ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಪ್ರಾಣಿಗಳಿಂದ ಬೆಳೆನಷ್ಟ; ತಡೆಗೆ ಆಗ್ರಹ:ಉಡುಪಿ: ಕಿಸಾನ್ ಸಂಘದಿಂದ ಪ್ರತಿಭಟನೆ

Last Updated 17 ಮೇ 2012, 8:55 IST
ಅಕ್ಷರ ಗಾತ್ರ

ಉಡುಪಿ: `ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ರೈತರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ~ ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯಳಂದೂರು ರಂಗನಾಥ್ ಹೇಳಿದರು.

ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆನಷ್ಟ ಆಗುತ್ತಿರುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಕಿಸಾನ್ ಸಂಘ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಏರ್ಪಡಿಸಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

`ಸಮಸ್ಯೆಗಳಲ್ಲಿ ಮುಳುಗಿರುವ ರೈತ ಶಕ್ತಿ ಕಳೆದುಕೊಳ್ಳುತ್ತಿದ್ದಾನೆ. ರೈತರ ಸಮಸ್ಯೆಗಳನ್ನು ಪರಿಹರಿಸಬೇಕಾದ ಸರ್ಕಾರ ನಿಷ್ಕ್ರಿಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವ ನಾಯಕರು ಅದನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಎಲ್ಲ ರೈತರು ಒಗ್ಗಟ್ಟಾಗಿ  ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ~ ಎಂದರು.

`ರೈತರು ಕಷ್ಟಪಟ್ಟು ಬೆಳೆದ ಬೆಳೆ ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗುತ್ತಿದೆ. ಇದಕ್ಕೆ ಪರಿಹಾರ ಸಿಗದೆ ರೈತರು ಕಂಗಾಲಾಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ನಾಲ್ಕು ಗೋಡೆಗಳ ಮಧ್ಯೆ ಸಮಸ್ಯೆಯನ್ನು ಚರ್ಚಿಸುತ್ತಾರೆ. ಆದರೆ ಇದರಿಂದ ಉಪಯೋಗವಾಗುತ್ತಿಲ್ಲ.

ಸಮಸ್ಯೆ ಬಗೆಹರಿಸುವ ಉದ್ದೇಶವಿದ್ದರೆ ರೈತರ ಜೊತೆ ಚರ್ಚಿಸಬೇಕು. ಆಗ ಏನಾದರೂ ಉಪಯೋಗವಾಗಲಿದೆ~ ಎಂದರು.`ಗುಜರಾತ್ ರಾಜ್ಯದ ಪ್ರತಿ ಗ್ರಾಮದಲ್ಲಿಯೂ ಕಿಸಾನ್ ಸಂಘವಿದೆ. ಅಲ್ಲಿನ ಕಿಸಾನ್ ಸಂಘ ಪ್ರತಿಭಟನೆ ನಡೆಸಿದರೆ ಮುಖ್ಯಮಂತ್ರಿ ಅವರೇ ಸ್ಪಂದಿಸುತ್ತಾರೆ. ರಾಜ್ಯದಲ್ಲಿಯೂ ಕಿಸಾನ್ ಸಂಘವನ್ನು ಬಲಪಡಿಸಬೇಕಾದ ಅಗತ್ಯವಿದೆ. ಹದಿನೆಂಟು ವರ್ಷ ತುಂಬಿದ ಎಲ್ಲರನ್ನೂ ಸಂಘದ ಸದಸ್ಯರನ್ನಾಗಿ ಮಾಡಬೇಕು. ಸಂಘಟಿತರಾಗಿ ಹೋರಾಡಬೇಕು~ ಎಂದು ಅವರು ಹೇಳಿದರು.

ಕಾರ್ಕಳ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಬದುಕು ಚಿಂತಾಜನಕವಾಗಿದೆ. ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕಾಡುಪ್ರಾಣಿಗಳ ಹಾವಳಿಯಿಂದ ಜಿಲ್ಲೆಯ ರೈತರು ಬೇಸತ್ತಿದ್ದಾರೆ. ಇದು ಜಿಲ್ಲೆಯ ರೈತರ ಬದುಕಿನ ಪ್ರಶ್ನೆಯಾಗಿರುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

`ವಾರಾಹಿ ಯೋಜನೆ ಮತ್ತು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ಈ ಸಮಸ್ಯೆಗಳ ಬಗ್ಗೆ ಒಬ್ಬರು ಇನ್ನೊಬ್ಬರನ್ನು ದೂರಿ ಪ್ರಯೋಜನ ಇಲ್ಲ. ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು~ ಎಂದರು.

ಕಾಡುಪ್ರಾಣಿಗಳ ಹಾವಳಿ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ವಿಸ್ತೃತ ಚರ್ಚೆ ಆಗಿದೆ. ಜಿಲ್ಲೆಯಲ್ಲಿ `ಮಂಕಿಪಾರ್ಕ್~ ಆರಂಭಿಸುವ ಬಗ್ಗೆ ಮತ್ತು ಕೋತಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡುವ ಬಗ್ಗೆ ಚರ್ಚೆ ನಡೆಯಬೇಕಿದೆ. ಒಟ್ಟಿನಲ್ಲಿ ಈ ಸಮಸ್ಯೆಗಳು ಅಂತ್ಯ ಕಾಣಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಹೇಳಿದರು.

ಮಣಿಪಾಲದ ಟೈಗರ್ ವೃತ್ತದಲ್ಲಿ ಸಮಾವೇಶಗೊಂಡಿದ್ದ ನೂರಾರು ಪ್ರತಿಭಟನಾಕಾರರು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಉಪ್ಪೂರ್ ಜಯಪ್ರಕಾಶ್ ಶೆಟ್ಟಿ ಅಡಿಕೆ ಹಾಳೆಯಿಂದ ತಯಾರಿಸಿದ್ದ ಟೋಪಿ ಧರಿಸಿ ಗಮನ ಸೆಳೆದರು.

ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕೆ.ರಮೇಶ್, ಜಿಲ್ಲಾಧ್ಯಕ್ಷ ಬಿ.ವಿ.ಪೂಜಾರಿ, ಉಪಾಧ್ಯಕ್ಷರಾದ ಇರ್ವತ್ತೂರು ಶ್ರೀನಿವಾಸ ಭಟ್, ಸದಾನಂದ ಶೆಟ್ಟಿ, ಶಂಕರನಾರಾಯಣ ಕಾರಂತ, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ತಾಲ್ಲೂಕು ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಜೈನ್, ಪಾಂಡುರಂಗ ಹೆಗ್ಡೆ, ಸುಬ್ರಹ್ಮಣ್ಯ ಐತಾಳ್, ಜಯರಾಮ್ ಬೊಳ್ಳಾಜೆ, ಗಂಗಾಧರ್, ಎಂ.ಎ.ಗಫೂರ್, ಅನೇಕ ರೈತ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT