ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಕರ್ಣ ಪ್ರಸಂಗವು

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಧಾಕೃಷ್ಣ ಉರಾಳ ಸಾರಥ್ಯದ ಮಹಾಕಲಿ ಕರ್ಣ ನಾಟಕವು ಹಲವು ಪ್ರಯೋಗಗಳನ್ನು ಒಳಗೊಂಡಿತ್ತು. ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ಕೆ.ಎಸ್.ಆರ್.ಟಿ.ಸಿ ಲೇಔಟ್‌ನ, ಚಿಕ್ಕಲಸಂದ್ರದ ಶ್ರೀಸಿದ್ಧಿ ಗಣಪತಿ ಆವರಣದ ಮನೋರಂಜಿನಿ ಸಭಾಂಗಣದಲ್ಲಿ ನಡೆದ ಯಕ್ಷಗಾನವಿದು.
 
ವಿಧಿ ವಂಚಿತನಾದ ದುರಂತ ನಾಯಕ ಕರ್ಣನ ಬದುಕಿನ ಕುರಿತಾದ ಈ ಯಕ್ಷಗಾನ ಪ್ರಯೋಗದಲ್ಲಿ ಕರ್ಣನಾಗಿ ಸುಧೀಂದ್ರ ಹೊಳ್ಳ ಅವಕಾಶವಾದಿ ಸಂಬಂಧ, ಸ್ವಾರ್ಥ ರಾಜಕಾರಣದಲ್ಲಿ ದುರಂತ ಅಂತ್ಯಕಂಡ ಕರ್ಣನ ಬದುಕನ್ನು ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ರೂಪಿಸಿದರು.
 
ಯಕ್ಷಗಾನದಲ್ಲಿ ಮೋರ್ಚಿಂಗ್ ಬಳಕೆಯ ಮೂಲಕ ಉರಾಳರು ಹಿಮ್ಮೇಳದಲ್ಲಿ ಹೊಸತನ ಮೂಡಿಸಿದರು. ಯಕ್ಷಗಾನದ ತಮ್ಮ ಅನುಭವದಿಂದ ತಾಳಗಳಿಗೆ ಸರಿಹೊಂದುವಂತೆ ಮೋರ್ಚಿಂಗ್ ನುಡಿಸುವ ಮೂಲಕ ಸನ್ನಿವೇಶದ ಭಾವನೆಗಳಿಗೆ ಹೆಚ್ಚು ಪ್ರಭಾವ ಬರುವಂತೆ ಮಾಡಿದವರು ನಾಗರಾಜ್.

ಸುಜಯೀಂದ್ರ ಹಂದೆಯವರ ಶಲ್ಯನ ಅರ್ಥಗಾರಿಕೆ, ಗತ್ತು ಯಕ್ಷಗಾನದ ಮೇರು ಕಲಾವಿದರನ್ನು ನೆನಪಿಸುವಂತೆ ಮಾಡಿತು. ಅಂಬರೀಷ್ ಭಟ್ ನಿರ್ವಹಿಸಿದ ಕೃಷ್ಣನ ಪಾತ್ರವು ನಗರದ ಹವ್ಯಾಸಿ ಕಲಾವಿದರ ಪ್ರತಿಭೆಯ ಪಾರಮ್ಯಕ್ಕೆ ಸಾಕ್ಷಿಯಾಗಿತ್ತು.

ಸುರೇಶ ತಂತ್ರಾಡಿ ಕೌರವನಾಗಿ, ಶಿವಾನಂದ ಹೊಳ್ಳ ಅರ್ಜುನನಾಗಿ ಪ್ರಸಂಗದ ಒಟ್ಟಂದವನ್ನು ಹೆಚ್ಚಿಸಿದರು. ಇಂದಿನ ಯಕ್ಷಗಾನದ ಪ್ರದರ್ಶನದಲ್ಲಿ ಅಪರೂಪ ಎನ್ನುವಂತಾಗಿರುವ ಸಾಂಪ್ರದಾಯಿಕ ಶೈಲಿಯ ಚೌಕಟ್ಟಿನಲ್ಲೇ ಸಮಕಾಲಿನತೆಯ ಅನುಭವ ನೀಡಿದ ಪ್ರದರ್ಶನ ಹೊರಗಿನ ಚಳಿ ವಾತಾವರಣದಲ್ಲಿ ಪ್ರೇಕ್ಷಕರ ಮನಕ್ಕೆ ಬೆಚ್ಚಗಿನ ಅನುಭವ ನೀಡಿತು.
 
ತುಂಬಿ ತುಳುಕಿದ ಸಭಾಂಗಣ ಕಥೆ, ಕಥಾ ಪ್ರದರ್ಶನದ ಮೌಲ್ಯವನ್ನು ಎತ್ತಿ ಹಿಡಿದಿತ್ತು. ಸುಬ್ರಾಯ ಹೆಬ್ಬಾರ್,ಎ.ಪಿ.ಪಾಠಕ್, ಶ್ರೀನಿವಾಸಪ್ರಭು ಹಿಮ್ಮೇಳದಲ್ಲಿನ ಸಹಕಾರ ಪ್ರಸಂಗದ ಅಂದ ಹೆಚ್ಚಿಸಲು ಕಾರಣರಾದರು. ಸ್ತ್ರೀ ಪುರುಷ ವೇಷಗಳಲ್ಲಿ ತಮ್ಮನ್ನು ಬಹುವಾಗಿ ಗುರುತಿಸಿಕೊಂಡಿದ್ದ ರಾಧಾಕಷ್ಣ ಉರಾಳ ವೃದ್ಧ ಬ್ರಾಹ್ಮಣನ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಲ್ಲಿ ಬೆರಗು ಮೂಡಿಸಿದರು.

ಕೇವಲ ಯಕ್ಷಗಾನಕ್ಕೆ ಸೀಮಿತಗೊಳ್ಳದ ರಾಧಾಕೃಷ್ಣ ಉರಾಳ ನಾಟಕ, ಬರಹ, ನೃತ್ಯ ಶಿಕ್ಷಣ ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಕೊಂಡವರು. ಎಂ.ಎ. ಶಿಕ್ಷಣದ ನಂತರ ಈಗ ಡಾ. ಸರ್ವೊತ್ತಮ ಕಾಮತ್ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ಮತ್ತು ದಕ್ಷಿಣ ಭಾರತದ ನೃತ್ಯ ಪ್ರಕಾರಗಳಲ್ಲಿ ಅಭಿನಯ ವಿಷಯದ ಸಂಶೋಧನಾ ವಿದ್ಯಾರ್ಥಿಯಾಗಿರುವುದು ಅವರ ಆಸಕ್ತಿಗೆ ಕನ್ನಡಿ ಹಿಡಿಯುತ್ತದೆ. ಅವರ ವಿದೇಶ ಪಯಣ, ಪ್ರದರ್ಶನ, ಅನುಭವ ಅಪಾರ.

ಭಾರತ ಸರ್ಕಾರದ ಸಂಸ್ಕತಿ ಇಲಾಖೆ, ಕಲಾಕದಂಬ ಆರ್ಟ್ ಸೆಂಟರ್, ಮನೋರಂಜಿನಿ ಸಾಂಸ್ಕತಿಕ ವೇದಿಕೆ ನೆರವಿನೊಂದಿಗೆ ನಡೆದ ಈ ಕಾರ್ಯಕ್ರಮದ ಒಟ್ಟು ನಿರ್ವಹಣೆ ವಿಶ್ವನಾಥ ಉರಾಳ, ಮುರಳೀಧರ ನಾವಡ, ನಿತ್ಯಾನಂದ ನಾಯಕ್, ದೇವರಾಜ ಕರಬ ಅವರದಾಗಿತ್ತು. ಪ್ರತಾಪ್, ಚಿದಾನಂದ ಕುಲಕರ್ಣಿ ಸತ್ಯನಾರಾಯಣ, ಕೆ.ಎನ್ ಅಡಿಗ, ಮೊದಲಾದವರ ನೆರವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT