ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆಗಳ ದಾಂಧಲೆ: ಅಪಾರ ಬೆಳೆ ಹಾನಿ

Last Updated 6 ಜನವರಿ 2011, 6:50 IST
ಅಕ್ಷರ ಗಾತ್ರ

ಗುಬ್ಬಿ: ಕಳೆದ ನಾಲ್ಕು ದಿನದಿಂದ ತಾಲ್ಲೂಕಿನಲ್ಲೆ ಸಂಚರಿಸುತ್ತಿರುವ ಕಾಡಾನೆಗಳು ಪ್ರಭುವನಹಳ್ಳಿ, ಅಡಗೂರು ಗ್ರಾಮದ ರೈತರ ಜಮೀನನಲ್ಲಿ ದಾಂಧಲೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ತೆಂಗು, ಬಾಳೆ, ಅಡಿಕೆ ಬೆಳೆಯನ್ನು ಧ್ವಂಸ ಮಾಡಿವೆ. ಕಳೆದ ಆರು ತಿಂಗಳಲ್ಲಿ ಮೂರು ಬಾರಿ ಇತ್ತ ಸಂಚರಿಸಿರುವ ಮೂರು ಕಾಡಾನೆಗಳು ಬೆಳಿಗ್ಗೆ ಸಮಯವನ್ನು ಕೆರೆಯಂಗಳದಲ್ಲಿ ಕಾಲ ಕಳೆಯುತ್ತಿವೆ. ರಾತ್ರಿ ವೇಳೆ ಗ್ರಾಮದತ್ತ ಬರುವ ಆನೆಗಳು ರೈತನ ಕೈ ಸೇರಬೇಕಾದ ಸಮೃದ್ಧ ಬೆಳೆಯನ್ನು ಸಂಪೂರ್ಣ ನಾಶ ಮಾಡುತ್ತಿವೆ.

ಅಡಗೂರು ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹೂಡಿರುವ ಆನೆಗಳು ಬೇರೆ ಮಾರ್ಗ ಹಿಡಿಯುವ ಸೂಚನೆ ಕಾಣುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳು ಮಾರ್ಗ ಬದಲಿಸುವ ಉಪಾಯ ಹುಡುಕುವುದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವನ್ನು ಈ ಭಾಗದ ಕೃಷಿಕರು ಅನುಭವಿಸಬೇಕಾಗಿದೆ. ಮಂಗಳವಾರ ರಾತ್ರಿ ಪ್ರಭುವನಹಳ್ಳಿ ಗ್ರಾಮದಲ್ಲಿ ಚೆಲ್ಲಾಟವಾಡಿದ ಆನೆಗಳು ಸಿದ್ದಗಂಗಮ್ಮ ಎಂಬ ರೈತ ಮಹಿಳೆ ಜಮೀನಿನಲ್ಲಿ ರೂ. 50 ಸಾವಿರ ಬೆಲೆ ಬಾಳುವ 60 ಬಾಳೆಗಿಡ, 8 ತೆಂಗು, 10 ಅಡಿಕೆ ಸಸಿಗಳನ್ನು ಹಾಳುಗೆಡವಿವೆ. ನೀರಾವರಿಗಾಗಿ ಬಳಸಿದ ಪೈಪ್‌ಲೈನ್‌ಗೆ ಸಹ ಹಾನಿ ಮಾಡಿದೆ.

ಅಮೇಜನ್, ನಾಗರಾಜು ಎಂಬ ರೈತರ ಹೊಲದಲ್ಲಿ ಕೂಡ ರಾಗಿ, ತೊಗರಿಯನ್ನು ತನ್ನ ಮೇವು ಮಾಡಿಕೊಂಡು ಹಾಳು ಮಾಡಿವೆ. ಇದೇ ರೀತಿಯಲ್ಲಿ ಬೆಳೆ ಹಾನಿ ಮಾಡಿದರೆ ರೈತರು ಜೀವನ ನಡೆಸುವುದು ಕಷ್ಟವಾಗುತ್ತದೆ ಎನ್ನುವ ಗ್ರಾಮಸ್ಥರು, ಅರಣ್ಯ ಇಲಾಖೆ ಕಾಡಾನೆ ಹಾವಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಸ್ವಾವಲಂಬಿಗಳಾಗಿ’

ಕೊರಟಗೆರೆ: ಜಲಾನಯನ ಯೋಜನೆಯಲ್ಲಿ ಸಮುದಾಯದ ಭಾಗವಹಿಸುವಿಕೆ ಬಹಳ ಮುಖ್ಯ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎನ್.ರಮೇಶ್ ತಿಳಿಸಿದರು. ತಾಲ್ಲೂಕಿನ ಲಿಂಗಾಪುರದಲ್ಲಿ ಈಚೆಗೆ ನಡೆದ ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ವಿವಿಧ ಸಂಘಗಳ ಸದಸ್ಯರು ಸುಸ್ಥಿರ ನಿರ್ವಹಣೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿ ಸ್ವಾಲಂಬಿಗಳಾಗಬೇಕು ಎಂದರು.

ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಡಾ.ವೈ.ದಾಸಪ್ಪ, ತಾಲ್ಲೂಕು ಅಧಿಕಾರಿ ಜಗನ್ನಾಥಗೌಡ, ಸಹಾಯಕ ಕೃಷಿ ಅಧಿಕಾರಿ ಎ.ವಿ.ಹನುಮಯ್ಯ, ಶಿವಣ್ಣ, ಶಿವಲಿಂಗಯ್ಯ, ರೀಡ್ಸ್ ಸಂಸ್ಥೆ ಅಧ್ಯಕ್ಷ ಈಶ್ವರ್, ಮುಖಂಡ ಟಿ.ಎನ್.ನರಸಿಂಹಮೂರ್ತಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT