ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಪ್ರತಿಭಟನೆ ಇಂದು

Last Updated 15 ಫೆಬ್ರುವರಿ 2012, 7:50 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಜನತೆ ಬರದಿಂದ ತೀವ್ರ ತೊಂದರೆಗೆ ಒಳಗಾಗಿದ್ದು, ಕೂಡಲೇ ತೀವ್ರಗತಿಯಲ್ಲಿ ಬರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಇದೇ 15 ರಿಂದ ಅಥಣಿ ತಹಶೀಲ್ದಾರ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಶಹಜಹಾನ ಡೊಂಗರಗಾವ ಹೇಳಿದರು.

`ಅಥಣಿ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸಿ ಎರಡು ತಿಂಗಳು ಕಳೆದಿದೆ. ಆದರೆ ಯಾವುದೇ ಬರ ಕಾಮಗಾರಿಗಳನ್ನು ಕೈಗೊಂಡಿಲ್ಲ. ಹೀಗಾಗಿ ಜನರು ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದಾರೆ~ ಎಂದು ಅವರು ಆರೋಪಿಸಿದರು.

`ತಾಲ್ಲೂಕಿನ 67 ಹಳ್ಳಿಗಳಲ್ಲಿ ಬರದ ತೀವ್ರವಾಗಿದೆ. ಜಾನುವಾರುಗಳಿಗೆ ಮೇವಿಲ್ಲ. ಮೂರು ಗೋಶಾಲೆಗಳನ್ನು ಆರಂಭಿಸಲಾಗಿತ್ತು. ಆದರೆ ಅಲ್ಲಿ ಕೊಡುವ ಕಬ್ಬಿನ ಮೇವುಗಳನ್ನು ಜಾನುವಾರುಗಳು ತಿನ್ನುತ್ತಿಲ್ಲ. ಕುಡಿಯುವ ಹಾಗೂ ನೆರಳಿನ ವ್ಯವಸ್ಥೆಯನ್ನೂ ಮಾಡಿಲ್ಲ. ಹೀಗಾಗಿ ರೈತರು ಗೋಶಾಲೆಗಳಿಗೆ ಹೋಗುತ್ತಿಲ್ಲ. ಪರಿಣಾಮ ತೆಲಸಂಗದ ಗೋಶಾಲೆ ಮುಚ್ಚಲಾಗಿದೆ. ಕಸಾಯಿಖಾನೆಗೆ ದನಗಳನ್ನು ಮಾರಾಟ ಮಾಡಲಾಗುತ್ತಿದೆ~ ಎಂದು ಅವರು ಟೀಕಿಸಿದರು.

`ವಿಧಾನಸಭೆಯಲ್ಲಿ ನಡೆದ ಘಟನೆಯಿಂದ ಅಥಣಿ ಶಾಸಕರು ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿತ್ತು. ಅದರ ಬದಲಾಗಿ ಬಲ ಪ್ರದರ್ಶನಕ್ಕಾಗಿ ಸರ್ಕಾರಿ ಕಾರ್ಯಕ್ರಮವೊಂದನ್ನು ಬಳಸಿಕೊಳ್ಳುತ್ತಿದಾರೆ~ ಎಂದು ಅವರು ಆರೋಪಿಸಿದರು.

`ಹಿಪ್ಪರಗಿ ನೀರಾವರಿ ಯೋಜನೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಬಿಡುಗಡೆ ಮಾಡಿದ ಅನುದಾನದಿಂದ ಪೂರ್ಣಗೊಂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನೆಗಾಗಿ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಶಾಸಕ ಸವದಿ ಅವರು ಬಹಿರಂಗ ಪಡಿಸಬೇಕು~ ಎಂದು ಅವರು ಆಗ್ರಹಿಸಿದರು.

`ಕರಿ ಮಸೂತಿ ಏತ ನೀರಾವರಿ ಯೋಜನೆ ರೈಸಿಂಗ್ ಮೇನ್ ಹಾಗೂ ಹೆಡ್ ವರ್ಕ್ಸ್ ಕೆಲಸವನ್ನು ಎಂ.ಎಸ್. ಕೋರಮಂಡಲ ಕಂಪೆನಿಗೆ 14.92 ಕೋಟಿ ರೂಪಾಯಿಗೆ ಟೆಂಡರ್ ನೀಡಲಾಗಿತ್ತು. ಆದರೆ ಅದನ್ನು ರದ್ದುಪಡಿಸಿದ ಶಾಸಕರು, 2010ರಲ್ಲಿ 39 ಕೋಟಿಗೆ ಟೆಂಡರ್ ಆಗುವಂತೆ ನೋಡಿಕೊಂಡರು~ ಎಂದು ದೂರಿದರು.

`ಅಥಣಿ ತಾಲ್ಲೂಕಿನ ಬಹುತೇಕ ಕೆಲಸಗಳನ್ನು ಟೆಂಡರ್ ಹಣಕ್ಕಿಂತ ಹೆಚ್ಚಿಗೆ ಹಣ ನಮೂದಿಸಿ ಗುತ್ತಿಗೆದಾರರು ಕಾಮಗಾರಿ ಪಡೆಯುತ್ತಾರೆ. ಇದು ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಮನವಿ ಸಲ್ಲಿಸಲಾಗುವುದು~ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಮಾಜಿ ಸಂಸದ ಅಮರಸಿಂಹ ಪಾಟೀಲ, ಕಿರಣ ಪಾಟೀಲ, ಮಹೇಶ ಕೆ, ವಿನಯ ನಾವಲಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT