ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡ ನೋಡ ಹೋಗಿ... ( ಚಿತ್ರ: ಬೆಟ್ಟದ ಜೀವ)

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ಯುನೆಸ್ಕೋದ ವಿಶ್ವ ಪರಂಪರೆ ಪಟ್ಟಿಯಿಂದ ಪಶ್ಚಿಮ ಘಟ್ಟಗಳನ್ನು ದೂರವಿಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಪ್ರಕೃತಿಯ ಅನನ್ಯತೆಯನ್ನು ಬಿಂಬಿಸುವ `ಬೆಟ್ಟದ ಜೀವ~ ಸಿನಿಮಾ ತೆರೆಕಂಡಿದೆ. ಅಭಿವೃದ್ಧಿ ಮತ್ತು ಸುಖದ ಜನಪ್ರಿಯ ಮಾದರಿಗಳಿಗೆ ಪರ್ಯಾಯವನ್ನು ಸೂಚಿಸುವ ಈ ಚಿತ್ರವನ್ನು ನಮ್ಮ ಜನಪ್ರತಿನಿಧಿಗಳೊಮ್ಮೆ ನೋಡಬೇಕು.

`ಬೆಟ್ಟದ ಜೀವ~ ಶಿವರಾಮ ಕಾರಂತರ ಮೇರುಕೃತಿಗಳಲ್ಲೊಂದು. ಬೆಟ್ಟದ ಪರಿಸರದಲ್ಲಿ ತೋಟ ಮಾಡಿಕೊಂಡು ಬದುಕುವ ಗೋಪಾಲಯ್ಯ ಮತ್ತು ಶಂಕರಿ ಎನ್ನುವ, ಇಳಿವಯಸ್ಸಿನಲ್ಲೂ ಜೀವನೋತ್ಸಾಹ ಕಳೆದುಕೊಳ್ಳದ ಅಪೂರ್ವ ದಂಪತಿಯ ಜೀವನಗಾಥೆಯಿದು. ಪರಿಸರದೊಂದಿಗೆ ಮನುಷ್ಯ ಪ್ರಕೃತಿಯ ಸಹನಡಿಗೆಯ ಕಥನವಿದು. ಇಂಥ ಅದ್ಭುತ ಕಾದಂಬರಿಯನ್ನು ಅದರ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ದೃಶ್ಯರೂಪಕ್ಕೆ ರೂಪಾಂತರಿಸುವಲ್ಲಿ ನಿರ್ದೇಶಕ ಪಿ.ಶೇಷಾದ್ರಿ ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಓಡುನಡಿಗೆಯ ಬದುಕಿನಲ್ಲಿ ನಮಗರಿವಿಲ್ಲದೆಯೇ ನಾವು ಕಳೆದುಕೊಂಡಿರಬಹುದಾದ ಸುಖಗಳನ್ನು `ಬೆಟ್ಟದ ಜೀವ~ ನೆನಪಿಸುತ್ತದೆ. ಶಿವರಾಮಯ್ಯ ನದಿಯಲ್ಲಿ ಮೀಯುವಾಗ, ಗೋಪಾಲಯ್ಯನಿಂದ ಅಭ್ಯಂಜನ ಮಾಡಿಸಿಕೊಳ್ಳುವಾಗ, ಬೆಟ್ಟ ಬಯಲಿನ ಅಗಾಧತೆಗೆ ಕಣ್ಣರಳಿಸುವಾಗ- ಆ ಎಲ್ಲ ಅನುಭವಗಳು ಪ್ರೇಕ್ಷಕನದೂ ಆಗುತ್ತವೆ. ಕಾಡಿನಲ್ಲಿ ವಿಹರಿಸಿ ಬಂದ ಅನುಭವವಾಗುತ್ತದೆ. ಈ ಹಿತಾನುಭವದ ನಡುವೆ ಮಂದ್ರಸ್ವರದಂತೆ ಕೇಳಿಸುತ್ತದೆ- ಮಗನ ಅಗಲಿಕೆಯನ್ನು ಹತ್ತಿಕ್ಕಿಕೊಂಡು ಬದುಕುವ ದಂಪತಿಯ ತಳಮಳ. `ಸುಖ ಇದೆ ಅಂದ್ರೆ ಇದೆ, ಇಲ್ಲ ಅಂದ್ರೆ ಇಲ್ಲ~ ಎನ್ನುವ ಗೋಪಾಲಯ್ಯನ ದೃಷ್ಟಿಕೋನ ಬದುಕಿನ ವಿಮರ್ಶೆಯಂತೆ ತೋರುತ್ತದೆ.

ಓದಿನ ಅನುಭವಕ್ಕಷ್ಟೇ ದಕ್ಕುವ ವಿವರಗಳನ್ನು ಕಾಣಿಸುವಲ್ಲಿ ನಿರ್ದೇಶಕರು ಧ್ವನಿ ಹಾಗೂ ನೆಳಲು ಬೆಳಕನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಅನಂತ ಅರಸ್ ಅವರ ಛಾಯಾಗ್ರಹಣ ಇಡೀ ಸಿನಿಮಾವನ್ನು ಬೆಳಗಿದೆ. ಕಮರ್ಷಿಯಲ್ ಸಿನಿಮಾಕರ್ತೃಗಳು ಕರುಬುವಷ್ಟು ರಮಣೀಯ ಪ್ರದೇಶಗಳು ಅವರ ಕ್ಯಾಮೆರಾದಲ್ಲಿ ಮೂಡಿವೆ. ಔಚಿತ್ಯಪ್ರಜ್ಞೆಯ ಅಪರೂಪದ ಉದಾಹರಣೆಯಂತೆ ಕಾಣುವ ವಿ.ಮನೋಹರರ ಸಂಗೀತವೂ ಚಿತ್ರದ ಸೌಂದರ್ಯವನ್ನು ಹೆಚ್ಚಿಸಿದೆ. ಆನೆ, ಹುಲಿಗಳ ಗೈರುಹಾಜರಿಯಲ್ಲೇ ಅವುಗಳ ಇರುವಿಕೆಯ ಅನುಭವವನ್ನು ಸಿನಿಮಾ ಕಟ್ಟಿಕೊಡುತ್ತದೆ.
ಕಾದಂಬರಿಯಲ್ಲಿನ ಗೋಪಾಲಯ್ಯ ದೈಹಿಕವಾಗಿ ಚಟುವಟಿಕೆಯಿಂದಿರುವ ವ್ಯಕ್ತಿ.

ಆದರೆ, ಚಿತ್ರದಲ್ಲಿನ ಗೋಪಾಲಯ್ಯ ದಣಿದಿದ್ದಾನೆ. ಈ ಪಾತ್ರದಲ್ಲಿ ನಟಿಸಿರುವ ದತ್ತಾತ್ರೇಯನವರಿಗೆ ವಯಸ್ಸಾಗಿರುವುದು ಈ ದಣಿವಿಗೆ ಕಾರಣ. ಆದರೆ, ಅವರ ಪ್ರತಿಭೆಯ ಪ್ರಖರತೆಯಲ್ಲಿ ದಣಿವಿನ ಕೊರತೆ ಮುಚ್ಚಿಹೋಗುತ್ತದೆ.ಈ ಮಾತು ಶಿವರಾಮಯ್ಯನ ಪಾತ್ರಧಾರಿ ಸುಚೇಂದ್ರಪ್ರಸಾದ್ ಅವರಿಗೆ ಅನ್ವಯಿಸುವುದಿಲ್ಲ. ಅವರ ಪಾತ್ರ ನಿರ್ವಹಣೆಯಲ್ಲಿ ನಾಟಕೀಯತೆ ಒಡೆದುಕಾಣುತ್ತದೆ. ಶಂಕರಿ ಪಾತ್ರದಲ್ಲಿನ ರಾಮೇಶ್ವರಿ ವರ್ಮ `ಬೆಟ್ಟದ ಜೀವ~ವೇ ಆಗಿಹೋಗಿದ್ದಾರೆ.

ಸಿನಿಮಾದಲ್ಲಿನ ನಾಯಕ ಸ್ವಾತಂತ್ರ್ಯ ಹೋರಾಟಗಾರ. ಪೊಲೀಸರಿಂದ ತಪ್ಪಿಸಿಕೊಂಡು ಕಾಡಿನ ದಾರಿಯಲ್ಲಿ ದಿಕ್ಕುತಪ್ಪಿ ಗೋಪಾಲಯ್ಯನವರ ಮನೆ ಸೇರುತ್ತಾನೆ. ಚಳವಳಿಯ ಈ ಹಿನ್ನೆಲೆ ಕಾದಂಬರಿಯಲ್ಲಿಲ್ಲ. ಸಿನಿಮಾದ ಕೊನೆಯಲ್ಲಿನ ರೆಸಾರ್ಟ್ ಸಂಸ್ಕೃತಿಯ ಚಿತ್ರಣವೂ ಕಾದಂಬರಿಗೆ ಹೊರತಾದುದು.
 
ಈ ಬದಲಾವಣೆಗಳಿಂದ ಸಿನಿಮಾಕ್ಕೆ ಉಪಯೋಗವೇನೂ ಆಗಿಲ್ಲ. ಬದಲಾಗಿ, ಈ ವಿವರಗಳು ಕಾದಂಬರಿಯ ಧ್ವನಿಶಕ್ತಿಯನ್ನು ಸರಳಗೊಳಿಸಿದಂತೆ ಕಾಣಿಸುತ್ತದೆ.
ಇನ್ನೂ ಬಿಗಿಗೊಳಿಸಬಹುದಾಗಿದ್ದ ಒಳ್ಳೆಯ ಕವಿತೆಯಂತೆ `ಬೆಟ್ಟದ ಜೀವ~ ಗಮನಸೆಳೆಯುತ್ತದೆ. `ಕಾಡ ನೋಡ ಹೋಗಿ ಕವಿತೆಯೊಡನೆ ಬಂದೆ~ ಎನ್ನುವ ಹಿತಾನುಭವ ಉಂಟುಮಾಡುವ ಶಕ್ತಿ ಈ ದೃಶ್ಯಕಾವ್ಯದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT