ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದು ನೋಡುವ ಧೋರಣೆ?

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂಬೈ ಷೇರುಪೇಟೆಯಲ್ಲಿ ಸದ್ಯಕ್ಕೆ ಖರೀದಿ ಆಸಕ್ತಿ ಇದ್ದರೂ,ವಹಿವಾಟುದಾರರಲ್ಲಿ  ಒಟ್ಟಾರೆ ಕಾದು ನೋಡುವ ಪ್ರವೃತ್ತಿ ಮನೆ ಮಾಡಿದೆ. ಇಂಧನಗಳ ಬೆಲೆ ಹೆಚ್ಚಿಸುವ ಸಂಬಂಧ ಸರ್ಕಾರ ತೆಗೆದುಕೊಳ್ಳಲಿರುವ ನಿರ್ಧಾರವು ವಹಿವಾಟಿನ ಸ್ವರೂಪ ನಿರ್ಧರಿಸಲಿದೆ.

ಪೇಟೆಯಲ್ಲಿ ಖರೀದಿ ಆಸಕ್ತಿ ಮುಂದುವರೆಯುವ ಸಾಧ್ಯತೆ ಇದ್ದೇ ಇದೆ. ಮುಂಗಾರು ಮಳೆಯ ಪ್ರಗತಿ ವಾಡಿಕೆಯಂತೆ ಇರಲಿರುವುದು ಪೇಟೆಯ ಪಾಲಿಗೆ ಸಕಾರಾತ್ಮಕ ಸಂಗತಿಯಾಗಿದೆ. ಆದರೆ, ಇದೇ 9ರಂದು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ ಬಗ್ಗೆ ಸರ್ಕಾರ ಕೈಗೊಳ್ಳಲಿರುವ ನಿರ್ಧಾರ ಮಾತ್ರ ವಹಿವಾಟಿನ ದಿಕ್ಕನ್ನು ನಿರ್ಧರಿಸಲಿದೆ. ಹೀಗಾಗಿ ಆ ನಿರ್ಧಾರವನ್ನು ಕಾತರದಿಂದ ಎದುರು ನೋಡಲಾಗುತ್ತಿದೆ ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಪರಾಗ್ ಡಾಕ್ಟರ್ ಅಭಿಪ್ರಾಯಪಡುತ್ತಾರೆ.

ಇದೇ 16ರಂದು ಪ್ರಕಟಗೊಳ್ಳಲಿರುವ ಆರ್‌ಬಿಐನ ಹಣಕಾಸು ನೀತಿಯ ಮಧ್ಯಂತರ ಪರಾಮರ್ಶೆ, ಏಪ್ರಿಲ್ ತಿಂಗಳ ಕೈಗಾರಿಕಾ  ಉತ್ಪಾದನಾ ಸೂಚ್ಯಂಕ (ಐಐಪಿ) ಮತ್ತು ಮೇ ತಿಂಗಳ ಹಣದುಬ್ಬರವು ವಹಿವಾಟಿನ ಗತಿ ನಿರ್ಧರಿಸಲಿವೆ ಎಂದು ಐಐಎಫ್‌ಎಲ್‌ನ ಸಂಶೋಧನಾ ಮುಖ್ಯಸ್ಥ ಅಮರ್ ಅಂಬಾನಿ ಹೇಳಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಖರೀದಿ ಆಸಕ್ತಿಯು ಈಗ ಮಾರುಕಟ್ಟೆಗೆ ಕೆಲಮಟ್ಟಿಗೆ ಸಮಾಧಾನ ನೀಡಿದೆ. ಈ ವಿದ್ಯಮಾನವು ಇನ್ನೂ ಕೆಲ ದಿನಗಳ ಕಾಲ ಮುಂದುವರೆಯುವ ನಿರೀಕ್ಷೆಯೂ ಇದೆ.

ಜಾಗತಿಕ ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ಅನಿಶ್ಚಿತತೆಯು ಪೇಟೆಯ ಪಾಲಿಗೆ ಇನ್ನೊಂದು ಕಳವಳಕಾರಿ ವಿದ್ಯಮಾನವಾಗಿದೆ. ಅಮೆರಿಕದಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿರುವುದು ಷೇರುಪೇಟೆಯಲ್ಲಿ ಕೆಲಮಟ್ಟಿಗೆ ಆತಂಕ ಮೂಡಿಸುವ ಸಾಧ್ಯತೆಗಳು ಇವೆ ಎಂದೂ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT