ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು, ಜೆಡಿಎಸ್‌ನಲ್ಲಿ ಇಕ್ಕಟ್ಟು'

Last Updated 24 ಏಪ್ರಿಲ್ 2013, 6:30 IST
ಅಕ್ಷರ ಗಾತ್ರ

ಸಿಂದಗಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕೆಂದು ಯಾವ್ಯಾವ ರಾಜ್ಯಕ್ಕೆ ಹೋಗಿದ್ದಾರೆಯೋ ಅಲ್ಲಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ ಲೇವಡಿ ಮಾಡಿದರು.

ಪಟ್ಟಣದ ಅಂಜುಮನ್ ಮೈದಾನದಲ್ಲಿ ಬಿಜೆಪಿ ತಾಲ್ಲೂಕು ಘಟಕ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ವಂಶಪರಂಪರೆಗೆ ಮಹತ್ವ ನೀಡುತ್ತದೆ. ಅಲ್ಲಿ ಜನ್ಮದಿಂದ ನಾಯಕರಾಗಿದ್ದರೆ, ಬಿಜೆಪಿಯಲ್ಲಿ ಕರ್ಮದಿಂದ ನಾಯಕರಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಪರಿಕಲ್ಪನೆ ಇದ್ದದ್ದೇ ಆದರೆ ಹಿಂದುಳಿದ ವರ್ಗದ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಎಂದು ಬಿಂಬಿಸಬೇಕಿತ್ತು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಏಕಾಂಗಿ, ಎಸ್.ಎಂ.ಕೃಷ್ಣ ಕೋಪಗೃಹದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು, ಜೆಡಿಎಸ್‌ನಲ್ಲಿ ಇಕ್ಕಟ್ಟು ಮತ್ತು ಬಿಜೆಪಿಯಲ್ಲಿ ಒಕ್ಕಟ್ಟು ಎಂದು ಪ್ರಾಸಬದ್ಧವಾಗಿ ಮಾತನಾಡುತ್ತ ದೇಶದಲ್ಲಿ ಬಿಜೆಪಿ ಗಾಳಿ ಇದೆ. ರಾಜ್ಯದಲ್ಲೂ ಕಳೆದ ಒಂದು ತಿಂಗಳಿಂದ ಬಿಜೆಪಿಯಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ ಎಂದರು.

ದೇಶಕ್ಕೆ ವಾಜಪೇಯಿ ಆದರ್ಶದ ಆಡಳಿ ವಿದ್ದಂತೆ ಈಗ ನರೇಂದ್ರ ಮೋದಿ ಮಾದರಿಯ ಸರ್ಕಾರ ದೇಶಕ್ಕೆ ಅಗತ್ಯವಿದೆ ಎಂದು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕಾಂಗ್ರೆಸ್‌ಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿ ಎಂದು ಸವಾಲು ಹಾಕಿ ಕಾಂಗ್ರೆಸ್ಸಿಗರು ಲಿಂಗಾಯತರ ಹತ್ತಿರ ಹೋದರೆ ಶ್ಯಾಮನೂರು ಶಿವಶಂಕರಪ್ಪ ಹೆಸರು ಹಾಲುಮತ ಸಮುದಾಯದವರಿಗೆ ಸಿದ್ದರಾಮಯ್ಯನವರ ಹೆಸರು, ಪರಿಶಿಷ್ಟ ಜಾತಿಯ ಜನರ ಎದುರಲ್ಲಿ ಮಲ್ಲಿಕಾರ್ಜುನ ಖರ್ಗೆ,  ಜಿ.ಪರಮೇಶ್ವರ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುತ್ತ ಹೊರಟಿದ್ದಾರೆ. ಆದರೆ ಬಿಜೆಪಿ ಸ್ಪಷ್ಟ ನಿಲುವು ಹೊಂದಿದೆ. ಮುಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಎಂದು ಘೋಷಿಸಿದೆ ಎಂದು ಮಾತನಾಡಿದರು.

ಅಭ್ಯರ್ಥಿ ರಮೇಶ ಭೂಸನೂರ ಐದು ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಕಾಮಗಾರಿಯನ್ನೊಳಗೊಂಡು ತಾವು ಮಾಡಿದ ಕಾರ್ಯಗಳ  ಪಟ್ಟಿಯನ್ನು ಒಪ್ಪಿಸಿದರು. ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ಭೂಸನೂರ ಪರ ಮತಯಾಚಿಸಿ ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ರಾಜಶೇಖರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಧುರೀಣರಾದ ಶಿವಾನಂದ ಕಲ್ಲೂರ, ಅಶೋಕ ಅಲ್ಲಾಪೂರ, ಎಂ.ಎಸ್.ಮಠ, ಚನ್ನಪ್ಪಗೌಡ ಬಿರಾದಾರ, ಶ್ರೀಕಾಂತ ಸೋಮಜಾಳ, ಜಿಪಂ ಸದಸ್ಯರಾದ ಮಲ್ಲಪ್ಪ ತೋಡಕರ, ಕಾಶೀನಾಥ ಗಂಗನಳ್ಳಿ  ಯಲ್ಲಪ್ಪ ಹಾದಿಮನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT