ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಪ್ರವೇಶಕ್ಕೆ ಎಲ್‌ಸಾಟ್

Last Updated 11 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ವೃತ್ತಿಶಿಕ್ಷಣ ಕೋರ್ಸ್‌ಗಳಲ್ಲಿ ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ನಂತರ ವಿದ್ಯಾರ್ಥಿಗಳಿಗೆ ಅತಿ ಪ್ರಿಯವಾದುದ್ದು ಕಾನೂನು ಶಿಕ್ಷಣ. ಕಾರ್ಪೊರೇಟ್ ಕಂಪೆನಿಗಳ ಹೆಚ್ಚಳದಿಂದ, ದೇಶದ ನ್ಯಾಯಾಲಯಗಳಲ್ಲಿ ನೆನೆಗುದಿಯಲ್ಲಿ ಇರುವ ಪ್ರಕರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ಕಾನೂನು ಕ್ಷೇತ್ರ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ. ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಈ ಕಾಯ್ದೆಗಳಲ್ಲಿ ಪರಿಣತಿ ಸಾಧಿಸಿದವರಿಗೆ ಭಾರಿ ಬೇಡಿಕೆ.

ಆದರೆ, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್‌ಗಳಂತೆ ಕಾನೂನು ಕಾಲೇಜುಗಳಿಗೆ ಪ್ರವೇಶ ಪಡೆಯಲು ಏಕರೂಪದ ವ್ಯವಸ್ಥೆ ಇಲ್ಲ. ಬಹುತೇಕ ಎಲ್ಲ ಕಾಲೇಜುಗಳು ತಮ್ಮದೇ ಆದ ಮಾನದಂಡ ಅನುಸರಿಸುತ್ತವೆ. ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತವೆ.

ಅಮೆರಿಕ, ಯೂರೋಪ್, ಆಸ್ಟ್ರೇಲಿಯಾಗಳಲ್ಲಿ ಅನುಸರಿಸುವಂತೆ ಅಂತರ್‌ರಾಷ್ಟ್ರೀಯ ಮಾನದಂಡದಲ್ಲಿ ಕಾನೂನು ಕಾಲೇಜುಗಳ ಪ್ರವೇಶ ಪರೀಕ್ಷೆ ನಡೆಸುವ ‘ಎಲ್‌ಸಾಟ್’ (ಲಾ ಸ್ಕೂಲ್ ಅಡ್ಮಿಷನ್ ಟೆಸ್ಟ್) ಈಗ ಭಾರತಕ್ಕೆ ಬಂದಿದೆ.  ಲಾ ಸ್ಕೂಲ್ ಅಡ್ಮಿಷನ್ ಕೌನ್ಸಿಲ್ (ಎಲ್‌ಸಾಕ್) ಈ ಪರೀಕ್ಷೆ ನಡೆಸುತ್ತಿದೆ. ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದ 200ಕ್ಕೂ ಹೆಚ್ಚು ಕಾನೂನು ಸಂಸ್ಥೆಗಳು ‘ಎಲ್‌ಸಾಕ್’ ಸದಸ್ಯತ್ವ ಪಡೆದಿವೆ. ‘ಎಲ್‌ಸಾಟ್’ ಮೂಲಕವೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತವೆ.

ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಎಲ್‌ಸಾಕ್ ಮುಖ್ಯಸ್ಥ ಡ್ಯಾನಿಯಲ್ ಓ. ಬರ್ನ್‌ಸ್ಟೇನ್ ಜೊತೆ ‘ಎಲ್‌ಸಾಟ್ ಇಂಡಿಯಾ’ ಪ್ರವೇಶ ಪರೀಕ್ಷೆ ಕುರಿತು ನಡೆಸಿದ ಸಂದರ್ಶನ ಇಲ್ಲಿದೆ.

ಇತರ ಕಾನೂನು ಪ್ರವೇಶ ಪರೀಕ್ಷೆಗಿಂತ ಎಲ್‌ಸಾಟ್ ಹೇಗೆ ಭಿನ್ನ?
ಎಲ್‌ಸಾಟ್‌ನಲ್ಲಿ ಇತರ ಪ್ರವೇಶ ಪರೀಕ್ಷೆಗಳಂತೆ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ (GK) ಒರೆಗೆ ಹಚ್ಚುವ ಪ್ರಶ್ನೆಗಳಿರುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳ ವಿಶ್ಲಷೇಣಾ ಸಾಮರ್ಥ್ಯ ಅಳೆಯಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಕಾನೂನು ಕಾಲೇಜು ಪ್ರವೇಶಿಸುವ ವಿದ್ಯಾರ್ಥಿ ನಿಸ್ಸಂದೇಹವಾಗಿ ಉತ್ತಮ ವಕೀಲನಾಗುತ್ತಾನೆ.
ಅಲ್ಲದೇ, ವಿವಿಧ ಪ್ರವೇಶ ಪರೀಕ್ಷೆಗಳನ್ನು ನಡೆಸುವಲ್ಲಿ ಪರಿಣತಿ ಪಡೆದಿರುವ ‘ಪಿಯರ್‌ಸನ್ ವಿಯುಇ’ ನಮಗೆ ಈ ಪರೀಕ್ಷೆ ನಡೆಸಲು ಭೌತಿಕ ಸೌಕರ್ಯ ಒದಗಿಸಿಕೊಡುತ್ತಿದೆ.

ಎಲ್‌ಸಾಟ್ ಇಂಡಿಯಾ ಪ್ರಯೋಜನಗಳೇನು?
ಎಲ್‌ಸಾಟ್ ಮೂಲಕ ಐದು ವರ್ಷ (10+2) ಅಥವಾ ಮೂರು ವರ್ಷದ  (10+2+3) ಕಾನೂನು ಪದವಿಗೆ ಪ್ರವೇಶ ಪಡೆಯಬಹುದು. ಎಲ್‌ಸಾಟ್ ಪಟ್ಟಿಯಲ್ಲಿರುವ ದೇಶದ ಯಾವುದೇ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು. ಎಲ್‌ಸಾಟ್ ಇಂಡಿಯಾ ಬದಲಾಗಿ ಎಲ್‌ಸಾಟ್ ಗ್ಲೋಬಲ್ ಪರೀಕ್ಷೆಗೆ ಕುಳಿತಲ್ಲಿ ಪ್ರತಿಷ್ಠಿತ ಹಾರ್ವರ್ಡ್ ಕಾನೂನು ಶಾಲೆ ಸೇರಿದಂತೆ ಅಮೆರಿಕ, ಕೆನಡಾಗಳ ಕಾನೂನು ಶಾಲೆಗಳಿಗೆ ಪ್ರವೇಶದ ಅವಕಾಶವಿದೆ.

ಆದರೆ, ಆಯಾ ಕಾಲೇಜುಗಳು ಪ್ರವೇಶಕ್ಕೆ ಪ್ರತ್ಯೇಕ ಮಾನದಂಡ ಅನುಸರಿಸುತ್ತವೆ. ಒಂದು ಕಾಲೇಜಿನಿಂದ, ಇನ್ನೊಂದು ಕಾಲೇಜಿಗೆ ಶುಲ್ಕ ಪಾವತಿ ವಿಧಾನವೂ ಭಿನ್ನವಾಗಿರುತ್ತದೆ. ಕೆಲವು ಕಾಲೇಜುಗಳು ಮೂರು ವರ್ಷದ, ಮತ್ತೆ ಕೆಲ ಕಾಲೇಜುಗಳ ಐದು ವರ್ಷದ ಕೋರ್ಸ್ ನಡೆಸುತ್ತಿವೆ. ಎಲ್‌ಸಾಟ್‌ನಲ್ಲಿ ವಿದ್ಯಾರ್ಥಿ ಉತ್ತೀರ್ಣನಾದರೂ ನಿರ್ದಿಷ್ಟ ಕಾಲೇಜಿಗೆ ಪ್ರವೇಶ ಪಡೆಯಬೇಕಾದರೆ ಆತ ಆ ಕಾಲೇಜು ಅನುಸರಿಸುವ ಅರ್ಹತಾ ಮಾನದಂಡ ಪಡೆದಿರಬೇಕು.

 ಭಾರತದ ಎಷ್ಟು ಕಾನೂನು ಕಾಲೇಜುಗಳು ಎಲ್‌ಸಾಟ್ ಜತೆ ಒಪ್ಪಂದ ಮಾಡಿಕೊಂಡಿವೆ..?
ಖರಗಪುರ್ ಐಐಟಿಯ ಕಾನೂನು ಶಾಲೆ ಮತ್ತು ಕರ್ನಾಟಕದ ಮೂರು ಸಂಸ್ಥೆಗಳು ಸೇರಿದಂತೆ ಪ್ರತಿಷ್ಠಿತ 25 ಕಾನೂನು ಕಾಲೇಜುಗಳು ‘ಎಲ್‌ಸಾಟ್- ಇಂಡಿಯಾ’ ಸದಸ್ಯತ್ವ ಪಡೆದಿವೆ.  2009ರಲ್ಲಿ ‘ಎಲ್‌ಸಾಟ್’ ಮೊದಲ ಬಾರಿ ಭಾರತದಲ್ಲಿ ಪರೀಕ್ಷೆ ನಡೆಸಿದಾಗ ನಾಲ್ಕು ಕಾಲೇಜುಗಳಷ್ಟೇ ಅದರ ಪ್ರಯೋಜನ ಪಡೆದಿದ್ದವು. ಮೂರು ವರ್ಷಗಳಲ್ಲಿ ಈ ಸಂಖ್ಯೆ 25ಕ್ಕೆ ಏರಿದೆ.

 ಕರ್ನಾಟಕದ ಕಾಲೇಜುಗಳ ವಿವರ...?
ಮುಖ್ಯವಾಗಿ ಕೆ.ಎಲ್.ಇ. ಸಂಸ್ಥೆ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಗೆ ಸೇರಿದ ಬೆಂಗಳೂರಿನ ಕೆ.ಎಲ್.ಇ. ಕಾನೂನು ಕಾಲೇಜು, ಬೆಳಗಾವಿಯ ಬಿ.ವಿ. ಬೆಲ್ಲದ ಕಾನೂನು ಕಾಲೇಜು, ಹುಬ್ಬಳ್ಳಿಯ ಗುರುಸಿದ್ಧಪ್ಪ ಕೋತಂಬ್ರಿ ಕಾನೂನು ಕಾಲೇಜುಗಳಲ್ಲಿ ನಾವೇ ಪ್ರವೇಶ ಪರೀಕ್ಷೆ ನಡೆಸುತ್ತೇವೆ. ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜು, ಬೆಂಗಳೂರಿನ ಬಿಷಪ್ ಕಾಟನ್ ಮಹಿಳಾ ಕಾಲೇಜು ಈ ಪಟ್ಟಿಯಲ್ಲಿ ಸೇರಿವೆ.

 ಭವಿಷ್ಯದ ಗುರಿ?
ನಮ್ಮ ಪ್ರವೇಶ ಪರೀಕ್ಷೆಯ ಪ್ರಯೋಜನ ಪಡೆದ ಕಾನೂನು ಸಂಸ್ಥೆಗಳ ಸಂಖ್ಯೆ ಮೂರೇ ವರ್ಷಗಳಲ್ಲಿ 25ಕ್ಕೆ ಏರಿದೆ. ಮುಂದಿನ ವರ್ಷಗಳಲ್ಲಿ ಭಾರತದ ಬಹುತೇಕ ಕಾನೂನು ಕಾಲೇಜುಗಳು ‘ಎಲ್‌ಸಾಟ್’ ಸದಸ್ಯತ್ವ ಪಡೆಯುವ ನಿರೀಕ್ಷೆಯಿದೆ. 
                        

ಪರೀಕ್ಷಾ ವಿವರ
2011ರ ಎಲ್‌ಸಾಟ್ ಪರೀಕ್ಷೆಗೆ ನೋಂದಣಿ ಈಗಾಗಲೇ ಆರಂಭವಾಗಿದೆ. ಏಪ್ರಿಲ್ 30ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.

ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಲು ಏಪ್ರಿಲ್ 18 ಕಡೆಯ ದಿನ. ಡಿಡಿ ತುಂಬಿ ಹೆಸರು ನೋಂದಾಯಿಸಲು ಏಪ್ರಿಲ್ 11 ಕೊನೆಯ ದಿನ. ಪ್ರವೇಶ ಶುಲ್ಕ 3,500 ರೂಪಾಯಿ.

ದೇಶದ ನಾಲ್ಕು ವಲಯಗಳ 17 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ದಕ್ಷಿಣದಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚಿನ್‌ಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ.

ಪರೀಕ್ಷೆ ಕುರಿತ ವಿವರಗಳನ್ನು www.pearsonvueindia.com/lsatindia  ಮೂಲಕ ಪಡೆಯಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT