ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾಂಡೋಮ್'ನಿಂದ ಲೈಂಗಿಕ ಶಕ್ತಿ, ಆಸಕ್ತಿ ವೃದ್ಧಿ!

ಅಂಗರಚನಾ ಶಾಸ್ತ್ರಜ್ಞನ ಅನ್ವೇಷಣೆಗೆ `ಚಿನ್ನದ ಪದಕ'
Last Updated 19 ಡಿಸೆಂಬರ್ 2012, 20:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಕಾಂಡೋಮ್ ಕೇವಲ ಸುರಕ್ಷಿತ ಲೈಂಗಿಕತೆ, ಮಕ್ಕಳಾಗದಂತೆ ರಕ್ಷಿಸುವ ಸಾಧನವಷ್ಟೇ ಅಲ್ಲ. ಸೂಕ್ತ ಗಾತ್ರದ ಕಾಂಡೋಮ್, ಪುರುಷರ ಲೈಂಗಿಕ ಶಕ್ತಿಯನ್ನು ಇನ್ನಷ್ಟು ವೃದ್ಧಿಸುವ ಜೊತೆಗೆ ವಿಶೇಷ ಆಸಕ್ತಿ ಮೂಡಿಸುವ ಕೆಲಸವನ್ನೂ ಮಾಡಬ್ಲ್ಲಲದು!'

-ಇದು ಶಿವಮೊಗ್ಗ ವೈದ್ಯಕೀಯ ಸಂಸ್ಥೆಯಲ್ಲಿ (ಸಿಮ್ಸ) ಅಂಗರಚನಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ಜವಾಹರ್ ವೈ. ಕದಂ ಅವರ ಅನ್ವೇಷಣೆ. ಲೈಂಗಿಕ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಅವರು ಕೈಗೊಂಡ `ನಿಮಿರಿದ ಶಿಶ್ನದ ಅಭಿಧಮನಿ ರಕ್ತನಾಳಗಳ ಮೇಲೆ ಬಿಗಿಯಾದ ಕಂಠವುಳ್ಳ ಕಾಂಡೋಮ್‌ಗಳ ಪರಿಣಾಮ'(study of condom as tem-porary artificial fascial sheath on venous drainage of erected penis) ಎಂಬ ವಿಷಯದ ಪ್ರಯೋಗಾತ್ಮಕ ಅಧ್ಯಯನಕ್ಕೆ `ಕರ್ನಾಟಕ ಚಾಪ್ಟರ್ ಆಫ್ ಅನಾಟಮಿಸ್ಟ್' (ಕೆಸಿಎ) ಚಿನ್ನದ ಪದಕ ಪ್ರಕಟಿಸಿದೆ.

ಈ ಹಿಂದೆ, ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ) 25 ವರ್ಷ ಪ್ರಾಧ್ಯಾಪಕರಾಗಿದ್ದ ಡಾ. ಕದಂ, 2002ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ವಿಶೇಷ ಅನುದಾನ ಪಡೆದು ದೇಶದ ವಿವಿಧ ಪ್ರದೇಶಗಳಲ್ಲಿ ವಾಸಿಸುವ `ವಿವಿಧ ಜನಾಂಗಗಳ ಪುರುಷರ ನಿಮಿರಿದ ಶಿಶ್ನದ ಉದ್ದ ಮತ್ತು ಅಗಲ'ದ ಕುರಿತು ಅಧ್ಯಯನ ನಡೆಸಿದ್ದರು. ಅಲ್ಲದೆ ಅವುಗಳಿಗೆ ಕಾಂಡೋಮ್‌ಗಳ ಬಳಕೆ ಕುರಿತು 200 ಜನರಲ್ಲಿ ಪ್ರಯೋಗ ನಡೆಸಿ ವರದಿ ಸಲ್ಲಿಸಿದ್ದರು.

ಹೊಸ ಸಂಶೋಧನೆಯ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಡಾ. ಕದಂ, `ಐಸಿಎಂಆರ್‌ಗಾಗಿ ನಡೆಸಿದ ಸಂಶೋಧನೆಯ ಮುಂದುವರಿದ ಭಾಗವಾಗಿ ಈ ಅಧ್ಯಯನ ಕೈಗೊಂಡಿದ್ದೆ. ನಿಮಿರಿದ ಶಿಶ್ನ ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ 15 ವಿವಿಧ ಬ್ರಾಂಡೆಡ್ ಕಂಪೆನಿಗಳ ಕಾಂಡೋಮ್‌ಗಳ ಗಾತ್ರ, ಪರಸ್ಪರ ಉಂಟು ಮಾಡುವ ಪರಿಣಾಮದ ಬಗ್ಗೆ ಆರೋಗ್ಯವಂತರಾದ 25ರಿಂದ 44 ವಯೋಮಾನದ 20 ಜನರಲ್ಲಿ ಈ ಪ್ರಯೋಗ ನಡೆಸಿ ಸಲ್ಲಿಸಿದ ಸಂಶೋಧನೆಗೆ ಚಿನ್ನದ ಪದಕ ಲಭಿಸಿದೆ' ಎಂದರು.

`ಎಲ್ಲ 20 ಪುರುಷರ ನಿಮಿರಿದ ಶಿಶ್ನದ ಗಾತ್ರವನ್ನು ಅಳತೆ ಮಾಡಿ, ಅವರಿಗೆ ಸಣ್ಣ ಮತ್ತು ದೊಡ್ಡ ಗಾತ್ರದ ಕಾಂಡೋಮ್‌ಗಳನ್ನು ಸೂಕ್ತವಾದ ರೀತಿಯಲ್ಲಿ ಬಳಸುವಂತೆ ತಿಳಿಸಲಾಯಿತು. ಶಿಶ್ನದ ಮೇಲೆ ಕಾಂಡೋಮ್‌ಗಳ ಬುಡದಲ್ಲಿರುವ ಬೆಲ್ಟ್‌ನಂತಿರುವ ರಿಂಗ್ (ರಿಮ್) ಉಂಟುಮಾಡುವ ಸ್ಥಿತಿಸ್ಥಾಪಕ (ಭೌತಶಾಸ್ತ್ರದಲ್ಲಿ ಉಲ್ಲೇಖಿತ ಹುಕ್ಸ್ ನಿಯಮ) ಗುಣದಿಂದಾಗಿ ಅಲ್ಲಿನ ಅಭಿಧಮನಿ ರಕ್ತನಾಳಗಳಲ್ಲಿ ಹೆಚ್ಚು ಸಮಯದವರೆಗೆ ರಕ್ತವನ್ನು ಹಿಡಿದಿಡುತ್ತದೆ. ಇದು ಲೈಂಗಿಕ ಶಕ್ತಿ ಮತ್ತು ಆಸಕ್ತಿ ವೃದ್ಧಿಸುವ ನಿಟ್ಟಿನಲ್ಲಿ ಗಮನಾರ್ಹ ಕೆಲಸ ಮಾಡುತ್ತದೆ ಎನ್ನುವುದು ಕಂಡುಕೊಂಡ ಫಲಿತಾಂಶ' ಎಂದು ಡಾ. ಕದಂ ವಿವರಿಸಿದರು.

`ರಿಂಗ್ ಹೆಚ್ಚು ಬಿಗಿ ಇರುವ ಕಾಂಡೋಮ್ ಬಳಸಿದರೆ ಹೆಚ್ಚು ಸಮಯದವರೆಗೆ ನಿಮಿರಿದ ಸ್ಥಿತಿಯಲ್ಲೇ ಶಿಶ್ನ ನಿಲ್ಲಬಲ್ಲುದು. ಅಂತಹ ರಿಂಗ್‌ಗಳು ನಿಮಿರಿದ ಶಿಶ್ನದ ಬುಡದಲ್ಲಿ ಬಿಗಿಯಾಗಿ ಹಿಡಿದುಕೊಳ್ಳುವುದರಿಂದ ರಕ್ತಸಂಚಲನದಲ್ಲಿ ಉಂಟಾಗುವ ಸ್ಥಿತ್ಯಂತರವೇ ಇದಕ್ಕೆ ಕಾರಣ. ಸಡಿಲವಾದ ರಿಂಗ್ ಇರುವ ಕಾಂಡೋಮ್‌ಗಳ ಬಳಕೆಯಿಂದ ಈ ಅನುಭವ ಸಾಧ್ಯ ಇಲ್ಲ' ಎಂದರು.

`ಕಳೆದ 13 ವರ್ಷದಿಂದ ನಡೆಸುತ್ತ ಬಂದಿರುವ ಈ ಸಂಶೋಧನೆಗೆ ಕೊನೆಗೂ ಮಾನ್ಯತೆ ಸಿಕ್ಕಿದೆ. ಮೂರು ಬಾರಿ ವಿವಿಧ ಕಾರಣ ನೀಡಿ ತಿರಸ್ಕೃತಗೊಂಡಿದ್ದ ಈ ಸಂಶೋಧನೆಗೆ ಇತ್ತೀಚೆಗೆ ವಿಜಾಪುರದ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನಲ್ಲಿ (ಎಸ್‌ಬಿಎಂಪಿಎಂಸಿ) ಜರುಗಿದ 14ನೇ ಕೆಸಿಎ ಸಮಾವೇಶದಲ್ಲಿ ಚಿನ್ನದ ಪದಕ ಘೋಷಿಸಲಾಗಿದ್ದು, 2013 ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ 15ನೇ ಕೆಸಿಎ ಸಮಾವೇಶದಲ್ಲಿ ಪದಕ ಪ್ರದಾನ ನಡೆಯಲಿದೆ.

ಅಲ್ಲದೆ ಅಂಗರಚನಾ ಶಾಸ್ತ್ರಕ್ಕೆ ಸಂಬಂಧಿಸಿದ ತ್ರೈಮಾಸಿಕ ಜರ್ನಲ್ ಅನಾಟೋಮಿಕಾ ಕರ್ನಾಟಕ'ದಲ್ಲಿ ಈ ಸಂಶೋಧನೆ ಪ್ರಕಟವಾಗಲಿದೆ' ಎಂದ ಡಾ. ಕದಂ, `ಕಾಂಡೋಮ್ ಬಳಕೆ ಉತ್ತೇಜಿಸಲು ಸರ್ಕಾರ ಈ ಅನ್ವೇಷಣೆಯನ್ನು ಜಾಹೀರಾತುಗಳಲ್ಲಿ ಬಳಸಿಕೊಳ್ಳಬೇಕು' ಎಂದೂ ಆಗ್ರಹಿಸಿದರು.

`ಆದರೆ ಅಂಗರಚನಾಶಾಸ್ತ್ರಕ್ಕೆ ಸಂಬಂಧಿಸಿ ಟರ್ಕಿಯಲ್ಲಿ ನಡೆದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಚರ್ಚೆಗೆ ಅಂಗೀಕಾರಗೊಂಡ ಈ ಸಂಶೋಧನೆಗೆ ಪ್ರೋತ್ಸಾಹ ನೀಡಲು ಭಾರತೀಯ ಅನಾಟಾಮಿಕಲ್ ಸೊಸೈಟಿ ಆಸಕ್ತಿ ತೋರಿಲ್ಲ' ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT