ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಪಾಲನೆ ಖಾತರಿಗೆ ಭದ್ರತಾ ಆಯೋಗ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶದ ಕಾನೂನು ಹಾಗೂ ಸಂವಿಧಾನದ ಆಶಯಗಳಿಗೆ ತಕ್ಕಂತೆ ಪೊಲೀಸರು ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವ, ನೀತಿ-ನಿಯಮ ರಚನೆಗೆ ನೆರವಾಗುವ ಹಾಗೂ ಪೊಲೀಸರ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡುವ ಸಲುವಾಗಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ `ರಾಜ್ಯ ಭದ್ರತಾ ಆಯೋಗ~ ರಚಿಸಲು ಕರ್ನಾಟಕ ಪೊಲೀಸ್ (ತಿದ್ದುಪಡಿ) ಸುಗ್ರೀವಾಜ್ಞೆ -2012ರಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಹಲವು ಮಹತ್ವದ ಸಲಹೆಗಳನ್ನು ನೀಡಿದೆ. ಭದ್ರತಾ ಆಯೋಗ ಸ್ಥಾಪಿಸಬೇಕು ಎಂಬ ಅಂಶವೂ ಅದರಲ್ಲಿ ಅಡಕವಾಗಿದೆ. ಈ ಆಯೋಗ ಕಾಲಕಾಲಕ್ಕೆ ಸಭೆ ಸೇರಿ ಪೊಲೀಸರ ಕಾರ್ಯಕ್ಷಮತೆಯ ಮೌಲ್ಯಮಾಪನ ನಡೆಸಲಿದೆ. ನೀತಿ-ನಿಯಮಗಳಿಗೆ, ಸೇವಾ ಕಾರ್ಯಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರಚಿಸಲಿದೆ.

ಇಡೀ ಪೊಲೀಸ್ ಇಲಾಖೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನೂ ಒಳಗೊಂಡಂತೆ ವಿವಿಧ ಅಂಶಗಳ ಕುರಿತು ಮೌಲ್ಯಮಾಪನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಈ ವರದಿಯನ್ನು ಸರ್ಕಾರ ವಿಧಾನಮಂಡಲದ ಮುಂದೆ ಮಂಡಿಸಬೇಕು. `ಆಯೋಗದ ಶಿಫಾರಸುಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಅದು ನೀಡುವ ಸಲಹೆ- ಸೂಚನೆಗಳಿಗೆ ಸರ್ಕಾರ ಬದ್ಧವಾಗಿರಬೇಕು~ ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ.

ಸುಪ್ರೀಂಕೋರ್ಟ್ ಸಲಹೆ ಅನುಸಾರ, ಭದ್ರತಾ ಆಯೋಗ ಸ್ಥಾಪನೆಗೆ 2009ರಲ್ಲೇ ಸರ್ಕಾರದ ಆದೇಶ ಹೊರಬಿದ್ದಿದೆ. ಇತ್ತೀಚೆಗೆ ಜಾರಿಯಾದ ಸುಗ್ರೀವಾಜ್ಞೆಯಲ್ಲೂ ಅದರ ಕುರಿತು ಪ್ರಸ್ತಾಪಿಸಲಾಗಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶಿಫಾರಸು ಮಾಡುವ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರೇ ಇದರ ಸದಸ್ಯರು. ಮುಖ್ಯಮಂತ್ರಿಯವರು ಆಯೋಗದ ಅಧ್ಯಕ್ಷರಾಗಿರುತ್ತಾರೆ. ಗೃಹ ಸಚಿವರು ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಆಯೋಗದ ಸದಸ್ಯರಾಗಿರುತ್ತಾರೆ.

ಪೊಲೀಸ್ ಮಹಾನಿರ್ದೇಶಕರು ಆಯೋಗದ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಮೂರು ಮಾದರಿ: ಭದ್ರತಾ ಆಯೋಗ ರಚನೆ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ), ರೆಬೆರೊ ಮತ್ತು ಸೊರಾಬ್ಜಿ ಸಮಿತಿಗಳು ಮೂರು ಪ್ರತ್ಯೇಕ ಮಾದರಿಗಳನ್ನು ನೀಡಿವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಪಾಲಿಸಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

`ಈ ಮೂರೂ ಮಾದರಿಗಳಲ್ಲಿ ಇರುವ ಅತ್ಯುತ್ತಮ ಅಂಶಗಳನ್ನು ರಾಜ್ಯದ ಭದ್ರತಾ ಆಯೋಗ ರಚನಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಸೊರಾಬ್ಜಿ ಮತ್ತು ರೆಬೆರೊ ಸಮಿತಿಗಳು ಕ್ರಮವಾಗಿ ಐದು ಮತ್ತು ಮೂವರು ಸ್ವತಂತ್ರ ಸದಸ್ಯರನ್ನು ಆಯೋಗಕ್ಕೆ ನೇಮಕ ಮಾಡಲು ಸಲಹೆ ಮಾಡಿವೆ. ಎನ್‌ಎಚ್‌ಆರ್‌ಸಿ ಮಾದರಿ ಬೇರೆ ರೂಪದಲ್ಲಿದೆ. ಈ ಮೂರೂ ಸಮಿತಿಗಳಲ್ಲಿನ ಉತ್ತಮ ಅಂಶಗಳನ್ನು ಆಯ್ಕೆ ಮಾಡಿಕೊಂಡು ಅತ್ಯುತ್ತಮ ಎನ್ನಬಹುದಾದ ಭದ್ರತಾ ಆಯೋಗ ರಚಿಸಲಾಗಿದೆ~ ಎಂದು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ಗೃಹ ಇಲಾಖೆ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ್ `ಪ್ರಜಾವಾಣಿ~ಗೆ ತಿಳಿಸಿದರು.
ಪ್ರತ್ಯೇಕ ವಿಭಾಗ: ಪೊಲೀಸ್ ಠಾಣೆಯಲ್ಲಿ ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ವಿಭಾಗ  ಪ್ರತ್ಯೇಕಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಈ ಅಂಶವನ್ನೂ ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ. ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅವುಗಳ ತನಿಖೆಗೆ ಪ್ರತ್ಯೇಕ ಸಿಬ್ಬಂದಿಯ ಅಗತ್ಯ ಇದೆ ಎಂದೂ ಸುಪ್ರೀಂಕೋರ್ಟ್ ಹೇಳಿತ್ತು.
 
ರಾಜ್ಯದ ಕೆಲವು ಕಡೆ ಈ ರೀತಿಯ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಈ ವ್ಯವಸ್ಥೆ ಇಲ್ಲದ ಕಡೆ, ಅದನ್ನು ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
 (ಮುಗಿಯಿತು)

ಆಯೋಗದ ಸ್ವರೂಪ
ಅಧ್ಯಕ್ಷ- ಮುಖ್ಯಮಂತ್ರಿ
ಉಪಾಧ್ಯಕ್ಷ- ಗೃಹ ಸಚಿವ
ಸದಸ್ಯರು- ವಿಧಾನಸಭೆಯ ವಿರೋಧ ಪಕ್ಷದ ನಾಯಕ
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಸರ್ಕಾರದ ಮುಖ್ಯ ಕಾರ್ಯದರ್ಶಿ,
ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ.
ಸದಸ್ಯ ಕಾರ್ಯದರ್ಶಿ- ಪೊಲೀಸ್ ಮಹಾನಿರ್ದೇಶಕ
ಕಾಯಿದೆ ತಿದ್ದುಪಡಿ ಮತ್ತಷ್ಟು ವಿಳಂಬ?
ಬೆಂಗಳೂರು: 1963ರ ಕರ್ನಾಟಕ ಪೊಲೀಸ್ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಲು ರಾಜ್ಯ ಸರ್ಕಾರ ಉತ್ಸುಕತೆ ತೋರಿದೆ. ಆದರೆ, ಆಡಳಿತಾರೂಢ ಬಿಜೆಪಿಯಲ್ಲಿನ ಗೊಂದಲದಿಂದ ತಿದ್ದುಪಡಿಗೆ ಅಂತಿಮ ರೂಪ ನೀಡಲು ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ಇದೇ 16ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ `ಕರ್ನಾಟಕ ಪೊಲೀಸ್ ಮಸೂದೆ-2012~ ಮಂಡನೆಯಾಗುವುದು ಅನುಮಾನ.

ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಆರು ಅಂಶಗಳಿಗೆ ಸಂಬಂಧಿಸಿದಂತೆ ಜೂನ್ 1ರಂದು ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಅದಕ್ಕೆ ಈ ಅಧಿವೇಶನದಲ್ಲಿ ಅನುಮೋದನೆ ಪಡೆಯಬೇಕಾಗಿದೆ. ಇಲ್ಲದಿದ್ದರೆ ಸುಗ್ರೀವಾಜ್ಞೆ ರದ್ದಾಗುತ್ತದೆ. ಹೀಗಾಗಿ ಹಳೇ ಕಾಯ್ದೆಯನ್ನು ಉಳಿಸಿಕೊಂಡು ಕೇವಲ ಸುಗ್ರೀವಾಜ್ಞೆಗೆ ಮಾತ್ರ ವಿಧಾನಮಂಡಲದ ಉಭಯ ಸದನಗಳ ಒಪ್ಪಿಗೆ ಪಡೆಯಲು ಗೃಹ ಇಲಾಖೆ ನಿರ್ಧರಿಸಿದೆ. ಈ ಕುರಿತ ಪತ್ರ ತಮಗೆ ತಲುಪಿದೆ ಎಂದು ಕಾನೂನು ಇಲಾಖೆ ಕಾರ್ಯದರ್ಶಿ ಜಿ.ಕೆ.ಬೋರೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

2012ರ ಪೊಲೀಸ್ ಮಸೂದೆಯ ಕರಡು ಸಿದ್ಧಗೊಂಡಿದೆ. ಅದರಲ್ಲಿ ಒಟ್ಟು 184 ನಿಯಮಗಳಿವೆ. 1963ರ ಕಾಯ್ದೆಯಲ್ಲಿ 179 ನಿಯಮಗಳು ಇದ್ದವು. ಇದರಲ್ಲಿ ನಿರುಪಯುಕ್ತವೆನಿಸಿದ 22 `ಸೆಕ್ಷನ್~ಗಳನ್ನು ತೆಗೆಯಲು ನಿರ್ಧರಿಸಲಾಗಿದೆ. ಹೊಸದಾಗಿ 30 ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಈ ಹಿಂದಿನ 68 ಸೆಕ್ಷನ್‌ಗಳನ್ನು ಸಮಗ್ರವಾಗಿ ತಿದ್ದುಪಡಿ ಮಾಡಲಾಗಿದೆ. 86 ಸೆಕ್ಷನ್‌ಗಳನ್ನು ತಿದ್ದುಪಡಿ ಮಾಡದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ, ಈ ಕರಡು ಮಸೂದೆಗೆ ಅಂತಿಮ ರೂಪ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಜಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಾಯಿದೆ ತಿದ್ದುಪಡಿ ಮತ್ತಷ್ಟು ವಿಳಂಬ?
ಬೆಂಗಳೂರು: `ಭದ್ರತಾ ಆಯೋಗ~ ಸ್ಥಾಪನೆ ಉತ್ತಮ ನಿರ್ಧಾರ. ಪೊಲೀಸರಿಗೆ ಸಲಹೆ- ಸೂಚನೆ ನೀಡುವ ಸಲುವಾಗಿ ಹಾಗೂ ಹೊಣೆಗಾರಿಕೆ ನಿಗದಿಪಡಿಸುವ ವಿಷಯದಲ್ಲಿ ಇದು ಹೆಚ್ಚು ಪ್ರಸ್ತುತ. ಆದರೆ, ಅಂತಹ ಸಂಸ್ಥೆಗಳಲ್ಲಿ ಯಾರು ಇರುತ್ತಾರೆ ಎಂಬುದು ಮುಖ್ಯ. ಅವರಿಂದಲೇ ಆಯೋಗದ ಮೌಲ್ಯ ಕೂಡ ಹೆಚ್ಚುತ್ತದೆ~ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಎಸ್.ಟಿ.ರಮೇಶ್ ಅಭಿಪ್ರಾಯಪಡುತ್ತಾರೆ.

`ಯಾವುದೇ ಸದುದ್ದೇಶದ ಸಂಸ್ಥೆಗೆ ದಕ್ಷತೆಯಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ನಿಯೋಜಿಸುವುದು ಮುಖ್ಯವಾಗುತ್ತದೆ. ಎಲ್ಲಿಯವರೆಗೆ ದಕ್ಷರಿಗೆ ಅಂತಹ ಹುದ್ದೆಗಳು ಸಿಗುವುದಿಲ್ಲವೊ, ಅಲ್ಲಿಯವರೆಗೆ ವ್ಯವಸ್ಥೆಯಲ್ಲಿ ಸುಧಾರಣೆ ಕಾಣಲು ಸಾಧ್ಯವಿಲ್ಲ. ಇದರಿಂದ ಭದ್ರತಾ ಆಯೋಗ ಕೂಡ ಹೊರತಲ್ಲ. ಅತ್ಯುತ್ತಮ ಆಡಳಿತಗಾರರು ನೇಮಕಗೊಂಡಾಗ ಸದ್ಭಾವ ಮೂಡುತ್ತದೆ. ಇಲ್ಲದಿದ್ದರೆ ಆಯೋಗ ಕೂಡ ಹದಗೆಟ್ಟ ಸಂಸ್ಥೆಗಳ ಸಾಲಿಗೆ ಸೇರುತ್ತದೆ~ ಎಂದು ಅವರು ಹೇಳಿದರು.

`ಇನ್ನೊಂದು ಅಧಿಕಾರಶಾಹಿ~
ಬೆಂಗಳೂರು: `ಸರ್ಕಾರ ರಚಿಸಿರುವ ರಾಜ್ಯ ಭದ್ರತಾ ಆಯೋಗದಲ್ಲಿ ನಾಗರಿಕ ಸಮಾಜದ ಪ್ರಾತಿನಿಧ್ಯಕ್ಕೆ ಅವಕಾಶವೇ ನೀಡಿಲ್ಲ. ರಾಜಕೀಯ ಮುಖಂಡರು, ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ಹಾಗೂ ಪೊಲೀಸ್ ಮುಖ್ಯಸ್ಥರನ್ನು ಮಾತ್ರ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಿಸಲಾಗಿದೆ. ಇದರಲ್ಲಿ ಅಧಿಕಾರಿಗಳೇ ಹೆಚ್ಚು ಇರುವ ಕಾರಣ, ಅಲ್ಲಿನ ತೀರ್ಮಾನಗಳು ಅಧಿಕಾರಶಾಹಿ ಪರ ವಾಲಿಕೊಳ್ಳುವ ಸಾಧ್ಯತೆಯೇ ಹೆಚ್ಚು~  ಎನ್ನುತ್ತಾರೆ ದೆಹಲಿ ಮೂಲದ `ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್~ನ ನಿರ್ದೇಶಕಿ ಮಾಜಾ ದಾರುವಾಲಾ.

`ಎನ್‌ಎಚ್‌ಆರ್‌ಸಿ, ರೆಬೆರೊ ಮತ್ತು ಸೊರಾಬ್ಜಿ ಸಮಿತಿಗಳು ಸಲಹೆಯ ರೂಪದಲ್ಲಿ ನೀಡಿರುವ ಮೂರು ಮಾದರಿಗಳಿಗೆ ಹೋಲಿಸಿದರೆ ರಾಜ್ಯ ಸರ್ಕಾರ ರಚಿಸಿರುವ ಆಯೋಗ ಸುಧಾರಿತ ರೂಪದಂತಿದೆ ಎನ್ನಬಹುದು. ಆದರೆ, ಆ ಸಮಿತಿಗಳಲ್ಲಿ ನಾಗರಿಕ ಸಮಾಜಕ್ಕೆ ನೀಡಿದ್ದ ಅವಕಾಶವನ್ನು ಕೈಬಿಡಬಾರದಿತ್ತು. ನೀತಿ ನಿರೂಪಣೆ ವಿಚಾರದಲ್ಲಿ ಪೊಲೀಸರು ಹಾಗೂ ಸರ್ಕಾರಕ್ಕೆ ಸಲಹೆ ನೀಡಲು ಇವರ ಅಗತ್ಯ ಇದೆ.

ಸಮಾಜದ ವಿವಿಧ ಕ್ಷೇತ್ರಗಳಿಗೆ ಸೇರಿದ ಸದಸ್ಯರು ಸಮಿತಿಯಲ್ಲಿ ಇದ್ದಾಗ, ನೀತಿ-ನಿಯಮಗಳು ಹೆಚ್ಚು ಪರಿಣಾಮಕಾರಿ ಆಗುತ್ತವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಧ್ಯಕ್ಷತೆಯ ಸಮಿತಿಯು `ಸ್ವತಂತ್ರ~ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ. ಮಾನವ ಹಕ್ಕುಗಳ ಆಯೋಗ ಹಾಗೂ ಲೋಕಸೇವಾ ಆಯೋಗದವರೂ ಸದಸ್ಯರಾಗಿರಬೇಕು~ ಎಂದೂ ಅವರು ವಿಶ್ಲೇಷಣೆ ಮಾಡುತ್ತಾರೆ.

`ಈ ಸುಗ್ರೀವಾಜ್ಞೆ ಮೂಲಕ ಸರ್ಕಾರ ಈಗ ರಚಿಸಿರುವ ಆಯೋಗ ತನ್ನ ಉದ್ದೇಶಿತ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ. ಅದು ಇನ್ನೊಂದು ಅಧಿಕಾರಶಾಹಿ ವ್ಯವಸ್ಥೆ ಆಗುತ್ತದೆ, ಅಷ್ಟೇ. ಇದರಿಂದ ಪೊಲೀಸ್ ವ್ಯವಸ್ಥೆ ಹೇಗೆ ಸುಧಾರಣೆ ಆಗುತ್ತದೊ~ ಎಂದು ಅವರು ಪ್ರಶ್ನಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT