ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಸಮಸ್ಯೆಗೆ ಜನರು ಹೈರಾಣ

Last Updated 16 ಸೆಪ್ಟೆಂಬರ್ 2011, 6:30 IST
ಅಕ್ಷರ ಗಾತ್ರ

ಚಳ್ಳಕೆರೆ: ಸ್ವಚ್ಛತೆ ಕಾಣದ ಚರಂಡಿಗಳು, ಡಾಂಬರೀಕರಣಕ್ಕೆ ಕಾದು ನಿಂತಿರುವ ಕೆಲ ರಸ್ತೆಗಳು, ಕೆಲವು ಬೀದಿಗಳಲ್ಲಿ ಬೀದಿ ದೀಪಗಳು ಇದ್ದರೂ ಬೆಳಕು ಕಾಣದೇ ಇರುವುದು. ಇಂತಹ ಅನೇಕ ಸಮಸ್ಯೆಗಳು ಚಳ್ಳಕೆರೆ ಪಟ್ಟಣದ ಜನತೆಗೆ ದಿನನಿತ್ಯದ ಸಮಸ್ಯೆಗಳಾಗಿ ಕಾಡುತ್ತಿವೆ.
 
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಹಂದಿಗಳ ಕಾಟದಿಂದಾಗಿ ಜನತೆ ರೋಸಿ ಹೋಗಿದ್ದಾರೆ. ತ್ಯಾಗರಾಜ ನಗರದ ಹಳೇ ರವೀಂದ್ರ ಕಾಲೇಜು ಹತ್ತಿರ ಇರುವ ಕೆಲ ಪಾಳು ಬಿದ್ದ ಪೊಲೀಸ್ ಕ್ವಾರ್ಟರ್ಸ್‌ಗಳನ್ನೇ ವಾಸ ಸ್ಥಾನವನ್ನಾಗಿ ಮಾಡಿಕೊಂಡಿರುವ ಹಂದಿಗಳು ಆಗಾಗ ಪೊಲೀಸರ ವಸತಿಗೃಹಗಳಲ್ಲಿ ವಾಸಿಸುವ ಮಕ್ಕಳ ಮೇಲೆ ದಾಳಿ ಮಾಡಿದ ಅನೇಕ ಪ್ರಕರಣಗಳನ್ನು ಕಾಣಬಹುದು.

ಹಂದಿಗಳ ಕಾಟ, ಚರಂಡಿ ದುರ್ವಾಸನೆ ತಡೆಗಟ್ಟುವಲ್ಲಿ ಪುರಸಭೆ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಅನೇಕ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ಸಮಸ್ಯೆಗಳು ಇವತ್ತಿಗೂ ಬಗೆಹರಿದಿಲ್ಲ. ಪಟ್ಟಣದ ಉಡುಸಲಮ್ಮ ದೇವಾಸ್ಥಾನದ ಹಿಂಭಾಗದಲ್ಲಿ ಹೆಚ್ಚಾಗಿ ವಾಸಿಸುವ ಮುಸ್ಲಿಂ ಸಮುದಾಯದವರು ಇಲ್ಲಿನ ಚರಂಡಿ ಅಸ್ವಚ್ಛತೆಯ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೆಲವೆಡೆ ಬೀದಿಗಳಲ್ಲಿ ಅಳವಡಿಸಿರುವ ಬೀದಿ ದೀಪಗಳು  ಸಮಯದಲ್ಲಿ ಬೆಳಕು ಬೀರದಿದ್ದರೂ ಸಂಬಂಧಿಸಿದ ಇಲಾಖೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ವಾರ್ಡ್‌ನಿಂದ ಆರಿಸಿ ಬಂದಂತಹ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎನ್ನುತ್ತಾರೆ ಸಾರ್ವಜನಿಕರು.

ಬಿಆರ್‌ಜಿಎಫ್ ಯೋಜನೆ ಅಡಿಯಲ್ಲಿ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ ತಂದಿರುವ ಕಸ ಗುಡಿಸುವ ಯಂತ್ರ ಬೀದಿಗೆ ಬಂದು ರಸ್ತೆಯನ್ನು ಸ್ವಚ್ಛಗೊಳಿಸಿದ್ದು, ಕಡಿಮೆ. ಆದರೆ, ಜಿಲ್ಲಾಧಿಕಾರಿಗಳೇ ಕ್ರಿಯಾಯೋಜನೆ ರೂಪಿಸಿ ಜಿಲ್ಲೆಯ ಆರು ತಾಲ್ಲೂಕುಗಳಿಗೂ ಇಂತಹ ದುಬಾರಿ ಯಂತ್ರಗಳನ್ನು ತಂದಿದ್ದಾರೆ.

ಇದರಿಂದ ಮಾತ್ರ ಜನತೆಗೆ ಕಿಂಚಿತ್ತೂ ಉಪಯೋಗ ಆಗಿಲ್ಲ ಎಂದು ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.ಎಲ್ಲಾ ವಾರ್ಡ್‌ಗಳಲ್ಲಿಯೂ ಕುಡಿಯುವ ನೀರು, ರಸ್ತೆ, ಚರಂಡಿಯಂತಹ ಮೂಲಸೌಕರ್ಯಗಳಿಗೆ ಹಣ ಮೀಸಲಿರಿಸಿದರೂ ಇದುವರೆಗೂ ಸಮಸ್ಯೆಗಳು ಬಗೆಹರಿಯದೇ ಇರುವುದು ಯಕ್ಷಪ್ರಶ್ನೆಯಾಗಿಯೇ ಇದೆ.

ಒಂದು ನಿವಾಸಿ ದೃಢೀಕರಣ ಪತ್ರ ಬೇಕೆಂದು ಸಾರ್ವಜನಿಕರು ಪುರಸಭೆಗೆ ಕಾಲಿಟ್ಟರೆ ಸಾಕು ಇಲ್ಲಿನ ಕರ್ಮಕಾಂಡ ಬಯಲಾಗುತ್ತದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಸೋಮಗುದ್ದು ರಸ್ತೆ, ಮದಕರಿ ನಗರ, ಉಡುಸಲಮ್ಮನ ದೇವಾಲಯದ ಹಿಂಭಾಗ ಹಾಗೂ ರಹೀಂ ನಗರಗಳಲ್ಲಿ ಹೆಚ್ಚಾಗಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಪಾವಗಡ ರಸ್ತೆಯಲ್ಲಿ ಇರುವ ಹಳೇ ನಗರದ ಕೆಲ ನಿವಾಸಿಗಳು ಇವತ್ತಿಗೂ ಹೆಂಗಳೆಯರು, ಪುರುಷರು ಎನ್ನದೇ ಬಯಲು ಶೌಚಾಲಯಕ್ಕೆ ಮೊರೆಹೋಗುತ್ತಿರುವುದನ್ನು ಕಾಣಬಹುದು. ಇಲ್ಲಿ ನಿರ್ಮಿಸಲಾಗಿರುವ ಸಾಮೂಹಿಕ ಶೌಚಾಲಯ ಸರಿಯಾದ ನಿರ್ವಹಣೆಯಿಂದ ಕೂಡಿಲ್ಲ ಎನ್ನುವುದು ಇಲ್ಲಿನ ನಿವಾಸಿಗಳ ಆಳಲು.
ಒಟ್ಟಾರೆ, ಪಟ್ಟಣದ ಸ್ವಚ್ಛತೆ, ರಸ್ತೆ, ಬೀದಿ ದೀಪ, ಶೌಚಾಲಯಕ್ಕೆ ಅಂತ ಪ್ರತೀ ವರ್ಷ ಹಣ ಖರ್ಚಾಗುತ್ತಿದ್ದರೂ ಹೇಳಿಕೊಳ್ಳುವಂತಹ ಬದಲಾವಣೆಯನ್ನು ಮಾತ್ರ ಚಳ್ಳಕೆರೆ ಪಟ್ಟಣದಲ್ಲಿ ಕಂಡಿಲ್ಲ ಎನ್ನವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT