ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆಗಳ ದಾಳಿ: ರೈತರಲ್ಲಿ ತಪ್ಪದ ಆತಂಕ

Last Updated 16 ಡಿಸೆಂಬರ್ 2012, 19:45 IST
ಅಕ್ಷರ ಗಾತ್ರ

ನೆಲಮಂಗಲ: ತಾಲ್ಲೂಕಿನ ಶಿವಗಂಗೆ ಸುತ್ತಮುತ್ತಲ ಅರಣ್ಯ ಪ್ರದೇಶಗಳಲ್ಲಿ ಕಾಡಾನೆಗಳು ಕಳೆದ ಎರಡು ತಿಂಗಳಿಂದ ಬೀಡುಬಿಟ್ಟಿವೆ. ಕಾಚ್‌ಕಲ್ಲಪ್ಪನಬೆಟ್ಟದ ಹೊಸಕೆರೆಯಲ್ಲಿ ಠಿಕಾಣಿ ಹೂಡಿರುವ ಆರು ಕಾಡಾನೆಗಳು ಸಮೀಪದ ನಾರಾಯಣಪುರ, ಹರಿಯಪ್ಪನಪಾಳ್ಯ, ಗೊಲ್ಲರಹಟ್ಟಿ ಗ್ರಾಮಗಳ ಹೊಲ, ಗದ್ದೆ, ತೋಟಗಳಿಗೆ ದಾಳಿ ಮಾಡಿ ಲಕ್ಷಾಂತರ ಮೌಲ್ಯದ ಬೆಳೆ ನಾಶಮಾಡಿ ರೈತರ ನಿದ್ದೆಗೆಡಿಸಿವೆ.

ಕೆಲ ದಿನಗಳ ಹಿಂದೆ ದಾಬಸ್‌ಪೇಟೆ ಸಮೀಪದ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳು ದೇವರಹೊಸಹಳ್ಳಿ, ಹಳೆನಿಜಗಲ್, ಬೀರಗೊಂಡನಹಳ್ಳಿ, ಕಲ್ಲನಾಯ್ಕನಹಳ್ಳಿ, ಕಮಲಾಪುರ ಮತ್ತು ವೀರಸಾಗರ ಮತ್ತು ಸುತ್ತಮುತ್ತಲ ಗ್ರಾಮಗಳ ತೋಟಗಳಿಗೆ ದಾಳಿ ಮಾಡಿ ಅಪಾರ ಬೆಳೆಹಾನಿ ಉಂಟುಮಾಡಿದ್ದವು.

`ಅರಣ್ಯ ವ್ಯಾಪ್ತಿಯ ಕೆರೆಯಲ್ಲಿ ತಂಗಿದ್ದ ಆನೆಗಳು ರಾತ್ರಿವೇಳೆಗೆ ಕೆರೆ ಅಂಚಿನಲ್ಲಿದ್ದ ತೋಟಕ್ಕೆ ನುಗ್ಗಿ ತೆಂಗು, ಬಾಳೆ, ರಾಗಿ, ಹುರುಳಿ, ಭತ್ತದ ಬೆಳೆಗಳಿಗೆ ಹಾನಿ ಮಾಡಿವೆ' ಎಂದು ನಾರಾಯಣಪುರದ ರೈತ ರೇವಣ್ಣ ದೂರಿದ್ದಾರೆ. `ತೋಟಕ್ಕೆ ನುಗ್ಗಿದ ಆನೆಗಳನ್ನು ಓಡಿಸಲು ಯತ್ನಿಸಿದಾಗ ಅವು ನನ್ನ ಮೇಲೂ ದಾಳಿ ಮಾಡಲು ಯತ್ನಿಸಿದವು. ತಪ್ಪಿಸಿಕೊಂಡು ತೋಟದ ಮನೆಗೆ ತೆರಳಿ ಪ್ರಾಣ ಉಳಿಸಿಕೊಂಡೆ' ಎಂದು ಅವರು ತಿಳಿಸಿದ್ದಾರೆ.

  `ಕಳೆದ ಐದಾರು ವರ್ಷಗಳಿಂದ ಅನೆಗಳು ದಾಳಿ ಮಾಡಿ ನಷ್ಟ ಉಂಟುಮಾಡುತ್ತಲೇ ಇವೆ. ಪ್ರತಿ ವರ್ಷವೂ ಬೆಳೆದ ಬೆಳೆಗಳು ಆನೆಗಳ ಪಾಲಾಗುತ್ತಿವೆ, ಅರಣ್ಯ ಇಲಾಖೆಯವರು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಲಕ್ಷಾಂತರ ಬೆಲೆ ಬಾಳುವ ಬೆಳೆಗಳಿಗೆ ಸೂಕ್ತ ಪರಿಹಾರವನ್ನೂ ನೀಡುತ್ತಿಲ್ಲ. ಶಾಶ್ವತ ಪರಿಹಾರ ವ್ಯವಸ್ಥೆ ಮಾಡಬೇಕು' ಎಂದು ರೈತರು ಆಗ್ರಹಿಸಿದ್ದಾರೆ.

  `ಮಾಗಡಿಯ ಸಾವನದುರ್ಗಬೆಟ್ಟದ ಅರಣ್ಯ ಪ್ರದೇಶದಿಂದ ಬರುವ ಆನೆಗಳು ತಾಲ್ಲೂಕಿನ ಶಿವಗಂಗೆ, ದಾಬಸ್‌ಪೇಟೆ ವ್ಯಾಪ್ತಿಯಲ್ಲಿ ಭಯದ ವಾತಾರಣ ನಿರ್ಮಿಸಿವೆ. ಈ ಹಿಂದೆ ಸೋಲೂರು ಹಾಗೂ ಸೋಂಪುರ ವ್ಯಾಪ್ತಿಯಲ್ಲಿ ಇಬ್ಬರು ಗ್ರಾಮಸ್ಥರು ಸೇರಿದಂತೆ ಜಾನುವಾರುಗಳು ಆನೆ ದಾಳಿಗೆ ಸಾವನ್ನಪ್ಪಿವೆ. ತಾಲ್ಲೂಕಿನ ವಿವಿಧೆಡೆ ಆಗಾಗ ಚಿರತೆ, ಕರಡಿಗಳೂ ಕಾಣಿಸಿಕೊಳ್ಳುತ್ತಿವೆ' ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

`ಮೂರು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 48ರ ಮಹದೇವಪುರ ಬಳಿ ಚಿರತೆಯೊಂದು ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನಕ್ಕೆ ಸಿಕ್ಕು ಸಾವನ್ನಪ್ಪಿತ್ತು. ಈಗ ಮತ್ತೆ ಆನೆಗಳ ಹಾವಳಿ ಶುರುವಾಗಿದೆ. ನಾವೆಲ್ಲ ಭಯದ ನೆರಳಿನಲ್ಲಿಯೇ ಬದುಕವಂತಾಗಿದೆ' ಎಂದು ದಾಬಸ್‌ಪೇಟೆ, ಶಿವಗಂಗೆ ಭಾಗದ ಜನ ನೋವು ತೋಡಿಕೊಂಡಿದ್ದಾರೆ.

  ಆನೆಗಳನ್ನು ಕಾಡಿಗೆ ಓಡಿಸಲು ಈಗಾಗಲೇ ಕಾರ್ಯಾಚರಣೆ ನಡೆಸಿದ್ದು, ರೈತರು ಹೊಲ ಗದ್ದೆಗಳ ಕಡೆ ಒಂಟಿಯಾಗಿ ಓಡಾಡಬಾರದು ಎಂದು ವಲಯ ಅರಣ್ಯಾಧಿಕಾರಿ ತಿಮ್ಮಯ್ಯ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT