ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ರೋಡಲ್ಲಿ ಗಾಡಿ ಸವಾರಿ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಐದು ದಿನ.. ರುಯ್ ಎಂದು 100 ಕಿ.ಮೀ ವೇಗದಲ್ಲಿ ನಿರಂತರವಾಗಿ ದೂಳೆಬ್ಬಿಸಿ ಓಡುವ ಎಸ್‌ಯುವಿಗಳು. ರಾತ್ರಿ ಪ್ರಯಾಣ ನಿಲ್ಲುತ್ತಿದ್ದದ್ದು ಹುಲಿ ಅಭಯಾರಣ್ಯಗಳಲ್ಲಿ. ಇಂತಹ ಅಭೂತಪೂರ್ವ ಅನುಭವಕ್ಕೆ ಅವಕಾಶ ಕಲ್ಪಿಸಿದ್ದು ಟಾಟಾ ಮೋಟರ್ಸ್‌.

ಟಾಟಾ ಮೋಟರ್ಸ್‌ ತಾನು ತಯಾರಿಸಿದ ಎಸ್‌ಯುವಿ ವರ್ಗದಲ್ಲಿ ಸೇರುವ ವಾಹನಗಳ ಸಾಮರ್ಥ್ಯವೇನು ಎನ್ನುವ ಅನುಭವವನ್ನು ಅದರ ಮಾಲೀಕರಿಗೆ ನೀಡುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಇಂತಹ ಒಂದು `ಫುಲ್ ಥ್ರಾಟಲ್ ಜಂಗಲ್ ಎಕ್ಸ್‌ಪೀರಿಯನ್ಸ್' ಅನ್ನು ನವದೆಹಲಿಯಿಂದ ಆರಂಭವಾಗಿ ಮಧ್ಯಪ್ರದೇಶದ ಮೂರು ಪ್ರಖ್ಯಾತ ಹುಲಿ ಅಭಯಾರಣ್ಯಗಳವರೆಗೆ ನಡೆಯಿತು.

ನವದೆಹಲಿ, ಗ್ವಾಲಿಯರ್, ಪಾನಾ, ಬಾಂಧವಘಡ ಹಾಗೂ ಪೇಂಚ್‌ದ 1250 ಕಿ.ಮೀ ಉದ್ದದ ಮಾರ್ಗದಲ್ಲಿ ವಾಹನ ಚಲಾಯಿಸಿದ ಅನುಭವಕ್ಕಿಂತ ವಾಹನ ಸಾಮರ್ಥ್ಯದ ಪರೀಕ್ಷೆ ನಡೆಯಿತು ಎನ್ನಬಹುದು. ಆರು ಪಥಗಳ ಆಧುನಿಕ ಹೆದ್ದಾರಿ, ರಾಜ್ಯ ಹೆದ್ದಾರಿ, ಗುಂಡಿಗಳೇ ತುಂಬಿದ್ದ ಕಚ್ಚಾ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತತ ಚಾಲನೆಯಿಂದ ಮೈ ನೋವಾಗಿದ್ದರೂ ಅನುಭವ ಮಾತ್ರ ಜೀವನಪರ್ಯಂತ ಮರೆಯಲು ಸಾಧ್ಯವಾಗುವುದಿಲ್ಲ.

ಟಾಟಾ ಮಾಲೀಕತ್ವದ ನವದೆಹಲಿಯ ತಾಜ್‌ಪ್ಯಾಲೇಸ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಟಾಟಾ ಸಫಾರಿಯ ಹಳೆಯ ಮಾದರಿಯ ವಾಹನ, ಹೊಸ ಮಾದರಿಯ ಸಫಾರಿ ಸ್ಟಾರ್ಮ್, ಆರಿಯ ಹಾಗೂ ಸುಮೋ ಭಾಗವಹಿಸಿದ್ದವು. ಟಾಟಾ ಮೋಟರ್ಸ್‌ ಆಹ್ವಾನದ ಮೇಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾನು ಸಹ ಡಿಕೋರ್ ಎಂಜಿನ್ ಹೊಂದಿರುವ ಸಫಾರಿ ವಾಹನದ ಮಾಲೀಕನಾಗಿ ಸ್ಟಾರ್ಮ್‌ನ ಸಾಮಾರ್ಥ್ಯ ಪರೀಕ್ಷಿಸುವ ಅವಕಾಶ ದೊರಕಿತು.

ವಾಹನ ಚಾಲು ಮಾಡಿ ಕೊಂಚ ದೂರ ಓಡಿಸಿದ ತಕ್ಷಣವೇ ಎಂಜಿನ್‌ನಲ್ಲಾಗಿರುವ ಬದಲಾವಣೆ, ಗೇರ್‌ನಲ್ಲಾದ ಸುಧಾರಣೆ ಮತ್ತು ಸ್ಟೇರಿಂಗ್‌ನ ಹಗುರತೆ ಎದ್ದು ಕಾಣುವಂತಿತ್ತು. ಡ್ಯಾಶ್‌ಬೋರ್ಡ್‌ನಲ್ಲಿ ಹೇಳುವಂತಹ ಬದಲಾವಣೆ ಆಗಿರದಿದ್ದರೂ ಒಟ್ಟಾರೆ ವಾಹನ ರಸ್ತೆಯಲ್ಲಿ ಎದ್ದು ಕಾಣುವಂತಿದೆ. ವಾಹನದ ಮುಂಭಾಗದಲ್ಲಾಗಿರುವ ಸುಧಾರಣೆಯಲ್ಲಿ ಟಾಟಾ ಲ್ಯಾಂಡ್‌ರೋವರ್‌ನ ಸ್ಫೂರ್ತಿ ಪಡೆದಿದೆ ಎನ್ನಬಹುದು. ಹಿಂಭಾಗದ ಬಾಗಿಲಲ್ಲಿ ಇದ್ದ ಸ್ಟೆಪ್ನಿ ಇದೀಗ ಚಾಸಿಯ ಕೆಳಭಾಗಕ್ಕೆ ಸರಿದಿದೆ. ಇದರಿಂದಾಗಿ ಜಗ್ಗುತ್ತಿದ್ದ ಹಿಂಬಾಗಿಲಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಆದರೂ ಮುಂಭಾಗದ ಬಾಗಿಲಲ್ಲಿ ಸಣ್ಣದಾಗಿ ನಡುಗುತ್ತಿದ್ದ ಗಾಜಿನ ಸಮಸ್ಯೆ ಹಾಗೇ ಉಳಿದಿದೆ. ಹೆಡ್‌ಲೈಟ್ ವಿನ್ಯಾಸ ಗಮನ ಸೆಳೆಯುವಂತಿದೆ.

ಒಳ್ಳೆಯ ರಸ್ತೆಯಲ್ಲಿ ಗಂಟೆಗೆ 130 ಕಿ.ಮೀ ವೇಗದಲ್ಲಿ ಓಡಿಸಿದರೂ ವಾಹನ ಅಲ್ಲಾಡುವುದಿಲ್ಲ. ಆದರೆ, ವಾಹನದ ಎತ್ತರ ತುಸು ಹೆಚ್ಚೇ ಇರುವುದರಿಂದ ಕ್ಷಿಪ್ರವಾಗಿ ತಿರುವು ತೆಗೆದುಕೊಂಡರೆ ಒಂದೆಡೆ ವಾಲುತ್ತದೆ. ಸೀಟಿನ ಮೇಲೆ ಕುಳಿತರೆ ವಾಹನದ ಮೇಲ್ಭಾಗಕ್ಕೂ ತಲೆಗೂ ಸುಮಾರು ಒಂದೂವರೆ ಅಡಿ ಅಂತರವಿದ್ದೇ ಇರುತ್ತದೆ. ಅಪಘಾತವಾಗಿ ಗಾಡಿ ಮಗುಚಿದರೂ ಚಾಲಕ ಸೇಫ್ ಆಗೇ ಇರುತ್ತಾನೆ ಎನ್ನುವುದಕ್ಕೆ ನಾಲ್ಕನೇ ದಿನ ಪೇಂಚ್‌ಗೆ ಹೋಗುವ ದಾರಿಯಲ್ಲಿ ಆದ ಅಪಘಾತವೇ ಸಾಕ್ಷಿಯಾಗಿತ್ತು.

ವೇಗದಿಂದ ಓವರ್‌ಟೇಕ್ ಮಾಡುವಾಗ ಎದುರಿನಿಂದ ಬಂದ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವಾಗ ವಾಹನವು ಚಾಲಕನ ನಿಯಂತ್ರಣ ತಪ್ಪಿ 360 ಡಿಗ್ರಿ ತಿರುಗಿ ಮೂರು ಸುತ್ತು ಉರುಳಿ ಪಕ್ಕದ ಹಳ್ಳಕ್ಕೆ ಬಿತ್ತು. ಅದೃಷ್ಟ ಚೆನ್ನಾಗಿತ್ತು. ವಾಹನದಲ್ಲಿದ್ದ ಮೂವರಿಗೂ ಭಾರಿ ಪೆಟ್ಟಾಗಲಿಲ್ಲ. ಚಾಲಕನ ಪಕ್ಕದಲ್ಲಿದ್ದ ಛಾಯಾಗ್ರಾಹಕನ ಬೆರಳಿಗೆ ಗಾಯವಾದರೆ, ಹಿಂಬದಿ ಸವಾರನ ಎದೆಗೆ ಕೊಂಚ ಪೆಟ್ಟಾಯಿತು. ವಾಹನ ಮುದುಡಿದ್ದರೂ ಪ್ರಯಾಣಿಕರು ಬಚಾವಾಗಿದ್ದರು. ಇದು ಪ್ರಯಾಣಿಕರ ಸುರಕ್ಷತೆಗೆ ಟಾಟಾ ನೀಡಿರುವ ಒತ್ತು ಎಂದೇ ಹೇಳಬಹುದೆನೋ?

ಮೊದಲ ದಿನ ಬೆಳಿಗ್ಗೆ ಆಗ್ರ ಮೂಲಕ ಗ್ವಾಲಿಯರ್‌ಗೆ ಹೋಗಬೇಕಿತ್ತು. ನವದೆಹಲಿ- ಆಗ್ರ ಸಂಪರ್ಕಿಸುವ ಯಮುನ ಎಕ್ಸ್‌ಪ್ರೆಸ್‌ವೇ ಬಗ್ಗೆ ಹೇಳಲೇಬೇಕು. ಆರು ಪಥದ ಸಿಮೆಂಟ್‌ನಿಂದ ಮಾಡಿರುವ ಹೆದ್ದಾರಿಯನ್ನು ಬೆಂಗಳೂರಿನ ನೈಸ್ ರಸ್ತೆಗೆ ಹೋಲಿಸಲು ಸಾಧ್ಯವೇ ಇಲ್ಲ. ಯಮುನ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳಿಗೆ ನೂರು ಕಿ.ಮೀ ವೇಗಮಿತಿ ಹಾಕಿದ್ದಾರೆ. ಆಧುನಿಕ ವಾಹನಗಳು ಈ ರಸ್ತೆಯಲ್ಲಿ ವೇಗಮಿತಿಯನ್ನು ದಾಟಲು ಕಾಯುತ್ತಿರುತ್ತವೆ ಎನ್ನಬಹುದು.

ಆದರೆ ಮಿತಿ ದಾಟಿದರೆ 300 ರೂಪಾಯಿ ದಂಡವನ್ನು ಕಟ್ಟಬೇಕಾಗುತ್ತದೆ ಎನ್ನುವ ಭಯ ನನ್ನನ್ನು ಆವರಿಸಿತ್ತು. ಈ ಭಯವೇ ಒಂದಷ್ಟು ಹಣವನ್ನು ಉಳಿಸಿತು. ನೈಸ್ ರಸ್ತೆ ಸಮತಟ್ಟಾಗೇ ಇಲ್ಲ. ತಿರುವುಗಳಲ್ಲಿ ಬೇಕಾದ ಕಡೆ ಬೋರ್ಡ್‌ಗಳೂ ಕಾಣಿಸುವುದಿಲ್ಲ. ನೈಸ್ ಕಂಪೆನಿಯವರು ಯಮುನ ರಸ್ತೆಯನ್ನು ನೋಡಿದರೆ ಒಂದಿಷ್ಟು ಸುಧಾರಿಸಬಹುದು ಅನಿಸುತ್ತದೆ. ರಸ್ತೆಯನ್ನು ನಿರ್ಮಿಸಿರುವುದು ಸಿಮೆಂಟ್‌ನಿಂದ. ಹೀಗಾಗಿ ಹೆಚ್ಚು ವೇಗವಾಗಿ ಓಡಿದಷ್ಟು ಟಯರ್ ಹಾಗೂ ರಸ್ತೆಯ ಘರ್ಷಣೆ ಹೆಚ್ಚಿ ಶಾಖದಿಂದ ಟಯರ್ ಒಡೆದು ಅಪಘಾತವಾಗುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ವೇಗ ಮಿತಿಯ ಜೊತೆಗೆ ಮೂರು ಕಡೆ ಟಯರ್ ಪರೀಕ್ಷಿಸುವ ಕೇಂದ್ರವನ್ನು ಮಾಡಿದ್ದಾರೆ.

ಮಧ್ಯಾಹ್ನ ಡೋಲ್‌ಪುರದಲ್ಲಿ ಊಟ ಮುಗಿಸಿ ಗ್ವಾಲಿಯರ್‌ನ ತಾಜ್ ಉಷಾಕಿರಣ್ ಹೋಟೆಲ್ ತಲುಪಿದಾಗ ಸಂಜೆ. ರಾತ್ರಿ ಅಲ್ಲಿಯ ಕೋಟೆಯಲ್ಲಿ ಧ್ವನಿ ಬೆಳಕಿನ ವ್ಯವಸ್ಥೆಯಲ್ಲಿ ಅಮಿತಾಭ್ ಬಚ್ಚನ್ ಧ್ವನಿಯಲ್ಲಿ ಚರಿತ್ರೆ ಪರಿಚಯಿಸುವ ಒಳ್ಳೆ ಕೆಲಸ ಮಾಡಿದ್ದಾರೆ.

ಎರಡನೇ ದಿನ ಝಾನ್ಸಿ ಮೂಲಕ ಪನ್ನಾ ಕಡೆಗೆ 349 ಕಿ.ಮೀ ದೂರದ ಪ್ರಯಾಣ. ಅಲ್ಲಲ್ಲಿ ಕಚ್ಚಾ ರಸ್ತೆ. ಝಾನ್ಸಿಯಿಂದ ಒರ್ಚಾ ಕಡೆಯ ಮಾರ್ಗದಲ್ಲಿ ಹೆದ್ದಾರಿ ನಿರ್ಮಾಣ ನಡೆದಿತ್ತು. ನಿಜಕ್ಕೂ ವಾಹನಕ್ಕೂ ಚಾಲಕರಿಗೂ ಸವಾಲಾಗುವ ದಾರಿಯದು. ಕಾರುಗಳು ಕಷ್ಟಪಡುತ್ತಿದ್ದರೆ ಸಫಾರಿ ಸವಾರಿ ಆನೆಯ ಮೇಲಿನ ಅಂಬಾರಿಯಂತಿತ್ತು. ಒರ್ಚಾದ ಅಮರ್ ಮಹಲ್‌ನಲ್ಲಿ ಮಧ್ಯಾಹ್ನದ ಊಟದ ನಂತರ ಕೆನ್ ನದಿಯನ್ನು ದಾಟಿ ನದಿ ದಂಡೆಯಲ್ಲೇ ಇರುವ ಕೆನ್ ರಿವರ್ ಲಾಡ್ಜ್‌ನಲ್ಲಿ ರಾತ್ರಿ ಒಂದಿಷ್ಟು ನಿದ್ರೆ. ಬೆಳಿಗ್ಗೆ 6.30ಕ್ಕೆ ಸಫಾರಿ.

ಮಧ್ಯಪ್ರದೇಶದಲ್ಲಿ ರಾಷ್ಟ್ರದಲ್ಲೇ ಅತಿ ಹೆಚ್ಚು ಹುಲಿ ಅಭಯಾರಣ್ಯಗಳಿವೆ. ಪಾನಾದಲ್ಲಿ ಇದೀಗ 16 ಹುಲಿಗಳಿವೆ. ಕೆಲ ವರ್ಷಗಳ ಹಿಂದೆ ಕಳ್ಳಬೇಟೆಯಿಂದ ಒಂದು ಹುಲಿಯೂ ಇಲ್ಲದಂತೆ ನಾಮಾವಶೇಷ ಮಾಡಲಾಗಿತ್ತು. ನಂತರ ಎಚ್ಚೆತ್ತ ಮಧ್ಯಪ್ರದೇಶ ಸರ್ಕಾರ ಪಾನಾದ ಪಕ್ಕದಲ್ಲಿರುವ ಬಾಂಧವಘಡ ಹಾಗೂ ಪೇಂಚ್‌ನಿಂದ ಹುಲಿಗಳನ್ನು ಇಲ್ಲಿಯ ಕಾಡಿಗೆ ಬಿಟ್ಟಿದೆ. ಹೀಗಾಗಿ ಆ ಹುಲಿಗಳಿಗೆ ರೇಡಿಯೊ ಕಾಲರ್ ಹಾಕಿದ್ದಾರೆ. ನನ್ನ ಅದೃಷ್ಟಕ್ಕೆ ಹೆಣ್ಣು ಹುಲಿಯ ದರ್ಶನವಾಯಿತು.

ಪಾನಾದಿಂದ ಬಾಂಧವಘಡಕ್ಕೆ 195 ಕಿ.ಮೀ. ತಲುಪುವ ಸ್ಥಳಕ್ಕೆ ನೂರು ಕಿ.ಮೀ ಇದ್ದಾಗಲೇ ನನ್ನ ವಾಹನ ಕೈಕೊಡಬೇಕೇ! ಪವರ್ ಸ್ಟೇರಿಂಗ್ ವ್ಯವಸ್ಥೆಯಲ್ಲಿ ಆಯಿಲ್ ಪೈಪ್‌ಗೆ ಬೇರಿಂಗ್‌ನ ಬಾಲ್‌ಗಳು ಬಿದ್ದು ಸ್ಟೇರಿಂಗ್ ಗಡುಸಾಯಿತು. ನಾನು ಬಳಸುತ್ತಿದ್ದ ವಾಹನವನ್ನು ಚೀನಾದಲ್ಲಿ ನಡೆದಿದ್ದ ರೇಸಿಂಗ್‌ಗೆ ಟಾಟಾ ಮೋಟರ್ಸ್‌ ಕಳುಹಿಸಿದ್ದಾಗಲೂ ಇದೇ ಸಮಸ್ಯೆ ಎದುರಾಗಿತ್ತಂತೆ. ಮತ್ತೆ ಅದೇ ಸಮಸ್ಯೆ ಬರಬೇಕೇ? ನೂರು ಕಿ.ಮೀ ಹಳೆಯ ಲಾರಿ ಓಡಿಸಿದ ಅನುಭವವೂ ಸಫಾರಿಯಿಂದ ದೊರೆಯಿತು.

ಬಾಂಧವಘಡ ಹುಲಿಗೆ ಹೆಸರಾದ ಅಭಯಾರಣ್ಯ. ಇಲ್ಲಿ ಪ್ರವಾಸಿ ವಲಯದಲ್ಲೇ 30 ಹುಲಿಗಳಿವೆ. ಆದರೆ ನನಗೆ ಅದೃಷ್ಟವಿರಲಿಲ್ಲ. ಕೋತಿ, ತೋಳ, ಕಾಡೆಮ್ಮೆ, ಚಿರತೆ ಇಲ್ಲಿ ಸಾಮಾನ್ಯ. ಮಧ್ಯಪ್ರದೇಶದಲ್ಲಿ ಕಾಡಿನ ಸಫಾರಿಗೆ ಬಳಸುವ ವಾಹನ, ಗೈಡ್ ಎಲ್ಲಾ ವ್ಯವಸ್ಥೆ ಖಾಸಗೀಕರಣವಾಗಿದೆ. ಕರ್ನಾಟಕಕ್ಕೆ ಹೋಲಿಸಿದರೆ ಹದಗೆಟ್ಟಿದೆ ಎನ್ನಬಹುದು. ಪರಿಸರ ಅಧ್ಯಯನ, ಪ್ರಾಣಿಗಳ ಪರಿಚಯಕ್ಕೆ ಕೊನೆಯ ಆದ್ಯತೆ. ಹಣಕ್ಕೆ ಆದ್ಯತೆ. ಎಲ್ಲಾ ಖಾಸಗೀಕರಣದ ಮಹಿಮೆ.

ಬಾಂಧವಘಡದಿಂದ ಪೇಂಚ್‌ಗೆ 360 ಕಿ.ಮೀ ದೂರ. ನಡುವೆ ಸಿಗುವ ಘುಗ್ವಾ ಪಳೆಯುಳಿಕೆ ಉದ್ಯಾನದಲ್ಲಿ ಮಧ್ಯಾಹ್ನದ ಊಟಕ್ಕೆ ಬುತ್ತಿ ತೆಗೆದುಕೊಂಡೇ ಹೋಗಿದ್ದೆವು. ಘುಗ್ವಾದಲ್ಲಿ ಡೈನೋಸರ್ ಕಾಲದ ಪಳೆಯುಳಿಕೆಗಳಿವೆ. ಇದನ್ನು ಬಯಲು ಉದ್ಯಾನದಲ್ಲಿ ಪ್ರದರ್ಶಿಸಲಾಗಿದೆ. ಇಲ್ಲಿಂದ ಹೊರಟು ಕೊಂಚ ಮುಂದೆ ಹೋಗುತ್ತಿದ್ದಂತೆ ಸಂಭವಿಸಿದ್ದು ಅಪಘಾತ.

ರ್‍ಯಾಲಿ ಮತ್ತು ಫುಲ್ ಥ್ರಾಟಲ್ ಎಕ್ಸ್‌ಪೀರಿಯನ್ಸ್‌ನಲ್ಲಿ ಅಪಘಾತಗಳು ಸಾಮಾನ್ಯ. ಗ್ರಾಮದ ಮಧ್ಯೆ ನಡೆದಿದ್ದರಿಂದ ಹಳ್ಳಿಗರು ಸುತ್ತಾ ಸೇರಿದ್ದರು. ಪ್ರಾಣಾಪಾಯ ಸಂಭವಿಸದೇ ಇದ್ದ ಕಾರಣದಿಂದ ವಾಹನವನ್ನು ಎತ್ತಿ ರಿಪೇರಿಗೆ ಕಳುಹಿಸಿ ಮತ್ತೆ ಪ್ರಯಾಣ ಮುಂದುವರೆಸಿದೆವು. ಎದೆಗೆ ಪೆಟ್ಟು ಬಿದ್ದು ಉಸಿರಾಟಕ್ಕೆ ತೊಂದರೆಯಾಗಿದ್ದ ಒಬ್ಬರನ್ನು ಸಮೀಪದ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕಳುಹಿಸಲಾಯಿತು. ಅಪಘಾತ ನಡೆದ ನಂತರ ವಾಹನ ಎತ್ತಿ ರಸ್ತೆಗೆ ತರಲು ಕೇವಲ ಹತ್ತು ನಿಮಿಷ ತೆಗೆದುಕೊಂಡಿದ್ದು, ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಕೂಗರ್ ಮೋಟರ್‌ಸ್ಪೋರ್ಟ್ಸ್‌ನ ಆಶಿಷ್ ಗುಪ್ತ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವರು ಗಾಬರಿಯಾಗಿದ್ದರೆ, ಗುಪ್ತ ಮಾತ್ರ ಸಮಚಿತ್ತರಾಗೇ ಇದ್ದರು.

ಪ್ರಯಾಣದ ಕೊನೆಯ ದಿನದ ಅಡೆತಡೆಯ ನಡುವೆ 360 ಕಿ.ಮೀ ದೂರವನ್ನು ಕ್ರಮಿಸಿ ಪೇಂಚ್ ತಲುಪಿದಾಗ ಸೂರ್ಯ ನಿದ್ರಿಸಿದ್ದ. ಬೆಳಿಗ್ಗೆ ಮತ್ತೆ 6.30ಕ್ಕೆ ಅರಣ್ಯದತ್ತ ಪ್ರಯಾಣ ನಡೆಯಿತು.

ನಾಲ್ಕು ದಿನಗಳ ಪ್ರಯಾಣದುದ್ದಕ್ಕೂ ಒಳ್ಳೆಯ ವಾಹನ, ಕಷ್ಟ ಬಂದಾಗ ಸಹಕರಿಸುವ ಸ್ನೇಹಿತರು ಇದ್ದರೆ ಪ್ರಯಾಣ ಸುಖಕರ ಎನ್ನುವುದು ಮತ್ತೆ ಮತ್ತೆ ನೆನಪಾಯಿತು. ನವದೆಹಲಿಯ ನಿತಿನ್ ಶರ್ಮ, ಚೇತನ್ ಶರ್ಮ, ಭುವನೇಶ್ ಜವಾಲ್, ಮುಖೇಶ್ ಛಾಂಬ್ರ, ಚಂಡೀಗಡದ ಗಾಲ್ಫರ್‌ಗಳಾದ ಎಚ್.ಎಸ್.ಕಾಂಗ್, ಹರಿಂದರ್‌ಜಿತ್ ಘರಾಯ ಅವರ ಸ್ನೇಹ, ಅವರಿಗೆ ಟಾಟಾ ಎಸ್‌ಯುವಿ ಮೇಲಿದ್ದ ಮೋಹವನ್ನೂ ಮರೆಯಲಾಗದು.
(ಚಿತ್ರಗಳು ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT