ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಜಾರಿಗೆ ಉದಾಸೀನ

Last Updated 22 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಆಧುನಿಕ ಕೃತಿಸ್ವಾಮ್ಯ ಕಾನೂನನ್ನು ಮೊದಲಿಗೆ ಜಾರಿಗೊಳಿಸಿದ ದೇಶವೆಂದರೆ ಇಂಗ್ಲೆಂಡ್‌. 17 ಮತ್ತು 18ನೇ ಶತಮಾನಗಳಲ್ಲಿ ನಿಧಾನವಾಗಿ ಬೌದ್ಧಿಕ ಸ್ವತ್ತಿನ ಮತ್ತು ಲೇಖಕರ ಹಕ್ಕುಗಳ ಪರಿಕಲ್ಪನೆಗಳು ಜಾಗತಿಕವಾಗಿ ಸ್ಪಷ್ಟ ರೂಪು ಪಡೆದವು. ಭಾರತದಲ್ಲಿ  ಕೃತಿಸ್ವಾಮ್ಯ ಹಕ್ಕುಗಳು 1957ರಲ್ಲಿ ಒಂದು ಸ್ಪಷ್ಟ ಚೌಕಟ್ಟಿಗೆ ಒಳಪಟ್ಟವು. ಬ್ರಿಟಿಷರೇ ನಮಗೆ ಈ ದಿಸೆಯಲ್ಲಿ ಪ್ರಪಿತಾಮಹರು.

ದುರದೃಷ್ಟವೆಂದರೆ ಭಾರತದಲ್ಲಿ ಕೃತಿಸ್ವಾಮ್ಯ ಹಕ್ಕುಗಳು ಮತ್ತು ಆ ಕುರಿತ ಕಾನೂನುಗಳ ಬಗ್ಗೆ ಸಾರ್ವಜನಿಕರಾಗಲಿ, ಸರ್ಕಾರವಾಗಲಿ ಗಂಭೀರ ಚಿಂತನೆ ಮಾಡಿದ ಹಾಗಿಲ್ಲ.  ನಮ್ಮ ಕಾನೂನುಗಳೂ ಕೂಡಾ ಅಷ್ಟೊಂದು ಬಲಿಷ್ಠವಾಗಿಲ್ಲ. ಕೃತಿಸ್ವಾಮ್ಯ ಉಲ್ಲಂಘನೆಗೆ ನೀಡಲಾಗುವ ಶಿಕ್ಷೆಯ ಪ್ರಮಾಣ ಕೂಡಾ ತೀರಾ ಕನಿಷ್ಠವಾದದ್ದು.

1966ರಲ್ಲಿ ಫ್ರೆಂಚ್‌ ಸರ್ಕಾರವು ಒಂದು ಆದೇಶವನ್ನು ಹೊರಡಿಸುವ ಮೂಲಕ, ಅನುಮತಿಯಿಲ್ಲದೆ ಯಾವುದೇ ಸಂಗತಿಯನ್ನು ಮುದ್ರಿಸುವುದನ್ನು ನಿರ್ಬಂಧಿಸಿತು ಮತ್ತು ಇದನ್ನು ಉಲ್ಲಂಘನೆ ಮಾಡಿದವರಿಗೆ ನೇಣು ಹಾಕುವ ಅಥವಾ ಕತ್ತು ಹಿಸುಕುವ ಮೂಲಕ ಶಿಕ್ಷೆ ನೀಡಲಾಗುತ್ತಿತ್ತು.

ಪಾಶ್ಚಿಮಾತ್ಯರಲ್ಲಿ ಈ ಬಗ್ಗೆ ಎಷ್ಟೊಂದು ಕಾಳಜಿ, ಜಾಗೃತಿ ಇತ್ತು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ ಮಾತ್ರ. ಇಂದು ಕೃತಿಸ್ವಾಮ್ಯ ಹಕ್ಕುಗಳ ಉಲ್ಲಂಘನೆ ವ್ಯಾಪಕವಾಗಿ ನಡೆಯುತ್ತಿದೆ. ಪ್ರತಿವರ್ಷ ಕೋರ್ಟುಗಳಲ್ಲಿ ಈ ಸಂಬಂಧದ ಮೊಕದ್ದಮೆಗಳ ಸಂಖ್ಯೆ ಏರುತ್ತಲೇ ಇದೆ. ಇದನ್ನು ಮನಗಂಡು ಭಾರತ ಸರ್ಕಾರ ಕೃತಿಸ್ವಾಮ್ಯ ಹಕ್ಕುಗಳನ್ನು ಉಲ್ಲಂಘಿಸುವ ಮೊಕದ್ದಮೆಗಳ ವಿಚಾರಣೆಗಾಗಿ ಕೃತಿಸ್ವಾಮ್ಯ ಮಂಡಳಿಯೊಂದನ್ನು ರಚಿಸಿದೆ.

ಕೃತಿಸ್ವಾಮ್ಯ ಹಕ್ಕುಗಳ ಮಂಡಳಿ: ಕೃತಿಸ್ವಾಮ್ಯ ಹಕ್ಕುಗಳನ್ನು ಕದಿಯುವವರನ್ನು ಮಟ್ಟಹಾಕಲು ಭಾರತೀಯ ಪ್ರಕಾಶಕರ ಒಕ್ಕೂಟವು ಕೃತಿಸ್ವಾಮ್ಯ ಹಕ್ಕುಗಳ ಮಂಡಳಿಯೊಂದನ್ನು ರಚಿಸಿದೆ. ಈ ಮಂಡಳಿಯು ಪ್ರಕಾಶಕರ ಒಕ್ಕೂಟದ ಸದಸ್ಯರು, ತಜ್ಞರು, ಕಾನೂನು ಪರಿಣತರು, ಧ್ವನಿಲೇಖನ ಯಂತ್ರ ಕೈಗಾರಿಕೆಯ ಪ್ರತಿನಿಧಿಗಳು, ಸಿನಿಮಾ ಉದ್ಯಮದ ಮಂದಿ, ಬೌದ್ಧಿಕ ಆಸ್ತಿ ಹಕ್ಕು ಹಾಗೂ ಲೇಖಕರ ಮಂಡಳಿಯ ಪ್ರತಿನಿಧಿಗಳನ್ನು ಒಳಗೊಂಡಿದೆ. ಕೇಂದ್ರ ಸರ್ಕಾರವು ಈ ಮಂಡಳಿಗೆ ಕಾನೂನುಬದ್ಧ ಮಾನ್ಯತೆ ನೀಡಿದೆ.

ವಿಶೇಷ ಸಂಗತಿ ಎಂದರೆ ಈ ಮಂಡಳಿಯು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ. ಇದು ಕೃತಿಸ್ವಾಮ್ಯ ಹಕ್ಕುಗಳ ಜಾರಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದು.

ಕೃತಿಸ್ವಾಮ್ಯ ಹಕ್ಕುಗಳ ಉಲ್ಲಂಘನೆ ಕುರಿತಂತೆ ಕ್ರಮ ಕೈಗೊಳ್ಳಲು ಇರುವ ವಿವಿಧ ಸಂಸ್ಥೆಗಳು ಜಾರಿ ನಿರ್ದೇಶನಾಲಯಗಳ ನಡುವೆ ಸಮನ್ವಯತೆ ಮೂಡಿಸುವ ಕೆಲಸವನ್ನು ಟೊಂಕಕಟ್ಟಿ ನಿರ್ವಹಿಸುತ್ತಿದೆ. ಭಾರತದಲ್ಲಿ ಮಾನವ ಸಂಪನ್ಮೂಲ ಸಚಿವಾಲಯ ಕೃತಿಸ್ವಾಮ್ಯ ಹಕ್ಕುಗಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತನ್ನ ಪರಮಾಧಿಕಾರ ಹೊಂದಿದೆ. ಅದಕ್ಕಾಗಿ ಈ ಸಚಿವಾಲಯವು ಕೃತಿಸ್ವಾಮ್ಯ ಹಕ್ಕುಗಳ ಜಾರಿ ನಿರ್ದೇಶನ ಸಲಹಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಎಲ್ಲಾ ರಾಜ್ಯಗಳ ಹಿರಿಯ ಪೊಲೀಸ್‌ ಅಧಿಕಾರಿಗಳು, ಗೃಹ ಕಾರ್ಯದರ್ಶಿಗಳು, ಪ್ರಕಾಶನ ಸಂಸ್ಥೆಗಳು, ಲೇಖಕರ ಸಂಘಗಳು ಹಾಗೂ ಭಾರತೀಯ ಧ್ವನಿಯಂತ್ರ ಹಕ್ಕುಗಳ ಸಂಘಟನೆಯ ಲೇಖಕರು ಇದ್ದಾರೆ.

ಈ ಸಮಿತಿಯು ಕಾಲಕಾಲಕ್ಕೆ ದೇಶದಲ್ಲಿನ ಕೃತಿಸ್ವಾಮ್ಯ ಹಕ್ಕುಗಳ ಉಲ್ಲಂಘನೆ ಕುರಿತ ಸಂಗತಿಗಳ ಪರಾಮರ್ಶೆ ನಡೆಸುತ್ತದೆ. ಕೃತಿಸ್ವಾಮ್ಯ ಹಕ್ಕುಗಳ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ  ವಿಚಾರ ಸಂಕಿರಣ, ತರಬೇತಿ ಶಿಬಿರಗಳನ್ನು ಆಯೋಜಿಸುತ್ತದೆ. ಭಾರತೀಯ ಪ್ರಕಾಶಕರ ಒಕ್ಕೂಟ ಜನಜಾಗೃತಿಗಾಗಿಯೇ ಕಾನೂನು ಜಾರಿ ಕೈಪಿಡಿಯನ್ನು ರಚಿಸಿದೆ.

ಕೈಪಿಡಿಯಲ್ಲೇನಿದೆ?: ಕೃತಿಸ್ವಾಮ್ಯ ಹಕ್ಕುಗಳ ಉಲ್ಲಂಘನೆ ಸಂಬಂಧ ಯಾರಾದರೂ ದೂರು ಸಲ್ಲಿಸಿದರೆ ಕೂಡಲೇ ಅದನ್ನು ದಾಖಲಿಸಿಕೊಳ್ಳಬೇಕು. ಫಿರ್ಯಾದುದಾರ ದೂರಿನಲ್ಲಿ ತಿಳಿಸಿದ ಸ್ಥಳಕ್ಕೆ ತಕ್ಷಣವೇ ಹೋಗಿ ಪರಿಶೀಲನೆ ಮಾಡಬೇಕು.  ಅಲ್ಲಿ ದೊರೆಯುವ ಸಾಕ್ಷಗಳನ್ನು ನಾಶಪಡಿಸದಂತೆ ತಡೆಯಬೇಕು ಮತ್ತು ಅವುಗಳನ್ನು ವಶಕ್ಕೆ ಪಡೆಯಬೇಕು. ಈ ರೀತಿ ವಶಕ್ಕೆ ಪಡೆದ ಸಾಕ್ಷಗಳನ್ನು ಅಥವಾ ವ್ಯಕ್ತಿಗಳನ್ನು ಸಂಬಂಧಿಸಿದ ಕೋರ್ಟಿಗೆ ನಿರ್ದಿಷ್ಟ ಅವಧಿಯಲ್ಲಿ ಹಾಜರು ಪಡಿಸಬೇಕು. 

ಕೃತಿಸ್ವಾಮ್ಯ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ಕಂಡು ಬಂದ ಸ್ಥಳ ಅಥವಾ ವ್ಯಕ್ತಿಯ ವಿರುದ್ಧ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಸಂಗತಿಗಳನ್ನು ಈ ಕೈಪಿಡಿ ಒಳಗೊಂಡಿದೆ.ಸಾರ್ವಜನಿರಲ್ಲಿ ಇರುವ ಅವಜ್ಞೆಯಿಂದಾಗಿಯೇ ಕೃತಿಸ್ವಾಮ್ಯ ಹಕ್ಕುಗಳ ಉಲ್ಲಂಘನೆಯ ದೂರುಗಳು ಬಂದಾಗ ಕಾನೂನು ಪರಿಣಾಕಾರಿಯಾಗಿ ಜಾರಿಗೊಳ್ಳುತ್ತಿಲ್ಲ.

ಇವುಗಳು ಅಂತಹ `ಲಾಭದಾಯಕ~ ಪ್ರಕರಣಗಳು ಅಲ್ಲ ಎಂಬುದು ಗೊತ್ತಿರುವುದರಿಂದ `ಆಯ್ತು ಕಂಪ್ಲೇಟ್‌ ಕೊಟ್ಟು ಹೋಗಿ ನೋಡೋಣ~ ಎಂಬ ಉದಾಸೀನವೇ ಕಾನೂನು ಪಾಲಕರ ಸಾಮಾನ್ಯ ಪ್ರತಿಕ್ರಿಯೆ. ಕೃತಿಸ್ವಾಮ್ಯ ಹಕ್ಕುಗಳ ಜಾರಿನಿರ್ದೇಶನ ಸಲಹಾ ಮಂಡಳಿಯ ಚಟುವಟಿಕೆಗಳ ಪರಿಣಾಮ ಈಗ ಕೃತಿಸ್ವಾಮ್ಯ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳಲ್ಲಿ ಆರ್ಥಿಕ ಅಪರಾಧ ವಿಭಾಗಗಳನ್ನು ಸ್ಥಾಪಿಸಲಾಗಿದೆ.
 
ಈ ವಿಭಾಗಗಳು ಗ್ರಂಥಸ್ವಾಮ್ಯ ಹಕ್ಕುಗಳ ಉಲ್ಲಂಘನೆಯ ಕುರಿತ ಪ್ರಕರಣಗಳ ವಿಚಾರಣೆ ನಡೆಸುತ್ತದೆ. ಹೀಗಿದ್ದರೂ ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ.

ಯಹೂದಿಯರ ಪ್ರಾಚೀನ ಕಾನೂನುಗಳನ್ನು `ತಾಲ್ಮದಿಕ್‌ ಕಾನೂನು~ ಎಂದು ಕರೆಯಲಾಗುತ್ತದೆ. ಇದು ಅನೇಕ ಪ್ರವಾದಿಗಳಿಂದ ಬರೆಯಲ್ಪಟ್ಟಿತು ಎಂಬ ನಂಬಿಕೆ ಇದೆ. ನಂತರದ ಪ್ರವಾದಿಗಳು ತಮ್ಮ ಹಿಂದಿನ ಪ್ರವಾದಿಗಳ ಹೆಸರನ್ನು ಉಲ್ಲೇಖಿಸುತ್ತಾ ಇದನ್ನು ಇಂದಿನ ಜನಾಂಗದವರಿಗೂ ಮುಟ್ಟಿಸಿದ್ದಾರೆ ಎಂದೇ ತರ್ಕಿಸಲಾಗುತ್ತದೆ.

ಈ ತಾಲ್ಮದಿಕ್‌ ಕಾನೂನಿನಲ್ಲಿ ಕಾನೂನಿನ ತತ್ವಗಳನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮೌಖಿಕವಾಗಿ ಹಸ್ತಾಂತರ ಮಾಡುತ್ತಿರುವ ವರದಿಗಾರರು, ಅಂಥ ತತ್ವಗಳ ಲೇಖಕನ ಹೆಸರನ್ನು ಮರೆಯದಂತೆ ತುಂಬ ಎಚ್ಚರಿಕೆ ವಹಿಸಲಾಗುತ್ತಿತ್ತು. ಒಬ್ಬ ವರದಿಗಾರನು ಒಂದು ಮೂಲ ತತ್ವವನ್ನು ವಿಕಸಿತಗೊಳಿಸಿದರೆ ಮಾತ್ರ ಅವನು ಅದನ್ನು ತನ್ನ ಸ್ವಂತ ತತ್ವ ಎಂದು ಹೇಳುತ್ತಿದ್ದನು. ಭಾರತೀಯ ಮತ್ತು ತಾಲ್ಮುದಿಕ್‌ ಕಾನೂನಿನ ಈ ತತ್ವಗಳು ಆಧುನಿಕ ಕೃತಿಸ್ವಾಮ್ಯವನ್ನು ಹೆಚ್ಚು ಹೋಲುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT