ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಕಿ ಸೊಪ್ಪಿನ ವ್ಯಂಜನ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಾಕಿಸೊಪ್ಪಿನ ಚಟ್ನಿ
ಬೇಕಾಗುವ ಸಾಮಾನುಗಳು: ಒಂದು ಮುಷ್ಟಿ ಕಾಕಿಸೊಪ್ಪು,ಒಂದು ಮುಷ್ಟಿ ಎಲವರಿಗೆ ಸೊಪ್ಪು, ಒಂದು ಮುಷ್ಟಿ ಹೊನಗನ್ನೆ ಸೊಪ್ಪು, 1 1/2 ಚಮಚ ಜೀರಿಗೆ, 1/2 ಚಮಚ ಮೆಂತೆ, ನಿಂಬೆಗಾತ್ರದ ಹುಣಸೆ ಹಣ್ಣು, 5-6 ಮೆಣಸಿನ ಕಾಳು, 5-6 ಬ್ಯಾಡಗಿ ಮೆಣಸಿನಕಾಯಿ, ಒಂದು ಬಟ್ಟಲು ಕೊಬ್ಬರಿತುರಿ, ಉಪ್ಪು.

ಮಾಡುವ ವಿಧಾನ: ಎಲ್ಲಾ ಸೊಪ್ಪುಗಳನ್ನು ಬಾಂಡ್ಲಿಯಲ್ಲಿ ಹಾಕಿ ಹುರಿದುಕೊಳ್ಳಬೇಕು. ಜೀರಿಗೆ,ಮೆಂತೆ, ಮೆಣಸಿನ ಕಾಳು, ಮೆಣಸಿನ ಕಾಯಿಗೆ ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಬೇಕು. ಆ ನಂತರ ಕೊಬ್ಬರಿ ತುರಿ, ಹುಣಸೆಹಣ್ಣು, ಉಪ್ಪು, ಹುರಿದ ಪದಾರ್ಥಗಳನ್ನು ಹಾಕಿ ರುಬ್ಬಬೇಕು. ಈ ಚಟ್ನಿ ಚಪಾತಿ, ಅನ್ನದ ಜೊತೆ ಬಳಸಬಹುದು. ನಾಲಿಗೆಗೆ ರುಚಿ ಕೊಡುವ ಈ ಚಟ್ನಿ ಬಲು ರುಚಿ.

ಕಾಕಿಸೊಪ್ಪಿನ ಕುಡಿ ತಂಬುಳಿ
ಬೇಕಾಗುವ ಸಾಮಗ್ರಿ: ಒಂದು ಮುಷ್ಟಿ  ಕಾಕಿ ಕುಡಿ, 4-5 ಮೆಣಸಿನ ಕಾಳು,5 ಚಮಚ ಕಾಯಿತುರಿ,1 ಚಮಚ ಜೀರಿಗೆ, ಚಿಟಿಕೆ ಅರಿಶಿನ, 1ಚಮಚ ತುಪ್ಪ, ಒಂದು ಬಟ್ಟಲು ಸಿಹಿ ಮಜ್ಜಿಗೆ, ಉಪ್ಪು, ಬೆಲ್ಲ.
ಕಾಕಿಕುಡಿಯನ್ನು ಸೋಸಿಕೊಂಡು ತುಪ್ಪಹಾಕಿ ಹುರಿದುಕೊಳ್ಳಬೇಕು. ಜೀರಿಗೆ, ಮೆಣಸಿನ ಕಾಳು, ಕಾಯಿತುರಿ, ಅರಿಶಿನ ಪುಡಿ, ಹುರಿದ ಕಾಕಿಸೊಪ್ಪು ಎಲ್ಲವನ್ನು ನಯವಾಗಿ ರುಬ್ಬಿಕೊಳ್ಳಬೇಕು. ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಸಿಹಿಮಜ್ಜಿಗೆ ಹಾಕಿ ತುಪ್ಪದ ಒಗ್ಗರಣೆ ಕೊಡಿ. ದೇಹ ತಂಪಿಗೆ ಈ ತಂಬುಳಿ ಪ್ರಯೋಜನಕಾರಿ.
(ರುಚಿಯಲ್ಲಿ ಈ ಸೊಪ್ಪು ಒಗರಾದರೂ ಅಧರಕ್ಕೆ ಕಹಿ ಉದರಕ್ಕೆ ಸಿಹಿ)

ಕಾಕಿಸೊಪ್ಪಿನ ಹಾಲುಸಾರು
ಬೇಕಾಗುವ ಸಾಮಗ್ರಿ: ಒಂದು ಮುಷ್ಟಿ ಕಾಕಿ ಸೊಪ್ಪು, 5-6 ಮೆಣಸಿನ ಕಾಳು, 2-3 ಒಣಮೆಣಸಿನ ಕಾಯಿ, 5-6 ಬೆಳ್ಳುಳ್ಳಿ ಬೀಜ, 1/4 ಬಟ್ಟಲು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಮೊದಲು ಕಾಕಿಸೊಪ್ಪನ್ನು ಬೇಯಿಸಿಕೊಳ್ಳಬೇಕು. ಇದಕ್ಕೆ ಮೆಣಸಿನ ಕಾಳು,ಒಣಮೆಣಸು, ಬೆಳ್ಳುಳ್ಳಿ, ತೆಂಗಿನ ತುರಿ ಹಾಕಿ ರುಬ್ಬಿಕ್ದೊಳ್ಳಿ. ಇದನ್ನು ಒಂದು ಕುದಿ ಕುದಿಸಿ. ಇದು ಆರಿದ ಮೇಲೆ ಹಾಲು ಹಾಕಿ ಊಟದಲ್ಲಿ ಬಳಸಿದರೆ ಸಂಧಿವಾತ ವಾಸಿಯಾಗುವುದು. ಎದೆಹಾಲು ವೃದ್ಧಿಯಾಗುವುದು.

ಕಾಕಿ ಸೊಪ್ಪಿನ ಪಲ್ಯ
ಬೇಕಾಗುವ ಸಾಮಗ್ರಿ: ಒಂದು ಮುಷ್ಟಿ ಕಾಕಿ ಸೊಪ್ಪು, ಒಂದು ಬಟ್ಟಲು ಮೊಳಕೆ ತರಿಸಿದ ಹೆಸರು ಕಾಳು, 2-3 ಹಸಿಮೆಣಸಿನ ಕಾಯಿ,1 ಈರುಳ್ಳಿ, 1/2 ಹೋಳು ನಿಂಬೆಹಣ್ಣು, ಉದ್ದಿನ ಬೇಳೆ, ಕಡಲೆ ಬೇಳೆ, ಅರಿಶಿನ, ಸಾಸಿವೆ, ಗೋಲಿ ಗಾತ್ರದ ಬೆಣ್ಣೆ.

ಮಾಡುವ ವಿಧಾನ: ಬೆಣ್ಣೆ ಕರಗಿಸಿ ಅದಕ್ಕೆ ಉದ್ದಿನ ಬೇಳೆ, ಕಡಲೆಬೇಳೆ, ಸಾಸಿವೆ, ಅರಿಶಿನ ಹಾಕಿ ಒಗ್ಗರಣೆ ಚಟಪಟಗುಡಿಸಿ. ಇದಕ್ಕೆ ಸಣ್ಣದಾಗಿ ಹೆಚ್ಚಿದ ಕಾಕಿಸೊಪ್ಪು, ಮೆಣಸಿನಕಾಯಿ, ಮೊಳಕೆ ತರಿಸಿದ ಹೆಸರು ಕಾಳು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ ಕೆಳಗಿಳಿಸಿ. ಅನಂತರ ನಿಂಬೆ ಹಣ್ಣಿನ ರಸ ಬೆರಸಿ ಬಳಸಿದರೆ ಕಫ ಕರಗಿ ಕೆಮ್ಮು ನಿವಾರಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT