ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದದಲ್ಲಿ ಟ್ರಾನ್ಸ್‌ಫಾರ್ಮರ್ ಸ್ಥಾಪಿಸಿದ ಬೆಸ್ಕಾಂ

Last Updated 12 ಅಕ್ಟೋಬರ್ 2011, 9:10 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಬೇಸಿಗೆಗೂ ಮುನ್ನ ಬಿಸಿಲ ಝಳಪು ತಾಲ್ಲೂಕಿನ ಜನರ ನೆತ್ತಿ ಸುಡುತ್ತಿದ್ದರೆ. ರೈತರು ಭವಿಷ್ಯದ ಕರಾಳತೆ ನೆನೆದು ಬೆಚ್ಚಿದ್ದಾರೆ. ಮಳೆ ನಂಬಿ ಬಿತ್ತಿದ ಬೆಳೆ ಮಣ್ಣಾಗಿದೆ. ತೆಂಗು, ಅಡಿಕೆಯನ್ನಾದರೂ ಉಳಿಸಿಕೊಳ್ಳುವ ರೈತರ ಇಚ್ಛೆಗೆ ಬೆಸ್ಕಾಂನ ಕಣ್ಣಾಮುಚ್ಚಾಲೆ ದೊಡ್ಡ ಸಮಸ್ಯೆಯಾಗಿದೆ.

ತಾಲ್ಲೂಕಿನ ರೈತರ ಬದುಕಿನ ಒಂದು ಭಾಗವಾದ ಬೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಹುದ್ದೆ ಬಹು ಕಾಲದಿಂದ ಖಾಲಿಯಿದೆ. ಇಲ್ಲಿಯವರೆಗೆ ಯಾರೂ ಈ ಹುದ್ದೆಗೆ ನಿಯೋಜನೆಗೊಂಡಿಲ್ಲ. ಇಲಾಖೆಯ ಕಾರ್ಯನಿರ್ವಹಣೆಗೆ ಮುಖ್ಯಸ್ಥರೇ ಇಲ್ಲವಾಗಿದೆ.

ಮೂರು ವರ್ಷದ ಹಿಂದೆ ಇಲ್ಲಿ ಕೆಲಸ ಮಾಡುತ್ತಿದ್ದ ಫಾಲನೇತ್ರ ಎಂಬ ಎಂಜಿನಿಯರ್ ಇಲಾಖೆಯ ಯಾವುದೇ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಲಂಚ ಅಥವಾ ಮತ್ತಿತರ ಸಮಸ್ಯೆ ಎದುರಾದರೆ ನೇರವಾಗಿ ತಮ್ಮ ಮೊಬೈಲ್‌ಗೆ ಕರೆ ಮಾಡಿ ದೂರು ನೀಡಿ ಎಂದು ಭರವಸೆ ನೀಡಿದ್ದರು.

ಆದರೆ ಇಂದು ಎಲ್ಲವೂ ಏರುಪೇರು. ತಾಲ್ಲೂಕು 1995ರಿಂದ ಬಿಳಿಪಟ್ಟಿಗೆ ಸೇರಿದೆ. ಪ್ರತಿವರ್ಷ ರೈತರಿಂದ ರಿಯಾಯ್ತಿ ಶುಲ್ಕ  ಕಟ್ಟಿಸಿಕೊಂಡು ಸರ್ವಿಸ್ ನೀಡುವುದು ಇಲಾಖೆ ಕರ್ತವ್ಯ. ಆದರೆ ಇಲಾಖೆ ಅಧಿಕಾರಿಗಳು ಮಾತ್ರ ರೈತರಿಂದ ಹೆಚ್ಚು ಹಣ ಕಟ್ಟಿಸಿಕೊಂಡು ಮೀಟರ್ ನಂಬರ್ ಮಾತ್ರ ನೀಡಿದ್ದಾರೆ.

ವಿದ್ಯುತ್ ಸಂಪರ್ಕಕ್ಕೆ ಬೇಕಾದ ಯಾವುದೇ ಸಾಮಗ್ರಿ ಅಥವಾ ಸಲಕರಣೆ ನೀಡದೆ ರೈತರನ್ನು ಅತಂತ್ರರನ್ನಾಗಿಸಿದ್ದಾರೆ. ಇದರಿಂದ ಬೇಸೆತ್ತ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಅನಿವಾರ್ಯವಾಗಿ ತಾವೇ ಅಗತ್ಯ ಉಪಕರಣ ಖರೀದಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ.

ಪಂಪ್‌ಸೆಟ್ ಅಕ್ರಮ- ಸಕ್ರಮ ಯೋಜನೆಯಡಿ 1997ರಲ್ಲಿ ರೈತರಿಂದ ಹಣ ಕಟ್ಟಿಸಿಕೊಂಡಿದ್ದರೂ ತಂತಿ ಹಾಗೂ ಕಂಬ ನೀಡಿಲ್ಲ. 2006ರಲ್ಲಿ 200 ರೈತರಿಂದ ಹಣ ಕಟ್ಟಿಸಿಕೊಂಡಿದ್ದರೂ ಇಲ್ಲಿಯವರೆಗೆ ಕಾರ್ಯಾದೇಶ ನೀಡಿಲ್ಲ. ರೈತರು ಇತ್ತ ಹಣವೂ ಇಲ್ಲ- ಅತ್ತ ವಿದ್ಯುತ್ ಸಂಪರ್ಕವೂ ಇಲ್ಲವೆಂಬ ತ್ರಿಶಂಕು ಸ್ಥಿತಿ ಎದುರಿಸುತ್ತಿದ್ದಾರೆ. 

ಕಿಲೋಮೀಟರ್‌ಗಟ್ಟಲೆ ಇನ್ಸುಲೇಟಡ್ ಕೇಬಲ್ ಎಳೆದುಕೊಂಡು ರೈತರು ತಾತ್ಕಾಲಿಕ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಇದರಿಂದ ವಿದ್ಯುತ್ ಶಾಕ್‌ನ ಬೆದರಿಕೆಯಲ್ಲಿಯೇ ಜನ-ಜಾನುವಾರು ದಿನದೂಡಬೇಕಾದ ಪರಿಸ್ಥಿತಿ ಎದುರಾಗಿದೆ.

ಬರದ ನೆರಳಲ್ಲಿರುವ ತಾಲ್ಲೂಕಿನ ರೈತರು ಅನಿವಾರ್ಯವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದರಿಂದ ಟ್ರಾನ್ಸ್‌ಫಾರ್ಮರ್ ಮೇಲೆ ಒತ್ತಡ ಹೆಚ್ಚುತ್ತಿದೆ. ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗುವ ದೂರು ಪದೇಪದೇ ದಾಖಲಾಗುತ್ತಿವೆ. ಇಂಥ ದೂರುಗಳನ್ನೇ ಅಸ್ತ್ರವಾಗಿಸಿಕೊಳ್ಳುವ ಅಧಿಕಾರಿಗಳು ರೈತರ ಶೋಷಣೆಗೆ ಅಸ್ತ್ರವಾಗಿಸಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಕಂದಿಕೆರೆ ಹೋಬಳಿ ಜಾಣೆಹಾರ್ ಗ್ರಾಮದಲ್ಲಿ ಕಾರ್ಯಾದೇಶವಿಲ್ಲದೇ ಕಂಬ ಹಾಕಿ ಕಾಮಗಾರಿ ನಡೆಸಲಾಗಿದೆ. ತೀರ್ಥಪುರ ಹಾಗೂ ಜಾಣೆಹಾರ್‌ಗಳಲ್ಲಿ ರೈತರಿಂದ ಹಣ ಕಟ್ಟಿಸಿಕೊಂಡು, ಹಳೆ ಮರದ ಕಂಬದ ಬದಲಿಗೆ ಸಿಮೆಂಟ್ ಕಂಬ ನೀಡಲಾಗಿದೆ. ಆದರೆ ಬದಲಿಸಿದ ಕಂಬಗಳನ್ನು ಇಲಾಖೆಗೆ ಹಿಂದಿರುಗಿಸಿಲ್ಲ.

ರಾಮನಹಳ್ಳಿ ಗ್ರಾಮದ ಸಮೀಪವಿರುವ ಮಾದನಹಳ್ಳಿ  ಸರ್ವೆ ನಂಬರ್‌ನಲ್ಲಿ ಐವರು ರೈತರ ಬಳಕೆಗೆ ಸ್ಥಾಪಿಸಿದ್ದ ಟ್ರಾನ್ಸ್‌ಫರ್ಮರ್ ಒಬ್ಬ ರೈತನ ಬಳಕೆಗೆ ಮೀಸಲಾಗಿದೆ. `ಹಣ ಕೊಟ್ಟು ಹಾಕಿಸಿಕೊಂಡವನು ನಾನು~ ಎಂಬುದು ಆ ರೈತನ ಉತ್ತರ.

ಸಾಸಲು ನವಗ್ರಾಮಕ್ಕೆ ಕುಡಿಯುವ ನೀರಿಗೆ ಹಾಗೂ ಬೀದಿ ದೀಪಕ್ಕಾಗಿ ಎರಡು ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ ಎಂಬ ಅಂಶ ದಾಖಲೆಯಲ್ಲಿದೆ. ಆದರೆ ಅಲ್ಲಿದ್ದ ಟ್ರಾನ್ಸ್‌ಫಾರ್ಮರ್ ಬೇರೆಡೆಗೆ ಸ್ಥಳಾಂತರಗೊಂಡಿವೆ.

ಮಾದಾಪುರದ ರಂಗಸ್ವಾಮಿ ಎಂಬ ಪರಿಶಿಷ್ಟ ಪಂಗಡದ ವ್ಯಕ್ತಿಗೆ ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ ಲಂಚ ಕೇಳಿದ ಬಗ್ಗೆ ಇಲಾಖೆಗೆ ದೂರು ಬಂದಿದೆ. ಇಂಥ ಹಲವು ಪ್ರಕರಣ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಯಾದರೂ ಸುಧಾರಣೆ ಮಾತ್ರ ಸೊನ್ನೆ.
- ಕೆ.ಜಿ.ರಾಜೀವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT