ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆಗಳ ಸೆರೆ ವಿಫಲ

Last Updated 18 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ರಾಮನಗರ/ಮಾಗಡಿ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಅಡಗಿರುವ ಎರಡು ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮೂರನೇ ದಿನವಾದ ಗುರುವಾರವೂ ಯಶಸ್ವಿ ಕಾಣಲಿಲ್ಲ. ಹಾಗಾಗಿ ಮತ್ತೊಂದು ದಿನ ಕಾರ್ಯಾಚರಣೆ ಮುಂದುವರೆಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಈ ಭಾಗದ ರೈತರ ಎದೆಯಲ್ಲಿ ನಡುಕ ಹುಟ್ಟಿಸಿರುವ ಈ ಎರಡು ಪುಂಡಾನೆಗಳನ್ನು ಹಿಡಿಯಲು ಮೈಸೂರಿನ ದಸರಾ ಆನೆಗಳಾದ ಅಭಿಮನ್ಯು, ಅರ್ಜುನ, ಗಜೇಂದ್ರ ಹಾಗೂ ಶ್ರೀರಾಮನನ್ನು ಕರೆತರಲಾಗಿದೆ.
ಅರಣ್ಯ ಇಲಾಖೆಯ 80ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಈ ನಾಲ್ಕು ಆನೆಗಳ ನೆರವಿನಿಂದ ಮಂಗಳವಾರದಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು.

ಸುಮಾರು 6,700 ಹೆಕ್ಟೇರ್ ಪ್ರದೇಶ ವಿಶಾಲವಾದ ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಎರಡು ಆನೆಗಳನ್ನು ಹುಡುಕಿ, ಹಿಡಿಯುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ಮೂರು ದಿನಗಳ ಕಾಲ ನಡೆದ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದೆಯಾದರೂ ಅಧಿಕಾರಿಗಳು ಆನೆ ಹಿಡಿಯುವ ಛಲ  ವ್ಯಕ್ತಪಡಿಸಿದ್ದಾರೆ.

ಸಿಎಫ್‌ಓ ಕುಮಾರ್ ಪುಷ್ಕರ್ ಅವರ ನೇತೃತ್ವದಲ್ಲಿ ಗುರುವಾರ ಕಾರ್ಯಾಚರಣೆ ನಡೆಯಿತು. ಸಾವನದುರ್ಗದ ಸುತ್ತಮುತ್ತಲ ಬಹುತೇಕ ಭಾಗಗಳಲ್ಲಿ ಪುಂಡಾನೆಗಳ ಜಾಡನ್ನು ಹಿಡಿಯುವ ಕೆಲಸ ಮಾಡಲಾಯಿತಾದರೂ, ಆನೆಗಳ ಸುಳಿವು ಮಾತ್ರ ದೊರೆಯಲಿಲ್ಲ.

ಜಿಟಿಜಿಟಿ ಎಂದು ಸುರಿಯುತ್ತಿರುವ ಮಳೆ, ಕಾಡಿನಲ್ಲಿ ದಟ್ಟವಾಗಿ ಬೆಳೆದಿರುವ ಬಿದಿರು ಪೊದೆಗಳು, ಮುಳ್ಳು ಗಿಡಗಳಿಂದಾಗಿ ಪುಂಡಾನೆಗಳ ಹುಡಕಲು ಕಷ್ಟಕರವಾಗಿ ಪರಿಣಮಿಸಿದೆ.ಮೂರು ದಿನಗಳಿಗೆ ನಿಗದಿಯಾಗಿದ್ದ ಕಾರ್ಯಾಚರಣೆಯನ್ನು ಮತ್ತೊಂದು ದಿನ ವಿಸ್ತರಿಸಲಾಗಿದೆ. ಶುಕ್ರವಾರ ಈ ಪುಂಡಾನೆಗಳನ್ನು ಸೆರೆ ಹಿಡಿಯುವ ವಿಶ್ವಾಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಅರವಳಿಕೆ ತಜ್ಞರು ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ನುರಿತ ವೈದ್ಯ ಡಾ. ಚಟ್ಟಿಯಪ್ಪ ಅವರು ಕಾರ್ಯಾಚರಣೆ ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT