ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನ ಮಕ್ಕಳು ನಾವೇ, ಕಾಡಿನ ರಾಜರು ನಾವೇ

Last Updated 10 ಅಕ್ಟೋಬರ್ 2011, 5:30 IST
ಅಕ್ಷರ ಗಾತ್ರ

ಕುಶಾಲನಗರ: `ಕಾಡಿನ ಮಕ್ಕಳು ನಾವೇ, ಕಾಡಿನ ರಾಜರು ನಾವೇ,~ `ಕೊಡುವುದಿಲ್ಲ ನಮ್ಮ ಕಾಡು, ಬಿಡುವುದಿಲ್ಲ ನಮ್ಮ ತಾಯಿ ನಾಡು~, `ಭೂಮಿ ನಮ್ಮದು, ಕಾಡು ನಮ್ಮದು, ನೀರು ನಮ್ಮದು~, ಕಾಡು ನಮ್ಮ ಪಿತ್ರಾರ್ಜಿತ ನೆಲೆವೀಡು, ಅರಣ್ಯಕ್ಕೆ ಜೈ, ಆದಿವಾಸಿ ಸಮುದಾಯಗಳ ಹೋರಾಟಕ್ಕೆ ಜೈ - ಈ ಘೋಷಣೆಗಳು ಭಾನುವಾರ ಸಂಜೆ ಪಟ್ಟಣದಲ್ಲಿ ಆದಿವಾಸಿಗಳು, ಮಹಿಳೆಯರಿಂದ ಮೊಳಗಿದವು.

`ಆದಿವಾಸಿಗಳು ಸೇರಿದಂತೆ ದೇಶದಾದ್ಯಂತ ನೈಸರ್ಗಿಕ ಸಂಪನ್ಮೂಲ ಗಳನ್ನು ನಂಬಿಕೊಂಡು ಬದುಕುತ್ತಿರುವ ಸಮುದಾಯಗಳ ಸಹಯೋಗ ದೊಂದಿಗೆ ಕುಶಾಲನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಭಾನುವಾರ ಸಂಜೆ ಆರಂಭಗೊಂಡ ನಾಲ್ಕು ದಿನಗಳ ಕಾಲದ ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ -2011 ದಲ್ಲಿ  ಆದಿವಾಸಿ ಜನಾಂಗದ ಸಂಪ್ರದಾಯದಂತೆ ಆದಿಜ್ಯೋತಿ ಬೆಳಗಿಸುವ ವೇಳೆ ವಿವಿಧ ಸಮುದಾಯ ಹಕ್ಕುಗಳ ಸಂಘಟನೆಗಳು ತಮ್ಮ ಮೂಲಭೂತ ಹಕ್ಕಿಗಾಗಿ ಜೈಕಾರ ಹಾಕಿದವು.

ರಾಷ್ಟ್ರೀಯ ಆದಿವಾಸಿ ಆಂದೋಲನ, ಕುಶಾಲನಗರ ಕೊಡಗು ಗ್ರಾಮೀಣಾ ಭಿವೃದ್ಧಿ ಸಂಸ್ಥೆ (ಕಾರ್ಡ್), ಕೊಡಗು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ, ಲೋಕಶಕ್ತಿ ಅಭಿಯಾನ ಸೇರಿದಂತೆ ದೇಶದ ವಿವಿಧ ಸಮುದಾಯ ಹಕ್ಕುಗಳ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆರಂಭಗೊಂಡ ಸಮುದಾಯ ಹಕ್ಕುಗಳ ಸಂಗಮವನ್ನು ಇಲ್ಲಿನ ಆರ್.ಎಂ.ಸಿ. ಮೈದಾನದ ಅರಳೀಮರದ ಕೆಳಗೆ ಆದಿವಾಸಿ ಸಂಪ್ರದಾಯದಂತೆ ಆದಿಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ.ರಾಜು ಮಾತನಾಡಿ, ಸಂವಿಧಾನಾತ್ಮಕವಾಗಿ ವಿವಿಧ ಸಮುದಾಯಕ್ಕೆ ಸಿಗಬೇಕಾ ಗಿರುವ ಅರಣ್ಯದ ಹಕ್ಕು ಸೇರಿದಂತೆ ಮತ್ತಿತರ ಹಕ್ಕುಗಳ ಬಗ್ಗೆ ನ್ಯಾಯಯುತ ಹೋರಾಟ ನಡೆಸಲಾಗುವುದು ಎಂದರು.

ಆದಿವಾಸಿ ನಾಯಕ ಓರಿಸ್ಸಾದ ಪ್ರಫುಲ್ಲ ಸಮಂತ್ ರೈ ಮಾತನಾಡಿ, ಪ್ರಾಕೃತಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಮೂಲಕ ಇವುಗಳನ್ನು ನಂಬಿ ಬದುಕು ಕಟ್ಟಿಕೊಂಡಿರುವ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ನಡೆಸಬೇಕಿದೆ ಎಂದರು.  

ಉತ್ತರ ಪ್ರದೇಶದ ಸಂಘಟಕಿ, ವಕೀಲರಾದ ರೋಮ ಮಾತನಾಡಿ, ಆದಿವಾಸಿಗಳು ತಮ್ಮ ಮೂಲ ಸಂಸ್ಕೃತಿ, ಪ್ರಕೃತಿ ಉಳಿಸುವ ಮೂಲಕ ತಮ್ಮ ಬದುಕನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಓರಿಸ್ಸಾದ ಮುಖಂಡರಾದ ಇಂದು ನೇತಂ ಮಾತನಾಡಿ, ಸಮುದಾಯಗಳಿಗೆ ನೈಸರ್ಗಿಕ ಸಂಪನ್ಮೂಲ ಮತ್ತು ಜೀವನ ನಿರ್ವಹಣೆಯ ಮೇಲಿನ ಹಕ್ಕುಗಳ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡವನ್ನು ಹೇರುವುದು ಈ ಸಂಗಮದ ಉದ್ದೇಶ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕರೂ ಆದ ಸಂಗಮದ ಸಂಚಾಲಕ ವಿ.ಎಸ್.ರಾಯ್‌ಡೇವಿಡ್ , ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಣೆ, ಅವುಗಳ ಸದ್ಬಳಕೆ ಹಾಗೂ ಇವುಗಳನ್ನು ನಂಬಿ ಜೀವನ ನಡೆಸು ತ್ತಿರುವ ಸಮುದಾಯಗಳ ಜೀವನ ಕ್ರಮದ ಹಕ್ಕುಗಳ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಅ.12 ಕ್ಕೆ ಪಟ್ಟಣದಲ್ಲಿ ಆದಿವಾಸಿ ಗಳಿಂದ ಬೃಹತ್ ಜಾಥಾದೊಂದಿಗೆ ಬಹಿರಂಗ ಅಧಿವೇಶನ ನಡೆಸಲಾಗು ವುದು. ಈ ಜಾಥಾದಲ್ಲಿ 5 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.

ಇನ್ಫಾಫ್ (ಇಂಡಿಯನ್ ಸೋಸಿಯಲ್ ಆಕ್ಷನ್ ಫೋರಮ್) ನ ರಾಷ್ಟ್ರೀಯ ಕಾರ್ಯದರ್ಶಿ ವಿಲ್ಫ್ರೆಡ್ ಡಿ~ಕೋಸ್ಟ , ಹುಣಸೂರು `ಡೀಡ್~ ಸಂಸ್ಥೆಯ ನಿರ್ದೇಶಕ ಎಸ್.ಶ್ರೀಕಾಂತ್, ಬುಡಕಟ್ಟು ಕೃಷಿಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಆರ್.ಕೆ.ಚಂದ್ರು, ಜೆ.ಕೆ.ರಾಮು, ಕುಡಿಯರ ಮುತ್ತಪ್ಪ, ವೆಂಕಟಸ್ವಾಮಿ, ಸಂಘದ ಜಿಲ್ಲಾ ಕಾರ್ಯದರ್ಶಿ ಪಿ.ಎಸ್.ಮುತ್ತ, ಡುಮನ್‌ಸಿಂಗ್ ಸೇರಿದಂತೆ ವಿವಿಧ ರಾಜ್ಯದ ಆದಿವಾಸಿ ಪ್ರಮುಖರು ಇದ್ದರು.

ಸಂಗಮಕ್ಕೆ ಕರ್ನಾಟಕ ಸೇರಿದಂತೆ ದೇಶದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಛತ್ತೀಸ್‌ಘಡ, ಹಿಮಾಚಲ ಪ್ರದೇಶ, ದೆಹಲಿ, ಜಾರ್ಖಂಡ್ ಸೇರಿದಂತೆ 15 ರಾಜ್ಯಗಳಿಂದ ಆದಿವಾಸಿಗಳು ಸೇರಿದಂತೆ ದಲಿತ ಮತ್ತು ಅರಣ್ಯ ಕಾರ್ಮಿಕ ಸಂಘಟನೆಗಳು, ಮೀನುಗಾರರ ಸಂಘಟನೆಗಳು, ಮಹಿಳೆಯರು ಮತ್ತು ಮಕ್ಕಳ ಸಂಘಟನೆಯ ಸಾವಿರಾರು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಕೊಡಗು, ಮೈಸೂರು ಮತ್ತಿತರ ಜಿಲ್ಲೆಗಳಿಂದ ಕಾಲ್ನಡಿಗೆಯಲ್ಲಿ ಆದಿಜ್ಯೋತಿಯೊಂದಿಗೆ ಆಗಮಿಸಿದ ಸಮುದಾಯದವರು ಸರ್ಕಾರ ಮತ್ತು ಬಹು ರಾಷ್ಟ್ರೀಯ ಕಂಪನಿಗಳು ನೈಸರ್ಗಿಕ ಸಂಪನ್ಮೂಲಗಳ ಮೇಲೆ ದಾಳಿ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT