ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದದಲ್ಲಿಯೇ ಜಂಗಲ್ ಕಟಿಂಗ್

Last Updated 19 ಅಕ್ಟೋಬರ್ 2011, 11:25 IST
ಅಕ್ಷರ ಗಾತ್ರ

ಮುದ್ದೇಬಿಹಾಳ:  ತಾಲ್ಲೂಕಿನ ತಂಗಡಗಿ ವ್ಯಾಪ್ತಿಯ ಹೊಲಗಳಿಗೆ ನೀರುಣಿಸುವ ಕೃಷ್ಣಾ ಎಡ ದಂಡೆ ಕಾಲುವೆಯ 15 ನೇ ಲ್ಯಾಟರಲ್‌ನ 4 ನೇ  ಕಾಲುವೆ ಒಡೆದು ರೈತರ ಹೊಲಗಳಿಗೆ ನೀರು ನುಗ್ಗಿದೆ. ಕಾರಣ, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಕಾಲುವೆಯಲ್ಲಿನ ಶಿಲ್ಟ್ (ಮರಳು ಹೂಳಿನ ಮಣ್ಣು) ಕಾಲ ಕಾಲಕ್ಕೆ ತೆಗೆಯದೇ ಇರುವುದರಿಂದ ಹಾಗೂ ಕಾಲುವೆಯ ಸುತ್ತಲೂ ಬೆಳೆಯುವ ಗಿಡ, ಕಂಟಿ, ಹುಲ್ಲನ್ನು ತೆಗೆಯದೇ ಇರುವುದೇ ಕಾಲುವೆ ಒಡೆಯಲು ಕಾರಣ ಎಂದು ರೈತ ಶಿವಾನಂದ ಮಂಕಣಿ ದೂರುತ್ತಾರೆ.

ಕಳಪೆಯಾಗಿ ನಿರ್ಮಾಣವಾಗಿರುವ ಕಾಲುವೆಗಳು ಆಗಾಗ ಒಡೆಯುತ್ತಲೇ ಇರುವುದರಿಂದ ರೈತರ ಹೊಲಗಳಿಗೆ ನೀರು ನುಗ್ಗುತ್ತಲೇ ಇರುತ್ತದೆ. ರೈತರ ಪ್ರತಿಭಟನೆ ಜೋರಾದಾಗ ಬಂದು ಭೇಟಿ ನೀಡುವ ಕೆ.ಬಿ.ಜೆ.ಎನ್.ಎಲ್. ವರ್ಕ್ ಇನಸ್ಪೆಕ್ಟರ್‌ಗಳು ಹಾಗೂ ಮೇಲಧಿಕಾರಿಗಳು ರೈತರಿಗೆ ಹಾರಿಕೆಯ ಉತ್ತರ ನೀಡುತ್ತ ಸಾಗುತ್ತಾರೆ ಎಂದು ಅವರು ದೂರುತ್ತಾರೆ. ಕೃಷ್ಣಾ ಭಾಗ್ಯ ಜಲ ನಿಗಮವು ಕಾಲುವೆಗಳ  ನಿರ್ವಹಣೆ ಮಾಡುತ್ತದೆ.

ಪ್ರತಿ ವರ್ಷ ಜಂಗಲ್ ಕಟಿಂಗ್‌ಗೆಂದು ಹಾಗೂ ಶಿಲ್ಟು ತೆಗೆಯಲೆಂದು ಲಕ್ಷಾಂತರ ರೂಪಾಯಿ ನೀಡಿ ಗುತ್ತಿಗೆದಾರರ ಜೇಬು ತುಂಬುವ ಕೆಲಸ ನಡೆಯುತ್ತದೆಯೇ ವಿನಹ ರೈತರ ಗೋಳು ಅಧಿಕಾರಿಗಳಿಗೆ ಅರ್ಥವಾಗುವುದೇ ಇಲ್ಲ.
ನಾಗಪ್ಪ ಪಡಶೆಟ್ಟಿ ಅವರ ನಾಲ್ಕು ಎಕರೆ ತೊಗರಿ, ಸುಭಾಸ ಹುದ್ದಾರ ಅವರ 2 ಎಕರೆ ತೊಗರಿ, ಉಮರ್ಜಿ ಅವರ ಎರಡು ಎಕರೆ ಕಡಲೆ ಬೆಳೆಯಲ್ಲಿ ನೀರು ನಿಂತಿದ್ದು ಬೆಳೆ ನೀರಿನಲ್ಲಿ ಕೊಳೆಯುವ ಹಂತ ತಲುಪಿದೆ.
 
`ಮೂರು ತಿಂಗಳಾತು, ಅವರ ಹಿಂದ್ ಅಡ್ಡಾಡಿ, ಹೇಳಿ ಹೇಳಿ ಬ್ಯಾಸರ್ ಆಗೇದರಿ, ಆಲಮಟ್ಟಿಗೆ ಹೋಗಿ ಅವರ ಆಫೀಸ್ ಮುಂದ ಒದರೂದೊಂದ ಬಾಕಿ ಉಳದದರಿ~ ಎನ್ನುವ ರೈತರ ಅಳಲು ಎ.ಸಿ. ರೂಮಿನಲ್ಲಿ ಕುಳಿತಿರುವ ಅಧಿಕಾರಿಗಳಿಗೆ ಯಾವಾಗ ಕೇಳಬೇಕು ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT