ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಮುಖಗಳು

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೇರಳದ ಕಡಲ ತೀರದಲ್ಲಿ ಒಂದೆರಡು ದಿನ ಆರಾಮವಾಗಿ ಇರೋಣವೆಂದು ಹೋಗಿದ್ದ ಸಮಯ. ಮಳೆಗಾಲ ಆಗಷ್ಟೇ ಮುಗಿದಿತ್ತು. ಹಿತವಾಗಿತ್ತು ಕಡಲ ತೀರ. ಹುಣ್ಣಿಮೆಯ ರಾತ್ರಿಯ ಕಡಲಿನ ಸೊಬಗನ್ನು ಸವಿಯುವುದು ಒಂದು ಸೌಭಾಗ್ಯವೇ ಸರಿ.

ಪ್ರಶಾಂತತೆ ಇರುವ ಆ ಸಮಯದಲ್ಲಿ ಸ್ಮರಣೆಗೂ ಬಿಡುವು. ದಿಗಂತದ ಚಂದ್ರನನ್ನು ವೀಕ್ಷಿಸುತ್ತಾ ದಂಡೆಯಲ್ಲೇ ಅದೆಷ್ಟೋ ಹೊತ್ತು ಕಳೆದ ನಂತರವೇ ಮಲಗಲು ಮನಸ್ಸಾಗಿದ್ದು. ವಿಶ್ರಾಂತಿ ಗೃಹದ ಸುಸಜ್ಜಿತ ಕೋಣೆಯಲ್ಲಿ ಎರಡು ಹೆಜ್ಜೆ ಇಟ್ಟಿದಷ್ಟೇ ನೆನಪು; ಗಾಢ ನಿದ್ರೆ.
 
ಎಚ್ಚರವಾದಾಗ ಅಪರಾಹ್ನ  ಕಳೆದಿತ್ತು. ವೇಳೆ ಎಷ್ಟಿರಬಹುದೆಂದು ಪಕ್ಕದಲ್ಲೇ ಕಡ್ಡಾಯ ಮೌನವ್ರತದಲ್ಲಿದ್ದ ಮೊಬೈಲಿನತ್ತ ಕಣ್ಣುಹಾಯಿಸಿದೆ. ಅದರ ಕೆಂಪು ದೀಪ ಮಿನುಗುತ್ತಿತ್ತು. ತಪ್ಪಿದ ಕರೆಗಳು, ತೆರೆಯದ ಸಂದೇಶಗಳ ಸೂಚನೆಗಳಿದ್ದವು, ಗುಂಡಿಯನ್ನು ಒತ್ತಿದೆ. ಕರೆ, ಸಂದೇಶಗಳ ನೀಳ ಪಟ್ಟಿಯೇ ಇಳಿಯಿತು; ಎಲ್ಲವೂ ದೊಡ್ಡಪ್ಪನಿಂದ ಬಂದಿದ್ದು.
 
ಹೊಟ್ಟೆ ಹಸಿದಿದ್ದರಿಂದ ಬೇಗ ಸ್ನಾನ ಮಾಡಿ ಭೋಜನಶಾಲೆಯತ್ತ ಧಾವಿಸಿದೆ. ಊಟದ ಸಮಯದಲ್ಲಿಯೇ ಮೊಬೈಲಿನಲ್ಲಿದ್ದ ಸಂದೇಶಗಳನ್ನು ತೆರೆದು ಓದಿದೆ. ಅಮೆರಿಕದಿಂದ ದೊಡ್ಡಪ್ಪನ ಒಬ್ಬಳೇ ಮಗಳು, ಹನ್ನೆರಡು ವರ್ಷಗಳ ನಂತರ ಬಂದಿದ್ದಾಳೆ ಎನ್ನುವುದೇ ವಿಶೇಷ ಸುದ್ದಿ. ಊಟ ಮಾಡಿ ಕೈ ತೊಳೆಯುವಷ್ಟರಲ್ಲಿ ಮತ್ತೆ ಅವರಿಂದ ಕರೆ.

`ದೊಡ್ಡಪ್ಪ, ಹೇಗಿದ್ದೀರಿ? ಎಲ್ಲವೂ ಆರಾಮ ತಾನೆ ? ನಿಮ್ಮನ್ನು ಹಿಡಿಯೊರೇ ಇಲ್ಲ ಬಿಡಿ, ಮಗಳು, ಅಳಿಯ ಮೊಮ್ಮಕ್ಕಳು ಎಲ್ಲರೂ ಹನ್ನೆರಡು ವರ್ಷದ ಅಜ್ಞಾತವಾಸದಿಂದ... ಅಲ್ಲ, ಅಮೆರಿಕವಾಸದಿಂದ ಬಂದಿದ್ದಾರೆ, ಭಾರೀ ಸಂಭ್ರಮವೇ ಇರಬೇಕು~ ಎಂದು ಅವರಿಗೆ `ಹಲೋ~ ಹೇಳಲು ಕೂಡ ಅವಕಾಶ ಕೊಡದೆ ಒಂದೇ ಉಸಿರಲ್ಲಿ ಮಾತಾಡಿದೆ.

`ಅಂತಹದ್ದೇನೂ ಇಲ್ಲಪ್ಪಾ... ರತ್ನ, ಮಕ್ಕಳು ಬಂದಿದ್ದಾರೆ. ಅಳಿಯ ಸದ್ಯದಲ್ಲಿಯೇ ಬರಲಿದ್ದಾರೆ~ ಎಂದರು. `ಸಂತೋಷ, ಮತ್ತೇನು, ಎಲ್ಲಾ ಒಳ್ಳೆಯ ಸುದ್ದಿಯೇ~ ಎಂದೆ.
`ಹೌದು, ಆದರೂ ರತ್ನ ಮತ್ತು ಅವಳ ಇಬ್ಬರು ಮಕ್ಕಳು ಯಾಕೋ ಸರೀಗಿಲ್ಲ ಅನಿಸುತ್ತದೆ, ಯಾರನ್ನು ಸರಿಯಾಗಿ ಮಾತಾಡಿಸುವುದಿಲ್ಲ, ನಾವೆಲ್ಲರೂ ಹೊಸಬರು ಎನ್ನುವ ಹಾಗೆ ನೋಡುತ್ತಾರೆ~ ಎಂದರು.

`ಪ್ರಯಾಣದ ಆಯಾಸವಿರಬಹದು. ವಿಮಾನಯಾನದ ಒತ್ತಡವಿದ್ದೇ ಇರುತ್ತದೆ~ ಎಂದೆ.
`ಇಲ್ಲ. ರತ್ನಳಂತೂ ನಮ್ಮಿಬ್ಬರ ಮುಖವನ್ನು ನೋಡಿಯೇ ಇಲ್ಲವೆನ್ನುವ ರೀತಿ ವರ್ತಿಸುತ್ತಾಳೆ. ಯಾರ ಮನೆಗೋ ಬಂದಿರುವ ಹಾಗೆ... 

ಅಜ್ಜಿ, ತಾತ ನೀವೆಷ್ಟು ಒಳ್ಳೆಯವರು ಎಂದೆಲ್ಲ ಫೋನಿನಲ್ಲಿ ಹೇಳುತ್ತಿದ್ದ ಅವಳ ಮಕ್ಕಳೀಗ ನಮ್ಮನ್ನು ನೋಡಿದರೂ ಸುಮ್ಮನಿದ್ದು ಬಿಡುತ್ತಾರೆ. ಆ... ಇಲ್ಲ, ಊ... ಇಲ್ಲ. ತುಂಬಾ ಹಿಂಸೆ ಎನ್ನಿಸುತ್ತಿದೆ. ನೀ ಊರಿಗೆ ಬಂದ ತಕ್ಷಣ ಅವರುಗಳನ್ನು ಮಾತಾಡಿಸು ಎಂದು ಹೇಳಲು ಅಷ್ಟೊಂದು ಸಲ ಫೋನ್ ಮಾಡಿದೆ. ತೊಂದರೆ ಇಲ್ಲ ತಾನೆ?~ ಎಂದರು.

`ದೊಡ್ಡಮ್ಮ ಹೇಗಿದ್ದಾರೆ?~ ಎಂದೆ.
`ಇದಾಳೆ, ರತ್ನ... ರತ್ನ... ಅಂತ ಕನವರಿಸುತ್ತಿದ್ದವಳು... ಈಗವಳು ಈ ಮುಖ ಗೊತ್ತೇ ಇಲ್ಲ ಅನ್ನೋ ರೀತೀಲಿ ಆಡ್ತಾಳೆ, ಆ ಮೊಮ್ಮಕ್ಕಳೂ ಅಷ್ಟೆ... ಎಲ್ಲವೂ ವಿಚಿತ್ರ... ಏನು ಅಮೆರಿಕಾನೋ...~ 

`ಊರಿಗೆ ಬಂದ ತಕ್ಷಣ ಬರ್ತೀನಿ. ಇದೆಲ್ಲ ವಿಮಾನ ಪ್ರಯಾಣದ ಪ್ರಭಾವ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ. ಆರಾಮಾಗಿರಿ~ ಎಂದು ಮಾತು ಮುಗಿಸಿದೆ.

ನನ್ನ ದೊಡ್ಡಪ್ಪ, ದೊಡ್ಡಮ್ಮನ ಒಬ್ಬಳೇ ಮಗಳು ರತ್ನ. ದೊಡ್ಡಪ್ಪ ಮಿಲಿಟರಿ ಇಂಜಿನಿಯರಿಂಗ್‌ನಲ್ಲಿ ಕೆಲಸಕ್ಕೆ ಇದ್ದವರು. ರತ್ನ ಹುಟ್ಟಿದಾಗಿನಿಂದಲೂ ಅವರಿಗೆ ಊರಿಂದ ಊರಿಗೆ ವರ್ಗವಾಗುತ್ತಿತ್ತು. ಅವಳ ವಿದ್ಯಾಭ್ಯಾಸ ಕೂಡ ಸರಾಗವಾಗಿರಲಿಲ್ಲ.
 
ಒಂದನೇ ಕ್ಲಾಸು ಒಂದೂರ್ಲ್ಲಲಿ, ಮೂರನೇ ಕ್ಲಾಸ್ ಇನ್ನೊಂದು ಊರಲ್ಲಿ. ಒಂದು ಕಡೆ ಕಲಿತಿದ್ದು ಇನ್ನೊಂದು ಕಡೆ ಮರೆತುಹೋಗುತ್ತಿತ್ತು. ಕೊನೆಗೆ ಮೈಸೂರಲ್ಲಿದ್ದ ಅಜ್ಜನ ಒತ್ತಾಯದಿಂದ ಅ್ಲ್ಲಲಿಯೇ ಪ್ರೌಢಶಾಲೆಗೆ ಸೇರಿದ್ದಳು. ಮದುವೆಯಾದಾಗ ಪಿಯುಸಿ ಕೂಡ ಮುಗಿಸಿರಲಿಲ್ಲ ಅವಳು. ಎಸ್‌ಎಸ್‌ಎಲ್‌ಸಿ ಪರೀಕ್ಷೇಲಿ ನಕಲು ಮಾಡಿದಳು ಎಂದು ಪರೀಕ್ಷೆಯಿಂದ ಹೊರಗೆ ಹಾಕಿಸಿಕೊಂಡಳು.

ಮರು ವರ್ಷ ಖಾಸಗಿಯಾಗಿ ಬರೆದಳು ಅನ್ನಿಸುತ್ತೆ. ಅಜ್ಜನ ಮನೆಯ ಪಕ್ಕದಲ್ಲಿದ್ದ ರವಿಯ ಭೇಟಿ ಆದದ್ದು ಇದೇ ಸಮಯದಲ್ಲಿ. ಅವನನ್ನೇ ಪ್ರೀತಿಸಿ ಮದುವೆಯಾದಳು. ಆಗವಳಿಗೆ ಹತ್ತೊಂಬತ್ತೂ ತುಂಬಿರಲಿಲ್ಲ. ರವಿ ಅವಳಿಗಿಂತಲೂ ಹತ್ತು ವರ್ಷ ದೊಡ್ಡವನು.

ವೈದ್ಯವಿಜ್ಞಾನದ ವಿಷಯದಲ್ಲಿ ಡಾಕ್ಟರೇಟು ಪಡೆದಿದ್ದ ಅವನಿಗೆ ಮೈಸೂರಲ್ಲಿಯೇ ಉದ್ಯೋಗ ದೊರೆತಿತ್ತು. ಮದುವೆಯಾದ ಒಂದೆರಡು ತಿಂಗಳಲ್ಲೇ ಜರ್ಮನಿಯ ಸಂಸ್ಥೆಯೊಂದರಲ್ಲಿ ಸಂಶೋಧನೆಗೆ ಆಹ್ವಾನ ಬಂದಿದ್ದರಿಂದ ಹೆಂಡತಿಯೊಂದಿಗೆ ಅಲ್ಲಿಗೆ ತೆರಳಿದ.
 
ಅದಾದ ಮೂರು ವರ್ಷಗಳ ನಂತರ ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ಅಧ್ಯಾಪಕನಾಗಿ ವೃತ್ತಿ ಆರಂಭಿಸಿ ಅಲ್ಲಿಯೇ ನೆಲೆಸಿದ್ದಾನೆ. ರತ್ನಳು ಸಹ ಅಮೆರಿಕದ ವಿಶ್ವವಿದ್ಯಾಲಯ ಒಂದರಿಂದ ಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾಳೆ.

ಕೆಂಟಕಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಈ ಮಧ್ಯೆ ಒಂದೆರಡು ಸಲ ಕೆಲಸದ ನಿಮಿತ್ತ ಭಾರತಕ್ಕೆ ಇಬ್ಬರೂ ಬಂದಿದ್ದರಾದರೂ ಒಂದೆರಡು ದಿನಗಳಷ್ಟೇ ಮನೆಯವರೊಂದಿಗೆ ಇರಲು ಸಾಧ್ಯವಾಗಿತ್ತು. ಮಕ್ಕಳಿಗೆ ರಜೆ ಇರದಿದ್ದ ಕಾರಣ ಅವರನ್ನು ಅಲ್ಲಿಯೇ ಬಿಟ್ಟು ಬಂದಿದ್ದರು.

ರತ್ನ, ರವಿ ಇದೀಗ ಕುಟುಂಬ ಸಮೇತ ಅಪ್ಪ-ಅಮ್ಮನ ಜೊತೆಗಿರಲು ಬಂದಿದ್ದಾರೆ. ಇಂತಹ ಸಮಯದಲ್ಲಿ ದೊಡ್ಡಪ್ಪ ಅದೇಕೆ ಹೀಗಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಅವರಿಗೆ ಇತ್ತೀಚೆಗೆ ಪಾರ್ಶ್ವವಾಯುವಾಗಿತ್ತು. ನಂತರ ಮರೆವು ಕೊಂಚ ಹೆಚ್ಚಾಗಿದೆ. ಆದರೆ ಈ ಸಮಯದಲ್ಲಿ ಏಕೆ ಹೀಗೆ ಎಂದು ಆಲೋಚಿಸುತ್ತಾ ಮತ್ತೆರಡು ದಿನಗಳನ್ನು ಆರಾಮವಾಗಿಯೇ ಕಳೆದೆ.

***
ಪ್ರವಾಸ ಮುಗಿಸಿ ಬಂದ ಎರಡು ಮೂರು ದಿನಗಳ ನಂತರ ಒಂದು ಭಾನುವಾರ ಅವರೆಲ್ಲರನ್ನು ನೋಡಲು ದೊಡ್ಡಪ್ಪನ ಮನೆಗೆ ಬೆಳಗ್ಗೆಯೇ ಹೋದೆ. ಕುವೆಂಪು ನಗರದಲ್ಲಿರುವ ಅವರ ಮನೆಯ ಆವರಣದಲ್ಲಿ ಅಡ್ಡಾಡುತ್ತಿದ್ದ ರವಿ ಬಹಳ ಆತ್ಮೀಯವಾಗಿಯೇ ಬರಮಾಡಿಕೊಂಡ.

ಅಲ್ಲೇ ಇದ್ದ ಮಕ್ಕಳನ್ನು ಹತ್ತಿರ ಕರೆದು- `ಇವರು, ಗುರು ಮಾವ, ನಿಮ್ಮಮ್ಮನ ಅಣ್ಣ~ ಎನ್ನುತ್ತಾ, `ನನ್ನ ಮಗಳು ಅನು, ಮಗ ಅಭಿ~ ಎಂದು ಪರಿಚಯಿಸಿದ. ಮುದ್ದುಮುದ್ದಾಗಿ ಕನ್ನಡ ಮಾತಾಡುತ್ತಾ ಕೈ ಕುಲುಕಿದರು. ಕೊಂಚ ಸಮಯ ಹಾಗೆಯೇ ನನ್ನ ಕೈ ಹಿಡಿದುಕೊಂಡಿದ್ದರು. ಆತ್ಮೀಯತೆಯನ್ನು ಮೂಡಿಸುವ ಸ್ಪರ್ಶವೆನಿಸಿತು.
 
ಕುಶಲ ಪ್ರಶ್ನೆ ಕೇಳುತ್ತಾ ಐದಾರು ಸಲ ನನ್ನನ್ನು ನೆತ್ತಿಯಿಂದ ಕಾಲಿನವರೆಗೂ ಗಮನವಿಟ್ಟು ನೋಡಿದರು. ಈ ಅಮೆರಿಕದ ಮಕ್ಕಳು ಪ್ರತಿಯೊಂದನ್ನು ಗಮನಿಸುತ್ತಾರೆ ಎಂದುಕೊಂಡೆ. ಅಷ್ಟರಲ್ಲಿ ದೊಡ್ಡಮ್ಮ, ದೊಡ್ಡಪ್ಪ ಮತ್ತು ಅವರೊಂದಿಗೆ ರತ್ನ ಬಂದಳು.
 
ಬಹಳ ವರ್ಷಗಳಾಗಿದ್ದರಿಂದಲೋ ಏನೋ ಅವಳನ್ನು ಗುರುತಿಸುವುದು ಕಷ್ಟವಾಗಿತ್ತು. ಹತ್ತಿರ ಬಂದು ನಿಂತು `ಚೆನ್ನಾಗಿದ್ದಿಯಾ, ಗುರಣ್ಣ?~ ಎನ್ನುತ್ತಾ ಆತ್ಮೀಯವಾಗಿ ಅಪ್ಪಿಕೊಂಡಳು. ಮತ್ತೆ ಕೈಕುಲುಕಿ ಅವಳ ಮಕ್ಕಳು ಮಾಡಿದ ರೀತಿಯಲ್ಲಿಯೇ ನನ್ನ ಬೆರಳುಗಳನ್ನು ಸವರಿ ಆಪಾದಮಸ್ತಕ ನೋಡಿದಳು.

`ಬಾರಪ್ಪ ಒಳಕ್ಕೆ~ ಅಂತ ದೊಡ್ಡಮ್ಮ ಕರೆದರು. ಎಲ್ಲರೂ ಅವರನ್ನು ಹಿಂಬಾಲಿಸಿದೆವು.
ಅನು, ಅಭಿ ಮಾತಾಡುತ್ತಿದ್ದ ರೀತಿ ನೋಡಿದರೆ ನಮ್ಮ ಕುಟುಂಬದವರೆಲ್ಲರ ಬಗ್ಗೆಯೂ ಅವರಿಗೆ ಗೊತ್ತಿದೆ ಎನಿಸಿತು. ಅಷ್ಟರಲ್ಲಿ ರವಿ ಮಕ್ಕಳತ್ತ ನೋಡುತ್ತಾ-
`ಅಜ್ಜಿಗೆ ಇಷ್ಟವಾದ ತಿಂಡಿ ಯಾವುದು, ಅಭಿ?~ ಎಂದ.

ತಕ್ಷಣವೇ `ಸಜ್ಜಿಗೆ~ ಎಂದ. `ತಾತನಿಗೆ?~ ಎಂದು ರತ್ನ ಕೇಳಿದಳು `ಕೋಡುಬಳೆ~ ಅಂದಳು ಅನು.
ಅಜ್ಜ ಕೆಲಸ ಮಾಡುತ್ತಿದ್ದ ಎಲ್ಲಾ ಊರುಗಳ ಹೆಸರು ಅವರಿಗೆ ತಿಳಿದಿತ್ತು.
ನನಗಂತೂ ತುಂಬಾ ಸಂತೋಷವಾಯಿತು. ದೊಡ್ಡಪ್ಪನತ್ತ ಹುಸಿ ಸಿಟ್ಟಿನಿಂದ ನೋಡುತ್ತಾ- `ಏನು ದೊಡ್ಡಪ್ಪ, ಏನೇನೋ ಹೇಳಿದ್ದಿರಿ, ಹಾಗೇನು ಇಲ್ವಲ್ಲ?~ ಎಂದೆ.

ದೊಡ್ಡಪ್ಪ ಬಹಳ ಮುಜುಗರದಿಂದ `ಇಲ್ಲ ಗುರು, ಆಗ ಹಾಗನ್ನಿಸಿದ್ದು ನಿಜ. ಇವರುಗಳ ವರ್ತನೆಯೇ ವಿಚಿತ್ರವಾಗಿತ್ತು. ರವಿ ಬಂದ ಮೇಲೆ ಎಲ್ಲವೂ ಬೇರೆಯೇ ಆಗಿದೆ. ರವಿ ಬಂದು ಎರಡು ದಿನವಾಯಿತು. ಒಂದು ಕ್ಷಣವಾದರೂ ನಾವುಗಳು ಒಬ್ಬರನ್ನೊಬ್ಬರು ಬಿಟ್ಟಿದ್ದಿಲ್ಲ~ ಎಂದರು.

ಇಷ್ಟೆಲ್ಲಾ ಮಾತುಕತೆಯೊಂದಿಗೆ ಊಟವೂ ಮುಗಿದಿತ್ತು.
ಊಟವಾದ ನಂತರ, ಎಲ್ಲರೂ ಒಟ್ಟಿಗೆ ಕೂತು ನೆಂಟರಿಷ್ಟರ ಬಗ್ಗೆ ಮಾತಾಡುತ್ತಿದ್ದಾಗ ನಾನು ಹೇಳಿದೆ- `ದೊಡ್ಡಪ್ಪ, ಅದೇನು ರತ್ನ ನಿಮ್ಮ ಮುಖ ನೋಡದೇ ಇರುವವಳಂತೆ ಆಡುತ್ತಾಳೆ ಎಂದು ಆತಂಕದಿಂದ ಕರೆ ಮಾಡಿದಿರಿ. ಇಲ್ಲಿ ನೋಡಿದರೆ ಅಂತಹದ್ದೇನು ಇಲ್ಲ. ನಿಮ್ಮ ಆರೋಗ್ಯ ಸರಿಯಿದೆ ತಾನೆ? ಔಷಧಿಗಳನ್ನು ತಪ್ಪದೆ ಸರಿಯಾದ ಸಮಯಕ್ಕೆ ತೆಗೆದುಕೊಳ್ಳುತ್ತಿದ್ದೀರಾ?~.
ದೊಡ್ಡಪ್ಪ, ದೊಡ್ಡಮ್ಮನ ಮುಖ ನೋಡಿದರು.

ದೊಡ್ಡಮ್ಮ ಹೇಳಿದರು- `ರತ್ನ, ಮೊಮ್ಮಕ್ಕಳು ತುಂಬಾ ಆತ್ಮೀಯವಾಗಿದ್ದಾರೆ. ಆದರೂ ಒಮೊಮ್ಮೆ ಅವರ ಸ್ವಭಾವ ಅರ್ಥವೇ ಆಗೊಲ್ಲ. ಅಮೆರಿಕದ ಪ್ರಭಾವ ಇರಬಹುದು. ಎಷ್ಟೋ ವರ್ಷಗಳಾದ ಮೇಲೆ ಮುಖ ನೋಡಿದರೆ ಏನು ತಿಳಿಯತ್ತೆ? ನೀನೇ ಹೇಳು? ಅದೂ ಅಲ್ಲದೆ ನೀನೊಬ್ಬ ಮನೋತಜ್ಞ. ನಿನಗೆ ಇವೆಲ್ಲ ಚೆನ್ನಾಗಿ ಗೊತ್ತಾಗಬಹುದು~ ಎಂದುಬಿಟ್ಟರು.

ಈ ಮಾತುಗಳೆಲ್ಲವನ್ನು ತದೇಕ ಚಿತ್ತದಿಂದ ರತ್ನ, ಅನು, ಅಭಿ ಕೇಳಿಸಿಕೊಂಡರು.
ರತ್ನ ಏನೋ ಹೇಳಬೇಕೆಂದು ಬಾಯಿ ತೆರೆದಳು. ಅಷ್ಟರಲ್ಲಿ ರವಿ, `ಮಾವ ಹೇಳಿದ್ದು ನಿಜವೇ~ ಎನ್ನುತ್ತಾ ರತ್ನಳತ್ತ ನೋಡಿದ.

`ಹೌದು, ದೊಡ್ಡ ಸಮಸ್ಯೆಯೇ ಇದೆ~. ಅವಳ ಬಾಯಿಂದ ಈ ಮಾತು ಬರುತ್ತಿದ್ದಂತೆಯೇ ದೊಡ್ಡಮ್ಮ ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. 

`ನಿನಗೆ, ನಾವು ಬೇಡವಾಗಿದ್ದರೆ, ಇಷ್ಟು ದಿನ ಬಾರದಿದ್ದವಳು ಈಗೇಕೆ ಬಂದೆ? ನಮ್ಮ ಸಂಕಟ ಹೆಚ್ಚಿಸಲಿಕ್ಕಾ?~ ಎಂದು ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. ದೊಡ್ಡಪ್ಪ ಚಡಪಡಿಸಿದರು. ಅವರ ಕಣ್ಣಲ್ಲೂ ನೀರು ತುಂಬಿತ್ತು. ಅಭಿ, ಅನು `ಸಾರಿ ಅಜ್ಜಿ, ಅಳಬೇಡಿ, ಅಳಬೇಡಿ~ ಎನ್ನುತ್ತಾ ಉಮ್ಮಳಿಸುತ್ತಿದ್ದ ಅಳುವನ್ನು ತಡೆದುಕೊಂಡರು. ರತ್ನಳ ಮುಖ ಪೆಚ್ಚಗಾಗಿತ್ತು.

ಇದ್ಯಾಕೋ ಸರಿಯಿಲ್ಲ ಎನಿಸಿತು. `ಊಟ ಆದಮೇಲೆ ಯಾಕೆ ಬೇಸರ? ನಾನಿನ್ನು ಹೊರಡ್ತೀನಿ~ ಎನ್ನುತ್ತಾ ಎದ್ದು ನಿಂತೆ.

ಆತನಕ ಸುಮ್ಮನಿದ್ದ ರವಿ, `ಡಾಕ್ಟ್ರೇ ಕೂತ್ಕೊಳಿ, ಮಾತಾಡೋದಿದೆ~ ಅಂದ.
ರವಿಯಿಂದ ಇಂತಹ ಮಾತುಗಳನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ಕೊಂಚ ಭಯವೇ ಆಯಿತು, ದೊಡ್ಡಮ್ಮ, ದೊಡ್ಡಪ್ಪನ ಮುಖದಲ್ಲಿ ಬೆವರಿನ ಹನಿಗಳು ಕಾಣಿಸಿಕೊಂಡಿತು.
ಸಿಟ್ಟಿನಿಂದಲೇ ದೊಡ್ಡಪ್ಪ ರವಿಯತ್ತ ಮುಖ ಮಾಡಿ ಕೇಳಿಯೇ ಬಿಟ್ಟರು- `ನನ್ನ ಎಳೆಯ ಮಗಳನ್ನು ಹಾರಿಸಿಕೊಂಡು ಹೋದಿರಿ. ಈಗ ಸಮಸ್ಯೆ ಇದೆ ಅಂತೀರಿ, ಇದಕ್ಕೆಲ್ಲ  ನೀವೇ ಕಾರಣ~ ಎನ್ನುತ್ತಾ ಎದ್ದು ನಿಂತರು.

`ಮಾವಯ್ಯ, ನಾನು ಆ ರೀತಿಯಲ್ಲಿ ಹೇಳಲಿಲ್ಲ. ರತ್ನಳೇ ಎಲ್ಲವನ್ನೂ ಹೇಳುತ್ತಾಳೆ, ಸಮಾಧಾನದಿಂದ ಕೇಳಿಸಿಕೊಳ್ಳಿ~ ಎನ್ನುತ್ತಾ ದೊಡ್ಡಪ್ಪನನ್ನು ಸೋಫಾದ ಮೇಲೆ ನಿಧಾನವಾಗಿ ಕೂರಿಸಿದ ರವಿ ಮಾತಾಡುವಂತೆ ರತ್ನಳಿಗೆ ಸೂಚಿಸಿದ.

`ಅಪ್ಪ, ಅಮ್ಮ ಹೇಳುವುದೆಲ್ಲ ನಿಜ ಗುರಣ್ಣ. ನನಗೆ, ನನ್ನ ಮಕ್ಕಳಿಗೆ ಒಂದು ಸಮಸ್ಯೆ ಇದೆ~ ಎಂದಳು ರತ್ನ.

`ಏನಮ್ಮಾ ಅಂತಹ ದೊಡ್ಡ ಸಮಸ್ಯೆ?~. ದೊಡ್ಡಪ್ಟ-ದೊಡ್ಡಮ್ಮ ಒಮ್ಮೆಗೇ ಕೇಳಿದರು.
`ನನಗೆ, ಅಭಿಗೆ, ಅನುಗೆ ಮುಖ ಗುರುತಿಸಲು ಆಗುವುದೇ ಇಲ್ಲ~ ಎಂದಳು ಸಣ್ಣನೆ ದನಿಯಲ್ಲಿ ರತ್ನ.

`ಹುಚ್ಚುಹುಚ್ಚಾಗಿ ಮಾತಾಡಬೇಡ. ಸಣ್ಣವಳಾಗಿದ್ದಾಗಲೂ ನೀನು ಹೀಗೆಯೇ ಅಹಂಕಾರದಿಂದ ಮಾತನಾಡುತ್ತಿದ್ದೆ~ ಎಂದರು ದೊಡ್ಡಮ್ಮ. ಅಷ್ಟರಲ್ಲಿ ರವಿ, `ಇಲ್ಲ, ಅವಳು ಹೇಳುತ್ತಿರುವುದನ್ನು ಕೇಳಿಸಿಕೊಳ್ಳಿ, ಪ್ಲೀಸ್~ ಎಂದ.

`ದೊಡ್ಡಮ್ಮ, ಸ್ವಲ್ಪ ಸುಮ್ಮನಿರಿ, ಅವಳ ಸಮಸ್ಯೆ ಏನೆಂದು ತಿಳಿದುಕೊಳ್ಳೋಣ~ ಎಂದೆ.
ರತ್ನ ಮತ್ತೆ ಮಾತಾಡಲು ಶುರು ಮಾಡಿದಳು. `ನನಗೆ, ನನ್ನ ಮಕ್ಕಳಿಗೆ ಬದುಕಲು ದಾರಿ ತೋರಿಸುತ್ತಾ ಇರುವವರೇ ರವಿ. ದೇವರು ಅಂತಿದ್ದರೆ ಅವರೇ ಇವರು~ ಎನ್ನುತ್ತಾ ಅತ್ತಳು. ಅವಳ ಜೊತೆಯಲ್ಲಿ ಮಕ್ಕಳೂ ಅತ್ತರು.

ಈಗ ಅನು ಮಾತನಾಡತೊಡಗಿದಳು.`ನನಗೂ, ಅಭಿಗೂ, ಅಮ್ಮನಿಗೂ ಮುಖ ಗುರುತಿಸಲು ಆಗದಂತಹ ಒಂದು ರೋಗ ಇದೆ. ಈ ರೋಗ ಇರುವವರು ಜನಗಳ ಮುಖಗಳನ್ನ ಗುರುತಿಸಲಿಕ್ಕೆ ಆಗುವುದಿಲ್ಲ. ಅಷ್ಟೇಕೆ, ನನ್ನ ಮುಖವನ್ನು ಗುರುತಿಸುವುದೇ ನನಗೆ ಸಾಧ್ಯವಿಲ್ಲ~ ಎಂದಳು.
ಭೀಕರ ಮೌನ ಆ ಕೋಣೆಯನ್ನು ಆವರಿಸಿತು.

ದೊಡ್ಡಮ್ಮ, ದೊಡ್ಡಪ್ಪನಿಗೆ ಜಂಘಾಬಲವೇ ಉಡುಗಿಹೋಯಿತು. ತುಟಿ ಅದರುತ್ತಿದ್ದುದನ್ನು ಗಮನಿಸಿ ನೀರು ಕುಡಿಯಲು ಹೇಳಿದೆ. ಅಭಿ ಎದ್ದು ಹೋಗಿ ನೀರು ತಂದುಕೊಟ್ಟ.
ರತ್ನ ಮತ್ತೆ ಮಾತಾಡಲು ಶುರುಮಾಡಿದಳು.
 
`ಸಣ್ಣ ಹುಡುಗಿಯಾಗಿದ್ದಾಗಂತೂ ಅಪ್ಪನ ಧ್ವನಿ, ಅಮ್ಮನ ಧ್ವನಿ ಎನ್ನುವುದರ ಮೂಲಕವೇ ಗುರುತಿಸುತ್ತಿದ್ದೆ. ಅವರು ಮಾತಾಡಿದರೆ ಮಾತ್ರ ಇದು ಅಮ್ಮ, ಇದು ಅಪ್ಪ ಎನ್ನುವುದು ಗೊತ್ತಾಗುತ್ತಿತ್ತು. ಅಜ್ಜಿ, ತಾತನನ್ನೂ ಅವರ ಮೈ ವಾಸನೆ, ನಶ್ಯದ ವಾಸನೆ ಮೂಲಕವೇ ಗುರುತಿಸುತ್ತಿದ್ದೆ~ ಎಂದಳು.

ಅಲ್ಲಿಯವರೆಗೆ ಸುಮ್ಮನಿದ್ದ ರವಿ ನಗುತ್ತಾ ಹೇಳಿದ- `ಇವಳನ್ನೊಮ್ಮೆ ಮಹಾರಾಣಿ ಕಾಲೇಜು ಎದುರಿಗೆ ಸಿಕ್ಕಿ ಮಾತಾಡಿಸಿದ್ದೆ. ಹತ್ತೇ ನಿಮಿಷಗಳ ನಂತರ ಅದೇ ರಸ್ತೆಯ ಕೊನೆಯಲ್ಲಿದ್ದ ಬಸ್‌ಸ್ಟಾಪಿನಲ್ಲಿ ನಿಂತಿದ್ದಳು. ಅವಳ ಎದುರಿಗೇ ಹೋಗಿ ನಿಂತೆ.
 
ಮುಖ ಪಕ್ಕಕ್ಕೆ ತಿರುಗಿಸಿಕೊಂಡಳು. ಮಾತಾಡದೇ ಮತ್ತೆ ಅವಳ ಪಕ್ಕದಲ್ಲಿ ನಿಂತೆ. ಅಲ್ಲಿಂದ ದೂರ ಸರಿದಳು. ರತ್ನ ಏನು ನಾಟಕ ಆಡ್ತಿದ್ದೀಯಾ ಎಂದೆ. ಅತ್ತೇ ಬಿಟ್ಟಳು. ಈಗಲೂ ಸಹ ಇಂತಹದ್ದು ನಡೆಯುತ್ತಲೇ ಇರುತ್ತದೆ~ ಎಂದರು.

`ಅಜ್ಜಿ ಮನೆಯಲ್ಲಿದ್ದಾಗ ನನ್ನ ಸಂಕಟ ಹೇಳತೀರದು. ನನ್ನ ಮುಖವನ್ನು ಕನ್ನಡಿಯಲ್ಲಿ ಎಷ್ಟು ಸಲ ನೋಡಿಕೊಂಡರೂ ನೆನಪಿಗೆ ಬರುತ್ತಿರಲಿಲ್ಲ. ಎಷ್ಟೋ ಸಲ ಶಾಲೆಯಲ್ಲಿ ಬೇರೆಯವರ ಗುರುತಿನ ಚೀಟಿಯನ್ನು ನನ್ನದೆಂದು ತೆಗೆದು ಇರಿಸಿಕೊಳ್ಳುತ್ತಿದ್ದೆ.

ಯಾರ‌್ಯಾರನ್ನೋ ಮಾತಾಡಿಸುತ್ತಿದ್ದೆ. ಇಂತಹದೊಂದು ಕಾರಣಕ್ಕೆ ನನ್ನನ್ನು ಪರೀಕ್ಷೆಯ ಕೋಣೆಯಿಂದ ಹೊರಹಾಕಿದ್ದರು. ಸಹಪಾಠಿಗಳು ನನ್ನನ್ನು ಸುಳ್ಳಿ, ಕಳ್ಳಿ ಎಂದೇ ಕರೆಯುತ್ತಿದ್ದರು. ಇವೆಲ್ಲವನ್ನೂ ಸಹಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದೆ. ಆ ಸಮಯದಲ್ಲಿ ರವಿ ನನಗೆ ಆತ್ಮೀಯರಾದರು. ನನ್ನ ಎಲ್ಲಾ ಶಕ್ತಿಯನ್ನು ಅವರತ್ತ ಹರಿಸಿದೆ.

ಅವರ ಪ್ರತಿಯೊಂದು ಚಲನವಲನ ನನಗೆ ಗೊತ್ತಾಗುತ್ತಿತ್ತು. ಮುಖ ಮಾತ್ರ ಇಲ್ಲ. ಹೀಗಾಗಿ ಅವರಿಗೆ ತುಂಬಾ ಹತ್ತಿರದವಳಾದೆ. ಮದುವೆಯಾದ ಮೇಲಂತೂ ಅವರೇ ನನ್ನ ಜೀವಾಳ~ ಎಂದಳು ರತ್ನ.

`ನನ್ನ ಅದೃಷ್ಟವೋ ಏನೋ. ಇವಳಿಗೆ ಮತ್ತು ಮಕ್ಕಳಿಗೆ ಅಪಾರವಾದ ಬುದ್ಧಿಶಕ್ತಿಯಿದೆ. ಮುಖವೊಂದನ್ನು ಬಿಟ್ಟು ಮತ್ತೇನನ್ನು ಬೇಕಾದರೂ ಜ್ಞಾಪಕದಲ್ಲಿ ಇರಿಸಿಕೊಳ್ಳಬಲ್ಲರು. ಆದುದರಿಂದಲೇ ಪ್ರತಿಯೊಂದು ಪರೀಕ್ಷೆಯಲ್ಲೂ ಅತ್ಯುತ್ತಮ ಅಂಕಗಳನ್ನು ಗಳಿಸುತ್ತಾರೆ~ ಎಂದು ರವಿ ಮಕ್ಕಳ ಜಾಣತನವನ್ನು ಕೊಂಡಾಡಿದ.

ರತ್ನ ಮಾತು ಮುಂದುವರಿಸಿದಳು- `ಮದುವೆಗೆ ಮುಂಚೆ ಸ್ನೇಹಿತರು ಎಂದರೆ ಭಯವಾಗುತ್ತಿತ್ತು. ಯಾವ ಮುಖವನ್ನೂ ಗುರುತಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಯಾರನ್ನೋ ನೋಡಿ ಏನನ್ನೋ ಹೇಳೋದು, ಕ್ಷಣದ ಹಿಂದೆ ಮಾತಾಡಿಸಿದವರನ್ನು ನೋಡದಂತೆ ಸುಮ್ಮನಿರುವುದು ಆಭಾಸಕ್ಕೆ ಕಾರಣವಾಗುತ್ತಿತ್ತು.
 
ಅಂತಹ ಸನ್ನಿವೇಶಗಳಲ್ಲಿ ನೆರವಿಗೆ ಬರುತ್ತಿದ್ದವರು ಎಂದರೆ ರವಿ. ನಮ್ಮೆಲ್ಲರ ಬದುಕು ಹಸನಾಗುವಂತೆ ಮಾಡಿದವರು ಅವರೇ. ವ್ಯಕ್ತಿಗಳನ್ನು ಗುರುತಿಸುವುದಕ್ಕೆ ಅವರ ಬಟ್ಟೆ, ಮುಖಭಾವ, ಮೀಸೆ, ಗಡ್ಡ, ಕೂದಲು, ಕಿವಿ, ಮೂಗು, ನಡೆಯುವ ರೀತಿ, ಕೂರುವ ರೀತಿ, ಕೈಕುಲುಕುವ ರೀತಿ, ಅವರು ಧರಿಸುವ ಟೈ, ಪಾದರಕ್ಷೆ, ಸೊಂಟದ ಬೆಲ್ಟ್, ಗಡಿಯಾರ..., ಹೀಗೆ ಒಂದ್ಲ್ಲಲಾ ಒಂದು ವಸ್ತುವನ್ನು ಚೆನ್ನಾಗಿ ನೆನಪಿಟ್ಟುಕೊಂಡು ಅದನ್ನು ವ್ಯಕ್ತಿಯ ಹೆಸರಿಗೆ ಜೋಡಿಸುವುದನ್ನು ಕಲಿಸಿಕೊಟ್ಟರು.
 
ನನ್ನ ಮಕ್ಕಳಿಗೂ ಅದೇ ಪಾಠ. ಬಂದ ದಿನ ಅಜ್ಜ ಅಜ್ಜಿಯ ಗುರುತುಗಳು ಅವರ ಹಿಡಿತಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಗುರುತಿಸುವುದು ಕಷ್ಟವಾಗುತ್ತಿತ್ತು. ಈಗ ಅಭ್ಯಾಸವಾಗಿದೆ. ಅವರ ಮಾತು, ಹೆಜ್ಜೆಯ ರೀತಿ, ಉಸಿರಾಟದ ಕ್ರಮಗಳ ಮೂಲಕವೇ ಅವರನ್ನು ಸರಿಯಾಗಿ ಗುರುತಿಸಬಲ್ಲೆವು~ ಎಂದಳು.

ಅಭಿ, ಅನು ಅವರತ್ತ ನೋಡುತ್ತಾ- `ಶಾಲೆಯಲ್ಲಿ ನಿಮ್ಮ ಸಹಪಾಠಿಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲವಲ್ಲ. ಯಾರಾದರೂ ಕೀಟಲೆ, ಮೋಸ ಮಾಡಿದರೆ ಏನು ಮಾಡುತ್ತೀರಿ~ ಎಂದೆ. ಅನು ಹೇಳಿದಳು, `ಬೇಕಾದಷ್ಟು ಸಲ ಮೋಸ ಹೋಗ್ದ್ದಿದೇವೆ.

ಆದರೆ, ಇತ್ತೀಚೆಗೆ ಅಪ್ಪ ನಮ್ಮೆಲ್ಲರಿಗೂ ಅತಿ ಸೂಕ್ಷ್ಮದ ಕಿರು ಕ್ಯಾಮೆರಾ ಕೊಡಿಸಿದ್ದಾರೆ. ಅದನ್ನು ತಪ್ಪದೇ ಚಾಲು ಸ್ಥಿತಿಯಲ್ಲಿ ಇರಿಸಿಕೊಂಡಿರುತ್ತೇವೆ. ನಾವು ಭೇಟಿ ಮಾಡಿದವರ ಚಿತ್ರ ಸಂಗ್ರಹವಾಗಿರುತ್ತದೆ. ಧ್ವನಿಯೂ ಸಂಗ್ರಹವಾಗುತ್ತದೆ. ಇವೆಲ್ಲವನ್ನು ನಮ್ಮ ದೊಡ್ಡ ಕಂಪ್ಯೂಟರಿಗೆ ವರ್ಗಾಯಿಸಿ ಉಗ್ರಾಣವೊಂದರಲ್ಲಿ ಸುಭದ್ರವಾಗಿ ಇಡುತ್ತೀವಿ.

ಈಗಲೂ ಅದನ್ನೇ ಮಾಡುತ್ತ್ದ್ದಿದೇವೆ. ಅಮ್ಮ, ಅಭಿ ಇಬ್ಬರೂ ಈ ಸನ್ನಿವೇಶವನ್ನೆಲ್ಲ ಚಿತ್ರೀಕರಿಸಿಕೊಂಡಿದ್ದಾರೆ~ ಎನ್ನುತ್ತಾ ಜೇಬಿನಿಂದ ಸಣ್ಣದೊಂದು ಲೇಖನಿಯನ್ನು ತೆಗೆದು ಅದರಲ್ಲಿ ಸಂಗ್ರಹವಾಗಿದ್ದ ಮಾಹಿತಿಗಳನ್ನು ಮೊಬೈಲ್‌ಗೆ ರವಾನಿಸಿದಳು. `ಇಷ್ಟೆಲ್ಲಾ ಆದರೂ ಇದರಲ್ಲಿರುವ ಮುಖ ಗುರುತಿಸಲು ಆಗದು... ಆದರೇನಂತೆ ಬೇರೆ ಲಕ್ಷಣಗಳು ಇವೆಯಲ್ಲಾ~ ಎಂದು ನಕ್ಕಳು.

`ಇದೊಂದು ಮಿದುಳಿಗೆ ಸಂಬಂಧಿಸಿದ ರೋಗವೆನ್ನುತ್ತಾರೆ. ಇದು ಅನುವಂಶಿಕವಾಗಿರುವ ಸಾಧ್ಯತೆಗಳೇ ಹೆಚ್ಚು. ಸದ್ಯದಲ್ಲಿ ಇದಕ್ಕೆ ಚಿಕಿತ್ಸೆ ಇಲ್ಲ. ಇದರಿಂದ ಬಳಲುತ್ತಿರುವವರ ಸಂಖ್ಯೆಯ ಅಂದಾಜೂ ಇಲ್ಲ. ಇದನ್ನು ಮುಖ ಗುರುತಿಸಲಾಗದ ಕುರುಡು ಅಥವಾ ಪ್ರೊಸೊಪಗ್ನೊಸಿಯ ಎನ್ನುತ್ತಾರೆ~ ಎಂದು ರವಿ ನನ್ನ ಮುಖ ನೋಡುತ್ತಾ ಹೇಳಿದ.

ಈ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ದೊಡ್ಡಪ್ಪ, ದೊಡ್ಡಮ್ಮ ಬಿಕ್ಕಿಬಿಕ್ಕಿ ಅಳುತ್ತಲೇ ರವಿಯ ಕೈ ಹಿಡಿದು ಕಣ್ಣಿಗೆ ಒತ್ತಿಕೊಂಡರು. ಮೊಮ್ಮಕ್ಕಳನ್ನು ಅಪ್ಪಿ ಮುದ್ದಾಡಿದರು. ಇಂತಹದೊಂದು ಕಾಯಿಲೆ ಮತ್ತಾರಿಗೂ ಬರದಿರಲಿ ಎಂದರು ದೊಡ್ಡಮ್ಮ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT