ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್ಷಿರಾಂ ಮಾನವ ಚೈತನ್ಯದ ಅದ್ಭುತ ಶಕ್ತಿ

Last Updated 17 ಮಾರ್ಚ್ 2011, 5:45 IST
ಅಕ್ಷರ ಗಾತ್ರ

ಹೊಳಲ್ಕೆರೆ: ಮಹಾನ್ ನಾಯಕ ಕಾನ್ಷಿರಾಂ ಅವರು ಮಾನವ ಚೈತನ್ಯದ ಅದ್ಭುತ ಶಕ್ತಿ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ತಿಮ್ಮಪ್ಪ ಬಣ್ಣಿಸಿದರು.ಪಟ್ಟಣದಲ್ಲಿ ಬುಧವಾರ ಬಿಎಸ್‌ಪಿ ತಾಲ್ಲೂಕು ಘಟಕದ ವತಿಯಿಂದ ದಾದಾ ಸಾಹೇಬ್ ಕಾನ್ಷಿರಾಂ ಅವರ 77ನೇ ಜನ್ಮದಿನದ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಲು, ಹಣ್ಣು ವಿತರಿಸಿ ಅವರು ಮಾತನಾಡಿದರು.

ಕಾನ್ಷಿರಾಂ ಸಾಮಾನ್ಯ ಬಡಕುಟುಂಬದಲ್ಲಿ ಹುಟ್ಟಿ, ಸರ್ವಶ್ರೇಷ್ಠ ನಾಯಕರಾದರು. ಅವರು ಬಹುಜನ ಸಮಾಜದ ನೋಟ ಹಾಗೂ ಭಾಷೆಯನ್ನು ಬದಲಾಯಿಸುವ ಮೂಲಕ ಭಾರತದ ರಾಷ್ಟ್ರೀಯ ಸ್ವರೂಪವನ್ನೇ ಪರಿವರ್ತಿಸಿದ ಮಹಾನ್ ಜಾದೂಗಾರ. ಶೇ.85 ರಷ್ಟು ಜನಸಂಖ್ಯೆ ಇರುವ ಬಹಜನ ಸಮಾಜವು ಆಳುವ ಸಮಾಜವಾಗಬೇಕು ಎಂದು ಕನಸು ಕಂಡಿದ್ದರು. ಮನುವಾದಿಗಳ ತಪ್ಪನ್ನು ಖಂಡಿಸುತ್ತಾ ಕುಳಿತುಕೊಳ್ಳಲಿಲ್ಲ. ಬದಲಾಗಿ ಮನುವಾದಿಗಳು ತಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ವ್ಯವಸ್ಥೆಯ ಬಲಿಪಶುಗಳಾದ ದಲಿತರು ಮಾತ್ರ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ನಡೆಯುತ್ತಿಲ್ಲ ಎಂದು ಭಿನ್ನವಾಗಿ ಆಲೋಚಿಸಿದ ಮೇಧಾವಿ ಎಂದರು.

ಪ್ರಧಾನ ಕಾರ್ಯದರ್ಶಿ ಎಸ್. ವೆಂಕಟೇಶ್ ಮಾತನಾಡಿ, ಜಾತಿ ವ್ಯವಸ್ಥೆಯಲ್ಲಿ ಸಿಕ್ಕಿ ನರಳುತ್ತಿದ್ದ ಬಹುಜನರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಮತದಾನದ ಹಕ್ಕು ನೀಡಿದರು. ಅಲ್ಲದೆ ಪ್ರಜ್ಞಾಪೂರ್ವಕವಾಗಿ ಮತನೀಡಿ ಎಂಬ ಕರೆಯನ್ನೂ ಕೊಟ್ಟರು. ಆದರೆ ಅದನ್ನು ಅರಿಯದ ಬಹುಜನ ಶೇ.15 ರಷ್ಟಿರುವ ಸವರ್ಣೀಯರಿಗೆ ಅಧಿಕಾರ ಬಿಟ್ಟುಕೊಟ್ಟು ಶೋಷಿತರಾಗಿಯೇ ಮುಂದುವರಿದರು ಎಂದು ವಿಷಾದಿಸಿದರು.

 ಬಿಎಸ್‌ಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎನ್, ದೊಡ್ಡೊಟ್ಟೆಪ್ಪ, ಜಿಲ್ಲಾ ಸಂಯೋಜಕ ಮಹಾಂತೇಶ್, ಕಾರ್ಯದರ್ಶಿ ನಾಗರಾಜಪ್ಪ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಡಿ. ಪ್ರಕಾಶ್, ಹೊಸದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ರಾಮಸ್ವಾಮಿ, ಕಾರ್ಯದರ್ಶಿಗಳಾದ ಗುಂಡೇರಿ ಮಂಜುನಾಥ್, ಪರಮೇಶ್ವರಪ್ಪ, ಹಾಲಪ್ಪ, ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT