ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದಿದೆ ಕನ್ನಡ ಶಾಲೆಗಳಿಗೆ ಇನ್ನಷ್ಟು ಗಂಡಾಂತರ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ; ಕೇವಲ ವಿಲೀನ ಮಾತ್ರ ಎಂದ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮಕ್ಕಳ ಕಡ್ಡಾಯ ಶಿಕ್ಷಣ ಕಾಯ್ದೆ ಈಗಿರುವ ಸ್ಥಿತಿಯಲ್ಲಿಯೇ ಜಾರಿಗೆ ಬಂದರೆ ರಾಜ್ಯದಲ್ಲಿ ಅಳಿದುಳಿದ ಕನ್ನಡ ಶಾಲೆಗಳೂ ತಂತಾನೆ ಬಾಗಿಲು ಮುಚ್ಚುತ್ತವೆ!

ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2008 ರ ಪ್ರಕಾರ ಎಲ್ಲ ಖಾಸಗಿ ಶಾಲೆಗಳೂ ಶೇ 25ರಷ್ಟು ಸೀಟುಗಳನ್ನು ಬಡವರಿಗೆ ನೀಡಬೇಕು. ಈ ಮಕ್ಕಳ ಶುಲ್ಕವನ್ನು ಸರ್ಕಾರವೇ ನಿರ್ಧರಿಸಿ ಭರಿಸುತ್ತದೆ. ಮೇಲ್ನೋಟಕ್ಕೆ ಇದು ತುಂಬಾ ಕ್ರಾಂತಿಕಾರಕ ಕ್ರಮ ಎಂದೇ ಅನ್ನಿಸುತ್ತದೆ. ನಮ್ಮ ಮಕ್ಕಳೂ ಕೂಡ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಕಲಿಯಲಿ.

ಡೊನೇಷನ್, ಇತರ ದುಬಾರಿ ಸೇವಾ ಶುಲ್ಕಗಳನ್ನು ಪಡೆಯುವ ಖಾಸಗಿ ಶಾಲೆಗಳು ಬಡ ಮಕ್ಕಳಿಗೂ ಶಿಕ್ಷಣ ನೀಡುವಂತಾಗಲಿ ಎಂದು ಬಯಸುವುದು ಸರಿ. ಆದರೆ ಶೇ 25ರಷ್ಟು ಮಕ್ಕಳನ್ನು ಆಯ್ಕೆ ಮಾಡಿ ಖಾಸಗಿ ಶಾಲೆಗಳಿಗೆ ಸೇರಿಸುವ ಜವಾಬ್ದಾರಿ ಇರುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ. ಹೀಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯ್ಕೆ ಮಾಡುವುದು ಸರ್ಕಾರಿ ಶಾಲೆಯ ಮಕ್ಕಳನ್ನೇ.
 
ಒಂದು ಖಾಸಗಿ ಶಾಲೆಯ ಅಕ್ಕ ಪಕ್ಕ ಇರುವ ಸರ್ಕಾರಿ ಶಾಲೆಗಳ ಮಕ್ಕಳನ್ನೇ ಆರಿಸಿ ಖಾಸಗಿ ಶಾಲೆಗಳಿಗೆ ಸೇರಿಸಿದರೆ ಸಹಜವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಡಿಮೆಯಾಗುತ್ತಾರೆ. ಕಟ್ಟುನಿಟ್ಟಾಗಿ ಈ ನೀತಿಯನ್ನು ಜಾರಿಗೆ ತಂದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಉಳಿಯುವುದೇ ಇಲ್ಲ.

ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಗುಣಮಟ್ಟದ, ಪರಿಣಿತ ಶಿಕ್ಷಕರಿದ್ದಾರೆ. ಆದರೆ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಖಾಲಿಯಾದ ಶಿಕ್ಷಕ ಹುದ್ದೆಯನ್ನು ಭರ್ತಿ ಮಾಡದೆ, ಸರಿಯಾದ ಮೇಲ್ವಿಚಾರಣೆ, ಮಾರ್ಗದರ್ಶನಗಳಿಲ್ಲದೆ, ಕರ್ನಾಟಕದಲ್ಲಿ ಸುಮಾರು 3000 ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ತಲೆದೋರಿದೆ.
 
ಇಂತಹ ಪರಿಸ್ಥಿತಿಯಲ್ಲಿ ಹೊಸ ಕಾಯ್ದೆ ಜಾರಿಯಾದರೆ ಏನಾಗಬಹುದು? ಶೇ 25ರಷ್ಟು ಮಕ್ಕಳಿಗೆ ಸರ್ಕಾರವೇ ಶುಲ್ಕವನ್ನು ನೀಡುವುದರಿಂದ ಈ ಶುಲ್ಕ ಪಡೆಯುವುದಕ್ಕಾಗಿಯೇ ಖಾಸಗಿ ಶಾಲೆಗಳು ಹುಟ್ಟಿಕೊಂಡರೂ ಅಚ್ಚರಿಯಿಲ್ಲ.

ಇದಲ್ಲದೆ ಸರ್ಕಾರ ಜಾರಿಗೊಳಿಸಲು ಹೊರಟಿರುವ ಕಾಯ್ದೆಯಲ್ಲಿ ಇನ್ನೂ ಹಲವಾರು ನ್ಯೂನತೆಗಳಿವೆ. ಮಕ್ಕಳ ಕಡ್ಡಾಯ ಶಿಕ್ಷಣ ಕಾಯ್ದೆ ಪ್ರಕಾರ 6 ವರ್ಷದಿಂದ 14 ವರ್ಷದ ಒಳಗಿರುವ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯುವುದು ಅವರ ಹಕ್ಕು. ಈ ಕಾಯ್ದೆ ಪ್ರಕಾರ ವಿದ್ಯಾರ್ಥಿಯ ವಯಸ್ಸಿಗೆ ಅನುಗುಣವಾಗಿ ತರಗತಿಗೆ ಸೇರಿಸಿಕೊಳ್ಳಬೇಕು.
 
ಶಾಲೆಗೇ ಹೋಗದ, ಬಾಲ ಕಾರ್ಮಿಕನೋ ಅಥವಾ ವಿದ್ಯೆಗೆ ತಿಲಾಂಜಲಿ ನೀಡಿದ 13 ವರ್ಷದ ಹುಡುಗ ಅಥವಾ ಹುಡುಗಿಯನ್ನು ಕಾಯ್ದೆ ಅನ್ವಯ ವಯಸ್ಸಿಗೆ ಅನುಗುಣವಾಗಿ 7 ನೆಯ ತರಗತಿಗೆ ಸೇರಿಸಿ ಆ ತರಗತಿಯ ವಿದ್ಯಾರ್ಥಿಗಳೊಡನೆ ಕೂರಿಸಿ ಅವರ ಸಮಮಟ್ಟಕ್ಕೆ ಬರಲು ಆರು ತಿಂಗಳ ಒಳಗೆ ತರಬೇತಿ ನೀಡಿ ಮುಂದಿನ ತರಗತಿಗೆ ತೇರ್ಗಡೆಗೊಳಿಸಬೇಕು.
 
ಇದರಿಂದ ಆ ವಿದ್ಯಾರ್ಥಿಯ ಮಾನಸಿಕ ಸ್ಥಿತಿ ಏನಾಗಬಹುದು? ಅದರಲ್ಲೂ ಸುಮಾರು 6 ರಿಂದ 8 ವರ್ಷಗಳ ಕಾಲ ವಿದ್ಯಾರ್ಥಿ ದೆಸೆಯಿಂದಲೇ ಬಂದ ಸಹಪಾಠಿಯ ವರ್ತನೆ, ಸಹಜ ಶಿಕ್ಷಣ ಪ್ರೌಢಿಮೆ ಈ ವಿದ್ಯಾರ್ಥಿಯಲ್ಲಿ ಕೀಳರಿಮೆ ಮೂಡಿಸಬಹುದು. ಆ ಸಮಯದಲ್ಲಿ ಶಿಕ್ಷಣವನ್ನು ಈ ವಿದ್ಯಾರ್ಥಿ ದ್ವೇಷಿಸಬಹುದು. ಮಾನಸಿಕ ಕ್ಷೋಭೆಗೂ ಒಳಗಾಗಬಹುದು.
 
ಕಡ್ಡಾಯ ಶಿಕ್ಷಣ ಎಂದರೂ ವಿದ್ಯಾರ್ಥಿಯು ಮೊದಲನೆಯ ತರಗತಿಯಿಂದಲೇ ಕಲಿಯುವುದು ಲೇಸು. ವಯಸ್ಸಿಗನುಗುಣವಾಗಿ ಪ್ರತ್ಯೇಕ ಶಿಕ್ಷಣ ನೀಡಬಹುದು.

ಕಾಯ್ದೆಯ ನಿಯಮ 16/1 ಪ್ರಕಾರ ಪ್ರಾಥಮಿಕ ಶಿಕ್ಷಣ ಮುಗಿಸುವವರೆಗೆ ಯಾವುದೇ ತರಗತಿಯಲ್ಲಿ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವಂತಿಲ್ಲ. ಯಾವುದೇ ಪರೀಕ್ಷೆ ಅಥವಾ ಅನುತ್ತೀರ್ಣದ ಪ್ರಶ್ನೆಯೇ ಇಲ್ಲ ಎಂದರೆ ವಿದ್ಯಾರ್ಥಿ ಓದುವ ಮನಸ್ಥಿತಿಯನ್ನೇ ಕಳೆದುಕೊಳ್ಳಬಹುದು.

ಮಕ್ಕಳ ದುರ್ನಡತೆ, ಸಹಪಾಠಿಗಳ ಮೇಲೆ ನಡೆಸುವ ದೌರ್ಜನ್ಯ, ಶಿಕ್ಷಕರ ಮೇಲಿನ ಅಗೌರವ, ಇವುಗಳನ್ನು ಬಾಲ್ಯಾವಸ್ಥೆಯಲ್ಲಿ ಸರಿಮಾಡದಿದ್ದರೆ ಈ ವಿದ್ಯಾರ್ಥಿಗಳು ಮುಂದೊಂದು ದಿನ ಭಾರತದ ಸತ್ಪ್ರಜೆಗಳಾಗುವ ಬದಲಿಗೆ ಕಂಟಕರಾಗುವುದರಲ್ಲಿ ಸಂಶಯವಿಲ್ಲ.
 
ವಿದ್ಯಾರ್ಥಿಗಳನ್ನು ಸರಿಪಡಿಸುವುದೇ ಶಿಕ್ಷೆಯೆಂದಾದಲ್ಲಿ, ಶಿಕ್ಷಣಕ್ಕೆ ಮಹತ್ವವೆಲ್ಲಿ? ಕಾಯ್ದೆ 2ರ ಪ್ರಕಾರ ಯಾವುದೇ ದುರ್ನಡತೆಯ ವಿದ್ಯಾರ್ಥಿಯನ್ನು ತರಗತಿಯ ಹೊರ ಕಳುಹಿಸುವುದಾಗಲಿ, ಅಮಾನತು ಮಾಡುವುದಾಗಲಿ ಅಥವಾ ಶಾಲೆಯಿಂದ ಡಿಬಾರ್ ಮಾಡುವುದಾಗಲಿ ಸಾಧ್ಯವಿಲ್ಲ.

ಇದರಿಂದ ಮಕ್ಕಳ ನಡತೆ, ಅಭ್ಯಾಸ, ಗುಣ ಬದಲಾವಣೆಗೊಂಡು ತಾನು ಮಾಡಿದ್ದೇ ಸರಿಯೆಂಬ ಮನಸ್ಥಿತಿಗೆ ಬರುತ್ತಾರೆ. ಹಲವಾರು ದೇಶಗಳಲ್ಲಿ ಕೇವಲ 16 ವಯಸ್ಸಿನೊಳಗಿನ ಹುಡುಗರು ದುಶ್ಚಟಗಳಿಗೆ ಬಲಿಯಾಗಿ ಬೀದಿಯಲ್ಲಿ ಕಳೆಯುವಂತಾಗಿದೆ. ಹೊಸ ಕಾಯ್ದೆ ಜಾರಿಯಾದರೆ ಅಂತಹ ಹುಡುಗರು ನಮ್ಮಲ್ಲಿಯೂ ಕಾಣಬೇಕಾಗಬಹುದೇನೋ.

ಕಾಯ್ದೆಯ 5ನೇ ವಿಧಿ ಪ್ರಕಾರ ವಿದ್ಯಾರ್ಥಿ ಯಾವುದೇ ಹಂತದಲ್ಲಿ ಶಾಲೆಯನ್ನು ಬದಲಾಯಿಸಬಹುದು. ಯಾವುದೇ ವಿದ್ಯಾರ್ಥಿಗೆ, ವಿದ್ಯಾರ್ಥಿ ದೆಸೆಯಲ್ಲಿ ಶಾಲೆ ರುಚಿಸುವುದಿಲ್ಲ. ಕೆಲ ಪಾಲಕರು ವರ್ಷ, ವರ್ಷವೂ ಶಾಲೆ ಬದಲಿಸುತ್ತ ಶಾಲೆಯೊಂದಿಗೆ ಭಾವನಾತ್ಮಕ ಸಂಬಂಧವೇ ಇಲ್ಲದ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಹಾಗೇ ವಿದ್ಯಾರ್ಥಿಗಳಲ್ಲಿ ಪಠ್ಯಪುಸ್ತಕ, ಶಾಲೆ ಅಥವಾ ಶಿಕ್ಷಣದ ಬಗ್ಗೆ ಗೌರವ ಇಲ್ಲದಂತಾಗಿದೆ. ಹಿಂದೆ ವಿದ್ಯಾರ್ಥಿಗಳಿಗೆ ಇದು `ನನ್ನ ಶಾಲೆ, ನನ್ನ ಮೇಷ್ಟ್ರು~ ಎನ್ನುವ ಗೌರವದ ಭಾವನೆ ಇತ್ತು. ಈಗ  ಅದಿಲ್ಲ.

ಹೊಸ ಕಾಯ್ದೆಯನ್ವಯ ಪ್ರತಿ ವರ್ಷವೂ ಶಾಲೆಯ ಮಾನ್ಯತೆಯನ್ನು ನವೀಕರಿಸಬೇಕು. ಇಂತಹ ನಿಯಮ ಹೋಟೆಲ್ ಮತ್ತು ಬಾರ್ ಇತ್ಯಾದಿಗಳಿಗೆ ಸರಿಹೊಂದಬಹುದೇ ಹೊರತು ಶಾಲಾ, ಕಾಲೇಜುಗಳಿಗೆ ಅಲ್ಲ. ನವೀಕರಣ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಶೇ 25ರಷ್ಟು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎನ್ನುವುದರ ಬದಲು ಪ್ರತಿ ಖಾಸಗಿ ಶಾಲೆಗಳು ತನ್ನ ಸರಹದ್ದಿನಲ್ಲಿ ಇರುವ ಸರ್ಕಾರಿ ಶಾಲೆಯನ್ನು ದತ್ತು ಪಡೆದು, ಅಲ್ಲಿರುವ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯ ಗುಣಮಟ್ಟದ  ಶಿಕ್ಷಣ ನೀಡಬೇಕು ಎಂಬ ಷರತ್ತು ವಿಧಿಸಬಹುದು. ಇದರಿಂದ ಸರ್ಕಾರದ ಮೇಲೆ ಬೀಳುವ ಆಡಳಿತಾತ್ಮಕ ವೆಚ್ಚವೂ ಕಡಿಮೆಯಾಗುತ್ತದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT