ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾನೂನು ಸಮರ್ಪಕ ಅನುಷ್ಠಾನ ಮುಖ್ಯ'

Last Updated 28 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಅಸಹಾಯಕರ ರಕ್ಷಣೆಗೆ ಕಾನೂನು ರಚಿಸಿದರೆ ಸಾಲದು, ಅವು ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು' ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅಭಿಪ್ರಾಯಪಟ್ಟರು.`ಸಂಗಮ' ವೇದಿಕೆಯಿಂದ ಇಲ್ಲಿನ ಎನ್‌ಜಿಒ ಸಭಾಂಗಣದಲ್ಲಿ ಶುಕ್ರವಾರ ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೈಂಗಿಕ ಅಲ್ಪಸಂಖ್ಯಾತ ಕಾರ್ಯಕರ್ತರು ಅನುಭವಿಸುತ್ತಿರುವ ನೋವು, ಹಿಂಸೆಗಳು ಕೊನೆಯಾಗಲು ಕಾನೂನಿನ ಸಮರ್ಪಕ ಅನುಷ್ಠಾನದ ಜೊತೆ ಸಮಾಜದಲ್ಲಿ ಅವರ ಬಗ್ಗೆ ಇರುವ ಮನೋಧರ್ಮದಲ್ಲೂ ಬದಲಾವಣೆ ಆಗಬೇಕು. ಯಾವುದೇ ಕಾನೂನು ಸಮುದಾಯದ ಏಳಿಗೆಗೆ ಸಹಕಾರಿಯಾಗುವಂತೆ ಜಾರಿಯಾದಾಗ ಮಾತ್ರ ಅದರ ಮಹತ್ವವೂ ಹೆಚ್ಚುತ್ತದೆ ಎಂದು ತಿಳಿಸಿದರು.

ಲೈಂಗಿಕ ಅಲ್ಪಸಂಖ್ಯಾತ ಕಾರ್ಯಕರ್ತರ ದಶಕದ ಹೋರಾಟದ ಪರಿಣಾಮವಾಗಿ 2010ರಲ್ಲಿ ರಾಜ್ಯ ಸರ್ಕಾರ ನಾಗರಿಕ ಸೌಲಭ್ಯಗಳನ್ನು ಒದಗಿಸುವಂತೆ ಆದೇಶ ಹೊರಡಿಸಿದೆ. ಆದರೆ ಇಲ್ಲಿಯವರೆಗೂ ಜಾರಿಗೆ ಬಂದಿರುವುದಿಲ್ಲ. ಆದೇಶದ ಜಾರಿಗಾಗಿ ಮತ್ತೆ ಹೋರಾಟ ನಡೆಸುವ ಅಗತ್ಯವಿದೆ. ಸಮಾಜದ ಪ್ರತಿಯೊಬ್ಬ ನಾಗರಿಕ, ಸ್ವಯಂ ಸೇವಾ ಸಂಸ್ಥೆಗಳು, ಕಾನೂನು ಜಾರಿಗಾಗಿ ಒತ್ತಾಯಿಸುವ ಏಜೆನ್ಸಿಗಳು, ನ್ಯಾಯಾಂಗ ಮತ್ತು ಮಾಧ್ಯಮಗಳು ಲೈಂಗಿಕ ಅಲ್ಪಸಂಖ್ಯಾತ ಕಾರ್ಯಕರ್ತರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ಲೈಂಗಿಕ ಅಲ್ಪಸಂಖ್ಯಾತರಿಗೆ ಸಾಮಾಜಿಕ ಭದ್ರತೆ ಹಾಗೂ ನ್ಯಾಯ ಒದಗಿಸುವ ಉದ್ದೇಶದಿಂದ ತಮಿಳುನಾಡು ಸರ್ಕಾರ 2008ರಲ್ಲಿ `ಟ್ರ್ಯಾನ್ಸ್ ಜೆಂಡರ್ ವೆಲ್‌ಫೇರ್ ಬೋರ್ಡ್' ರಚಿಸಿ, ಗುರುತಿನ ಚೀಟಿ ಸೇರಿದಂತೆ ನಾನಾ ಅಗತ್ಯ ಸೌಲಭ್ಯಗಳನ್ನು ನೀಡಿದೆ. ಕರ್ನಾಟಕ ಸರ್ಕಾರವೂ ಇಂತಹ ಯೋಜನೆ ರೂಪಿಸುವಂತೆ ಕಾರ್ಯಕರ್ತರು ಹೋರಾಟ ಮಾಡಬೇಕು ಎಂದು ಹೇಳಿದರು.

ಮೂಕ ಜನರು ಮತ್ತು ಕಿವುಡು ಸರ್ಕಾರವಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯವಿಲ್ಲ. ಜನರು ತಮ್ಮ ಸಮಸ್ಯೆಗಳ ಕುರಿತಾಗಿ ಬಾಯಿಬಿಟ್ಟಾಗ ಮಾತ್ರ ಅವುಗಳಿಗೆ ಸರ್ಕಾರದಿಂದ ಪರಿಹಾರ ಸಿಗಲು ಸಾಧ್ಯ. ತುಳಿತಕ್ಕೆ ಒಳಗಾಗಿರುವ ಜನ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಲೈಂಗಿಕ ಅಲ್ಪಸಂಖ್ಯಾತರ ರಕ್ಷಣೆಗಾಗಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದ ಖಂಡಿತವಾಗಿ ನ್ಯಾಯ ದೊರಕಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುಳಾ ಚೆಲ್ಲೂರ್, ಲೈಂಗಿಕ ಅಲ್ಪಸಂಖ್ಯಾತರು ನಮ್ಮಂತೆ ಮನುಷ್ಯರು ಎಂಬ ಭಾವನೆಯಾಗಲಿ, ಕಾಳಜಿಯಾಗಲಿ ಸಮಾಜದಲ್ಲಿ ಇಲ್ಲ. ಇವರು ಪ್ರಯಾಣ ಮಾಡುವಾಗ, ಆಸ್ಪತ್ರೆಗೆ ದಾಖಲಾಗುವಾಗ ಮತ್ತು ಶಾಲಾ- ಕಾಲೇಜುಗಳಲ್ಲಿ ಯಾವ ಲಿಂಗದ ಮೂಲಕ ಗುರುತಿಸಿಕೊಳ್ಳಬೇಕು ಎಂಬುದು ದೊಡ್ಡ ಸಮಸ್ಯೆಯಾಗಿದೆ.

ಈ ಬಗ್ಗೆ ಸಂಶೋಧನೆಗಳು ನಡೆಯುವ ಅಗತ್ಯವಿದ್ದು, ಎಲ್ಲರಂತೆ ಇವರೂ ಬದುಕಲು ಸಮಾಜದಿಂದ ಅಗತ್ಯ ನೆರವು ಒದಗಿಸಬೇಕು ಎಂದರು. ಸಮಾರಂಭದಲ್ಲಿ ಸಂಗಮದ ಸಂಸ್ಥಾಪಕ ಎಲವತ್ತಿ ಮನೋಹರ, ಸಂಗೀತ ವಿದುಷಿ ಶ್ಯಾಮಲಾ ಜಿ ಭಾವೆ, ವಕೀಲ ಬಿ.ಟಿ.ವೆಂಕಟೇಶ, ಲೈಂಗಿಕ ಅಲ್ಪಸಂಖ್ಯಾತ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT