ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ನಿಯಂತ್ರಿಸಲು ಕಾಫಿ ಬೆಳೆಗಾರರ ಮನವಿ

Last Updated 9 ಜೂನ್ 2012, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆ ಕಾಫಿ ತೋಟಗಳಲ್ಲಿ ಕಾಣಿಸಿಕೊಂಡಿರುವ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಇಲ್ಲಿಗೆ ಶನಿವಾರ ಭೇಟಿ ನೀಡಿದ ವಾಣಿಜ್ಯ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರಿಗೆ ಬೆಳೆಗಾರರು ಮನವಿ ಮಾಡಿಕೊಂಡರು.

12ನೇ ಪಂಚವಾರ್ಷಿಕ ಯೋಜನೆ ರೂಪಿಸುತ್ತಿರುವ ಈ ಸಂದರ್ಭದಲ್ಲಿ ಚಹಾ ಹಾಗೂ ಕಾಫಿ ಬೆಳೆಗಾರರ ಬೇಡಿಕೆ ಹಾಗೂ ಸಲಹೆಗಳನ್ನು ಆಲಿಸಲು ಸಂಸದ ಶಾಂತಕುಮಾರ್ ನೇತೃತ್ವದಲ್ಲಿ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರು ಜಿಲ್ಲೆಗೆ ಭೇಟಿ ನೀಡಿದ್ದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಹಲವು ಕಾಫಿ ಬೆಳೆಗಾರರು, ಕಾಡಾನೆ ಹಾವಳಿ ವಿಷಯ ಪ್ರಸ್ತಾಪಿಸಿದರು. ಆನೆಗಳು ಕಾಫಿ  ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಇದರಿಂದ ಉತ್ಪಾದನೆ ಕಡಿಮೆಯಾಗುವ ಆತಂಕ ಎದುರಾಗಿದೆ ಎಂದು ಗಮನ ಸೆಳೆದರು.

ಜಿಲ್ಲೆಯ ಹಲವೆಡೆ ಅಳವಡಿಸಲಾಗಿರುವ ಸೋಲಾರ್ ಬೇಲಿ ಹಾಗೂ ಆನೆ ಕಂದಕಗಳು ವಿಫಲವಾಗಿವೆ. ಇದರ ಹಿನ್ನೆಲೆಯಲ್ಲಿ ತೋಟಗಳಿಗೆ ಕಾಡಾನೆಗಳು ನುಗ್ಗದಂತೆ ತಡೆಯಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಬೆಳೆಗಾರರು ಮನವಿ ಮಾಡಿದರು.

ತೋಟದ ಕಾರ್ಮಿಕರಿಗೆ ಮನೆ, ವಿದ್ಯುತ್, ನೀರಿನ ಸಂಪರ್ಕ ಸೇರಿದಂತೆ ಮೂಲಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ಇನ್ನಷ್ಟು ಸಹಾಯ ಮಾಡಬೇಕು. ಕೃಷಿ ಯಾಂತ್ರೀಕರಣ ಸಹಾಯಧನವನ್ನು ಶೇ 50ಕ್ಕೆ ಹೆಚ್ಚಿಸಬೇಕು. ವಿದೇಶಗಳಿಗೆ ಕಾಫಿ ರಫ್ತು ಮಾಡುವಾಗ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕು ಎಂಬ ಬೇಡಿಕೆಗಳನ್ನೂ ಸಲ್ಲಿಸಿದರು.

ಸದ್ಯಕ್ಕೆ ಕಾಫಿಗೆ ಉತ್ತಮ ಬೆಲೆ ಇರುವ ಕಾರಣ ಯಾವ ಬೆಳೆಗಾರರೂ ಈಗಿರುವ ಕಾಫಿ ಗಿಡಗಳನ್ನು ಕಿತ್ತು ಹೊಸದಾಗಿ ಗಿಡ ನೆಡಲು ಮುಂದಾಗುತ್ತಿಲ್ಲ. ಆದ್ದರಿಂದ ರಿ-ಪ್ಲಾಂಟೇಷನ್‌ಗಾಗಿ ಕೋಟ್ಯಂತರ ರೂಪಾಯಿ ಮೀಸಲಿಡುವ ಬದಲು ಬೆಳೆಗಾರರಿಗೆ ವಿವಿಧ ರೀತಿಯ ಸಹಾಯಧನ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗಾರರ ಜತೆ ಮಾತನಾಡಿದ ಸಮಿತಿ ಅಧ್ಯಕ್ಷ ಶಾಂತಕುಮಾರ್, ಕಾಫಿ ಬೆಳೆಗಾರರ ಸಮಸ್ಯೆಗಳು ಹಾಗೂ ಅವರು ನೀಡಿದ ಸಲಹೆಗಳನ್ನು ಆಲಿಸಿದ್ದೇವೆ. ಪರಿಶೀಲಿಸಿ ವಾಣಿಜ್ಯ ಸಚಿವಾಲಯಕ್ಕೆ ವರದಿ ನೀಡುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT