ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರ’ದ ಹಿರಿಯ ನಾಗರಿಕರ ಸಭೆ

Last Updated 9 ಡಿಸೆಂಬರ್ 2013, 8:47 IST
ಅಕ್ಷರ ಗಾತ್ರ

ಹಾಸನ: ನಗರಸಭೆ ಯಾವುದೇ ವರ್ಷದ ಬಜೆಟ್‌ ಸಿದ್ಧಪಡಿಸುವುದಕ್ಕೂ ಮೊದಲು ಹಿರಿಯ ನಾಗರಿಕರ ಸಭೆ ಕರೆದು ಅವರಿಂದ ಸಲಹೆ ಸೂಚನೆಗಳನ್ನು ಪಡೆಯಬೇಕು ಎಂಬ ನಿಯಮವಿದೆ. 2014–15ನೇ ಸಾಲಿನ ಬಜೆಟ್‌ ಅಂದಾಜುಪಟ್ಟಿಯ ಸಿದ್ಧತೆ ಆರಂಭಿಸಿರುವ ಹಾಸನ ನಗರಸಭೆ ಈ ‘ಆಚಾರ’ವನ್ನು ಶನಿವಾರ ಮಾಡಿ ಮುಗಿಸಿದೆ.

ಇಂಥ ಸಭೆಗೆ ಹಾಜರಾಗುವ ನಾಗರಿಕರ ಸಂಖ್ಯೆ ತೀರ ಕಡಿಮೆ ಎಂಬುದು ಒಂದು ವಿಚಾರವಾದರೆ, ಸಭೆಯಲ್ಲಿ ಮೂಡಿ ಬರುವ ಅನೇಕ ಸಲಹೆಗಳು ಪ್ರತಿ ವರ್ಷವೂ ಮರುಕಳಿಸುತ್ತಲೇ ಇರುತ್ತವೆ. ಇಂಥ ಸಲಹೆಗಳನ್ನು ನಗರಸಭೆ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಯಾವತ್ತೂ ಅನ್ನಿಸಿಯೇ ಇಲ್ಲ. ಇಲ್ಲಿ ನೀಡಿದ ಯಾವ ಸಲಹೆಯೂ ಬಜೆಟ್‌ನಲ್ಲಿ ಒಳಗೊಂಡಿರುವುದಿಲ್ಲ. ನೇರವಾಗಿ ಹೇಳಬೇಕೆಂದರೆ ಇಂಥ ಸಭೆಗಳು ಕಾಟಾಚಾರದ ಸಭೆಗಳಾಗಿ ಮಾತ್ರ ಉಳಿಯುತ್ತಿವೆ.

ಕೆಲವೇ ಕೆಲವು ನಾಗರಿಕರು ಸಭೆಗೆ ಬರುತ್ತಾರೆ ಎಂಬುದು ನಿಜ, ಆದರೆ ಹಲವು ವರ್ಷಗಳಿಂದ ಅವರು ನಗರದ ಸ್ವಚ್ಛತೆ, ನೀರಿನ ಸಮಸ್ಯೆ ಹಾಗೂ ರಸ್ತೆ ಮತ್ತು ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಿ, ರಸ್ತೆಗಳಿಗೆ ಫಲಕಗಳನ್ನು ಹಾಕಿ, ಬಡಾವಣೆಗಳಲ್ಲಿ ಕಸದ ಸಂಗ್ರಹಣೆಗೆ ಕಂಟೇನರ್‌ಗಳನ್ನು ಇಡಿಸಿ ಎಂದೆಲ್ಲ ಒತ್ತಾಯ ಮಾಡುತ್ತ ಬಂದಿದ್ದಾರೆ. ಯಾವುದೂ ಜಾರಿಯಾಗಿಲ್ಲ. ವಾಸ್ತವದಲ್ಲಿ ಇಂಥ ವಿಚಾರಗಳಿಗೆ ಸಭೆ ಕರೆಯಬೇಕಾಗಿಯೇ ಇಲ್ಲ. ನಗರಸಭೆಯಲ್ಲೇ ಇರುವ ಆರೋಗ್ಯ ಅಧಿಕಾರಿಗಳು, ಎಂಜಿನಿಯರ್‌ಗಳು ಆಸಕ್ತಿ ವಹಿಸಿದರೆ ಈ ಕೆಲಸ ಯಾವತ್ತೋ ಆಗಬೇಕಾಗಿತ್ತು, ಆಗುತ್ತಿಲ್ಲ ಅಷ್ಟೇ.

ಈ ಬಾರಿಯೂ ಹಿರಿಯ ನಾಗರಿಕರು ಇಂಥದ್ದೇ ಕೆಲವು ಸಲಹೆಗಳನ್ನು ನೀಡಿ, 2014–15ನೇ ಸಾಲಿನ ಬಜೆಟ್‌ನಲ್ಲಿ ಇದಕ್ಕಾಗಿ ಹಣ ಮೀಸಲಿಡಿ ಎಂದು ಒತ್ತಾಯಿಸಿದ್ದಾರೆ. ಅವರ ಸಲಹೆಗಳಿಗೆ ಇನ್ನೂ ಒಂದಿಷ್ಟನ್ನು ಸೇರಿಸಬೇಕು ಎಂದು ಹಾಸನದ ಜನರ ಬಯಕೆಯಾಗಿದೆ.

ವೃತ್ತಗಳ ಅಭಿವೃದ್ಧಿ: ಎನ್‌.ಆರ್‌. ವೃತ್ತದ ಸಮಸ್ಯೆ ವಿಚಾರ ಎಲ್ಲರಿಗೂ ತಿಳಿದದ್ದೇ. ಕೆಲವು ತಿಂಗಳ ಹಿಂದೆ ಅಧಿಕಾರಿಗಳು ನಗರದ ಮೂರು ನಾಲ್ಕು ವೃತ್ತಗಳನ್ನು ಅಭಿವೃದ್ಧಿಪಡಿಸುವ ಯೋಚನೆ ಇದೆ ಎಂದಿದ್ದರು. ಅದು ಯಾವ ಹಂತದಲ್ಲಿದೆ ಎಂಬುದು ಗೊತ್ತಿಲ್ಲ. ಆ ನಿಟ್ಟಿನಲ್ಲಿ ನಗರಸಭೆ ಹೆಜ್ಜೆ ಇಡಬೇಕಾಗಿದೆ.

ಆಸ್ತಿ ರಕ್ಷಣೆ:  ಇದು ನರಸಭೆಗೆ ದೊಡ್ಡ ಸವಾಲಿನ ಪ್ರಶ್ನೆ. ಸಾಮಾನ್ಯ ಸಭೆಯಲ್ಲೇ ಹಲವು ಬಾರಿ ಇದಕ್ಕಾಗಿ ಭಾರಿ ಗುದ್ದಾಟ ನಡೆದಿದೆ. ನಗರಸಭೆಗೆ ಸೇರಿದ ಜಾಗವನ್ನು ಗುರುತಿಸಿ, ಅದಕ್ಕೆ ಬೇಲಿ ಹಾಕಿ ಅಲ್ಲಿ ಒಂದು ಫಲಕ ತೂಗುಹಾಕುವುದು. ನಗರಸಭೆಯ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಈಗಾಗಲೇ ಪ್ರಭಾವಿಗಳು ನುಂಗಿ ತೇಗಿದ್ದಾರೆ. ಪ್ರತಿಷ್ಠಿತ ಬಡಾವಣೆಗಳಲ್ಲಿ ಇನ್ನೂ ಹಲವು ನಿವೇಶನಗಳು ಖಾಸಗಿ ವ್ಯಕ್ತಿಗಳ ಪಾಲಾಗುವ ಹಂತದಲ್ಲಿವೆ. ಆಸ್ತಿ ರಕ್ಷಣೆಗೆ ಬಜೆಟ್‌ನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೆಕಾಗಿದೆ.

ನಗರದ ಬಡಾವಣೆಗಳಲ್ಲಿ ರಸ್ತೆಗಳಿಗೆ ಫಲಕಗಳೇ ಇಲ್ಲದೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮೂರನೇ ವಾರ್ಡ್‌ ಇಡೀ ನಗರಸಭೆಗೆ ಮಾದರಿಯಾಗಬಹುದು. ಪೃಥ್ವಿ ಚಿತ್ರಮಂದಿರದ ಪಕ್ಕದ ರಸ್ತೆಯಲ್ಲಿ ಹೋದರೆ ಒಂದೊಂದು ಅಡ್ಡ ರಸ್ತೆಗೂ ನಾಮ ಫಲಕಗಳಿವೆ. ಇತರ ಬಡಾವಣೆಗಳಲ್ಲೂ ಇದೇ ರೀತಿ ಫಲಕ ಹಾಕಲು ಬಜೆಟ್‌ನಲ್ಲಿ ಹಣ ಮೀಸಲಿಡಬಹುದಲ್ಲವೇ ?

ನಗರಸಭೆಯ ಎಲ್ಲ ಸದಸ್ಯರು, ಅಧಿಕಾರಿಗಳು ಒಮ್ಮೆ ಹಳೇ ಹಾಸನದಲ್ಲಿ ಸುತ್ತಾಡಿ ಬರಬೇಕಾಗಿದೆ. ಈ ಭಾಗದಲ್ಲಿ ಜನರು ಸೌಲಭ್ಯಗಳಿಲ್ಲದೆ ಒದ್ದಾಡುತ್ತಿದ್ದಾರೆ. ಇಲ್ಲಿನ ನಿವಾಸಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಗರಸಭೆ ಯೋಜನೆ ರೂಪಿಸಬೇಕಾಗಿದೆ ಎಂದು ಆ ಭಾಗದ ಜನರು ಒತ್ತಾಯಿಸುತ್ತಿದ್ದಾರೆ.

ನಗರದ ರಸ್ತೆಗಳ ದುರಸ್ತಿಗೆ ಎಲ್ಲಕ್ಕಿಂತ ಹೆಚ್ಚಿನ ಗಮನ ಕೊಡಬೇಕಾಗಿದೆ. ಇನ್ನುಳಿದಂತೆ ನೀರು, ಪಾರ್ಕ್‌ ಅಭಿವೃದ್ಧಿ ಮುಂತಾದ ವಿಚಾರಗಳು ಇದ್ದೇ ಇವೆ. ಜನರು ನೀಡುವ ಸಲಹೆಗಳನ್ನು ಸ್ವೀಕರಿಸುವ ಮನಸ್ಸಿದ್ದರೆ ಈ ವಿಚಾರಗಳ ಬಗ್ಗೆಯೂ ನಗರಸಭೆ ಗಮನಹರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT