ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರಕ್ಕೆ ಸುವರ್ಣ ಗ್ರಾಮ ಯೋಜನೆ: ಆರೋಪ

Last Updated 3 ಫೆಬ್ರುವರಿ 2012, 10:00 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ಸಾಸಲಮರಿ ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ 1.20 ಕೋಟಿ ರೂ ಹಣ ಬಿಡುಗಡೆ ಮಾಡಿ ಭೂಸೇನಾ ನಿಗಮಕ್ಕೆ ಕಾಮಗಾರಿ ನಿರ್ವಹಣೆಯ ಜವಾಬ್ದಾರಿ ವಹಿಸಿದೆ. ಇಲಾಖೆ ಅಧಿಕಾರಿಗಳು ಕ್ರಿಯಾಯೋಜನೆಯನ್ವಯ ಕಾರ್ಯನಿರ್ವಹಿಸದೇ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ.
ಸುವರ್ಣ ಗ್ರಾಮ ಯೋಜನೆಯ ನಿಯಮದಂತೆ ಚರಂಡಿ, ಕಾಂಕ್ರಿಟ್ ರಸ್ತೆ, ಸಮುದಾಯ ಭವನ, ಅಂಗನವಾಡಿ ಕಟ್ಟಡ ಮತ್ತು ತಿಪ್ಪೆಗಳ ಎತ್ತಂಗಡಿ ಮಾಡಬೇಕಾಗುತ್ತದೆ. ಆದರೆ ಕಳೆದ ಒಂದುವರೆ ವರ್ಷದಿಂದ ಒಂದೆರಡು ರಸ್ತೆಗಳನ್ನು ಕಳಪೆ ಮಟ್ಟದಲ್ಲಿ ನಿರ್ವಹಿಸಿರುವುದನ್ನು ಬಿಟ್ಟರೆ, ಇನ್ನಿತರ ಯಾವುದೇ ಕಾಮಗಾರಿಗಳನ್ನು ಕೈಗೊಂಡಿಲ್ಲ. ಓಣಿಗಳಲ್ಲಿ ಕೇವಲ ರಸ್ತೆ ನಿರ್ಮಿಸಿದ್ದು, ಚರಂಡಿ ನಿರ್ಮಿಸುವಂತೆ ಗ್ರಾಮಸ್ಥರು ಹೇಳಿದರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ ಅಧಿಕಾರಿಗಳು ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಿಲ್ಲ.

ಸರ್ಕಾರದಿಂದ ಹಣ ಬಂದಿದೆ. ನಾವು ಕೆಲಸ ಮಾಡುತ್ತೇವೆ. ಇದೇನು ನಿಮ್ಮ ಮನೆ ರೊಕ್ಕವೇನು ಎಂದು ಮರುಪ್ರಶ್ನೆ ಹಾಕುತ್ತಿದ್ದಾರೆ ಎಂದು ಗ್ರಾಮದ ನಾಗರಾಜ, ವೀರೇಶ, ಮಂಗಳಮ್ಮ, ಶಶಿಕಲಾ, ರುದ್ರಮ್ಮ ಮತ್ತಿತರರು ನೋವಿನಿಂದ ಹೇಳುತ್ತಿದ್ದಾರೆ.

ಸಾರ್ವಜನಿಕರ ಸಂಚಾರವಿಲ್ಲದ ಹಾಗೂ ಸುತ್ತಲೂ ಜಾಲಿ ಇರುವ ಪ್ರದೇಶದಲ್ಲಿ ಒಂದು ಶೌಚಾಲಯ ನಿರ್ಮಾಣ ಮಾಡಿದ್ದು, ರಾತ್ರಿ ಸಮಯದಲ್ಲಿ ಹೆಣ್ಣು ಮಕ್ಕಳು ಶೌಚಕ್ಕೆ ಹೋಗುವುದು ದುಸ್ತರವಾಗಿದೆ. ಶೌಚಾಲಯವಿದ್ದರೂ ಇಲ್ಲದಂತಾಗಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಭೂಸೇನಾ ನಿಗಮದ ಅಧಿಕಾರಿಗಳು ಯಾವ ಗ್ರಾಮದಲ್ಲಿಯೂ ಉತ್ತಮವಾಗಿ ಕೆಲಸ ಮಾಡಿಲ್ಲ. ಅಂತವರಿಗೇಕೆ ಕೆಲಸ ಒಪ್ಪಿಸುತ್ತಾರೋ ಏನೋ ? ಎಂದು ವೆಂಕೋಬ, ಮಾರ್ಕಂಡೇಯ ಮತ್ತಿತರ ಯುವಕರು ಗೊಣಗುತ್ತಾರೆ.

ಕಳೆದ ಒಂದು ವರ್ಷದ ಹಿಂದೆ ಅಂಗನವಾಡಿ ಕಟ್ಟಡಕ್ಕೆ ಬುನಾದಿ ಹಾಕಲಾಗಿದ್ದು, ಅದರಲ್ಲಿ ಗಿಡ-ಮರಗಳು ಬೆಳೆದು ನಿಂತಿವೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ರಸ್ತೆಗಳು ಚರಂಡಿಗಳಂತಾಗಿವೆ. ಸಾರ್ವಜನಿಕರು ಅಧಿಕಾರಿಗಳನ್ನು ಪ್ರಶ್ನೆ ಮಾಡುವುದೇ ಕಷ್ಟವಾಗಿದೆ. ಕೆಲಸಕ್ಕೆ ಏನಾದರೂ ಅಡ್ಡಿಪಡಿಸಿದ್ದಾದರೆ, ಸುವರ್ಣ ಗ್ರಾಮ ಯೋಜನೆಯಲ್ಲಿ ಮಂಜೂರಾದ 1.20 ಕೋಟಿ ಹಣ ವಾಪಾಸ್ಸಾಗುತ್ತದೆ ಎಂದು ಬೆದರಿಸುತ್ತಾರೆ.

ಆದರೆ ಕಾಮಗಾರಿಗಳನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ನಿರ್ಮಿಸುತ್ತಿದ್ದಾರೆ. ಯಾರಿಗೇ ಹೇಳಬೇಕೋ ಎನ್ನುವುದು ಅರ್ಥವಾಗದಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ. ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕೋಬ, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಬಸವರಾಜ, ಶಾಸಕ ವೆಂಕಟರಾವ್ ನಾಡಗೌಡ ಮೂಲಭೂತ ಸೌಕರ್ಯದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡು ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸೂಕ್ತ ರೀತಿಯಲ್ಲಿ ಮಾಡುವಂತೆ ಸಲಹೆ ನೀಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT