ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲೂ ಮುಸುಕಿನ ಗುದ್ದಾಟ: ವಿವಾದ ಹೈಕಮಾಂಡ್ ಅಂಗಳಕ್ಕೆ

Last Updated 6 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ `ಬಯಲಾಟ~ ತಾತ್ಕಾಲಿಕವಾಗಿ ತಣ್ಣಗಾದಂತಿದೆ. ಆದರೆ, ಕಾಂಗ್ರೆಸ್‌ನಲ್ಲಿ ಕಾದಾಟ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನಡುವೆ ಬಹು ದಿನಗಳಿಂದ ನಡೆಯುತ್ತಿರುವ `ಮುಸುಕಿನ ಗುದ್ದಾಟ~ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ ಎದುರಾಗಿರುವ ಈ ಬೆಳವಣಿಗೆಗಳಿಂದ ಕಾಂಗ್ರೆಸ್ ವರಿಷ್ಠರು ಚಿಂತೆಗೀಡಾಗಿದ್ದಾರೆ.

`ಪರಮೇಶ್ವರ್ ಅವರನ್ನು ಬದಲಾವಣೆ ಮಾಡಿ, ಬಲಿಷ್ಠವಾಗಿ ಪಕ್ಷ ಕಟ್ಟಬಲ್ಲ ಸಮರ್ಥ ನಾಯಕನಿಗೆ ಅಧ್ಯಕ್ಷ ಸ್ಥಾನ ಕೊಡಬೇಕು~ ಎಂಬ ಬೇಡಿಕೆ ಸಿದ್ದರಾಮಯ್ಯನವರ ಬೆಂಬಲಿಗರಿಂದ  ಬಂದಿದೆ. ಇದುವರೆಗೆ ತೆರೆಮರೆಯಲ್ಲಿ ಕೇಳಿಬರುತ್ತಿದ್ದ ನಾಯಕತ್ವ ಬದಲಾವಣೆ ಕೂಗು ಈಗ, `ಜನಪಥ್ 10~ಕ್ಕೂ ತಲುಪಿದೆ. ಪಕ್ಷದ ಹಿರಿಯ ಮುಖಂಡರ ಜತೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಸೋನಿಯಾ ಗಾಂಧಿ ನೀಡಿದ್ದಾರೆ.

`ರಾಜ್ಯ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ನನ್ನನ್ನು ಕಡೆಗಣಿಸಲಾಗಿದೆ~ ಎಂಬ ಅಸಮಾಧಾನದಿಂದ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಸೋಮವಾರ ರಾಹುಲ್‌ಗಾಂಧಿ, ಮಂಗಳವಾರ ಸೋನಿಯಾ ಗಾಂಧಿ, ಅಹಮದ್ ಪಟೇಲ್ ಮತ್ತು ಮಧುಸೂದನ್ ಮಿಸ್ತ್ರಿ ಮೊದಲಾದ ನಾಯಕರನ್ನು ಕಂಡು ಪಕ್ಷದೊಳಗಿನ ಸ್ಥಿತಿಗತಿ ಕುರಿತು ಸುದೀರ್ಘವಾಗಿ ಸಮಾಲೋಚಿಸಿದ್ದಾರೆ.

`ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಎಲ್ಲವೂ ಸರಿಯಿಲ್ಲ~ ಎಂಬ ಸುಳಿವನ್ನು ಸಿದ್ದರಾಮಯ್ಯ ಮಾತುಕತೆ ವೇಳೆ ನೀಡಿದ್ದಾರೆ. `ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಉಳಿದಿದ್ದು ಜಾತಿ ಸಮೀಕರಣ ಆಗದಿದ್ದರೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ~ ಎಂದು  ವಿರೋಧ ಪಕ್ಷದ ನಾಯಕನ ಜತೆಗಿದ್ದ ಕೆಲವು ಬೆಂಬಲಿಗರು ಪರೋಕ್ಷವಾಗಿ ಪರಮೇಶ್ವರ್ ನಾಯಕತ್ವ ಬದಲಾಯಿಸಬೇಕಾದ ಅಗತ್ಯ ಕುರಿತು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಬದಲಾವಣೆಗೆ ಸಕಾಲ: `ಪರಮೇಶ್ವರ್ ಮುನ್ನುಗ್ಗುವ ಸ್ವಭಾವದವರಲ್ಲ. ಜನ ಸಮೂಹ ಸೆಳೆಯುವ ನಾಯಕತ್ವದ ಗುಣವೂ ಅವರಲ್ಲಿ ಇಲ್ಲ. ಜನರನ್ನು ಆಕರ್ಷಿಸಬಲ್ಲ, ಯಾವುದಕ್ಕೂ ಎದೆಗುಂದದೆ ಮುನ್ನುಗ್ಗುವ ಛಾತಿ ಹೊಂದಿರುವ ಯಾರನ್ನಾದರೂ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು. ಸದ್ಯದ ಸ್ಥಿತಿಯಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿ ಇರುವುದು ಸಿದ್ದರಾಮಯ್ಯನವರಿಗೆ ಮಾತ್ರ. ಈ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡಲು ಇದು ಸಕಾಲ~ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯವನ್ನು ಪಕ್ಷ ನಿರ್ಲಕ್ಷ್ಯ ಮಾಡಿದೆ. ಈ ಹಿನ್ನೆಲೆಯಲ್ಲಿ ಇವೆರಡು ಜಾತಿಗಳಿಗೆ ಪ್ರಾಮುಖ್ಯ ನೀಡಬೇಕು. ಹಿಂದಿನಿಂದ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿರುವ ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಪಕ್ಷದೊಳಗೆ ಅಗತ್ಯ ಸ್ಥಾನಮಾನ ಕಲ್ಪಿಸುವ ಮೂಲಕ ಎಲ್ಲ ಜಾತಿ- ಧರ್ಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು~ ಎಂದು ಪ್ರತಿಪಾದಿಸಿದ್ದಾರೆ.

`ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪರಿಷತ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿತ್ತು. ಆ ರೀತಿ ಆಗಲಿಲ್ಲ. ಪಕ್ಷಕ್ಕೆ ಯಾವುದೇ ರೀತಿ ಲಾಭವಾಗದಂಥ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಾಗಿದೆ. ಪರಿಷತ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮೂಲಕವೇ ರಾಜ್ಯಕ್ಕೆ ಒಂದು ಒಳ್ಳೆಯ ಸಂದೇಶ ಕಳುಹಿಸಬಹುದಿತ್ತು. ಅಂಥ ಅವಕಾಶ ಕಳೆದುಕೊಂಡಿದ್ದೇವೆ~ ಎಂದು ವಿವರಿಸಿದ್ದಾರೆ.

`ನಾನು ಮತ್ತು ಪರಮೇಶ್ವರ್ ಜತೆಯಾಗಿ ಪ್ರತಿ ಸ್ಥಾನಕ್ಕೆ ಎರಡು ಮೂರು ಹೆಸರುಗಳನ್ನು ಒಳಗೊಂಡ ಪಟ್ಟಿ ಕಳುಹಿಸಿದ್ದೆವು. ಆದರೆ, ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮುನ್ನ  ನನ್ನ ಜತೆ ಹೈಕಮಾಂಡ್ ಸಮಾಲೋಚನೆ ನಡೆಸಲಿಲ್ಲ. ನಾನು ಹೈಕಮಾಂಡ್ ಕರೆಗಾಗಿ ಕಾದಿದ್ದೆ. ಯಾವುದೇ ಕರೆ ಬರಲಿಲ್ಲ. ಪರಮೇಶ್ವರ್ ದೆಹಲಿಗೆ ಬಂದ ಬಳಿಕ ಫೋನ್ ಮಾಡಿದ್ದರು. ನಾನು ದೆಹಲಿಯಲ್ಲಿದ್ದೇನೆ ಎಂದು ಹೇಳಿದರು. ನನಗೂ ಕರೆ ಬಂದಿಲ್ಲ. ನಾನಾಗಿಯೇ ಬಂದಿರುವೆ ಎಂದೂ ಸಮಜಾಯಿಷಿ ನೀಡಿದರು. ಅವರು ಹೊರಡುವ ಮೊದಲು ನನ್ನನ್ನು ಕರೆಯಬಹುದಿತ್ತು~ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ತಾರತಮ್ಯ: `ಪರಮೇಶ್ವರ್ ಏಪಪಕ್ಷೀಯ ತೀರ್ಮಾನ ಮಾಡುತ್ತಿದ್ದಾರೆ. ಯಾರೊಂದಿಗೂ ಚರ್ಚೆ ನಡೆಸುವುದಿಲ್ಲ. ಹಳೆ ಮತ್ತು ಹೊಸ ಕಾಂಗ್ರೆಸಿಗರು ಎಂಬ ತಾರತಮ್ಯ ಮಾಡುತ್ತಿದ್ದಾರೆ. ಇದರಿಂದಾಗಿ ಪಕ್ಷದಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ~ ಎಂಬ ಸಂಗತಿಯನ್ನು ಸಿದ್ದರಾಮಯ್ಯ ಬಣ ಹೈಕಮಾಂಡ್ ಮುಂದೆ ಬಿಡಿಸಿಟ್ಟಿದೆ. ಸಿದ್ದರಾಮಯ್ಯ ಅವರ ಬಣಕ್ಕೆ ದೆಹಲಿಯಲ್ಲೂ ಕೆಲವರಿಂದ ಬೆಂಬಲ ದೊರೆತಿದೆ. ಪರಮೇಶ್ವರ್ ಕಾರ್ಯಶೈಲಿ ಇವರಿಗೂ ಬೇಸರ ತಂದಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸೋನಿಯಾ ಅವರ ಮುಂದೆ ಡಾ. ಎಚ್.ಸಿ. ಮಹಾದೇವಪ್ಪ ರಾಜ್ಯ ಕಾಂಗ್ರೆಸ್ ವಿದ್ಯಮಾನಗಳನ್ನು ವಿವರಿಸಿದರು. ರಾಹುಲ್ ಜತೆ ಸಿದ್ದರಾಮಯ್ಯ ಅವರೊಬ್ಬರೇ ಮಾತುಕತೆ ನಡೆಸಿದರು. ಅಹಮದ್ ಪಟೇಲ್ ಮತ್ತು ಮಧುಸೂದನ್ ಮಿಸ್ತ್ರಿ ಅವರ ಮುಂದೆ ಸಿದ್ದರಾಮಯ್ಯ ಅವರ ಜತೆ ಕೆಲವು ಶಾಸಕರು ಮತ್ತು ಮುಖಂಡರಿದ್ದರು. ಎಲ್ಲ ಮಾಹಿತಿ ಪಡೆದುಕೊಂಡ ಸೋನಿಯಾ ಮತ್ತು ರಾಹುಲ್ ಹಿರಿಯ ಮುಖಂಡರ ಜತೆ ಸಮಾಲೋಚಿಸಿ ತೀರ್ಮಾನ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

`ರಾಜೀನಾಮೆ: ಹೈಕಮಾಂಡ್ ನಿರ್ಧಾರ~

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ತಾವು ಸಲ್ಲಿಸಿರುವ ರಾಜೀನಾಮೆ ಪಕ್ಷದ ಹೈಕಮಾಂಡ್ ಮುಂದಿದ್ದು, ಅವರೇ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆ ಮಾತುಕತೆ ನಡೆಸಿ ಬುಧವಾರ ನಗರಕ್ಕೆ ಹಿಂತಿರುಗಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, `ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಷಯಗಳಲ್ಲಿ ನನ್ನನ್ನು ಕಡೆಗಣಿಸಲಾಗಿದೆ. ಇದರಿಂದ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಚ್ಯುತಿ ಬಂದಿದೆ. ಈ ವಿಷಯವನ್ನು ಸೋನಿಯಾ ಅವರಿಗೆ ತಿಳಿಸಿದ್ದೇನೆ. ಇಂತಹ ಲೋಪ ಆಗಬಾರದಿತ್ತು ಎಂದೂ ಅವರು ಹೇಳಿದ್ದಾರೆ~ ಎಂದರು.

`ಪಕ್ಷದಲ್ಲಿನ ಎಲ್ಲ ಬೆಳವಣಿಗೆಗಳ ಬಗ್ಗೆಯೂ ಎಐಸಿಸಿ ಅಧ್ಯಕ್ಷರ ಜೊತೆ ಚರ್ಚಿಸಿದ್ದೇನೆ. ಯಾವ ಕಾರಣಕ್ಕಾಗಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದನ್ನೂ ವಿವರಿಸಿದ್ದೇನೆ. ರಾಜೀನಾಮೆ ವಿಷಯ ಈಗ ಸೋನಿಯಾ ಅವರ ಮುಂದಿದೆ. ಅವರೇ ಈ ವಿಷಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ~ ಎಂದು ಹೇಳಿದರು.

`ಸ್ವಾಭಿಮಾನ ಮತ್ತು ಆತ್ಮಗೌರವಕ್ಕೆ ಧಕ್ಕೆಯಾದರೆ ನಾನು ಸಹಿಸುವುದಿಲ್ಲ. ಇದೇ ಕಾರಣಕ್ಕೆ ಒಟ್ಟು ನಾಲ್ಕು ಬಾರಿ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆಯ ಹಿಂದೆ ಯಾವುದೇ ವೈಯಕ್ತಿಕ ಬೇಡಿಕೆಗಳಿಲ್ಲ~ ಎಂದರು.

ಶಾಸಕರ ಭೇಟಿ: ದೆಹಲಿಯಿಂದ ಹಿಂತಿರುಗಿದ ಬಳಿಕ ಕೆಲ ಶಾಸಕರು ಕುಮಾರ ಪಾರ್ಕ್‌ನಲ್ಲಿರುವ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿನೀಡಿ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT