ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡದಿರಲಿ ರಕ್ತಹೀನತೆ

ವಾರದ ವೈದ್ಯ
ಅಕ್ಷರ ಗಾತ್ರ

ನವ ಯುಗದ ಆರೋಗ್ಯ ಸಮಸ್ಯೆಗಳಲ್ಲಿ ರಕ್ತಹೀನತೆಯೂ ಒಂದು. ಇತ್ತೀಚೆಗೆ ಹೆಚ್ಚಿನ ಪ್ರಮಾಣದ ಯುವಜನರು ರಕ್ತಹೀನತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಜೀವನ ಶೈಲಿಯಲ್ಲಿ ಬದಲಾವಣೆ, ಸಮಯದ ಅಭಾವ, ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ಇಲ್ಲದಿರುವುದು, ಫಾಸ್ಟ್ ಫುಡ್‌ಗಳತ್ತ ಹೆಚ್ಚಿದ ಆಸಕ್ತಿ... ಹೀಗೆ ಹಲವು ಕಾರಣಗಳಿಂದ ಯುವಜನರು ರಕ್ತಹೀನತೆಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕರ್ನಾಟಕ ಸಹ ಹೊರತಾಗಿಲ್ಲ. ರಾಜ್ಯದಲ್ಲಿ ಸುಮಾರು ಶೇ 60ರಷ್ಟು ಹದಿಹರೆಯದ ಹೆಣ್ಣು ಮಕ್ಕಳು ಹಾಗೂ ಸುಮಾರು ಶೇ 35ರಷ್ಟು ಗಂಡು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ರಕ್ತಹೀನತೆಯನ್ನು ಗುರುತಿಸುವುದು ಹೇಗೆ, ಮುನ್ನೆಚ್ಚರಿಕೆ, ಪರಿಹಾರ ಕ್ರಮಗಳೇನು? ಮಾಹಿತಿಗೆ ಓದಿ...

*ರಕ್ತಹೀನತೆಯನ್ನು ಗುರುತಿಸುವುದು ಹೇಗೆ?
ಸುಸ್ತು, ತಲೆನೋವು, ಮೈಭಾರ, ಸ್ನಾಯು ಸೆಳೆತ, ಆಲಸ್ಯ, ಮುಟ್ಟಿನ ಸಮಸ್ಯೆ, ಬಿಳಿಚಿಕೊಂಡ ಮುಖ, ಉಗುರಿನ ಮೇಲ್ಭಾಗ ಬಿಳುಪಾಗುವುದು... ಇವೆಲ್ಲ ರಕ್ತಹೀನತೆಯ ಪ್ರಮುಖ ಲಕ್ಷಣಗಳು. ಪದೇ ಪದೇ ಇಂತಹ ಲಕ್ಷಣಗಳು ಕಂಡುಬಂದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಸಾಮಾನ್ಯವಾಗಿ ಪುರುಷರಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ೧೪.೫ರಷ್ಟು ಹಾಗೂ ಮಹಿಳೆಯರಲ್ಲಿ ಕನಿಷ್ಠ ೧೨.೫ರಷ್ಟು ಇರಬೇಕು. ರಕ್ತ ತಪಾಸಣೆಯಿಂದ ಈ ಪ್ರಮಾಣ ೬ರಿಂದ ೭ ಅಥವಾ ೮ಕ್ಕೆ ಕುಸಿದಿರುವುದು ತಿಳಿದುಬಂದರೆ ಅದನ್ನು ರಕ್ತಹೀನತೆ ಎಂದು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.

*ರಕ್ತಹೀನತೆಯ ಕಾರಣಗಳನ್ನು ತಿಳಿಸಿ.
ರಕ್ತಹೀನತೆಗೆ ಮುಖ್ಯ ಕಾರಣ ಅಸಮತೋಲಿತ ಆಹಾರ ಪದ್ಧತಿ. ಮನುಷ್ಯನಿಗೆ ಅಗತ್ಯ ಪ್ರಮಾಣದಲ್ಲಿ ಪ್ರೊಟೀನ್, ವಿಟಮಿನ್, ಕಬ್ಬಿಣದ ಅಂಶ, ಕ್ಯಾಲ್ಷಿಯಂ ದೊರಕದೇ ಹೋದರೆ ಅನೇಕ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲಿ ರಕ್ತಹೀನತೆಯೂ ಒಂದು. ಇದನ್ನು ಕಡೆಗಣಿಸುವುದರಿಂದ ಹತ್ತಾರು ಸಮಸ್ಯೆಗಳನ್ನು ನಾವೇ ಆಹ್ವಾನಿಸಿಕೊಂಡಂತೆ ಆಗುತ್ತದೆ.

*ವೈದ್ಯಕೀಯ ಕಾರಣಗಳನ್ನು ಹೇಳಿ.
ಕೆಲವೊಮ್ಮೆ ದೀರ್ಘಕಾಲ ಅನಾರೋಗ್ಯದಿಂದ ಬಳಲುವವರು, ಕೆಲವು ಪ್ರಕಾರದ ಮಾತ್ರೆ, -ಔಷಧಗಳ ಸೇವನೆ, ಮುಖ್ಯವಾಗಿ ರಕ್ತದ ಮೂಲಕ ಕಬ್ಬಿಣಾಂಶದ ನಷ್ಟಕ್ಕೆ ಒಳಗಾದವರು... ಹೀಗೆ ಕೆಲವು ವೈದ್ಯಕೀಯ ಕಾರಣಗಳಿಂದಲೂ ರಕ್ತಹೀನತೆ ಉಂಟಾಗುತ್ತದೆ. ಅಲ್ಲದೆ, ಕ್ಯಾನ್ಸರ್‌ ಚಿಕಿತ್ಸೆ ಪಡೆಯುವವರಲ್ಲಿ ರಕ್ತಹೀನತೆ ಸಾಮಾನ್ಯ. ಅಂದರೆ, ಅವರು ಆಗಾಗ್ಗೆ ಎಕ್‌್ಸರೇಗೆ ಒಳಗಾಗುವುದರಿಂದ ಹಾಗೂ ತೆಗೆದುಕೊಳ್ಳುವ ಕೆಲವು ಪ್ರಕಾರದ ಔಷಧಗಳಿಂದ ರಕ್ತಹೀನತೆ ಉಂಟಾಗುತ್ತದೆ. ಆದ್ದರಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲೇ ಕಬ್ಬಿಣಾಂಶಯುಕ್ತ ಔಷಧವನ್ನೂ ನೀಡಲಾಗುತ್ತದೆ.

*ರಕ್ತಹೀನತೆ ಯಾರಲ್ಲಿ ಹೆಚ್ಚಾಗಿ ಕಂಡುಬರುತ್ತದೆ?
ಗರ್ಭಿಣಿಯರು, ಹದಿಹರೆಯದ ಹೆಣ್ಣು ಮಕ್ಕಳು, ಋತುಸ್ರಾವ ಹೆಚ್ಚಿರುವವರು, ಅತಿ ಒತ್ತಡದ, ಶ್ರಮದಾಯಕ ಕೆಲಸ ನಿರ್ವಹಿಸುವವರು, ರಕ್ತದ ಕಾಯಿಲೆ ಇರುವವರು, ಥೈರಾಯ್ಡ್ ಸಮಸ್ಯೆ ಇರುವವರು.

*ರಕ್ತಹೀನತೆಯಿಂದ ಎದುರಾಗಬಹುದಾದ ಸಮಸ್ಯೆಗಳೇನು?
ದೇಹದ ಕಾರ್ಯಚಟುವಟಿಕೆಯನ್ನು ನಿರ್ವಹಿಸುವಲ್ಲಿ ರಕ್ತ ಕಣಗಳು ಪ್ರಮುಖ ಪಾತ್ರ ವಹಿಸುತ್ತವೆ. ದೇಹದ ಪ್ರತಿ ಕೋಶಗಳಿಗೂ ಆಮ್ಲಜನಕವನ್ನು ಪೂರೈಕೆ ಮಾಡುವುದು ರಕ್ತ ಕಣಗಳೇ. ರಕ್ತಹೀನತೆಯಿಂದ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಮೂತ್ರಪಿಂಡ-, ಹೃದಯ ಸೇರಿದಂತೆ ಮಹತ್ವದ ಅಂಗಗಳೂ ತೊಂದರೆಗೆ ಒಳಗಾಗುತ್ತವೆ. ನಿರಂತರ ಆಯಾಸ, ಜಡತ್ವದಿಂದ ದೈನಂದಿನ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ದೈಹಿಕ ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ತೊಂದರೆಯಾಗುತ್ತದೆ. ಮಾನಸಿಕ ತೊಳಲಾಟಕ್ಕೂ ಇದು ದಾರಿ ಮಾಡಿಕೊಡುತ್ತದೆ. ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಕೊರತೆ ಕಂಡುಬರುತ್ತದೆ, ಕುಂಠಿತ ಬೆಳವಣಿಗೆ, ಚಟುವಟಿಕೆ ಇಲ್ಲದಿರುವುದು, ಸದಾ ಸಿಟ್ಟು, ಶೀಘ್ರ ಕೋಪ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ರಕ್ತಹೀನತೆಯನ್ನು ಕಡೆಗಣಿಸದೇ ಸೂಕ್ತ ಕಾಳಜಿ ಹಾಗೂ ಚಿಕಿತ್ಸೆ ಪಡೆಯುವುದು ಅಗತ್ಯ.

*ಮಕ್ಕಳಲ್ಲಿ ರಕ್ತಹೀನತೆಯ ಬಗ್ಗೆ ಹೇಳಿ.
ಗರ್ಭದಲ್ಲಿ ಇರುವಾಗಲೇ ಭ್ರೂಣಕ್ಕೆ ತಾಯಿಯಿಂದ ರಕ್ತ ಪೂರೈಕೆ ಆಗಿರುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆ ಸೂಕ್ತ ಪ್ರಮಾಣದಲ್ಲಿ ಕಬ್ಬಿಣ ಮತ್ತು ಪ್ರೊಟೀನ್ ಅಂಶ ಇರುವ ಆಹಾರ ಹಾಗೂ ಸಪ್ಲಿಮೆಂಟ್ ತೆಗೆದುಕೊಂಡರೆ ಮಕ್ಕಳಿಗೆ ಯಾವುದೇ ತೊಂದರೆ ಉಂಟಾಗದು. ಸಾಮಾನ್ಯವಾಗಿ ಹುಟ್ಟಿದ ಮಕ್ಕಳಲ್ಲಿ ೨೩ರಷ್ಟು ಹಿಮೋಗ್ಲೋಬಿನ್ ಇರುತ್ತದೆ. ಇದು ಒಂದು ವರ್ಷದವರೆಗೆ ಮಕ್ಕಳಲ್ಲಿ ರಕ್ತಹೀನತೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಆದರೆ ಮಗು ತಾಯಿಯ ಹಾಲನ್ನು ಬಿಟ್ಟು ಹೊರಗಿನ ಆಹಾರ ಸೇವಿಸಲು ಆರಂಭಿಸಿದ ನಂತರ ಕಬ್ಬಿಣಾಂಶ ಹೆಚ್ಚಿರುವ ಆಹಾರ ನೀಡಬೇಕು. ಸೊಪ್ಪಿನಿಂದ ಮನೆಯಲ್ಲೇ ತಯಾರಿಸಿದ ತಾಜಾ ಸೂಪ್, ರಾಗಿ, ಅಕ್ಕಿ, ಗೋಧಿಯಿಂದ ತಯಾರಿಸಿದ ಗಂಜಿ ನೀಡುವುದರಿಂದ ಮಕ್ಕಳಲ್ಲಿ ಶುದ್ಧ ರಕ್ತದ ಪ್ರಮಾಣ ಹೆಚ್ಚುತ್ತದೆ.

*ರಕ್ತಹೀನತೆ ತಡೆಗೆ ಅತ್ಯುತ್ತಮ ಆಹಾರ ಪದಾರ್ಥಗಳು ಯಾವುವು?
ಮುಖ್ಯವಾಗಿ ಪ್ರೊಟೀನ್ ಮತ್ತು ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ. ಆದ್ದರಿಂದ ಈ ಎರಡೂ ಅಂಶಗಳು ಹೆಚ್ಚಿರುವ ಆಹಾರವನ್ನು ಹೇರಳವಾಗಿ ಸೇವಿಸಬೇಕು. ಹಾಲು, ಕೊಬ್ಬರಿ ಹಾಗೂ ಸಿಹಿ ಪದಾರ್ಥಗಳಲ್ಲಿ ಪ್ರೊಟೀನ್ ಅಂಶ ಹೆಚ್ಚಿರುತ್ತದೆ. ಇನ್ನು ಕಬ್ಬಿಣಾಂಶ ಹೆಚ್ಚಿರುವ ಪದಾರ್ಥಗಳೆಂದರೆ ಪಾಲಕ್, ಮೆಂತೆ, ನುಗ್ಗೆ ಸೊಪ್ಪು ಸೇರಿದಂತೆ ಯಾವುದೇ ಹಸಿರು ಸೊಪ್ಪು, ಬೇಳೆಕಾಳು, ಎಲ್ಲ ಪ್ರಕಾರದ ಹಣ್ಣುಗಳು, ಮೊಟ್ಟೆ, ಮಾಂಸ, ಮುಖ್ಯವಾಗಿ ಬೆಲ್ಲ. ಬೆಲ್ಲದಲ್ಲಿ ಅತಿ ಹೆಚ್ಚು ಕಬ್ಬಿಣಾಂಶ ಇರುತ್ತದೆ. ಆದ್ದರಿಂದ ಸಿಹಿ ಪದಾರ್ಥವನ್ನು ತಯಾರಿಸುವಾಗ ಸಕ್ಕರೆಯ ಬದಲು ಬೆಲ್ಲವನ್ನು ಹಾಕಿ ಮಾಡುವುದು ರಕ್ತಹೀನತೆಯಿಂದ ಬಳಲುವವರಿಗೆ ತುಂಬಾ ಒಳ್ಳೆಯದು.
ಹಾಲು ಮತ್ತು ಬೆಣ್ಣೆಯಲ್ಲಿ ಕಬ್ಬಿಣಾಂಶ ಏನೂ ಇರುವುದಿಲ್ಲ. ಆದರೆ ಪ್ರೊಟೀನ್‌ಗಾಗಿ ಇವೆರಡನ್ನೂ ಸೇವಿಸಬೇಕು.

*ಮುನ್ನೆಚ್ಚರಿಕೆ?
ಸೂಕ್ತ, ಸಮತೋಲಿತ ಆಹಾರ ಹಾಗೂ ವ್ಯಾಯಾಮವೇ ರಕ್ತಹೀನತೆಗೆ ಮದ್ದು. ಪ್ರತಿದಿನ ಬೆಳಿಗ್ಗೆ ಉಪಾಹಾರ ತಪ್ಪಿಸಬಾರದು, ಲಕ್ಷಣ ಗೋಚರಿಸಿದ ತಕ್ಷಣ ವೈದ್ಯರನ್ನು ಕಾಣಬೇಕು. ಅವರು ಹೇಳುವ ಔಷಧ-ವನ್ನು ಅವರೇ ನಿಲ್ಲಿಸಿ ಎಂದು ಹೇಳುವವರೆಗೂ ನಿಲ್ಲಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT