ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನಸೂರ ಕಾಳಿಕಾ ಭವಾನಿ ಸೆಕೆಂಡರಿ ಸ್ಕೂಲ್‌ಗೆ ಸುವರ್ಣ ಸಂಭ್ರಮ

Last Updated 18 ಡಿಸೆಂಬರ್ 2013, 5:00 IST
ಅಕ್ಷರ ಗಾತ್ರ

ಸಿದ್ದಾಪುರ:  ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅಕ್ಷರದ ದೀವಿಗೆ ಬೆಳಗುತ್ತಿರುವ  ಕಾನಸೂರಿನ ಕಾಳಿಕಾ ಭವಾನಿ ಸೆಕೆಂಡರಿ ಸ್ಕೂಲಿಗೆ ಈಗ ಸುವರ್ಣ ಸಂಭ್ರಮ.  ಇದೇ 18ರಂದು ಈ ಪ್ರೌಢಶಾಲೆ ಚಿನ್ನದ ಹಬ್ಬ ಆಚರಿಸಿಕೊಳ್ಳುತ್ತಿದೆ.

1963ರ ಜೂನ್ 1ರಂದು ಆರಂಭವಾದ ಈ ಸಂಸ್ಥೆ  ಐದು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣದ ಬೆಳಕು ಕೊಟ್ಟಿದೆ. ಬದುಕು ನಿರ್ಮಿಸಿಕೊಳ್ಳಲು ಕಾರಣವಾಗಿದೆ. ಇಲ್ಲಿ ಪ್ರೌಢಶಾಲೆ ಆರಂಭ ಮಾಡಬೇಕು ಎಂಬ ಕನಸನ್ನು ಸ್ಥಳೀಯರ ಮನಸ್ಸಿನಲ್ಲಿ ಬಿತ್ತಿದವರು ಶಿರಸಿಯ ಎಂಇಎಸ್ ಕಾಲೇಜಿನ ಪ್ರಾಚಾರ್ಯ ರಾಗಿದ್ದ ದಿವಂಗತ ಎಲ್.ಟಿ.ಶರ್ಮಾ. ಅವರು ನೀಡಿದ ಪ್ರೇರಣೆಯ ಫಲವಾಗಿ ಸ್ಥಳೀಯ ವಿದ್ಯಾಭಿಮಾನಿಗಳನ್ನು ಒಳಗೊಂಡ  ಕಾಳಿಕಾ ಭವಾನಿ ಎಜ್ಯುಕೇಶನ್ ಸೊಸೈಟಿ ಆರಂಭವಾಯಿತು. ಈ ಪ್ರೌಢಶಾಲೆಯ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ಅಂದಿನ ಹಣಕಾಸು ಸಚಿವ ರಾಮಕೃಷ್ಣ ಹೆಗಡೆ  ಸಂಸ್ಥೆಗೆ ಸೂಕ್ತ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದರು. ಆ ಸಂದರ್ಭದಲ್ಲಿ  ಈ ಭಾಗದ ಜನರು ನೀಡಿದ ಧನ ಸಹಾಯದ ಮೂಲಕ ವಿಶಾಲವಾದ ಕಟ್ಟಡವೂ ನಿರ್ಮಾಣಗೊಂಡಿತು. ಪ್ರೌಢಶಾಲೆಗೆ ಬೇಕಾದ ಸೌಲಭ್ಯಗಳನ್ನು ಸಂಸ್ಥೆಯ ಅಂದಿನ ಅಧ್ಯಕ್ಷ ತಿರುಮಲೇಶ್ವರ ಹೆಗಡೆ ಮತ್ತು ಇತರ ನಿರ್ದೇಶಕರು ಪೂರೈಸಿದರು.

ಪ್ರಾರಂಭದಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜಿ.ಜಿ.ಪ್ರಾತಃಕಾಲ ಮತ್ತು ನಂತರದ ಮುಖ್ಯ ಶಿಕ್ಷಕರು, ಅಂದಿನಿಂದ ಈವರೆಗೆ ಸೇವೆ ಸಲ್ಲಿಸಿದ ಹಾಗೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯ ಶ್ರಮದಿಂದ ಪ್ರೌಢಶಾಲೆ ಶೈಕ್ಷಣಿಕವಾಗಿಯೂ ಉತ್ತಮ ಸ್ಥಿತಿ ಹೊಂದಲು ಕಾರಣವಾಯಿತು.     ಆರಂಭದಿಂದ ಇಂದಿನವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದ 3148 ವಿದ್ಯಾರ್ಥಿಗಳಲ್ಲಿ 2150 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ.

ಈ ಪ್ರೌಢಶಾಲೆಯಲ್ಲಿ ಈಗ 239 ವಿದ್ಯಾರ್ಥಿಗಳು ಓದುತ್ತಿದ್ದು, 5 ವಿಭಾಗಗಳನ್ನು ಹೊಂದಿದೆ. ಪ್ರಸ್ತುತ ಅಧ್ಯಕ್ಷರಾಗಿ ಡಿ.ವಿ.ಹೆಗಡೆ ಹೊರಾಲೆ ಮತ್ತು  ಕಾರ್ಯದರ್ಶಿಯಾಗಿ ಎಸ್.ಎಂ. ಹೆಗಡೆ ಕಾನಸೂರು ಸಂಸ್ಥೆಯ ಸಾರಥ್ಯ ವಹಿಸಿದ್ದಾರೆ.

ವಿದ್ಯಾರ್ಥಿಗಳನ್ನು ಕೇವಲ ಅಂಕಗಳ ಬೇಟೆಗಾರರನ್ನಾಗಿ ರೂಪಿಸದೆ, ಅವರ ಪೂರ್ಣ ಬೆಳವಣಿಗೆಗೆ ಗಮನ ಕೊಡಲಾಗಿದೆ. ಮಕ್ಕಳಿಗೆ ಶ್ರಮ ಜೀವನದ ಪರಿಚಯವೂ ಇರಬೇಕೆಂದು ತೋಟಗಾರಿಕೆಯ ಶಿಕ್ಷಣವನ್ನು ನೀಡಲಾಗುತ್ತಿದೆ ಎನ್ನುತ್ತವೆ ಪ್ರೌಢಶಾಲೆಯ ಮೂಲಗಳು.

ವಿದ್ಯಾರ್ಥಿಗಳಿಗೆ ನೀಡುತ್ತಿರುವ ಯೋಗ, ಆರೋಗ್ಯ ಶಿಕ್ಷಣದ ತರಬೇತಿಯ ಫಲವಾಗಿ ಸತತ ಹನ್ನೊಂದನೇ ವರ್ಷ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ಸಮಗ್ರ ವೀರಾಗ್ರಣಿ ಪ್ರಶಸ್ತಿ ಈ ಶಾಲೆಯ ಪಾಲಾಗುತ್ತಿದೆ.
ಈ ರೀತಿಯ  ಯಶಸ್ಸಿನಿಂದ ಸ್ಫೂರ್ತಿ ಪಡೆದ ಈ ಪ್ರೌಢಶಾಲೆಯ ಆಡಳಿತ ಮಂಡಳಿ 2008ರಲ್ಲಿ ಕಾಳಿಕಾ ಭವಾನಿ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯನ್ನು ಆರಂಭಿಸಿದೆ.  ಈ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಕ್ಕೆ ಮುಂದಾಗಿದೆ.

ಕಟ್ಟಡ ಮತ್ತಿತರ ಮೂಲ ಸೌಕರ್ಯ ಕಲ್ಪಿಸುವಲ್ಲಿಯೂ ಸಂಸ್ಥೆ ಹಿಂದೆ ಬಿದ್ದಿಲ್ಲ. ಈ ಶಾಲೆಯ ಹಿಂದಿನ ವಿದ್ಯಾರ್ಥಿಗಳೂ ಸೇರಿದಂತೆ ಹಲವರ ಸಹಾಯದಿಂದ ಡಾ.ಕೆ.ಡಿ.ಭಟ್ಟ ಸಭಾಭವನವನ್ನು  ನಿರ್ಮಿಸಲಾಗಿದೆ.  ಇತರ ಅಗತ್ಯ ಮೂಲ ಸೌಲಭ್ಯಗಳನ್ನು ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರ ಪಡೆದು ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT