ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣೆಯಾದ ಪತಿ: ಸುಪ್ರೀಂ ಮೊರೆ ಹೋದ ಪತ್ನಿ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಸೌದಿ ಅರೇಬಿಯಾದಲ್ಲಿನ ತಮ್ಮ ನಿವಾಸದಿಂದ ಕರೆದುಕೊಂಡು ಹೋಗಿರುವ ತಮ್ಮ ಪತಿಯ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ನಿಖತ್ ಪರ್ವೀನ್ ಎಂಬುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುವ ಜೂನ್ ಒಂದರೊಳಗಾಗಿ ಉತ್ತರಿಸುವಂತೆ ನ್ಯಾಯಮೂರ್ತಿಗಳಾದ ಕೆ.ಎಸ್.ರಾಧಾಕೃಷ್ಣನ್ ಮತ್ತು ಜೆ.ಎಸ್.ಖೇಹರ್ ಅವರನ್ನೊಳಗೊಂಡ ನ್ಯಾಯಪೀಠ ಗೃಹ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿದೆ.

ಭಯೋತ್ಪಾದನಾ ಕೃತ್ಯವೊಂದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ಪರ್ವೀನ್ ಅವರ ಪತಿ, 29 ವರ್ಷದ ಫಸಿಹ್ ಮಹಮೂದ್ ಅವರನ್ನು ಮೇ 13ರಂದು ಭಾರತೀಯ ಗುಪ್ತಚರ ಅಧಿಕಾರಿಗಳು ಸೌದಿ ಅರೇಬಿಯಾದಲ್ಲಿ ವಶಕ್ಕೆ ತೆಗೆದುಕೊಂಡಿದ್ದರು. ಜೊತೆಗೆ ಅವರ ಲ್ಯಾಪ್‌ಟಾಪ್ ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದರು. ಬಿಹಾರದ ದರ್ಭಾಂಗದವರಾದ ಫಸಿಹ್ ಕಳೆದ ಐದು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು.

ಅಧಿಕಾರಿಗಳು ಕರೆದೊಯ್ದಾಗಿನಿಂದ ಇದುವರೆಗೂ ಫಸಿಹ್ ಸುಳಿವು ದೊರೆಯದ ಹಿನ್ನೆಲೆಯಲ್ಲಿ ಅವರ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಪರ್ವೀನ್ ಪರ ನ್ಯಾಯವಾದಿ ಕೋರಿದರು.
ಕಳೆದ ಸೆಪ್ಟೆಂಬರ್‌ನಲ್ಲಿ ಫಸಿಹ್ ಅವರನ್ನು ಮದುವೆಯಾದ ಪರ್ವೀನ್ ಮಾರ್ಚ್ ತಿಂಗಳಲ್ಲಿ ಸೌದಿಗೆ ತೆರಳಿದ್ದರು.

ಪತಿಯ ಬಗ್ಗೆ ಮಾಹಿತಿ ಕೋರಿ ಅವರು ವಿದೇಶಾಂಗ ಇಲಾಖೆ, ಗೃಹ ಸಚಿವಾಲಯ, ಕರ್ನಾಟಕ, ಬಿಹಾರ ಸರ್ಕಾರದ ಅಧಿಕಾರಿಗಳು ಹಾಗೂ ಭಾರತದಲ್ಲಿನ ಸೌದಿ ದೂತಾವಾಸ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೆ ಸೂಕ್ತ ಉತ್ತರ ದೊರೆಯದ ಕಾರಣ ಮೇ 15ರಂದು ಭಾರತಕ್ಕೆ ಹಿಂದಿರುಗಿದರು ಎಂದು ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT