ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಉಲ್ಲಂಘನೆ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನುಬಾಹಿರ. ಅದಕ್ಕೆ ಜೈಲು ಶಿಕ್ಷೆ ಮತ್ತು ಜುಲ್ಮಾನೆ ವಿಧಿಸಲು ಅವಕಾಶವಿದೆ. ಆದರೂ ರಾಜ್ಯದಲ್ಲಿ ಮಕ್ಕಳ ದುಡಿಮೆ ಸಂಪೂರ್ಣ ನಿಂತಿಲ್ಲ. ಮಕ್ಕಳನ್ನು ದುಡಿಯಲು ಕಳುಹಿಸುವ ಅನಿವಾರ್ಯತೆ ಸಾವಿರಾರು ಬಡ ಕುಟುಂಬಗಳಿಗಿದೆ.
 
ಮಕ್ಕಳ ದುಡಿಮೆಯನ್ನು ಕಾರ್ಮಿಕ ಅಧಿಕಾರಿಗಳು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಮುಂದಾದ ಸಂದರ್ಭಗಳಲ್ಲಿ ಅನೇಕರು ಅದು ಕಾನೂನುಬಾಹಿರ ಎಂಬುದು ನಮಗೆ ಗೊತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕಾನೂನಿನ ತಿಳುವಳಿಕೆ ಇರುವ ಸರ್ಕಾರಿ ಅಧಿಕಾರಿಗಳೂ ತಪ್ಪು ಮಾಡುತ್ತಾರೆ. ಅಂಥದೊಂದು ಪ್ರಕರಣ ಮಂಗಳೂರಿನಿಂದ ವರದಿಯಾಗಿದೆ. ಅಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರ ಮನೆಯಲ್ಲಿ ಹುಬ್ಬಳ್ಳಿ ಮೂಲದ ಬಾಲಕಿಯೊಬ್ಬಳು ಮನೆಗೆಲಸ ಮಾಡುತ್ತಿರುವುದನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿ ಅವಳನ್ನು ರಕ್ಷಿಸಿದ್ದಾರೆ.

ಮೂರನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿಯನ್ನು ಶಾಲೆ ಬಿಡಿಸಿ ಅವಳ ತಂದೆ ತಾಯಿ ಈ ಅರಣ್ಯ ಅಧಿಕಾರಿಯ ಮನೆಯಲ್ಲಿ ತಿಂಗಳಿಗೆ 600 ರೂಪಾಯಿ ಸಂಬಳದ ಮೇಲೆ ಕೆಲಸಕ್ಕೆ ಸೇರಿಸಿದ್ದರು. ಮಗಳನ್ನು ದುಡಿಯಲು ಕಳಿಸುವ ಅನಿವಾರ್ಯತೆ ಬಾಲಕಿಯ ತಂದೆ ತಾಯಿಗೆ ಇರಬಹುದು.
 
ಆದರೆ, ಅಂಥ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವಂತೆ ಹಿರಿಯ ಅಧಿಕಾರಿ ವರ್ತಿಸಿರುವುದು ಖಂಡನಾರ್ಹ. ಕಾನೂನು ಉಲ್ಲಂಘನೆ ಮಾಡಿರುವ ಈ ಪ್ರಕರಣದ ಬಗ್ಗೆ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು.

 
ಕೆಲವು ವರ್ಷಗಳ ಹಿಂದೆ ರಾಜ್ಯದ ಸಮಾಜ ಕಲ್ಯಾಣ ಸಚಿವೆಯೊಬ್ಬರು ತಮ್ಮ ಮನೆಯಲ್ಲಿ ಬಾಲಕಿಯೊಬ್ಬಳನ್ನು ದುಡಿಸಿಕೊಳ್ಳುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು. ಜವಾಬ್ದಾರಿ ಸ್ಥಾನದಲ್ಲಿರುವವರೇ ಬಾಲ ಕಾರ್ಮಿಕ ನಿಷೇಧ ಕಾನೂನು ಉಲ್ಲಂಘಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಈ ವರ್ಷ ಬರಗಾಲ ಬಂದಿದೆ. ಸಾವಿರಾರು ಕೃಷಿ ಕಾರ್ಮಿಕರು, ಸಣ್ಣ ರೈತರು ಕುಟುಂಬ ಸಮೇತ ಉದ್ಯೋಗ ಹುಡುಕಿಕೊಂಡು ಗುಳೇ ಹೋಗಿದ್ದಾರೆ.

ಹೀಗೆ ಹೋದವರು ಹೆಂಡತಿ ಮಕ್ಕಳನ್ನೂ ದುಡಿಯಲು ಕಳುಹಿಸಿ ಜೀವನ ನಡೆಸುತ್ತಾರೆ. ಬಡ ಜನರು ದೊಡ್ಡ ಸಂಖ್ಯೆಯಲ್ಲಿ ಗುಳೇ ಹೋಗುವುದಕ್ಕೆ ರಾಜ್ಯ ಸರ್ಕಾರವೇ ಕಾರಣ. ಬರಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿಗಳು ಆರಂಭವಾಗಿಲ್ಲ. ರಾಜ್ಯದ ಆಡಳಿತ ಪಕ್ಷ ಬಿಜೆಪಿಯಲ್ಲೆಗ ಗುಂಪುಗಾರಿಕೆ.

ಮುಖ್ಯಮಂತ್ರಿಯಿಂದ ಹಿಡಿದು ಶಾಸಕರವರೆಗೆ ಎಲ್ಲರೂ ಗುಂಪು ರಾಜಕಾರಣದಲ್ಲಿ ತೊಡಗಿ ಜನರ ಸಮಸ್ಯೆಗಳನ್ನು ಮರೆತಿದ್ದಾರೆ. ಬರಗಾಲದ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತಂದು ನೆರವು ಪಡೆದು ಪರಿಹಾರ ಕಾಮಗಾರಿಗಳನ್ನು ಆರಂಭಿಸುವ ಆಸಕ್ತಿಯನ್ನೇ ಸರ್ಕಾರ ತೋರುತ್ತಿಲ್ಲ.
 
ಕೇಂದ್ರ ಸರ್ಕಾರದ ಗ್ರಾಮೀಣ ಉದ್ಯೋಗ ಯೋಜನೆಯನ್ನು ಬಳಸಿಕೊಂಡು ಬರಪೀಡಿತ ಪ್ರದೇಶಗಳ ಜನರಿಗೆ ಉದ್ಯೋಗ ಕೊಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಹೀಗಾಗಿ ಸಾವಿರಾರು ಬಡ ಕುಟುಂಬಗಳು ತಮ್ಮ ಮಕ್ಕಳನ್ನು ದುಡಿಸಿಕೊಂಡು ಹೊಟ್ಟೆಹೊರೆಯುವಂತಹ ಅಸಹಾಯಕ ಪರಿಸ್ಥಿತಿಯಲ್ಲಿವೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಿ ಬಡವರನ್ನು ರಕ್ಷಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT