ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನಿನ ಗೂಂಡಾಗಿರಿ

‘ಗೂಂಡಾ ಕಾಯ್ದೆ’ ವಿಸ್ತರಣೆ
Last Updated 15 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಒಂದಾದ ನಂತರ ಒಂದರಂತೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ನಂತರ ರಾಜ್ಯ ಸರ್ಕಾರ, ಗೂಂಡಾ ಕಾಯ್ದೆ ತಿದ್ದುಪಡಿ ಮಸೂದೆಗೆ ವಿಧಾನ ಮಂಡಲದ ಉಭಯ ಸದನಗಳ ಅನುಮೋದನೆ ಪಡೆದುಕೊಂಡಿದೆ. ಆಸಿಡ್ ದಾಳಿ ನಡೆಸುವ ವರು, ಪರಿಸರವನ್ನು ಹಾಳು ಮಾಡುವವರು, ಡಿಜಿಟಲ್ ಅಪರಾಧ ಎಸಗುವವರು, ಕಪ್ಪು ಹಣವನ್ನು ಕಾನೂನುಬದ್ಧಗೊಳಿಸುವವರು ಮತ್ತು ಲೈಂಗಿಕ ದೌರ್ಜನ್ಯ ಎಸಗುವವರನ್ನು ಗೂಂಡಾ ಕಾಯ್ದೆಯಡಿ ತರಲು ಈ ತಿದ್ದುಪಡಿ. ಅಲ್ಲದೆ, ‘ಕೊಳೆಗೇರಿ ಅತಿಕ್ರಮಣ’ ಪದವನ್ನು ‘ಜಮೀನು ಅತಿಕ್ರಮಣ’ ಎಂದು ಬದಲಾಯಿಸಲಾಗಿದೆ.

ಈ ಮಾದರಿಯಲ್ಲಿ ಅಪರಾಧಗಳನ್ನು ಗೂಂಡಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ವರ್ಗೀಕರಣ ಮಾಡುವುದರಲ್ಲಿ ವ್ಯತ್ಯಾಸ ಇದೆ. ಗೂಂಡಾ ಕಾಯ್ದೆಯಡಿ, ವ್ಯಕ್ತಿ ಯಾರು ಎಂಬುದರ ಆಧಾರದಲ್ಲಿ ವರ್ಗೀಕರಣ ನಡೆದರೆ, ಐಪಿಸಿ ಅಡಿ, ಅಪರಾಧ ಯಾವುದು ಎಂಬುದರ ಆಧಾರದಲ್ಲಿ ವರ್ಗೀಕರಣ ನಡೆಯುತ್ತದೆ.

‘ಲೈಂಗಿಕ ದೌರ್ಜನ್ಯ ನಡೆಸುವವ’ ಎಂಬ ಪದ ಒಂದು ಮಾದರಿಯ ಅಪ ರಾಧಿಯ ಚಿತ್ರವನ್ನು ಮನಸ್ಸಿನಲ್ಲಿ ಮೂಡಿಸುತ್ತದೆ. ಗಮನವನ್ನು ಈ ಮೂಲಕ ಲಿಂಗ ಆಧಾರಿತ ಹಿಂಸೆಯನ್ನು ವ್ಯವಸ್ಥೆಯ ಸಮಸ್ಯೆ ಎಂಬಲ್ಲಿಂದ ಇನ್ನೊಂದೆಡೆ ಒಯ್ಯುತ್ತದೆ.

ಮೇಲೆ ಉಲ್ಲೇಖಿಸಿದ ಮಾದರಿಯ ಅಪರಾಧಿಗಳು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರದಂತೆ ನೋಡಿಕೊಳ್ಳಲು ಅಂಥವರನ್ನು ಮುಂಜಾಗರೂಕತಾ ಕ್ರಮವಾಗಿ ಬಂಧನದಲ್ಲಿ ಇಡಬೇಕು ಎಂಬ ಭಾವನೆ ಸರ್ಕಾರಕ್ಕೆ ಬಂದರೆ ಹಾಗೆ ಮಾಡಲು ಗೂಂಡಾ ಕಾಯ್ದೆ ಅವಕಾಶ ಕಲ್ಪಿಸುತ್ತದೆ. ಇಂಥ ವ್ಯಕ್ತಿಗಳನ್ನು ಸರ್ಕಾರ, ಮೂರು ತಿಂಗಳಿಂದ ಗರಿಷ್ಠ ಒಂದು ವರ್ಷದವರೆಗೆ ಜೈಲಿನಲ್ಲಿ ಇಡಬಹುದು.

ಐಪಿಸಿಯ ಸೆಕ್ಷನ್‍ 376, 376ಎ, 376ಬಿ, 376ಸಿ, 376ಡಿ, 376ಇ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ– 2012 (ಪೋಕ್ಸೊ ಕಾಯ್ದೆ) ಇವೆರಡರ ವ್ಯಾಪ್ತಿಗೆ ಬರುವ ಅತ್ಯಾಚಾರ, ಅತ್ಯಾಚಾರ ಮತ್ತು ಕೊಲೆ, ಅತ್ಯಾಚಾರ ನಡೆಸಿ ವ್ಯಕ್ತಿಯನ್ನು ಜೀವಚ್ಛವದಂತೆ ಮಾಡುವುದು, ವಿಚ್ಛೇದನ ಸಂದರ್ಭದಲ್ಲಿ ಗಂಡ ಹೆಂಡತಿಯ ಮೇಲೆ ಅತ್ಯಾಚಾರ ನಡೆಸುವುದು, ಅಧಿಕಾರದಲ್ಲಿ ಇರುವ ವ್ಯಕ್ತಿಯೊಬ್ಬ ನಡೆಸುವ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಮತ್ತೆ ಮತ್ತೆ ತಪ್ಪು ಮಾಡುವವರು ನಡೆಸುವ ಅತ್ಯಾಚಾರಗಳನ್ನು ಗೂಂಡಾ ಕಾಯ್ದೆ ಅಡಿ ‘ಲೈಂಗಿಕ ದೌರ್ಜನ್ಯ’ ಎಂದು ಕರೆಯಲಾಗಿದೆ.

ವ್ಯಕ್ತಿಯೊಬ್ಬ ಅಪರಾಧ ಮಾಡಬಹುದು ಎಂಬ ಸಂಶಯದ ಆಧಾರದಲ್ಲಿ ಆತನನ್ನು ವಿಚಾರಣೆಯಿಲ್ಲದೆ ಗರಿಷ್ಠ ಒಂದು ವರ್ಷದ ಅವಧಿಗೆ ಜೈಲಿನಲ್ಲಿ ಇಡುವ ಅವಕಾಶ ಗೂಂಡಾ ಕಾಯ್ದೆಯ ಅಡಿ ಸರ್ಕಾರಕ್ಕಿದೆ. ಸಹಜ ನ್ಯಾಯದ ತತ್ವಕ್ಕೆ, ನಮ್ಮ ಕ್ರಿಮಿನಲ್‍ ನ್ಯಾಯಶಾಸ್ತ್ರದ ಮೂಲ ತತ್ವವಾದ ‘ಆರೋಪ ಸಾಬೀತಾಗು ವವರೆಗೆ ನಿರಪರಾಧಿ’ ಎಂಬುದಕ್ಕೆ ಇದು ವಿರುದ್ಧ. ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆ ಎಂಬ ಸಾಂವಿಧಾನಿಕ ಹಕ್ಕಿಗೆ ಕೂಡ ಇದು ವಿರುದ್ಧ.

ಮುನ್ನೆಚ್ಚರಿಕೆಯ ಕ್ರಮವಾಗಿ ಬಂಧನಕ್ಕೆ ಅವಕಾಶ ನೀಡುವ ಕಾಯ್ದೆಗಳಲ್ಲಿ ಒಂದು ಸಮಸ್ಯೆ ಇದೆ. ಬ್ರಿಟಿಷರ ಕಾಲದಲ್ಲಿ ನಗರಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಬರುತ್ತಿದ್ದವರನ್ನು ಇಂಥ ಕಾಯ್ದೆಯ ಅಡಿ ಬಂಧಿಸಲಾಗುತ್ತಿತ್ತು. ಆಧುನಿಕ ಕಾಲದಲ್ಲಿ, ಸೂಕ್ತ ವಕೀಲರನ್ನು ನೇಮಿಸಿಕೊಳ್ಳಲಾಗದವರನ್ನು, ದುಡಿಯುವ ವರ್ಗದವರನ್ನು ಬಂಧಿಸಲು ಪೊಲೀಸರು ಇಂಥ ಕಾಯ್ದೆ ಗಳನ್ನು ಬಳಸಿಕೊಂಡ ನಿದರ್ಶನಗಳಿವೆ. ಬ್ರಿಟಿಷ್ ಕಾಲದ ಕಾಯ್ದೆಯನ್ನು ಮಹಾರಾಷ್ಟ್ರ, ರಾಜಸ್ತಾನ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ.

ಇಂಥ ಕಾಯ್ದೆಗಳನ್ನು ಯಾವ ಕಾರಣಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ವಿವರವನ್ನು ಗಮನಿಸಿದರೆ ಅವು­ಗಳ ಅಪಾಯಕಾರಿ ಸಾಮರ್ಥ್ಯದ ಅರಿವಾಗುತ್ತದೆ. ತಮಿಳುನಾಡು ರಾಜ್ಯದಲ್ಲಿ 2011ರ ಜನವರಿಯಿಂದ ಒಂದು ವರ್ಷದಲ್ಲಿ ಇಂಥ ಕಾಯ್ದೆಯ ಅಡಿ 1,926 ಜನರನ್ನು ಬಂಧಿಸಲಾಯಿತು.

ಹೈಕೋರ್ಟ್‍ ಮತ್ತು ಸುಪ್ರೀಂ ಕೋರ್ಟ್‍ ಆದೇಶದ ಅನುಸಾರ 1,291 ಜನರನ್ನು, ಶಾಸನಬದ್ಧ ಸಲಹಾ ಸಮಿತಿಯ ಮಧ್ಯಪ್ರವೇಶದ ಕಾರಣ 489 ಜನರನ್ನು ಬಿಡುಗಡೆ ಮಾಡಲಾಯಿತು. ಇನ್ನುಳಿದವರು  ಒಂದು ವರ್ಷ ಜೈಲುವಾಸ ಅನುಭವಿಸಿದರು. ಇವರಲ್ಲಿ ಬಹುಪಾಲು ಜನರಿಗೆ ತಮ್ಮ ಬಂಧನವನ್ನು ಪ್ರಶ್ನಿಸುವ ಆರ್ಥಿಕ ಸಾಮರ್ಥ್ಯ ಇರಲಿಲ್ಲ.

ಲೈಂಗಿಕ ದೌರ್ಜನ್ಯದಂಥ ಅಪರಾಧಗಳ ತಡೆಗೆ ಕಾನೂನಿನಲ್ಲಿ ಸುಧಾರಣೆ ಆಗಬೇಕು ಎಂದು ಸ್ತ್ರೀ ಸ್ವಾತಂತ್ರ್ಯದ ಪರ ಹೋರಾಟ ನಡೆಸುತ್ತಿರುವವರು 1980ರಿಂದಲೂ ಆಗ್ರಹಿಸುತ್ತಿದ್ದಾರೆ. ಕಾನೂನು ಸುಧಾರಣೆ ಆಗಬೇಕು ಎಂಬುದು ಸರಿ. ಇದರ ಜೊತೆಗೇ ಕಠಿಣ ಕ್ರಿಮಿನಲ್‌ ಕಾನೂನುಗಳಿಂದ ಆಗುವ ಸಮಸ್ಯೆಯನ್ನೂ ಈ ಆಗ್ರಹದ ಜೊತೆಯಲ್ಲೇ ಇಟ್ಟು ನೋಡಬೇಕು.

ಸಮರ್ಥ ವಕೀಲರ ನೆರವು ಪಡೆಯಲಾಗದ ಸ್ಥಿತಿಯಲ್ಲಿರುವವರು ಇಂಥ ಕಠಿಣ ಕಾಯ್ದೆಗಳಿಂದ ತೊಂದರೆ ಅನುಭವಿಸುತ್ತಾರೆ. 2013ರಲ್ಲಿ ದೆಹಲಿಯಲ್ಲಿ ವರದಿಯಾದ ಸಾಮೂಹಿಕ ಅತ್ಯಾಚಾರ  ಪ್ರಕರಣದ ನಂತರ ರಚಿಸಲಾದ ನ್ಯಾಯಮೂರ್ತಿ ಜೆ.ಎಸ್‌.ವರ್ಮ ಸಮಿತಿ ವಿಭಿನ್ನ ಮಾರ್ಗ ತುಳಿದಿತ್ತು. ಆ ಸಂದರ್ಭದಲ್ಲಿ ವ್ಯಕ್ತವಾದ ಆಗ್ರಹಗಳಿಗೆ ಬದಲಾಗಿ ಸಮಿತಿ, ಸಾಂಸ್ಥಿಕ ಮತ್ತು ವ್ಯವಸ್ಥೆಯಲ್ಲಿನ ಸುಧಾರಣೆ ಕಡೆ ಒಲವು ತೋರಿ ಕೆಲವು ಶಿಫಾರಸುಗಳನ್ನು ಮಾಡಿತು.

ವಿವಾಹ ಬಂಧನದಲ್ಲಿ ನಡೆಯುವ ಅತ್ಯಾಚಾರಗಳನ್ನು ಅಪರಾಧ ಎಂದು ಪರಿಗಣಿಸಲು, ಅತ್ಯಾಚಾರಕ್ಕೆ ಒಳಗಾದವರನ್ನು ಸಮಾಜ ನೋಡುವ ದೃಷ್ಟಿ ಬದಲಾಯಿಸಲು, ಸಮಾಜದಲ್ಲಿ ಬೇರೂರಿರುವ ಲಿಂಗ ತಾರತಮ್ಯವನ್ನು ತೊಡೆಯಲು, ಶಿಕ್ಷಣದಲ್ಲಿ ಬದಲಾವಣೆ ತರಲು ಸಮಿತಿ ಶಿಫಾರಸುಗಳನ್ನು ಮಾಡಿತು.

ಕಾನೂನನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳ ವಿಶ್ವಾಸಾರ್ಹತೆ ಹೆಚ್ಚಬೇಕು, ಪೊಲೀಸ್‌ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು, ವೈದ್ಯಕೀಯ ನ್ಯಾಯಶಾಸ್ತ್ರ ಸೇರಿದಂತೆ ಪೊಲೀಸರಿಗೆ ಸೂಕ್ತ ತರಬೇತಿ ಒದಗಿಸಬೇಕು, ಅತ್ಯಾಚಾರಕ್ಕೆ ಒಳಗಾದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ಇನ್ನಷ್ಟು ಮಾನವೀಯ ಆಗಬೇಕು, ಪೊಲೀಸ್‌ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಬರಬೇಕು ಎಂಬ ಶಿಫಾರಸುಗಳನ್ನು ಅದು ಒಳ ಗೊಂಡಿತ್ತು. ಸಮಿತಿಯು ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿರೋ ಧಿಸಿತ್ತು. ಆದರೆ ಯುಪಿಎ ಸರ್ಕಾರ ಇದನ್ನು ಜಾರಿಗೆ ತಂದಿತು. ಶಿಫಾರಸುಗಳ ಪೈಕಿ ಕೆಲವನ್ನು ಮಾತ್ರ ಜಾರಿಗೊಳಿಸಲಾಯಿತು.

ವರ್ಮ ಸಮಿತಿ ಯಾವುದನ್ನು ವಿರೋಧಿಸಿತ್ತೋ ಅದನ್ನೇ ರಾಜ್ಯ ಸರ್ಕಾರ ಮಾಡುತ್ತಿದೆ – ಲೈಂಗಿಕ ದೌರ್ಜನ್ಯ ಅಪರಾಧವನ್ನು ಗೂಂಡಾ ಕಾಯ್ದೆಯ ವ್ಯಾಪ್ತಿಗೆ ತರುವ ಮೂಲಕ. ಸಮಿತಿ ಸೂಚಿಸಿದ್ದ ಸಾಂಸ್ಥಿಕ ಬದಲಾವಣೆಗಳನ್ನು ತರುವ ಬದಲು ರಾಜ್ಯ ಸರ್ಕಾರ ದೂರದೃಷ್ಟಿಯಿಲ್ಲದ, ನಾಗರಿಕ ಸ್ವಾತಂತ್ರ್ಯಕ್ಕೆ ಅಪಾಯ ತಂದೊಡ್ಡುವ ಕಾನೂನು ಜಾರಿಗೊಳಿಸಲು ಮುಂದಾಗಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಬಂಧನದಲ್ಲಿ ಇಡಲು ಅವಕಾಶ ಕಲ್ಪಿಸುವ ಮೂಲಕ ಸರ್ಕಾರ ವೈದ್ಯಕೀಯ ನ್ಯಾಯಶಾಸ್ತ್ರದ ಸುಧಾರಣೆಗೆ, ಪರಿಣಾಮಕಾರಿ ತನಿಖೆಗೆ, ಪೊಲೀಸ್‌ ವ್ಯವಸ್ಥೆಯ ಸುಧಾರಣೆಗೆ ಅಡ್ಡಗಾಲಾಗಿ ಪರಿಣಮಿಸಿದೆ. ಇದರಿಂದ ತಪ್ಪೆಸಗದವರ ಮೇಲೆ ಆರೋಪ ಹೊರಿಸುವ ಅವಕಾಶ ಹೆಚ್ಚುತ್ತದೆ.

(ಲೇಖಕರು ವಕೀಲರು, ಪರ್ಯಾಯ ಕಾನೂನು ವೇದಿಕೆಯ ಕಾರ್ಯಕರ್ತರು. ವಕೀಲ ಸಿದ್ಧಾರ್ಥ್‌ ನಾರಾಯಣ್‌ ಅವರು  ಪೂರಕ ಮಾಹಿತಿ ನೀಡಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT