ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದ ಬಳಕೆ ಹೆಚ್ಚುವ ನಿರೀಕ್ಷೆ

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:ದೇಶದಲ್ಲಿ ಕಾಗದದ ತಲಾವಾರು ಬಳಕೆ ಈಗ ಪ್ರತಿ ವ್ಯಕ್ತಿಗೆ ಪ್ರತಿ ವರ್ಷಕ್ಕೆ 10 ಕಿಲೊ ಇದೆ. ಇದು 2020ರ ಹೊತ್ತಿಗೆ ದುಪ್ಪಟ್ಟಾಗುವ ನಿರೀಕ್ಷೆಯಿದೆ. ಇದರಿಂದ ಕಾಗದ ಉದ್ಯಮವೂ ಸಾಕಷ್ಟು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಭಾರತೀಯ ಕಾಗದ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಶೇಖರ್ ಚಂಡಕ್ ಹೇಳಿದರು.

ಶನಿವಾರ ಇಲ್ಲಿ ಅಖಿಲ ಭಾರತ ಕಾಗದ ವ್ಯಾಪಾರಿಗಳ ಸಮಾವೇಶಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ವಿಶ್ವದ ಸರಾಸರಿ ಬಳಕೆ ಪ್ರಮಾಣ ಪ್ರತಿ ವ್ಯಕ್ತಿಗೆ ಪ್ರತಿ ವರ್ಷಕ್ಕೆ 56 ಕಿಲೊ ಇದೆ. ಅಮೆರಿಕದಲ್ಲಿ ಇದು 356 ಕಿಲೊ ಎಂದು ವಿವರಿಸಿದರು.

ಡಿಜಿಟಲ್ ಕ್ರಾಂತಿ, ಜನಪ್ರಿಯವಾಗುತ್ತಿರುವ ಇ ಬುಕ್, ಮಿತಿಮೀರಿದ ಪೈಪೋಟಿ, ಲಾಭದ ಪ್ರಮಾಣದಲ್ಲಿ ಇಳಿಮುಖ, ಕಾಗದ ಕಾರ್ಖಾನೆಗಳೇ ನೇರವಾಗಿ ಚಿಲ್ಲರೆ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು, ದರ ಏರಿಳಿತ ಇತ್ಯಾದಿ ಬೆಳವಣಿಗೆಗಳು ಕಾಗದ ವರ್ತಕರನ್ನು ಚಿಂತೆಗೀಡು ಮಾಡಿವೆ. ಆದರೂ ಸರ್ವ ಶಿಕ್ಷಣ ಅಭಿಯಾನ, ಸಾರ್ವತ್ರಿಕ ಶಿಕ್ಷಣ ಮತ್ತು ಅದರ ಪರಿಣಾಮವಾಗಿ ಪಠ್ಯಪುಸ್ತಕಗಳ ಬೇಡಿಕೆ ವೃದ್ಧಿಸಲಿದೆ.

ಹೀಗಾಗಿ ಕಾಗದದ ಬೇಡಿಕೆ ಮುಂದಿನ ವರ್ಷಗಳಲ್ಲಿ ಸಹಜವಾಗಿಯೇ ಏರಲಿದೆ ಎಂದು ವಿಶ್ಲೇಷಿಸಿದರು. ದರೆ ದೇಶದಲ್ಲಿ ಪ್ರಸ್ತುತ ಕಾಗದ ಉದ್ಯಮ ಹಿಂಜರಿತ ಅನುಭವಿಸುತ್ತಿದೆ. ಕಾರ್ಖಾನೆಗಳು, ವರ್ತಕರ ಬಳಿ ದಾಸ್ತಾನು ಉಳಿದಿದೆ. ಇದು ಸ್ವಾಭಾವಿಕ.

ದೀಪಾವಳಿ ನಂತರ ಬೇಡಿಕೆ ಕುದುರಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದರು. ದೇಶಿ ಬೇಡಿಕೆಯ ವಾರ್ಷಿಕ ಪ್ರಮಾಣ 116 ಲಕ್ಷ ಟನ್‌ಗಳಿದೆ. ಪುಸ್ತಕಗಳ ಮುದ್ರಣಕ್ಕಾಗಿ 37 ಲಕ್ಷ ಟನ್ ಮತ್ತು ಪ್ಯಾಕೇಜಿಂಗ್‌ಗಳಿಗೆ 56 ಲಕ್ಷ ಟನ್ ಬಳಕೆಯಾಗುತ್ತಿದೆ ಎಂದು ಅವರು ಅಂಕಿಸಂಖ್ಯೆ ನೀಡಿದರು.

ಕಾಗದ ತಯಾರಿಕಾ ಉದ್ಯಮ ಪರಿಸರಕ್ಕೆ ಅಪಾರ ಹಾನಿ ಮಾಡುತ್ತಿದೆ ಎಂಬ ಗ್ರಹಿಕೆಯನ್ನು ಅವರು ಸಾರಾಸಗಟಾಗಿ ಅಲ್ಲಗಳೆದರು. ವಾಸ್ತವವಾಗಿ ಕಾಗದ ಕಾರ್ಖಾನೆಗಳು ಒಂದು ಮರ ಕಡಿದರೆ ಪ್ರತಿಯಾಗಿ ಐದು ಸಸಿ ನೆಡುತ್ತಿವೆ.
 
ಈ ಮೂಲಕ ಶುದ್ಧ ವಾತಾವರಣಕ್ಕೆ ಕೊಡುಗೆ ಕೊಡುತ್ತಿವೆ. ಕಾಗದ ತಯಾರಿಕೆಯ ಕಚ್ಚಾ ವಸ್ತುಗಳಲ್ಲಿ ಕೃಷಿ ತ್ಯಾಜ್ಯಗಳ ಪಾಲು ಶೇ 35ಕ್ಕೂ ಅಧಿಕ. ಭಾರತ ಬಿಟ್ಟರೆ ವಿಶ್ವದ ಬೇರಾವ ದೇಶದಲ್ಲೂ ಕೃಷಿ ತ್ಯಾಜ್ಯದಿಂದ ಕಾಗದ ಉತ್ಪಾದಿಸುತ್ತಿಲ್ಲ ಎಂದು ಹೇಳಿದರು.

ಮೂರು ದಿನದ ಸಮಾವೇಶದಲ್ಲಿ ಕಾಗದ ಕಾರ್ಖಾನೆಗಳ ಪ್ರತಿನಿಧಿಗಳು, ಕಾಗದ ವರ್ತಕರು ಭಾಗವಹಿಸುತ್ತಿದ್ದು, ಉದ್ಯಮದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT