ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿ: ಎಂಜಿನಿಯರ್ ಸಾವು

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಮಂಟಪ ಗ್ರಾಮದ ನೀಲಗಿರಿ ತೋಪಿನಲ್ಲಿ ಪ್ರತ್ಯಕ್ಷವಾದ ಕಾಡಾನೆ ದಾಳಿಯಿಂದಾಗಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಮೃತರನ್ನು ಜಂಬೂರು ಸೂರಪ್ಪ ರಮೇಶ್ (39) ಎಂದು ಗುರುತಿಸಲಾಗಿದೆ. ಐಬಿಎಂ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ರಮೇಶ್ ಮೂಲತಃ ಭದ್ರಾವತಿಯ ಜಂಬೂರು ಗ್ರಾಮದವರು. ಪತ್ನಿ ಯಶೋಧಾ ಅವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು.

15 ಕಾಡಾನೆಗಳ ಹಿಂಡು ಮಂಟಪ ಗ್ರಾಮದ ಪ್ರಕಾಶ್ ಅವರ ನೀಲಗಿರಿ ತೋಪಿನಲ್ಲಿ ಶನಿವಾರ ಬೆಳಿಗ್ಗೆ ಕಂಡುಬಂದವು. 3 ಮರಿಗಳು ಹಾಗೂ 2 ಸಲಗ ಸೇರಿದಂತೆ 15 ಕಾಡಾನೆಗಳ ಹಿಂಡು ಆಹಾರ ಅರಸಿ ಕಾಡಿನಿಂದ ಗ್ರಾಮದ ಹೊಲಗಳತ್ತ ಬಂದಿವೆ. ಮಂಟಪ, ಲಕ್ಷ್ಮೆಪುರ, ವಾಜರಹಳ್ಳಿ, ಜಂಗಾಲಪಾಳ್ಯ ಗ್ರಾಮಗಳ ಹೊಲಗಳಲ್ಲಿ ಬೆಳೆಗಳನ್ನು ತಿಂದು ಮರಳಿ ಕಾಡಿಗೆ ಹಿಂತಿರುವಾಗ ಬೆಳಗಾದುದರಿಂದ ನೀಲಗಿರಿ ತೋಪಿನಲ್ಲಿ ವಾಸ್ತವ್ಯ ಹೂಡಿವೆ. ಕಳೆದ ವರ್ಷ ಸಹ ಇದೇ ತೋಪಿನಲ್ಲಿ ಆನೆಗಳು ಬೀಡು ಬಿಟ್ಟಿದ್ದವು ಎಂಬುದನ್ನು ಸ್ಮರಿಸಿಕೊಳ್ಳಬಹುದು.

ಆನೆಗಳು ಬೀಡು ಬಿಟ್ಟಿರುವ ಸುದ್ದಿ ಸುತ್ತಮುತ್ತಲ ಗ್ರಾಮಗಳಿಗೆ ತಿಳಿಯುತ್ತಿದ್ದಂತೆಯೇ ನೂರಾರು ಜನರು ನೀಲಗಿರಿ ತೋಪಿನ ನಾಲ್ಕು ದಿಕ್ಕುಗಳಲ್ಲಿಯೂ ಸಹ ಜಮಾಯಿಸಿದರು. ಇದರಿಂದಾಗಿ ದಿಕ್ಕು ತೋಚದಾದ ಆನೆಗಳು ಅತ್ತಿಂದಿತ್ತ ಓಡಾಡುತ್ತ ನೀಲಗಿರಿ ತೋಪಿನಲ್ಲಿ ಕೇಂದ್ರೀಕೃತವಾದವು. ಜನರ ಹಾರಾಟ, ಕಿರುಚಾಟದಿಂದ ಆನೆಗಳು ರೊಚಿಗೆದ್ದವು. ಮರಿಗಳು ಇದ್ದುದರಿಂದ ಅತ್ಯಂತ ಜಾಗರೂಕತೆ ವಹಿಸಿದ ಆನೆಗಳು ನೀಲಗಿರಿ ತೋಪಿನ ಸಮೀಪಕ್ಕೆ ಬಂದ ಜನರ ಮೇಲೆ ದಾಳಿ ನಡೆಸಲು ಮುಂದಾದವು.

ಈ ಸಂದರ್ಭದಲ್ಲಿ ವನ್ಯಜೀವಿಗಳ ಛಾಯಾಚಿತ್ರ ತೆಗೆಯುವ ಹವ್ಯಾಸ ಹೊಂದಿದ್ದ ಮತ್ತು ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಸೂರಪ್ಪ ರಮೇಶ್ ಕುತೂಹಲದಿಂದ ಆನೆಗಳ ಛಾಯಾಚಿತ್ರ ತೆಗೆಯಲು ಮುನ್ನುಗ್ಗಿದಾಗ ದಿಢೀರನೆ ಆನೆ ದಾಳಿ ನಡೆಸಿದೆ. ಕ್ಯಾಮೆರಾ ಒಂದೆಡೆ ಬಿದ್ದಿತು. ಕುಸಿದು ಬಿದ್ದ ರಮೇಶ್ ಅವರಿಗೆ ನೀರು ಕುಡಿಸಿ ಆಸ್ಪತ್ರೆಗೆ ಕೊಂಡೊಯ್ದಾಗ ಹೃದಯಾಘಾತದಿಂದ ರಮೇಶ್ ಮೃತಪಟ್ಟಿದ್ದಾನೆ ಎಂದು ಬನ್ನೇರುಘಟ್ಟ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ್ ತಿಳಿಸಿದರು.

ಆಕ್ರೋಶ: ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಕುಪಿತಗೊಂಡ ಜನರು ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾದರು. ಇಲಾಖೆಯ 2 ವಾಹನಗಳನ್ನು ಜಖಂಗೊಳಿಸಿದರು. ಆನೆಗಳ ದಾಳಿಯನ್ನು ತಡೆಯುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಘಟನೆ ಸಂಭವಿಸುವ ಮುನ್ನವೇ ಮಧ್ಯಾಹ್ನ 1.30ರ ವೇಳೆಗೆ ಮೂರು ಕಾಡಾನೆಗಳು ಹಿಂಡಿನಿಂದ ಬೇರಾಗಿ ಕಾಡಿನತ್ತ ಕಾಲ್ಕಿತ್ತವು. ಜನರ ಆಕ್ರೋಶ ಒಂದೆಡೆಯಾದರೆ, ಉಳಿದ ಕಾಡಾನೆಗಳನ್ನು ಮತ್ತೆ ಕಾಡಿಗೆ ಓಡಿಸುವ ಚಿಂತೆ ಅರಣ್ಯ ಇಲಾಖೆ ಹಾಗೂ ಪೊಲೀಸರದ್ದಾಗಿತ್ತು. ಜನರು ಗುಂಪುಗುಂಪಾಗಿ ಜಮಾಯಿಸುತ್ತಲೇ ಇದ್ದರು. ಆನೆಗಳನ್ನು ನಿಯಂತ್ರಿಸುವ ಜೊತೆಗೆ ಜನಗಳ ನಿಯಂತ್ರಣ ಸಹ ಪೊಲೀಸರಿಗೆ ಕಷ್ಟವಾಯಿತು.

ನುರಿತ ಅರಣ್ಯ ಇಲಾಖೆಯ ಸಿಬ್ಬಂದಿ ಅಧಿಕಾರಿಗಳ ಮಾರ್ಗದರ್ಶನದಂತೆ ಸಾರ್ವಜನಿಕರ ಸಹಕಾರದಿಂದ ಮಧ್ಯಾಹ್ನ 4.30ರ ವೇಳೆಗೆ ಹರಸಾಹಸ ಮಾಡಿ ಆನೆಗಳನ್ನು ಕಾಡಿನತ್ತ ಓಡಿಸುವಲ್ಲಿ ಯಶಸ್ವಿಯಾದರು. ಆನೆಗಳು ರಸ್ತೆ ದಾಟುವ ಸಂದರ್ಭದಲ್ಲಿ ಬನ್ನೇರುಘಟ್ಟ-ಆನೇಕಲ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT