ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಬಂಡಾಯದ ಬಿಸಿ

Last Updated 10 ಏಪ್ರಿಲ್ 2013, 8:03 IST
ಅಕ್ಷರ ಗಾತ್ರ

ವಿಜಾಪುರ: ಇಂಡಿ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಿ.ಪಂ. ಮಾಜಿ ಉಪಾಧ್ಯಕ್ಷ ಬಾಬು ಸಾಹುಕಾರ ಮೇತ್ರಿ ಕಣಕ್ಕಿಳಿಯಲು ನಿರ್ಧಾರ. ಸಂಯುಕ್ತ ಜನತಾ ದಳ ಹಾಗೂ ಎಸ್‌ಯುಸಿಐ ಪಕ್ಷಗಳಿಂದ ಅಭ್ಯರ್ಥಿಗಳ ಹೆಸರು ಪ್ರಕಟ.
ಇವು ಮಂಗಳವಾರದ ಜಿಲ್ಲೆಯ ಪ್ರಮುಖ ರಾಜಕೀಯ ವಿದ್ಯಮಾನ.

`ಇಂಡಿ ಮತಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯನ್ನಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಬಾಬು ಸಾಹುಕಾರ ಮೇತ್ರಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಅವರನ್ನು ಸೋಲಿಸುವುದೇ ನಮ್ಮ ಗುರಿ' ಎಂದು ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ. ಪಾಟೀಲ ಹಲಸಂಗಿ ಹೇಳಿದರು.

`ನಾನು, ಬಾಬು ಮೇತ್ರಿ, ಮಹಾದೇವ ಹಿರೇಕುರಬರ, ರಜಾಕ್ ಕುಮಸಗಿ ಮತ್ತಿತರರು ಇಂಡಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದೆವು. ಪಕ್ಷ ನಮ್ಮ ಬೇಡಿಕೆಯನ್ನು ತಿರಸ್ಕರಿಸಿದ್ದರಿಂದ ನಾವೆಲ್ಲ ಸೋಮವಾರ ರೂಗಿ ಕ್ರಾಸ್‌ನಲ್ಲಿ ಸಭೆ ಸೇರಿ ಬಂಡಾಯ ಅಭ್ಯರ್ಥಿಯನ್ನಾಗಿ ಬಾಬು ಮೇತ್ರಿ ಅವರನ್ನು ಕಣಕ್ಕಿಳಿಸಲು ಒಮ್ಮತದ ನಿರ್ಧಾರ ಕೈಗೊಂಡಿದ್ದೇವೆ' ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಯಶವಂತರಾಯಗೌಡ ಅವರು ಎಷ್ಟೇ ಮನವೊಲಿಸಿದರೂ ಅವರಿಗೆ ಬೆಂಬಲ ನೀಡುವುದಿಲ್ಲ. ಯಾವ ಒತ್ತಡಕ್ಕೂ ಮಣಿಯುವುದಿಲ್ಲ. ಕಾಂಗ್ರೆಸ್‌ನ ಎಲ್ಲ ನಾಯಕರ ಬೆಂಬಲ ನಮಗಿದೆ. ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಕಾಂಗ್ರೆಸ್‌ನಿಂದ ಕ್ರಮ ಎದುರಿಸಲೂ ನಾವು ಸಿದ್ಧ' ಎಂದರು.

`ನಾವೆಲ್ಲ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಕಾಂಗ್ರೆಸ್‌ನಿಂದ ಯಾರೇ ಮುಖ್ಯಮಂತ್ರಿ ಆದರೂ ಅವರಿಗೆ ಬೆಂಬಲ ನೀಡುತ್ತೇವೆ' ಎಂದು ಕೆಪಿಸಿಸಿ ಸದಸ್ಯ, ನಿಂಬಾಳದ ನಿಯೋಜಿತ ಬಸವೇಶ್ವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು.

ಮಹಾದೇವ ಹಿರೇಕುರಬರ, ರಜಾಕ್ ಕುಮಸಗಿ, ಬಾಬು ಸಾಹುಕಾರ ಮೇತ್ರಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಜೆಡಿಯು ಸ್ಪರ್ಧೆ
ಜಿಲ್ಲೆಯ ಎಲ್ಲ ಎಂಟೂ ಕ್ಷೇತ್ರಗಳಲ್ಲಿ ಸಂಯುಕ್ತ ಜನತಾ ದಳ ಸ್ಪರ್ಧಿಸಲಿದೆ ಎಂದು ಪಕ್ಷದ ಜಿಲ್ಲಾ ಘಟಕದ ಚುನಾವಣೆಯ ಅಧಿಕಾರಿ ಶಶಿಕಾಂತ ಎಸ್. ತಾವರಗಿರಿ ಹೇಳಿದರು.

ಬಬಲೇಶ್ವರದಿಂದ ಬಸಯ್ಯ ಸತ್ತಿಗೇರಿ, ನಾಗಠಾಣದಿಂದ ಬಾಲಾಜಿ ಬಂಡಿವಡ್ಡರ, ದೇವರ ಹಿಪ್ಪರಗಿ ಕ್ಷೇತ್ರದಿಂದ ಧನಸಿಂಗ್ ರಾಠೋಡ, ಸಿಂದಗಿಯಿಂದ ದ್ಯಾವಪ್ಪಗೌಡ ಜಿ. ಪಾಟೀಲ (ಚಾಂದಕವಟೆ) ಅವರಿಗೆ ಪಕ್ಷ ಟಿಕೆಟ್ ನೀಡಿದೆ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ವಿಜಾಪುರ ನಗರ ಕ್ಷೇತ್ರದಿಂದ ಹರೀಶ್ ದರಬಾರ ಹಾಗೂ ಶಶಿಕಾಂತ ತಾವರಗಿರಿ, ಮುದ್ದೇಬಿಹಾಳದಿಂದ ಚನ್ನು ಪಾಟೀಲ ಹಾಗೂ ಪ್ರಕಾಶ ರತ್ನಾಕರ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಈ ಕ್ಷೇತ್ರ ಹಾಗೂ ಇಂಡಿ ಮತ್ತು ಬಸವನ ಬಾಗೇವಾಡಿ ಕ್ಷೇತ್ರಗಳ ಅಭ್ಯರ್ಥಿಗಳನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ. ನಾಡಗೌಡ ಅಂತಿಮಗೊಳಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಟಿಕೆಟ್ ಕೋರಿ 17 ಅರ್ಜಿಗಳು ಬಂದಿದ್ದವು. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷ ಸ್ಪರ್ಧಿಸಲಿದೆ. ಇದೇ 15ರಂದು ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದರು. ಧನಸಿಂಗ್ ರಾಠೋಡ, ಪ್ರಕಾಶ ರತ್ನಾಕರ ಪತ್ರಿಕಾಗೋಷ್ಠಿಯಲ್ಲಿದ್ದರು.

11 ಕ್ಷೇತ್ರಗಳಲ್ಲಿ ಎಸ್‌ಯುಸಿಐ
ವಿಜಾಪುರ ನಗರ ಸೇರಿ ರಾಜ್ಯದ 11 ಕ್ಷೇತ್ರಗಳಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)ದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಎಚ್.ವಿ. ದಿವಾಕರ ಹೇಳಿದರು.

ವಿಜಾಪುರ ನಗರ ಕ್ಷೇತ್ರದಿಂದ ಎಚ್.ಟಿ. ಮಲ್ಲಿಕಾರ್ಜುನ, ಮಲ್ಲೇಶ್ವರಂ ನಿಂದ ಎಂ.ಎಸ್. ಪ್ರಕಾಶ್, ರಾಜಾಜಿನಗರದಿಂದ ಬಿ.ಎಸ್. ಪ್ರತಿಭಾಕುಮಾರಿ, ಬಸವನ ಗುಡಿಯಿಂದ ಎನ್. ರವಿ, ಗುಲ್ಬರ್ಗ ದಕ್ಷಿಣದಿಂದ ವಿ.ನಾಗಮ್ಮಾಳ್, ಗುಲ್ಬರ್ಗ ಗ್ರಾಮೀಣದಿಂದ ನಿಂಗಣ್ಣ, ಬಳ್ಳಾರಿ ನಗರದಿಂದ ಡಿ. ನಾಗಲಕ್ಷ್ಮಿ, ಬಳ್ಳಾರಿ ಗ್ರಾಮೀಣದಿಂದ ಎ.ದೇವದಾಸ, ಧಾರವಾಡ ಪಶ್ಚಿಮದಿಂದ ಎಚ್.ಜಿ. ದೇಸಾಯಿ, ರಾಯಚೂರಿನಿಂದ ಬಿ.ಆರ್. ಅಪರ್ಣಾ, ಚಾಮರಾಜ ನಗರದಿಂದ ಎಂ. ಉಮಾದೇವಿ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಅಭ್ಯರ್ಥಿಗಳು ಇರುವೆಡೆ ನಮ್ಮವರನ್ನು, ಉಳಿದೆಡೆ ಯೋಗ್ಯ ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು. ರಾಜ್ಯ ರೈತ ಸಂಘ ಸೇರಿದಂತೆ ಚಳವಳಿ ಮೂಲಕ ಬೆಳೆದು ಬಂದ ಪಕ್ಷಗಳೊಂದಿಗೆ ಹೊಂದಾಣಿಕೆಗೆ ನಾವು ಮುಂದಾದರೂ ಅವರಿಂದ ಸ್ಪಂದನೆ ಬರಲಿಲ್ಲ ಎಂದು ವಿಷಾದಿಸಿದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಭ್ರಷ್ಟ ಪಕ್ಷಗಳು. ಅವರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದು ಕೇವಲ ಭ್ರಮೆ ಎಂದು ದೂರಿದರು.

ರಾಜ್ಯ ಸರ್ಕಾರ 150 ನಗರ-ಪಟ್ಟಣಗಳಲ್ಲಿ ನೀರು ಖಾಸಗೀಕರಣ ಮಾಡಲು ಹೊರಟಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ 1.50 ಲಕ್ಷಎಕರೆ ರೈತರ ಭೂಮಿ ಕಿತ್ತುಕೊಂಡರೂ ಒಂದು ಉದ್ಯೋಗ ಸೃಷ್ಟಿಯಾಗಲಿಲ್ಲ ಎಂದು ದೂರಿದರು.

`ವಿಜಾಪುರ ನಗರ ಅಭಿವೃದ್ಧಿಯಿಂದ ವಂಚಿತವಾಗಿದೆ. ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ರಸ್ತೆ ಇಲ್ಲ. ಜನರಿಗಿಂತ ಹಂದಿಗಳೇ ಹೆಚ್ಚಾಗಿದ್ದು, ಇಡೀ ನಗರವೇ ಒಂದು ಕೊಳೆಗೇರಿಯಂತಾಗಿದೆ. ಹೋರಾಟದ ಸಂಕೇತವಾಗಿ ಮಲ್ಲಿಕಾರ್ಜುನ ಅವರನ್ನು ಕಣಕ್ಕಿಳಿಸಿದ್ದು, ಮತದಾರರು ಬೆಂಬಲಿಸಬೇಕು' ಎಂದು ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನ ರೆಡ್ಡಿ ಮನವಿ ಮಾಡಿದರು.

ಅಭ್ಯರ್ಥಿ ಎಚ್.ಟಿ. ಮಲ್ಲಿಕಾರ್ಜುನ, ಬಾಳು ಜೇವೂರ, ಎಚ್.ಟಿ. ಭರತ್‌ಕುಮಾರ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ನಿಲ್ತೀನಿ.... ನಿಲ್ಲಲ್ಲ!
ಬಿ.ಜಿ. ಪಾಟೀಲ ಹಲಸಂಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಬಂಡಾಯ ನಾಯಕರೇ ವಿಭಿನ್ನ ಅಭಿಪ್ರಾಯ ವ್ಯಕ್ತ ಪಡಿಸಿದರು.

`ಕಾಂಗ್ರೆಸ್ ಪಕ್ಷದ ಎಲ್ಲ ವರ್ಗದ ನಿಷ್ಠಾವಂತ ಕಾರ್ಯಕರ್ತರು, ನಾಯಕರು ಸಭೆ ಸೇರಿ ಬಾಬು ಮೇತ್ರಿ ಅವರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಒಮ್ಮತದ ನಿರ್ಧಾರ ಕೈಗೊಂಡಿದ್ದೇವೆ' ಎಂದು ಕೆಪಿಸಿಸಿ ಸದಸ್ಯ ಎಂ.ಎಸ್. ಪಾಟೀಲ ಹೇಳಿದರು.
ಕಳೆದ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದ ಮಹಾದೇವ ಹಿರೇಕುರಬರ ಆಗ ಪತ್ರಿಕಾಗೋಷ್ಠಿಗೆ ಆಗಮಿಸಿದರು.

`ಹಣ ಇದ್ದರೆ ನಾನು ಕಳೆದ ಚುನಾವಣೆಯಲ್ಲಿಯೇ ಗೆಲ್ಲುತ್ತಿದ್ದೆ. ಕ್ಷೇತ್ರದಲ್ಲಿ ನಮ್ಮ 40 ಸಾವಿರ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಯಾವ ಪಕ್ಷವೂ ನಮಗೆ ಪ್ರಾತಿನಿಧ್ಯ ನೀಡಿಲ್ಲ. ಸಾಮಾಜಿಕ ನ್ಯಾಯ ದೊರೆತಿಲ್ಲ. ನಾನು ಸೋಲಿಸಲು ನಿಲ್ಲುವುದಿಲ್ಲ. ಗೆಲ್ಲಲಿಕ್ಕಾಗಿ ಈ ಬಾರಿಯೂ ಇಂಡಿ ಕ್ಷೇತ್ರದಿಂದ ಕಣಕ್ಕಿಳಿಯುವ ಬಯಕೆ ಇದೆ' ಎಂದರು.

ಇದರಿಂದ ಗೊಂದಲಕ್ಕೀಡಾದ ಉಳಿದವರು, `ಇಲ್ಲ, ನಮ್ಮ ಒಮ್ಮತದ ಅಭ್ಯರ್ಥಿ ಬಾಬು ಮೇತ್ರಿ ಅವರೇ' ಎಂದು ಪ್ರತಿಪಾದಿಸಿದರು.

`ಬಿ.ಜಿ. ಪಾಟೀಲ ಮತ್ತಿತರ ಹಿರಿಯರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ' ಎಂದು ಹೇಳುವ ಮೂಲಕ ಮಹಾದೇವ ಗೊಂದಲಕ್ಕೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT