ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ತಿದ್ದುಪಡಿ ಮಂತ್ರದಂಡವಲ್ಲ!

Last Updated 17 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಪಂಚಾಯತ್ ರಾಜ್ ಕಾನೂನಿನಲ್ಲಿ ಆಮೂಲಾಗ್ರ ಬದಲಾ­ವಣೆ ತರುವ ಪ್ರಯತ್ನವೀಗ ನಡೆದಿದೆ. ಇದಕ್ಕಾಗಿ  ಕಾಂಗ್ರೆಸ್‌ನ ಹಿರಿಯ ಶಾಸಕ ಮತ್ತೂ  ವಿಧಾನಸಭೆಯ ಮಾಜಿ ಅಧ್ಯಕ್ಷ  ರಮೇಶ್‌ಕುಮಾರ್ ಅವರ ಹಿರಿತನದಲ್ಲಿ ರಚಿಸಲಾಗಿದ್ದ ಸಮಿತಿ ಇನ್ನೇನು ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ. ಸುಮಾರು ಮೂರು ದಶಕಗಳಿಂದ ಜಾರಿಯಲ್ಲಿರುವ ಪಂಚಾಯತ್ ರಾಜ್‌ ಪ್ರಯೋಗ ಅತ್ತೆಯ ಮನೆಯವರ ಅಕ್ಕರೆ­ಯಿಲ್ಲದ, ತವರು ಮನೆಯ ನೆರವಿಲ್ಲದ  ಸೊಸೆಯ ಬಾಳಿನಂತೆ ಉಳಿದುಕೊಂಡಿದೆ.

೧೯೯೩ ಹೊಸ  ಕಾನೂನು ತಂದ ಕಾಂಗ್ರೆಸ್ ಸರ್ಕಾರ ಅದನ್ನು ರಾಜಕೀಯ ಕಾರಣಗಳಿಗಾಗಿ ಜಾರಿಗೊಳಿಸಲಿಲ್ಲ. ಅದು ಕಾರ್ಯ­ರೂಪಕ್ಕೆ ಬಂದದ್ದು ೧೯೯೪ರಲ್ಲಿ ದೇವೇಗೌಡರ ನೇತೃತ್ವದ ಅವಿ­ಭಜಿತ ಜನತಾದಳದ ಸರ್ಕಾರ ಬಂದಾಗ. ೨೦೦೩ರಲ್ಲಿ ಅಂದಿನ ಕಾಂಗ್ರೆಸ್  ಸರ್ಕಾರ ಪಂಚಾಯತ್ ರಾಜ್ ಕಾನೂನಿ­ನಲ್ಲಿ ಆಮೂ­ಲಾಗ್ರ ಬದಲಾವಣೆ ಮಾಡಿ ಈ ಸಂಸ್ಥೆ­ಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟಿತು. ಆದರೆ ಆದು ಜಾರಿಗೆ ಬಂದದ್ದು ೨೦೦೪ರ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಕಾಲದಲ್ಲಿ. ಇದಕ್ಕೆ ಮುಖ್ಯ ಕಾರಣ­ವೆಂದರೆ ಕಾನೂನಿನಲ್ಲಿ ಕೊಟ್ಟ ಅಧಿಕಾರವನ್ನು ಜಾರಿಗೊಳಿಸುವುದಕ್ಕೆ ಅಗತ್ಯವಿರುವ ಸರ್ಕಾರಿ ಆದೇಶಗಳೇ ಆಗಿರಲಿಲ್ಲ.

ಇಷ್ಟರ ಮೇಲೆ ಅದು ಕಾರ್ಯರೂಪಕ್ಕೆ ಬರುವುದಕ್ಕೆ  ೨೦೦೪ರ ವಿಧಾನ ಸಭೆಯಲ್ಲಿ  ಹಿರಿಯ ಕಾಂಗ್ರೆಸ್ ಶಾಸಕ, ಡಿ. ಅರ್ ಪಾಟೀಲರ ನೇತೃತ್ವದ  ಭರವಸೆಗಳ ಸಮಿತಿ ಈ ವಿಷಯನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕಾಯಿತು. ಅಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದ ಚಿರಂಜೀವಿ ಸಿಂಗ್‌ ‘ಸಂಸತ್ತು ಸಂವಿಧಾನ ತಿದ್ದುಪಡಿ ಮೂಲಕ ತನ್ನ ಕಾರ್ಯನಿರ್ವಹಿಸಿದೆ. ಶಾಸನ ಸಭೆ ಕಾನೂನು ಪಾಸು ಮಾಡಿ ತನ್ನ ಕರ್ತವ್ಯ ಮಾಡಿದೆ. ಕಾರ್ಯಾಂಗ ಅದನ್ನು ಜಾರಿಗೊಳಿಸಲು ಏಕೆ ವಿಫಲ­ವಾಗಿದೆ?’  ಎಂಬ ಪ್ರಶ್ನೆಯನ್ನು ಉನ್ನತಾಧಿಕಾರಿ­ಗಳ ಮುಂದಿಟ್ಟದ್ದ­ರಿಂದ ಸರ್ಕಾರಿ ಆದೇಶ ಹೊರಬಿತ್ತು.

ರಾಮಕೃಷ್ಣ ಹೆಗಡೆ, ನಜೀರ್ ಸಾಬ್ ಅವರ ನಂತರ ೧೯೯೩, ಮತ್ತು ೨೦೦೩ ರಲ್ಲಿ ಎರಡು ಬಾರಿ ಪಂಚಾಯತ್ ರಾಜ್ ಕಾಯ್ದೆಗೆ ಹಲವು ತಿದ್ದುಪಡಿ­ಗಳಾಗಿವೆ. ಪ್ರತೀ ಬಾರಿಯೂ ಬದಲಾವಣೆ­ಗಳೂ ವ್ಯವಸ್ಥೆಯನ್ನು ದುರ್ಬಲ­ಗೊಳಿಸಿ­ದೆಯೇ ಹೊರತು ಸಬಲಗೊಳಿಸಲಿಲ್ಲ. ೧೯೮೭­ರಲ್ಲಿ ಜಾರಿಗೆ ಬಂದ  ಮೊದಲ ವ್ಯವಸ್ಥೆ ಅಧಿಕೃತವಾಗಿ ಐದು ವರ್ಷದ ಅವಧಿ ಇದ್ದರೂ, ವಾಸ್ತವವಾಗಿ ಕೆಲಸ ಮಾಡಿದ್ದು ಬರೀ ಎರಡು ವರ್ಷ ಮಾತ್ರ ೧೯೮೯ರಲ್ಲಿ ಬಂದ ಕಾಂಗ್ರೆಸ್ ಸರ್ಕಾರ ರಾಜಕೀಯ ಕಾರಣ­ಗಳಿಗಾಗಿ ಉಸಿರು­ಗಟ್ಟಿಸುವ ವಾತಾವರಣ ನಿರ್ಮಿಸಿತು. ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ನೇತೃತ್ವ ರೂಪು­ಗೊಂಡಿದ್ದು ಈ ಅವಧಿಯಲ್ಲಷ್ಟೇ  ಜಿಲ್ಲಾ ಪರಿಷತ್‌ನ ಸದಸ್ಯರು ಶಾಸಕರು, ಸಂಸದರು ಮತ್ತು ಮಂತ್ರಿಗಳೂ ಆದರು. 1993ರ ನಂತರ ವಂತೂ ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ನಾಯಕತ್ವವೇ ಬೆಳೆಯಲಿಲ್ಲ.

ವಿಕೇಂದ್ರೀಕೃತ ರಾಜಕಾರಣಕ್ಕೆ ದೊಡ್ಡ ಪೆಟ್ಟು ಬಿದ್ದದ್ದು ದೇವೇಗೌಡರು ಮುಖ್ಯ­ಮಂತ್ರಿ­ಯಾಗಿದ್ದ ಅವಧಿಯಲ್ಲಿ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ  ಅಂದಿನ ಸರ್ಕಾರ, ಪಂಚಾಯತ್ ಅಧ್ಯಕ್ಷ, ಉಪಾದ್ಯಕ್ಷರ ಅವಧಿಯನ್ನು ಐದು ವರ್ಷಗಳಿಂದ ೨೦ ತಿಂಗಳಿಗೆ ಇಳಿಸಿತು. ಹೆಚ್ಚು ಹೆಚ್ಚು ಜನರು ಈ ಹುದ್ದೆಗಳನ್ನು ಪಡೆಯುವದರ ಮೂಲಕ ಸಾಮಾಜಿಕ ನ್ಯಾಯದ ಉದ್ದೇಶವೇನೋ ನೆರವೇರಿತು. ಆದರೆ ಇದರ ದುರುಪಯೋಗವೂ ಆಯಿತು.  ೨೦ ತಿಂಗಳ ಅವಧಿಯನ್ನು ಅನೌಪಚಾರಿಕವಾಗಿ ೧೦ ತಿಂಗಳಿಗೆ, ಕೆಲ ಬಾರಿ ಐದು ತಿಂಗಳಿಗೆ ಇಳಿಸಿದ್ದರಿಂದ ಈ ಚುನಾಯಿತ ಸಂಸ್ಥೆಗಳಿಗೆ ಇರುವ ಘನತೆ ಗೌರವಗಳು ಹೋಗಿ  ಹಾಸ್ಯಾಸ್ಪದ ಸಂಸ್ಥೆಗಳಾದವು.

ಒಮ್ಮೆ ದುರುಪಯೋಗ ಆರಂಭವಾದ ನಂತರ ರಾಜಕೀಯ ಪಕ್ಷಗಳೆಲ್ಲವೂ ಕಣ್ಣುಮುಚ್ಚಿ ಕುಳಿತಿದ್ದನ್ನು ನೋಡಿದರೆ ಶಾಸಕರಿಗೆ ಪಂಚಾ­ಯತ್ ಸಂಸ್ಥೆಗಳು ಬಲಗೊಳ್ಳುವದು ಬೇಡ­ವಾಗಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ‘ಹಳ್ಳಿ­ಯಲ್ಲಿ ಒಂದು ಬೀದಿ ದೀಪ ರಸ್ತೆ ಮಾಡುವ ಅಧಿ­ಕಾರವೂ ನಮಗಿಲ್ಲದೇ ಹೋದರೆ  ನಾವು ಏಕೆ ಇರಬೇಕು?’ ಎಂದು ಧಾರವಾಡದ ಅಂದಿನ ಸಂಸದ ದಿ. ಡಿ. ಕೆ. ನಾಯಕ ಒಂದು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಕೇಳಿದ್ದು ನೆನಪಾಗುತ್ತದೆ.

ಅಧಿಕಾರದಲ್ಲಿ ಮೆರೆಯ ಬಯಸುವ  ಅಲ್ಪಾವಧಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಈ ವ್ಯವಸ್ಥೆಯನ್ನು ಅರ್ಥ­ಮಾಡಿಕೊಳ್ಳುವದಕ್ಕೆ ಸಮಯವಾಗಲೀ, ವ್ಯವ­ಧಾನವಾಗಲೀ ಇಲ್ಲ. ಈ ಪರಿಸ್ಥಿತಿಯಲ್ಲಿ, ಗ್ರಾಮೀಣ ಭಾಗದಲ್ಲಿ ಹೊಸ ಧುರೀಣತ್ವ ಬೆಳೆದೀತು ಎಂದು ಅಪೇಕ್ಷಿಸುವದಾದರೂ ಹೇಗೆ? ಮೀಸಲಾತಿಯನ್ನು ಪ್ರತೀ ಅವಧಿಗೆ ಬದ­ಲಾಯಿಸು­ವುದರಿಂದ ಯಾವ ಸದಸ್ಯನೂ ತನ್ನ ಕ್ಷೇತ್ರದ ಜನರಿಗೂ ಬದ್ಧನಾಗಿ ಉಳಿಯದ ಸ್ಥಿತಿ ಇದೆ.

ತಾನು ಮಾಡಿದ ಕೆಲಸ ತನ್ನ ನಾಯಕತ್ವಕ್ಕೆ ಅನುಕೂಲ­ವಾಗ­ಬಹುದೆಂದು ಸದಸ್ಯರು ನಿರೀಕ್ಷಿಸುವಂತೆಯೂ ಇಲ್ಲ.ಈ ಸ್ಥಿತಿಯನ್ನು ಬದಲಾಯಿಸುವುದಕ್ಕೆ ಸರ್ಕಾರಿ ಮುಖ್ಯ­ವಾಗಿ ಮಾಡ­ಬೇಕಿರು­ವುದು ಅಧ್ಯಕ್ಷ ಮತ್ತು ಉಪಾ­ಧ್ಯಕ್ಷರ ಅವಧಿ­ಯನ್ನು ಈ ಹಿಂದಿನಂತೆ ಐದು ವರ್ಷಕ್ಕೆ ವಿಸ್ತರಿಸಬೇಕು. ಜಿಲ್ಲಾ ಪಂಚಾಯತ್‌ಗಳು ನಿಜ ಅರ್ಥದಲ್ಲಿ ಜಿಲ್ಲಾ ಸರ್ಕಾರಗಳಾಗಬೇಕಾದರೆ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿ ಜಿಲ್ಲಾಧಿಕಾರಿ­ಗಿಂತ ಹಿರಿಯ­ರಾಗಿ­ರಬೇಕು. ಹಾಗೆಯೇ ಜಿಲ್ಲಾ ಪಂಚಾಯತ್  ಅಧ್ಯಕ್ಷ, ಉಪಾಧ್ಯಕ್ಷ­ರಿಗೆ ರಾಜ್ಯ ಸಚಿವ ಮಟ್ಟದ ಸ್ಥಾನ ನೀಡಬೇಕು. ಇದಕ್ಕೆ ಕಾನೂನು ಬದಲಾಗಬೇಕು.

ಈಗಿನ ಕಾನೂನಿನಲ್ಲಿಯೇ ಇರುವ ಹಲವಾರು ಉಪಯುಕ್ತ ಅಂಶಗಳನ್ನು ಜಾರಿಗೊಳಿಸುವದು  ಮತ್ತೊಂದು ಅಗತ್ಯ. ಜಿಲ್ಲಾ ಯೊಜನಾ ಸಮಿತಿಗಳ ರಚನೆ. ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಈ ಸಮಿತಿಯ ಮೂಲಕ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯ ಯೋಜನೆ ತಯಾರಿಸಿ, ಅವು­ಗಳನ್ನು ರಾಜ್ಯದ ವಾರ್ಷಿಕ ಯೋಜನೆಯಲ್ಲಿ ಅಳವಡಿಸುವದು. ಇದರಿಂದ ಆಗುವ ಲಾಭಗಳು ಮುಖ್ಯ­ವಾಗಿ ಎರಡು ವಿಧ. ರಾಜ್ಯದ ಯೋಜನೆಗೆ ವಾಸ್ತವತೆಯ ಮೆರಗು ಬಂದು ಅದು ಜನರ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ. ಎರಡನೆ­ಯದಾಗಿ, ಬಹುಕಾಲದಿಂದ ವಿಚಾರಕ್ಕೆ ಒಳಗಾ­ಗಿದ್ದ ಕೆಳ­ಮಟ್ಟದಿಂದ ಯೋಜನಾ ಪ್ರಕ್ರಿಯೆಯನ್ನು ಆರಂಭಿಸುವ ಕನಸು ನನಸಾಗುತ್ತದೆ.

ಈಗಿರುವ ಕಾನೂನಿನಲ್ಲಿ ನಮೂದಿಸಲಾಗಿರುವ ರಾಜ್ಯ ಮಟ್ಟದ ಪಂಚಾಯತ್ ಅಭಿವೃದ್ದಿ ಸಮಿತಿ­ಯನ್ನು ಕ್ರಿಯಾಶೀಲಗೊಳಿಸಿಲ್ಲ.  ಸರ್ಕಾರಕ್ಕೂ ಪಂಚಾಯತ್ ರಾಜ್ ಸಂಸ್ಥೆಗಳಿಗೂ ಇರುವ ಕಂದಕವನ್ನು ದೂರ­ಮಾಡಲು, ಪಂಚಾಯಾತ್ ರಾಜ್ ಸಂಸ್ಥೆಗಳ ಸಮಸ್ಯೆ­ಗಳನ್ನು ಚರ್ಚಿಸುವ ನಿರ್ಧಾರ ತೆಗೆದು­ಕೊಳ್ಳು­ವುದಕ್ಕೆ ಇರುವ ವೇದಿಕೆಯಿದು. ರಾಜ್ಯ ಸರ್ಕಾರಗಳಿಗೆ ಕೇಂದ್ರ ಮಟ್ಟದಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಇರುವಂತೆ ಪಂಚಾಯತ್ ರಾಜ್ ಸಂಸ್ಥೆಗಳ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸಲು ಅಗತ್ಯ­ವಾಗಿದ್ದ ಸಂಸ್ಥೆ ‘ಪಂಚಾಯತ್ ಅಭಿವೃದ್ಧಿ ಸಮಿತಿ’.

ಮುಖ್ಯ­ಮಂತ್ರಿಗಳು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ­ಯಲ್ಲಿ ತಮ್ಮ ಅಹವಾಲುಗಳನ್ನು ಮಂಡಿಸಿ­ದಂತೆ ಪಂಚಾ­­ಯತ್ ರಾಜ್ ಸಂಸ್ಥೆಗಳ ಮುಖ್ಯಸ್ಥರು ರಾಜ್ಯ ಮಟ್ಟದಲ್ಲಿ ನೇರ­ವಾಗಿ ಸರ್ಕಾರಕ್ಕೆ ತಮ್ಮ ಅಹ­ವಾಲು­ಗಳನ್ನು ಸಲ್ಲಿ­ಸುವುದಕ್ಕೆ ಪಂಚಾಯತ್ ಅಭಿವೃದ್ಧಿ ಸಮಿತಿ ಸಹಾಯಕ­ವಾಗುತ್ತಿತ್ತು. ಇದರಿಂದ ಪಂಚಾ­ಯತ್ ರಾಜ್ ವ್ಯವಸ್ಥೆಯ ಕುರಿತಂತೆ ಸರ್ಕಾರ ಏಕ­ಪಕ್ಷೀಯ ತೀರ್ಮಾ­ನ­ಗಳನ್ನು ಕೈಗೊಳ್ಳುತ್ತದೆ ಎಂಬ ಆರೋಪ­ವನ್ನು ನಿವಾರಿ­ಸುವುದಕ್ಕೂ ಸಾಧ್ಯವಿದೆ. ಈಗಿನ ಕಾನೂನಿ­ನಲ್ಲಿಯೇ ಇರುವ ಈ ಪರಿಕಲ್ಪನೆಯನ್ನು ಇಲ್ಲಿಯ ತನಕ ಜಾರಿಗೊಳಿಸಲಾಗಿಲ್ಲ.

ಸರ್ಕಾರ ತೆಗೆದು ಕೊಂಡಿರುವ ಹಲವಾರು ಆಡಳಿತಾತ್ಮಕ ಕ್ರಮಗಳು ಅನಗತ್ಯ ಗೊಂದಲಗಳಿಗೆ ಎಡೆ ಮಾಡಿದೆ. ಉದಾಹರಣೆಗೆ, ಮೂರು ಹಂತದ ಪಂಚಯಾತ್ ರಾಜ್ ವ್ಯವಸ್ಥೆಯಲ್ಲಿ ಚಟುವಟಿಕೆ ನಕ್ಷೆಯ ಪ್ರಕಾರ ಹಣವನ್ನು ಪ್ರತಿ ಹಂತಕ್ಕೆ ಬಜೆಟ್‌ನಲ್ಲಿ ಒದಗಿಸುವ ಸಂಪನ್ಮೂಲದ ವಿಚಾರದಲ್ಲೂ ಗೊಂದಲವಿದೆ. ರಾಷ್ಟ್ರೀಯ ಉದ್ಯೋಗ ಯೋಜನೆಯ ಅನುಷ್ಠಾನದ ಹೊಣೆ ಗ್ರಾಮ ಪಂಚಾಯಿತಿಗಳಿಗಿದೆ. ಆದರೆ ಇದೇ ಯೋಜನೆಯಡಿ ಬರುವ ಕೇಂದ್ರ ಸರ್ಕಾರದ ಅನುದಾನವನ್ನು ಜಿಲ್ಲಾ ಪಂಚಾಯತ್ ಲೆಕ್ಕಕ್ಕೆ ಸೇರಿಸಿರುವುದರಿಂದ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಶೂನ್ಯವಷ್ಟೇ ದೊರೆಯುತ್ತದೆ. ಚಟುವಟಿಕೆ ನಕ್ಷೆಯಲ್ಲಿರ ಕ್ರಿಯೆಗಳಿಗೆ ಹಣವೇ ದೊರೆಯುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಈ ಚಟುವಟಿಕೆ ನಕ್ಷೆಯನ್ನೇ ಪುನರ್ವಿಮರ್ಶಿಸಬೇಕಾಗಿದೆ.

ಜನರ ಜತೆಗೆ ನೇರ ಸಂಪರ್ಕ ಹೊಂದಿದ ಗ್ರಾಮ ಪಂಚಾ­ಯಿತಿಗಳಿಗೆ ದೊರೆಯುವ ಅನುದಾನ ಇಳಿಕೆ­ಯಾಗುತ್ತಲೇ ಇದೆ. ಹಣಕಾಸು ಆಯೋಗಗಳ ಶಿಫಾ­ರಸು­ಗಳನ್ನು ಜಾರಿಗೊಳಿಸುವಲ್ಲಿನ ವಿಳಂಬ, .ಪಂಚಾ­ಯತ್ ರಾಜ್ ಸಂಸ್ಥೆಗಳಲ್ಲಿ  ಎರವಲು ಸೇವೆಯ ಮೇಲೆ ಬಂದಿರುವ ಸರ್ಕಾರಿ ನೌಕರರ ಮೇಲಿನ ಹತೋಟಿ­ಯಲ್ಲಿ ವಿಪರೀತ ಗೊಂದಲ ನಿವಾರಣೆ ಮೊದ­ಲಾದವುಗಳನ್ನು ಪರಿಹರಿಸಬೇಕಾಗಿದೆ. ಅತಿ­ಮುಖ್ಯವಾಗಿ ಗ್ರಾಮ ಸಭೆಗಳಲ್ಲಿರುವ ಹಾಜರಾತಿ ಕೊರತೆ ಕಾರಣಗಳನ್ನು ಕಂಡು ಹಿಡಿದು ಅದನ್ನು ನಿವಾರಿಸ ಬೇಕಾಗಿದೆ.

ಏಕೆಂದರೆ ಈ ಪ್ರಯೋಗದಲ್ಲಿ ಅಡಕ­ವಾಗಿರುವ ಜನಗಳ ಸಹಯೋಗದೊಡನೆ ಆಡಳಿತ ಎನ್ನುವದು ಸಾಕಾರವಾಗುವದು ಎಷ್ಟರ ಮಟ್ಟಿಗೆ ಗ್ರಾಮ ಸಭೆಗಳು ಪರಿಣಾಮಕಾರಿಯಾಗಿ ಕೆಲಸ­ಮಾಡುತ್ತಿವೆ ಎನ್ನುವದನ್ನು ಅವಲಂಬಿಸಿದೆ. ಇದು ಸಾಧ್ಯ­ವಾಗುವುದಕ್ಕೆ ಅಗತ್ಯವಿರುವ ಕಾನೂನು ಬದಲಾವಣೆಯ ಜತೆಗೆ ಈಗಿರುವ ಕಾನೂನುಗಳ ಸಮರ್ಥ ಜಾರಿಯೂ ಅಗತ್ಯವಿದೆ. ಇದಕ್ಕೆ ಆಡಳಿತಾರೂಢ ರಾಜಕೀಯ ಪಕ್ಷಗಳು ಮತ್ತು ಕಾರ್ಯಾಂಗದ ಬದ್ಧತೆ ಅಗತ್ಯ. ಆಗ ಮಾತ್ರ ಪಂಚಾಯತ್ ರಾಜ್ ಸಂಸ್ಥೆಗಳು ಅತ್ತೆಯ ಮನೆಯ ಅಕ್ಕರೆ, ಮತ್ತು ತವರುಮನೆಯ ಆಶ್ರಯವಿಲ್ಲದೆ ತೊಳಲಾಡುವ ಸೊಸೆಯಂತಾ­ಗದೇ ಮನೆಯ ದೀಪ ಬೆಳಗುವ ಗೃಹಿಣಿಯಂತಾಗುತ್ತವೆ.
(ಲೇಖಕರು ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುತ್ತಿರುವ ಹಿರಿಯ ಪತ್ರಕರ್ತ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT