ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟೇಜ್ ಮೇಳದ ಗಾಳ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿಗೆ ಆಧುನಿಕತೆಯ ಸ್ಪರ್ಶ ಸ್ವಲ್ಪ ಹೆಚ್ಚಿದ್ದರೂ, ಅದು ಪ್ರಾಚೀನತೆಯ ಸೊಗಡನ್ನು ಬಿಟ್ಟುಕೊಟ್ಟಿಲ್ಲ, ಪ್ರಾಚೀನ ಕಲೆಗಳೂ ಆಧುನಿಕತೆಯ ಒಂದು ಭಾಗವಾಗಿ ಇಲ್ಲಿ ತಳವೂರಿವೆ. ಕಲೆ, ಸಾಹಿತ್ಯ, ಸಂಗೀತ ಹೀಗೆ ಒಟ್ಟಾರೆ ಸಾಂಸ್ಕೃತಿಕ ಲೋಕಕ್ಕೆ ಬೆಂಗಳೂರಿನ ಕಾಣಿಕೆ ತುಸು ಹೆಚ್ಚೆನ್ನಿ.

ನಮ್ಮದೇ ಕಲೆಯನ್ನು ಆಧುನಿಕರಿಗೆ  ದಾಟಿಸುವ ಪ್ರಯತ್ನ ಸತತವಾಗಿ ನಡೆಯುತ್ತಲೇ ಇದೆ. ಅದರ ಕುರುಹಾಗಿ ಬೆಂಗಳೂರಿನಲ್ಲಿ `ಕಾಟೇಜ್ ಮೇಳ~ ಆರಂಭವಾಗಿದೆ. ಕೈಯಲ್ಲಿ ಒಡಮೂಡಿದ ಕಲೆಗಳನ್ನು ಒಂದೇ ಸೂರಿನಡಿ ತಂದು ಜನರಿಗೆ ತಲುಪಿಸುವ ಕಾರ್ಯವನ್ನು ಭಾರತ ಸರ್ಕಾರದ ಅಂಗಸಂಸ್ಥೆಯಾಗಿರುವ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ ಮಾಡುತ್ತಿದೆ.

ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಸಫೀನಾ ಪ್ಲಾಜಾದಲ್ಲಿ ಆಯೋಜಿಸಿರುವ ಮೇಳದ ಪ್ರದರ್ಶನ ಮತ್ತು ಮಾರಾಟ ಜನವರಿ 15ರವರೆಗೆ ನಡೆಯಲಿದೆ.ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ಕಲಾಕಾರರು ತಮ್ಮ ವಸ್ತುಗಳನ್ನು ನೇರವಾಗಿ ಜನರಿಗೆ ಮುಟ್ಟಿಸುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ.
 
ವೈವಿಧ್ಯಮಯ ಭಾರತೀಯ ಕಲೆಗಳು ಇಲ್ಲಿ ಅನಾವರಣಗೊಂಡಿದ್ದು, ಕಲಾಪ್ರಿಯರಿಗೆ, ಸಂಗ್ರಹಕಾರರಿಗೆ, ಮನೆಯನ್ನು ಅಲಂಕರಿಸುವವರಿಗೆ, ಮಕ್ಕಳಿಗೆ, ಯುವಜನತೆಗೆ, ವೃದ್ಧರಿಗೆ ಹೀಗೆ ಎಲ್ಲಾ ವರ್ಗದ ಜನರೂ ಇಷ್ಟಪಡುವ ಅಪೂರ್ವ ವಸ್ತುಗಳು ಲಭ್ಯ. ಕಾಶ್ಮೀರ, ಮಧ್ಯಪ್ರದೇಶ, ಬಿಹಾರ, ರಾಜಸ್ತಾನ, ಆಗ್ರಾ ಹೀಗೆ ದೇಶದ ವಿವಿಧೆಡೆಗಳ ಕಲಾಕೃತಿಗಳನ್ನು ಕಂಡು ಕೊಳ್ಳಬಹುದು.

ಏನೇನುಂಟು...
ಮೇಳದಲ್ಲಿ ಮಧ್ಯಪ್ರದೇಶದ ಬಸ್ತಾರ್‌ನ ಧೋಕ್ರಾ ಕಲೆ, ಮಹಾರಾಷ್ಟ್ರದ ವರ್ಲಿ ಮತ್ತು ಬಸ್ತಾರ್ ಕಲೆ, ಬಿಹಾರದ ಮಧುಬನಿ ಪೇಂಟಿಂಗ್, ದೀಪಗಳು, ಚಿಮಣಿಗಳು, ಕೈಯಲ್ಲಿ ನಿರ್ಮಿಸಿದ ಮರದ ಪೀಠೋಪಕರಣಗಳು, ಕಂಚು ಮತ್ತು ತಾಮ್ರದ ವಿಗ್ರಹಗಳು, ಕಾಶ್ಮೀರ, ಆಗ್ರಾ, ಜೈಪುರದ ಉಣ್ಣೆಯ ರತ್ನಗಂಬಳಿಗಳು, ಆದಿವಾಸಿ ಆಭರಣಗಳು, ರಾಜಸ್ತಾನದ ಕಲ್ಲಿನ ಆಭರಣ, ಬಿಹಾರ ಮತ್ತು ರಾಜಸ್ತಾನದ ಕೈಮಗ್ಗದ ಹತ್ತಿಯ ಸೀರೆಗಳು, ಲಖನೌ ಕುರ್ತಾಗಳು, ರೇಷ್ಮೆ ಕುರ್ತಾ, ಕರವಸ್ತ್ರ, ಟೈಗಳು, ಹತ್ತಿಯ ಸೀರೆ, ಮಾರ್ಬಲ್‌ನ ಸೂಕ್ಷ್ಮ ಕೆತ್ತನೆಗಳು, ಬಳೆಗಳು, ರಬಾರಿ ವರ್ಕ್‌ನ ಬ್ಯಾಗ್‌ಗಳು ಮೊದಲಾದ ವಸ್ತುಗಳು ಇಲ್ಲುಂಟು. ಕಾರ್ಪೋರೇಟ್ ಉಡುಗೊರೆಗಳಿಗೆ ಅನುಕೂಲವಾಗುವಂತೆ ಅವೆಲ್ಲವನ್ನು ಮಾರ್ಪಡಿಸಿಕೊಳ್ಳುವ ಅವಕಾಶವೂ ಇದೆ.

ಕಲಾವಿದರ ಕರಾಮತ್ತು
ಮೇಳದಲ್ಲಿ ಭಾಗಿಯಾಗಿರುವ ಬಹುತೇಕ ಕಲಾವಿದರು ಮೂರ‌್ನಾಲ್ಕು ತಲೆಮಾರಿನ ಕಲಾ ಪರಂಪರೆಯ ಹಿನ್ನೆಲೆಯವರು. ಪ್ರಾಚೀನ ಕಲೆಯನ್ನು ಅಳಿಸದೆ ಮುಂದಿನ ಪೀಳಿಗೆಗೂ ದಾಟಿಸುವ ಕಲಾವಿದರ ಕೈಚಳಕದಲ್ಲಿ ಅದ್ಭುತ ಕಲಾಕೃತಿಗಳು ಹೊರಹೊಮ್ಮಿವೆ.

ಆಗ್ರಾದ ದುರಿಲಾಲ್ ಕಲಾವಿದ ತಯಾರಿಸಿರುವ `ಮಾರ್ಬಲ್ ಕರ್ವಿಂಗ್~ ಹೊಸ ಬಗೆಯ ಕಲೆಯಾಗಿದ್ದು, ಎಲ್ಲರನ್ನೂ ಆಕರ್ಷಿಸುತ್ತಿದೆ. ಜೊತೆಗೆ ಪಶ್ಚಿಮ ಬಂಗಾಳದ ಮಣ್ಣಿನ ಆಭರಣಗಳು ಯುವತಿಯರನ್ನು ಕರೆಯುತ್ತವೆ. ಸಾಮಾನ್ಯರಿಗೆ ಊಹಿಸಲೂ ಸಾಧ್ಯವಾಗದಂತಹ ಸೂಕ್ಷ್ಮ ಕೆತ್ತನೆಗಳು, ಚಿತ್ರಗಳು, ಕಲಾಕೃತಿಗಳು ಇಲ್ಲಿ ಒಡಮೂಡಿವೆ. ಕುಸುರಿ ಕಲೆ ಮೂಲಕ ಮೂಡಿರುವ ಕಲಾವಿದನ ಸೂಕ್ಷ್ಮಮತಿಗೆ `ಹ್ಯಾಟ್ಸಾಫ್~
ಹೇಳಲೇಬೇಕು.

`ವಿದೇಶೀಯರು ನಮ್ಮ ಕಲಾಕೃತಿಗಳನ್ನು ಹೆಚ್ಚು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ, ಇವನ್ನು ತಮ್ಮ ದೇಶಕ್ಕೆ ಕೊಂಡೊಯ್ಯುವುದು ಕಷ್ಟವಾದರೂ ಬೇಡವೆನ್ನುವುದಿಲ್ಲ. ಮೂರು ತಲೆಮಾರುಗಳಿಂದ ನಮ್ಮ ಕುಟುಂಬ ಈ ಕಲೆಯನ್ನು ರೂಢಿಸಿಕೊಂಡಿದ್ದು, ನಾನೂ ಮುಂದುವರೆಸಿಕೊಂಡು ಬಂದಿದ್ದೇನೆ. ನಮ್ಮ ನಂತರದ ತಲೆಮಾರು ಅಂದರೆ ನಮ್ಮ ಮಕ್ಕಳೂ ಈ ಕಲೆಯಲ್ಲಿ ಆಸಕ್ತಿ ಹೊಂದಿರುವುದರಿಂದ ಈ ಕಲೆಯ ಪರಂಪರೆ ಮುಂದುವರೆಯುವ ಭರವಸೆ ಇದೆ~ ಎನ್ನುವ ತ್ಯಾಂಜೂರ್ ಗೋಲ್ಡ್ ಪೇಂಟಿಂಗ್‌ನ ಕಲಾವಿದೆ ಪುಷ್ಪಲತಾ ಕಣ್ಣಲ್ಲಿ ಸಾರ್ಥಕ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT