ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಪದವೀಧರರಿಗೆ ಶಿಷ್ಯ ವೇತನ ಹೆಚ್ಚಳ...

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಾನೂನು ಪದವೀಧರರಿಗೆ ತರಬೇತಿ ಅವಧಿಯಲ್ಲಿ ನೀಡಲಾಗುತ್ತಿದ್ದ ಶಿಷ್ಯ ವೇತನವನ್ನು ಒಂದು ಸಾವಿರ ರೂಪಾಯಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಇದರಿಂದ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಕಾನೂನು ಪದವೀಧರರಿಗೆ ಇನ್ನು ಮುಂದೆ ಮಾಸಿಕ ಎರಡು ಸಾವಿರ ರೂಪಾಯಿ ಶಿಷ್ಯ ವೇತನ ಸಂದಾಯವಾಗಲಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎ.ಎಂ.ಚಿದಾನಂದಸ್ವಾಮಿ ಅವರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.

ಕಾನೂನು ಪದವಿ ಪೂರ್ಣಗೊಳಿಸಿ ಜೀವನದಲ್ಲಿ ನೆಲೆ ನಿಲ್ಲಲ್ಲು ಸಂಕಷ್ಟದಲ್ಲಿರುವ ಪರಿಶಿಷ್ಟ ಸಮುದಾಯದ ಸಾವಿರಾರು ಕಾನೂನು ಪದವೀಧರರಿಗೆ ಸರ್ಕಾರದ ಈ ಆದೇಶ ಹೊಸ ಆಶಾಕಿರಣ ಮೂಡಿಸಿದೆ.

ಜಿಲ್ಲೆಯಲ್ಲಿ 68 ಫಲಾನುಭವಿಗಳು: ಕಾನೂನು ಪದವಿ ಮುಗಿಸಿದ ನಂತರ ಸ್ವತಂತ್ರವಾಗಿ ವಕೀಲ ವೃತ್ತಿಗೆ ಕಾಲಿಟ್ಟರೆ ಎದುರಾಗುವ ಕಷ್ಟಗಳನ್ನು ಅರಿತು ಸರ್ಕಾರ ಈ ಆದೇಶ ಹೊರಡಿಸಿದೆ. ಈ ಆದೇಶದಿಂದ ಜಿಲ್ಲೆಯ ನಾಲ್ಕೂ ತಾಲ್ಲೂಕಿನ ಎಸ್.ಸಿ/ಎಸ್.ಟಿ ಸಮುದಾಯದ ಸುಮಾರು 68 ಕಾನೂನು ಪದವೀಧರರಿಗೆ ತಲಾ ಎರಡು ಸಾವಿರ ರೂಪಾಯಿ ಶಿಷ್ಯವೇತನ ದೊರೆಯಲಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಟಿ.ಎಸ್.ತಿಮ್ಮಪ್ಪ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

ಆರಂಭದಲ್ಲಿ ಈ ಸಮುದಾಯದ ಕಾನೂನು ಪದವೀಧರರಿಗೆ ತಿಂಗಳಿಗೆ ಕೇವಲ 750 ರೂಪಾಯಿ ಶಿಷ್ಯವೇತನ ನೀಡಲಾಗುತ್ತಿತ್ತು. ಆ ನಂತರದ ದಿನಗಳಲ್ಲಿ ಈ ಮೊತ್ತವನ್ನು ಒಂದು ಸಾವಿರ ರೂಪಾಯಿಗೆ ಹೆಚ್ಚಿಸಲಾಗಿತ್ತು. ಪ್ರಸ್ತುತ ಈ ಸದರಿ ಮೊತ್ತವನ್ನು ಎರಡು ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಅವರು ವಿವರಿಸಿದರು.

ಇಲ್ಲಿಯವರೆಗೆ ಜಿಲ್ಲೆಯ 68 ಫಲಾನುಭವಿಗಳಿಗೆ ತಲಾ ಒಂದು ಸಾವಿರದಂತೆ ತಿಂಗಳಿಗೆ 68 ಸಾವಿರ ರೂಪಾಯಿ ಇಲಾಖೆಗೆ ಬರುತ್ತಿತ್ತು. ಈಗ ಶಿಷ್ಯ ವೇತನ ಹೆಚ್ಚಳವಾಗಿರುವ ಕಾರಣ ತಿಂಗಳಿಗೆ 1.36 ಲಕ್ಷ ರೂಪಾಯಿ ಇಲಾಖೆಗೆ ಬರಲಿದ್ದು, ಅದನ್ನು ಕಾನೂನು ಪದವೀಧರರಿಗೆ ನೀಡಲಾಗುವುದು ಎಂದು ಅವರು ಹೇಳಿದರು.

ನಾಲ್ಕು ವರ್ಷಗಳಿಗೆ ಸೀಮಿತ: ಈ ಶಿಷ್ಯವೇತನ ಪಡೆಯಲು ಅರ್ಹರಾಗುವ ಅಭ್ಯರ್ಥಿಗಳಿಗೆ ಸತತವಾಗಿ ನಾಲ್ಕು ವರ್ಷಗಳ ಕಾಲ ತಿಂಗಳಿಗೆ ಎರಡು ಸಾವಿರ ರೂಪಾಯಿ ದೊರೆಯುತ್ತದೆ. ಆದರೆ ಶಿಷ್ಯ ವೇತನ ಪಡೆಯುವ ಅಭ್ಯರ್ಥಿಗಳು ಪ್ರತಿ ತಿಂಗಳು ಇಲಾಖೆಗೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲಾತಿಗಳನ್ನು ಒದಗಿಸಬೇಕು. ಆಗ ಮಾತ್ರ ಪ್ರತಿ ತಿಂಗಳು ನಿಲ್ಲದೆ ಶಿಷ್ಯ ವೇತನ ಮಂಜೂರಾಗುತ್ತದೆ ಎಂದರು.

ಈ ಶಿಷ್ಯ ವೇತನ ಪಡೆಯುವ ಅಭ್ಯರ್ಥಿಗಳು ಸುಮಾರು 20 ವರ್ಷ ಅನುಭವ ಹೊಂದಿರುವ ಹಿರಿಯ ಅಡ್ವೊಕೇಟ್ ಅಥವಾ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಬಳಿ ತರಬೇತಿದಾರರಾಗಿ ಕಾರ್ಯ ನಿರ್ವಹಿಸಬೇಕು. ಪ್ರತಿ ತಿಂಗಳು ತಾನು ಮಾಡಿದ ಕೆಲಸ, `ಕೇಸ್ ಹಿಸ್ಟರಿ~, ಹಾಜರಾತಿ ಕುರಿತ ದಾಖಲಾತಿಗಳನ್ನು ತರಬೇತಿ ಪಡೆಯುತ್ತಿರುವವರಿಂದ ಪಡೆದು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. ಆಗ ಪ್ರತಿ ತಿಂಗಳು ಶಿಷ್ಯ ವೇತನ ದೊರೆಯುತ್ತದೆ ಎಂದು ಅವರು ತಿಳಿಸಿದರು.

ವಕೀಲರ ಸ್ವಾಗತ: ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಕಾನೂನು ಪದವೀಧರರಿಗೆ ಶಿಷ್ಯ ವೇತನ ಹೆಚ್ಚಿಸಿ ಸರ್ಕಾರದ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಎಂದು ರಾಮನಗರ ವಕೀಲರ ಸಂಘದ ಉಪಾಧ್ಯಕ್ಷ ದೇವರಾಜ್ ಪ್ರತಿಕ್ರಿಯಿಸುತ್ತಾರೆ.

ಇತರ ವೃತ್ತಿಗಳಿಗಿಂತ ವಕೀಲ ವೃತ್ತಿ ವಿಭಿನ್ನವಾದುದು. ಇಲ್ಲಿ ವೃತ್ತಿ ಆರಂಭಿಸುವವರಿಗೆ ಕನಿಷ್ಠ ಐದು ವರ್ಷಗಳ ಯಾವುದೇ ಆದಾಯ ಬರುವುದಿಲ್ಲ. ಇದರಿಂದ ಆರಂಭದಲ್ಲಿ ಜೀವನ ನಡೆಸುವುದೇ ದುಸ್ತರವಾಗಿರುತ್ತದೆ. ಅಲ್ಲದೆ ಸಾರಿಗೆ ಸೇರಿದಂತೆ ಇತರ ಖರ್ಚು ವೆಚ್ಚಗಳನ್ನು ಬರಿಸುವುದು ಕಷ್ಟಕರವಾಗಿರುತ್ತದೆ.

ವೃತ್ತಿಯ ಆರಂಭದ ಖರ್ಚು ವೆಚ್ಚಗಳನ್ನು ಬರಿಸಲಾಗದೆ ಎಷ್ಟೋ ಜನ ಈ ವೃತ್ತಿಯನ್ನೇ ಬಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಪ್ರೋತ್ಸಾಹದನ ನೀಡಿದರೆ ಅನುಕೂಲವಾಗುತ್ತದೆ ಎಂದು ೀಳುತ್ತಾರೆ.

ಈ ಮೊದಲು ಸರ್ಕಾರ ನೀಡುತ್ತಿದ್ದ ಒಂದು ಸಾವಿರ ರೂಪಾಯಿ ಶಿಷ್ಯವೇತನ ಸಾಕಾಗುತ್ತಿರಲಿಲ್ಲವಾದ್ದರಿಂದ ಅದ್ದನ್ನು ಹೆಚ್ಚಿಸುವಂತೆ ಹಲವು ಬಾರಿ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಕಾನೂನು ಪದವೀಧರರು ಬೇಡಿಕೆ ಇಟ್ಟಿದ್ದರು. ಈಗ ಸರ್ಕಾರ ಶಿಷ್ಯ ವೇತನವನ್ನು ಎರಡು ಸಾವಿರ ರೂಪಾಯಿಗೆ ಹೆಚ್ಚಿಸಿರುವುದು ಸ್ವಾಗತಾರ್ಹವಾಗಿದೆ. ವೃತ್ತಿ ಜೀವನಕ್ಕೆ ಉತ್ತಮ ಅಡಿಪಾಯ ಹಾಕಿಕೊಳ್ಳಲು ಇದು ನೆರವಾಗುತ್ತದೆ ಎಂದು ಅವರು ತಿಳಿಸುತ್ತಾರೆ.

ಸರ್ಕಾರ ಶಿಷ್ಯ ವೇತನ ಹೆಚ್ಚಿಸಿರುವುದು ಸಂತಸದ ವಿಷಯ. ಆದರೆ ಇದನ್ನು ಎಸ್.ಸಿ ಮತ್ತು ಎಸ್.ಟಿ ಸಮುದಾಯದವರಿಗೆ ಸೀಮಿತಗೊಳಿಸದೆ, ಇತರ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೂ ವಿಸ್ತರಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಯುವ ವಕೀಲ ಕೀರ್ತಿ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT