ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅತೃಪ್ತಿ

ಪಕ್ಷಾಂತರಿಗಳಿಗೆ ಮಣೆ
Last Updated 22 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷಾಂತರಿಗಳಿಗೆ ಮಣೆ ಹಾಕಲಾಗುತ್ತಿದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಅನೇಕರು ತುದಿಗಾಲಲ್ಲಿ ನಿಂತಿದ್ದು, ಅದಕ್ಕೆ ಕಾಂಗ್ರೆಸ್ಸಿನ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ.

ಹಳಬರು ಮತ್ತು ಹೊಸದಾಗಿ ಪಕ್ಷ ಸೇರಲು ಬಯಸಿರುವ ಮುಖಂಡರ ನಡುವೆ ಪೈಪೋಟಿ ಉಂಟಾಗಿದೆ. ಈ ಕಾರಣಕ್ಕೆ ಕೆಲವೆಡೆ ನಗರ ಸ್ಥಳೀಯ ಸಂಸ್ಥೆಗಳ `ಬಿ-ಫಾರಂ' ಯಾರಿಗೆ ಕೊಡಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ನಾಮಪತ್ರ ಸಲ್ಲಿಸಲು ಶನಿವಾರ ಕೊನೆ ದಿನವಾಗಿದ್ದು, `ಬಿ-ಫಾರಂ' ಸಿಗದ ಕಾರಣ, ಬೇರೆ ಪಕ್ಷಗಳಿಂದ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿರುವ ನಾಯಕರು ದಿಕ್ಕುತೋಚದಂತಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ, ಹೊಸದಾಗಿ ಬರುವವರೆಗೆ ಮಣೆ ಹಾಕಲಾಗುತ್ತಿದೆ ಎಂಬ ಕೂಗು ಎದ್ದಿದೆ. ಪಕ್ಷದ ವರಿಷ್ಠರು ಕೂಡ ಟಿಕೆಟ್ ನೀಡುವ ಬಗ್ಗೆ ಖಚಿತವಾಗಿ ಹೇಳುತ್ತಿಲ್ಲ. ಹೀಗಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಲೆಬಿಸಿ ಹೆಚ್ಚಾಗಿದೆ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ತೊರೆದು, ಸಂಜೆ ರಾಮನಗರದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಮತ್ತೊಬ್ಬ ಮಾಜಿ ಸಚಿವ ರಾಜುಗೌಡ ಇನ್ನೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ತಮ್ಮ ಬೆಂಬಲಿಗರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಹಾಕಿಸುವ ಉದ್ದೇಶದಿಂದ ಅವರು ಸುರಪುರಕ್ಕೆ ತೆರಳಿದ್ದು, ಸೋಮವಾರ ಅಥವಾ ಮಂಗಳವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

`ಆಪರೇಷನ್ ಕಮಲ'ದಿಂದಲೇ ಕಾಂಗ್ರೆಸ್‌ಗೆ ಹೆಚ್ಚು ಹಿನ್ನಡೆಯಾಗಿದ್ದು, ಅದಕ್ಕೆ ಕಾರಣರಾದವರಿಗೆ ಟಿಕೆಟ್ ನೀಡಬಾರದು ಎನ್ನುವ ಕೂಗು ಪಕ್ಷದಲ್ಲಿ ಎದ್ದಿದೆ. ಈ ವಿಷಯದಲ್ಲಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ನಾಲ್ಕು ಮಂದಿ ಪಕ್ಷೇತರ ಸದಸ್ಯರಾದ ಪಿ.ಎಂ.ನರೇಂದ್ರಸ್ವಾಮಿ, ಡಿ.ಸುಧಾಕರ್, ವೆಂಕಟರಮಣಪ್ಪ ಮತ್ತು ಶಿವರಾಜ್ ತಂಗಡಗಿ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಇವರಲ್ಲದೆ, ಯೋಗೇಶ್ವರ್, ರಾಜುಗೌಡ ಮತ್ತು ಶ್ರವಣಬೆಳಗೊಳದ ಸಿ.ಎಸ್.ಪುಟ್ಟೇಗೌಡ ಅವರಿಗೂ ಟಿಕೆಟ್ ನೀಡಲು ಪಕ್ಷ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

ಮಿಸ್ತ್ರಿ ನಗರಕ್ಕೆ?: ಗೊಂದಲ ಹೆಚ್ಚಾಗಿರುವ ಕಾರಣ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಮಧುಸೂದನ ಮಿಸ್ತ್ರಿ ಶನಿವಾರ ಸಂಜೆ ನಗರಕ್ಕೆ ಬರುವ ಸಾಧ್ಯತೆ ಇದೆ. ಪಕ್ಷದ ಮುಖಂಡರ ಜತೆ ರಾತ್ರಿ ಮಾತುಕತೆ ನಡೆಸಿ, ಗೊಂದಲ ನಿವಾರಿಸಲಿದ್ದಾರೆ ಎಂದು ಗೊತ್ತಾಗಿದೆ.
.........

`ಬಿಜೆಪಿಯಿಂದ ನೈತಿಕ ಪಾಠ ಬೇಡ'
ಬೆಂಗಳೂರು:
`ನಾಲ್ಕೂವರೆ ವರ್ಷ, ಸಂತೆಯಲ್ಲಿ ಕುರಿ- ಮೇಕೆ ಖರೀದಿ ಮಾಡಿದ ಹಾಗೆ ಅನ್ಯಪಕ್ಷಗಳ ಶಾಸಕರನ್ನು ಖರೀದಿ ಮಾಡಿದ ಬಿಜೆಪಿಯಿಂದ ನಾವು ನೈತಿಕತೆಯ ಪಾಠ ಕಲಿಯಬೇಕಾದ ಅಗತ್ಯ ಇಲ್ಲ' ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಶುಕ್ರವಾರ ಇಲ್ಲಿ ತಿರುಗೇಟು ನೀಡಿದರು.

`ಸಚಿವರು ಮತ್ತು ಶಾಸಕರು ಬಿಜೆಪಿ ತೊರೆಯಲು ಕಾಂಗ್ರೆಸ್‌ನ ಕುತಂತ್ರ ಕಾರಣ. ಕಾಂಗ್ರೆಸ್, ಶಾಸಕರ ಖರೀದಿಯಲ್ಲಿ ತೊಡಗಿದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶುಕ್ರವಾರ ಹುಬ್ಬಳ್ಳಿಯಲ್ಲಿ ಟೀಕೆ ಮಾಡಿದ್ದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, `ಖರೀದಿ, ರೇಟು, ವ್ಯಾಪಾರ ಎಂಬುದರ ಅರ್ಥ ನಮಗೆ ಗೊತ್ತಿಲ್ಲ. ಈ ವಿಷಯಗಳಲ್ಲಿ ಬಿಜೆಪಿಯವರು ನಿಸ್ಸೀಮರು. ನಾಲ್ಕೂವರೆ ವರ್ಷದಲ್ಲಿ ಏನು ಮಾಡಿದರು? ಏನು ಮಾಡಿಲ್ಲ ಎಂದು ಬಾಯಿಬಿಟ್ಟು ಹೇಳಬೇಕಾಗಿಲ್ಲ. ಎಲ್ಲವನ್ನೂ ಜನ ನೋಡಿದ್ದಾರೆ, ಕೇಳಿದ್ದಾರೆ' ಎಂದರು.

`ಕಾಂಗ್ರೆಸ್‌ನ ತತ್ವ-ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ ಇದೆ. ಇಷ್ಟಕ್ಕೂ ನನಗೆ ಟಿಕೆಟ್ ನೀಡುವ ಅಧಿಕಾರ ಇಲ್ಲ. ಅದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಬಿಜೆಪಿ ಮತ್ತು ಜೆಡಿಎಸ್‌ನ 15ರಿಂದ 20 ಮಂದಿ ಶಾಸಕರು ಕಾಂಗ್ರೆಸ್ ಸೇರಲು ಆಸಕ್ತಿ ತೋರಿದ್ದಾರೆ. ಆ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ವಿವರಿಸಿದ್ದೇವೆ. ಆದರೆ, ಹೈಕಮಾಂಡ್‌ನಿಂದ ಇದುವರೆಗೂ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಸರ್ಕಾರ ಉರುಳಿಸುವ ಉದ್ದೇಶ ನಮಗಿಲ್ಲ' ಎಂದು ಹೇಳಿದ ಅವರು, `ಬಿಜೆಪಿಯವರು ಮೊದಲು ತಮ್ಮ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳುವುದನ್ನು ಕಲಿಯಲಿ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT