಧಿಗಳು, ಅಧ್ಯಕ್ಷ–ಉಪಾಧ್ಯಕ್ಷರಿಗೆ ಲಭಿಸಿದ ಮತಗಳ ವಿವರ ಪಡೆಯಲು ಹರಸಾಹಸ ಮಾಡುವಂತಾಯಿತು. ಅಧಿಕೃತವಾಗಿ ಘೋಷಣೆ ಮಾಡಿದ ಅಧಿಕಾರಿಗಳು, ಮಾಹಿತಿ ನೀಡದೇ ಇದ್ದುದು ಜನರಲ್ಲಿ ತೀವ್ರ ಬೇಸರ ಮೂಡಿಸಿತು.

ಅಲ್ಲದೇ ನಗರಸಭೆ ಅಧ್ಯಕ್ಷ –ಉಪಾಧ್ಯಕ್ಷರ ಚುನಾವಣೆ ನಡೆಯುವ ಬಗ್ಗೆಯೂ ಮಾಧ್ಯಮದವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT