ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಕಾಟ: ರೈತ ಚಿಂತಾಕ್ರಾಂತ

Last Updated 25 ಜನವರಿ 2011, 10:15 IST
ಅಕ್ಷರ ಗಾತ್ರ

ಗುಬ್ಬಿ: ಕಳೆದ 3 ತಿಂಗಳಿನಿಂದ ತಾಲ್ಲೂಕಿನಲ್ಲೇ ಸಂಚರಿಸುತ್ತಿರುವ ಕಾಡಾನೆಗಳ ಹಾವಳಿಯನ್ನು ನಿಯಂತ್ರಣಕ್ಕೆ ತಾರದ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಕಿಡಿಕಾರುತ್ತಿದ್ದಾರೆ. ಕಾಡಾನೆಗಳ ಆಟಕ್ಕೆ ಸಿಲುಕಿ ಈ ಭಾಗದಲ್ಲಿ ಲಕ್ಷಾಂತರ ಮೌಲ್ಯದ ಬೆಳೆ ನಾಶಗೊಂಡಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ.

ಸಾವನುದುರ್ಗ ಅರಣ್ಯ ಪ್ರದೇಶದಿಂದ ಎರಡು ಗಂಡಾನೆ ಹಾಗೂ ಒಂದು ಹೆಣ್ಣಾನೆ ಈ ಒಂದು ವರ್ಷದಲ್ಲಿ ನಾಲ್ಕು ಬಾರಿ ತಾಲ್ಲೂಕಿನ ಅಡಗೂರು, ಗುಬ್ಬಿಕೆರೆ, ಮೂಕನಹಳ್ಳಿ, ನೆಟ್ಟಗುಂಟೆ, ಲಕ್ಕೇನಹಳ್ಳಿ, ಇರಕಸಂದ್ರ ಮಾರ್ಗವಾಗಿ ಹಾಗಲವಾಡಿವರೆಗೆ ಒಂದೇ ಮಾರ್ಗವನ್ನು ಅನುಸರಿಸಿ ಸಂಚರಿಸುತ್ತಿವೆ. ಗುಂಪಾಗಿ ಬಂದಿರುವ ಈ ಕಾಡಾನೆಗಳು ಯಾವುದೇ ಜೀವಹಾನಿ ಮಾಡದಿದ್ದರೂ, ರೈತನ ಕೈ ಸೇರಬೇಕಿದ್ದ ಲಕ್ಷಾಂತರ ಬೆಲೆಬಾಳುವ ರಾಗಿ, ತೊಗರಿ, ಬಾಳೆ, ತೆಂಗು ಹಾಗೂ ಅಡಿಕೆ ಬೆಳೆಯನ್ನು ನಾಶ ಮಾಡಿವೆ.

ಕಳೆದ ಶುಕ್ರವಾರ ತಾಲ್ಲೂಕಿನ ಅಡಗೂರು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಆನೆಗಳು ಶನಿವಾರ ಮುದಿಗೆರೆ ಮಾರ್ಗವಾಗಿ ಸಂಚರಿಸಿ ರಂಗಪ್ಪ ಎಂಬುವರ ಜಮೀನಿನಲ್ಲಿ 100 ಕ್ಕೂ ಅಧಿಕ ಬಾಳೆಗಿಡ, 10 ತೆಂಗಿನ ಗಿಡವನ್ನು ಹಾಳುಗೆಡವಿವೆ. ಇದರಿಂದಾಗಿ ರೂ.80 ಸಾವಿರ ನಷ್ಟ ಸಂಭವಿಸಿದೆ.     

ಭಾನುವಾರ ಗುಬ್ಬಿ ಕೆರೆಯಲ್ಲಿ ವಾಸ್ತವ್ಯ ಹೂಡಿದ ಕಾಡಾನೆಗಳು ಸೋಮವಾರ ಮುಂಜಾನೆ ವೇಳೆ ಪಟ್ಟಣದ ಸಮೀಪದಲ್ಲಿ ಹಾದು ಹೋಗಿ ಚಿದಂಬರಾಶ್ರಮದ ಬಳಿ ಕೆಲಕಾಲ ವಿಶ್ರಮಿಸಿ ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದ್ದವು. ಸೋಮವಾರ ನೆಟ್ಟಗುಂಟೆ ಕೆರೆಯಲ್ಲಿ ಠಿಕಾಣಿ ಹೂಡಿವೆ.

ನಾಲ್ಕು ಬಾರಿ ಈ ಮಾರ್ಗವಾಗಿ ಆನೆಗಳು ಸಂಚರಿಸಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಆನೆಗಳ ಹಾವಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ. ಹಾನಿಗೆ ಒಳಗಾದ ಸ್ಥಳಗಳಿಗೆ ಇದುವರೆವಿಗೂ ಇಲಾಖೆಯ ಯಾವುದೇ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅಡಗೂರು ಗ್ರಾಮಸ್ಥರು ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳ ದಿಕ್ಕು ಬದಲಿಸಿ ದಟ್ಟ ಅರಣ್ಯದತ್ತ ಓಡಿಸದೆ ತಮ್ಮ ವಲಯದ ಗಡಿಯನ್ನು ದಾಟಿಸುವ ನಿಟ್ಟಿನಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುತ್ತಾರೆ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT