ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಕಾಲೇಜು ಹೊಸ ಕಟ್ಟಡಕ್ಕೆ ಸ್ಥಳಾಂತರ ವಿಳಂಬ

Last Updated 6 ಜನವರಿ 2011, 6:35 IST
ಅಕ್ಷರ ಗಾತ್ರ

ಕೋಲಾರ: ಒಂದು ಕೋಟಿ ವೆಚ್ಚದಲ್ಲಿ ನಗರದ ಹೊರವಲಯದ ಅರಹಳ್ಳಿಯ ಪವರ್‌ಗ್ರಿಡ್ ಪಕ್ಕ ಸರ್ಕಾರಿ ಕಾನೂನು ಕಾಲೇಜು ಹೊಸ ಕಟ್ಟಡ ನಿರ್ಮಾಣವಾಗಿ 6 ತಿಂಗಳಾದರೂ ಸ್ಥಳಾಂತರವಾಗಿಲ್ಲ. ಹಸ್ತಾಂತರ ಮಾಡಲು ಸಿದ್ಧವಿರುವ ಲೋಕೋಪಯೋಗಿ ಇಲಾಖೆ ಮಾತ್ರ ಇಕ್ಕಟ್ಟಿನಲ್ಲಿದೆ.

ಕಾನೂನು ಕಾಲೇಜು ಮಾತ್ರ ಬಾಲಕರ ಸರ್ಕಾರಿ ಕಾಲೇಜಿನ ಆವರಣದಲ್ಲಿ ಕಳೆದ 15 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ಹೊಸ ಕಟ್ಟಡ ಸಿದ್ಧಗೊಂಡಿದ್ದರೂ ಅಲ್ಲಿಗೆ ಹೋಗಲು ಕಾನೂನು ಕಾಲೇಜು ಮೀನ- ಮೇಷ ಎಣಿಸುತ್ತಿದೆ ಎಂದು ಆರೋಪಿಸುತ್ತಿರುವ ಬಾಲಕರ ಕಾಲೇಜಿನ ಹಲವು ಬೋಧಕ ಸಿಬ್ಬಂದಿ ಅಸಮಾಧಾನವನ್ನೂ ವ್ಯಕ್ತಪಡಿಸತೊಡಗಿದ್ದಾರೆ.ಕೊಠಡಿಗಳ ಕೊರತೆಯನ್ನು ಎದುರಿಸುತ್ತಿರುವ ಬಾಲಕರ ಕಾಲೇಜಿಗೆ ಈಗ ಕಾನೂನು ಕಾಲೇಜು ಒಲ್ಲದ ಅತಿಥಿಯಂತಾಗಿದೆ.

ಕಾನೂನು ಕಾಲೇಜಿನ ತರಗತಿಗಳು ಹಲವು ಕೊರತೆಗಳ ಬಾಲಕರ ಕಾಲೇಜಿನ ಹಲವು ಕೊಠಡಿಗಳಲ್ಲೆ ನಡೆಯುತ್ತಿವೆ. ಬಾಲಕರ ಕಾಲೇಜಿನ ಗ್ರಂಥಾಲಯದ ಜಾಗದಲ್ಲೂ ಕಾನೂನು ಕಾಲೇಜು ಪಾಲು ಪಡೆದಿರುವ ಪರಿಣಾಮವಾಗಿ ಗ್ರಂಥಾಲಯದ ಅಭಿವೃದ್ಧಿಯೂ ಸಾಧ್ಯವಾಗುತ್ತಿಲ್ಲ ಎಂಬ ಶೈಕ್ಷಣಿಕ ತಕರಾರು ಕೂಡ ಇಲ್ಲಿದೆ. ಕಾನೂನು ಕಾಲೇಜಿನಲ್ಲಿ ಕಡ್ಡಾಯವಾಗಿ ಇರಬೇಕಾದ ಮೂಟ್‌ಕೋರ್ಟ್ (ಅಣಕು ನ್ಯಾಯಾಲಯ) ಕೂಡ ಇಲ್ಲಿಲ್ಲ. ಉನ್ನತ ಅಧಿಕಾರಿಗಳು ತಪಾಸಣೆಗೆ ಬಂದಾಗ ದೊಡ್ಡದಾದ ಒಂದು ಕೊಠಡಿಯಲ್ಲಿಯೇ ಅಣುಕು ನ್ಯಾಯಾಲಯವನ್ನು ಸಿದ್ಧಪಡಿಸಲಾಗುತ್ತದೆ. ನಂತರ ಅದನ್ನು ವಿಸರ್ಜಿಸಿ ತರಗತಿಗಳನ್ನು ಮುಂದುವರಿಸಲಾಗುತ್ತಿದೆ.

‘ಹೊಸ ಕಟ್ಟಡವನ್ನು ಕಾಲೇಜು ವಶಕ್ಕೆ ಪಡೆಯಬೇಕು ಎಂದು ಕೋರಿ ಪ್ರಾಂಶುಪಾಲರಿಗೆ ಹಲವು ಪತ್ರ ಬರೆದಿದ್ದೇವೆ. ಅಲ್ಲದೆ, ಕಾಲೇಜಿಗೆ ಭೇಟಿ ನೀಡಿ ಮನವಿಯನ್ನೂ ಮಾಡಿದ್ದೇವೆ. ಆದರೆ ಕಾಲೇಜು ಮಾತ್ರ ಯಾವ ಪ್ರತಿಕ್ರಿಯೆಯನ್ನೂ ತೋರುತ್ತಿಲ್ಲ. ಸ್ಥಳಾಂತರಕ್ಕೆ ಕಾಲೇಜು ಮನಸ್ಸು ಮಾಡುತ್ತಿಲ್ಲ ಎಂಬುದು ಲೋಕೋಪಯೋಗಿ ಮೂಲಗಳ ಅಸಮಾಧಾನದ ನುಡಿ.

‘ಕಾಲೇಜಿನ ಈ ನಿಲುವಿನ ಪರಿಣಾಮವಾಗಿ, ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಾಲೇಜು ಉಪಯೋಗಕ್ಕೆ ಬಾರದಂತಾಗಿದೆ. ಕಾವಲು ಸಿಬ್ಬಂದಿಯ ಕೊರತೆಯ ಕಾರಣದಿಂದ ಅನೈತಿಕ ಚಟುವಟಿಕೆಗಳ ತಾಣವೂ ಆಗಬಹುದಾದ ಸಾಧ್ಯತೆ ಇದೆ. ಅದಕ್ಕೆ ಮುನ್ನ ಕಾಲೇಜುಪ್ರಾಂಶುಪಾಲು ಎಚ್ಚೆತ್ತುಕೊಳ್ಳಬೇಕು’ ಎಂಬುದು ಅಧಿಕಾರಿಗಳ ಸಲಹೆ.

‘ಬಾಲಕರ ಕಾಲೇಜಿನಲ್ಲಿ ಪದವಿ ಕೋರ್ಸ್‌ಗಳು, ಕನ್ನಡ, ರಾಜ್ಯಶಾಸ್ತ್ರದ ಸ್ನಾತಕೋತ್ತರ ಕೋರ್ಸ್‌ಗಳಿವೆ. ಒಟ್ಟು 1900 ವಿದ್ಯಾರ್ಥಿಗಳಿದ್ದಾರೆ. ಕೊಠಡಿಗಳ ಕೊರತೆ ಕಾಡುತ್ತಿದೆ. ಇಂಥ ವೇಳೆ ಹೊಸ ಕಟ್ಟಡಕ್ಕೆ ಹೋಗದೆ ಕಾನೂನು ಕಾಲೇಜು ವಿಳಂಬ ಮಾಡುವುದು ಸರಿಯಲ್ಲ. ಸ್ಥಳಾಂತರಗೊಂಡರೆ ನಮ್ಮ ಕಾಲೇಜಿಗೆ ಅನುಕೂಲವಾಗಲಿದೆ. ಆ ದಿನವನ್ನು ನಾವು ಎದುರು ನೋಡುತ್ತಲೇ ಇದ್ದೇವೆ’ ಎಂಬುದು ಇತಿಹಾಸ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ ಎ.ವಿ.ರೆಡ್ಡಿಯವ ನುಡಿ.

15 ವರ್ಷದ ಹಿಂದೆ ತಾತ್ಕಾಲಿಕ ಅವಧಿಗೆಂದು ಕಾನೂನು ಕಾಲೇಜಿಗೆ ನಮ್ಮ ಕಾಲೇಜಿನಲ್ಲಿ ಸ್ಥಳಾವಕಾಶವನ್ನು ನೀಡಲಾಯಿತು. ನಂತರ ಅದು ನಮ್ಮ ಕಾಲೇಜಿನ ಭಾಗವೇ ಆದಂತೆ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಹೊಸ ಕಟ್ಟಡಕ್ಕೆ ಹೋಗಲು ಇನ್ನೂ ಮನಸು ಮಾಡುತ್ತಿಲ್ಲ’ ಎಂಬುದು ಹೆಸರು ಹೇಳಲು ಬಯಸದ ಕೆಲವು ಉಪನ್ಯಾಸಕರ ಅಭಿಪ್ರಾಯ. ಹೊಸ ಕಟ್ಟಡಕ್ಕೆ ಸ್ಥಳಾಂತರ ಪ್ರಕ್ರಿಯೆ ವಿಳಂಬವಾಗಲು, ಕೆಲವೇ ದಿನಗಳ ಹಿಂದೆ ನಿವೃತ್ತರಾದ ಕಾನೂನು ಕಾಲೇಜು ಪ್ರಾಂಶುಪಾಲರ ನಿರಾಸಕ್ತಿಯೇ ಕಾರಣ ಎಂಬುದು ಅವರ ಆರೋಪ.


ಶೀಘ್ರ ಸ್ಥಳಾಂತರ: ‘ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಬಾರದು ಎಂಬ ಉದ್ದೇಶವೇನಿಲ್ಲ. ಪ್ರಸ್ತುತ ರಜೆ ಇದ್ದು, ಪರೀಕ್ಷೆಗಳು ನಡೆಯುತ್ತಿವೆ. ಜ.10ರಿಂದ ಬೋಧಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಅವರೊಡನೆ ಚರ್ಚಿಸಿ ನಂತರ ಕ್ಷೇತ್ರದ ಶಾಸಕರನ್ನು ಮತ್ತು ಸಂಸದರನ್ನು ಭೇಟಿಯಾಗಿ ಕಾಲೇಜು ಹೊಸ ಕಟ್ಟಡದ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗುವುದು’ ಎಂದು ಇತ್ತೀಚೆಗಷ್ಟೆ ಉಸ್ತುವಾರಿ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿರುವ ಕೃಷ್ಣಪ್ಪ ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT